ನನ್ನಂತರಾತ್ಮ ನನಗೆ ಭೇಟಿಯಾದಾಗ…..

ಯಾಕೆ,ಯಾಕೆ, ಯಾಕೆ???….ಈ ಪ್ರಶ್ನೆಯೊಂದೆ ನನ್ನ ಮನಸ್ಸನ್ನು ಸದಾ ಕೊರೆಯುತ್ತಿರುತ್ತದೆ.ಅದನ್ನ ನನಗೆ ನಾನೇ ಕೇಳಿಕೊಂಡು ಕೇಳಿಕೊಂಡು ನನ್ನ ಕಣ್ಣೀರಿನ ಬುಗ್ಗೆಯು ಜಲಪಾತ ಧುಮುಕುವ ರಭಸದಷ್ಟೇ ಜೋರಾಗಿ ಧುಮುಕಿ ಬರುತ್ತಿದ್ದವು. ಆದರೆ ಕಾರಣ ಮಾತ್ರ ಸ್ಪಷ್ಟವಾಗಿ ತಿಳಿಯಲೇ ಇಲ್ಲ.ಅದೇನೋ ಗೊತ್ತಿಲ್ಲ ಯಾಕಂತ, ನನ್ನ ನಂಬಿಕೆ ಮತ್ತು ಪ್ರೀತಿಗೆ ಪಾತ್ರವಾದವರೇ ನನ್ನ ನಂಬೋದಿಲ್ಲ, ನನ್ನ ಜೊತೆಗಿರುವುದಿಲ್ಲ. ನಾ ಇಷ್ಟಪಟ್ಟಿದ್ದೆಲ್ಲಾ ಕಂಡ ಕನಸಿನಂತೆ ಮಾಯಾವಾಗುತ್ತವೆ ಯಾಕೆ?.. ಮತ್ತೆ ಅದೇ ಪ್ರಶ್ನೆ ನನ್ನಲ್ಲಿ. ಯಾಕೆ ನಾನು ಮಾಡಿದ್ದೆಲ್ಲಾ ತಪ್ಪಾ? ಅವರ ಸ್ನೇಹ, ನಂಬಿಕೆ, ಪ್ರೀತಿ ಬಯಸಿದ್ದೆ ತಪ್ಪಾಯಿತಾ ಅಥವಾ ಅದನ್ನ ಅವರಿಗೆ ನೀಡಿದ್ದು ಅತಿಯಾಯಿತಾ?..ಮತ್ತೆ ಅದೇ ಕಾರಣದ ಬೆನ್ನತ್ತಿ ಹೊರಟಿತ್ತು ಮನಸ್ಸು. ಬಹಳಷ್ಟು ಪ್ರಶ್ನೆಗಳ ಸರಮಾಲೆ,ನಾನಷ್ಟು ಕೆಟ್ಟವಳಾ? ಅವರಿಗೆ ಕಿಂಚಿತ್ತೂ ಖುಷಿಯ ನೀಡಲಾಗದ ಅಸಹಾಯಕಿಯಾ? ನನ್ನ ಕಂಡು ಅವರ ಮುಖದ ಮೇಲೆ ನಗು ಬರಲಾರದಷ್ಟು ಕೂರುಪಿಯಾ? ನಾನೆಂದರೆ ಅಷ್ಟು ಅಸಹ್ಯವಾ? ಅವರ ನಂಬಿಕೆಗೆ ನಾನು ಅನರ್ಹಳಾ? ಏನದು ಕಾರಣ ನನಗೆ ಅರ್ಥವಾಗದ ಕಾರಣ ಏನದು….ಇದನ್ನೇ ಚಿಂತಿಸಿ ಚಿಂತಿಸಿ ಕೊರಗುವ ಹೊತ್ತಿಗೆ,ಅದೇನೊ ಅಂತರಾತ್ಮವಂತೆ ನಾನದನ್ನೂ ಇಲ್ಲಿಯವರೆಗೂ ಕಂಡಿರಲಿಲ್ಲ, ಅದರೊಂದಿಗೆ ಮಾತನಾಡಿರಲಿಲ್ಲ. ಅಂದು ಅದೇನಾಯಿತೋ ನನ್ನ ಚಿಂತನೆಯನ್ನು ಕಂಡು ಅದಾಗಿಯೇ ನನ್ನೊಂದಿಗೆ ಮಾತಿಗಿಳಿದು ಬಿಟ್ಟಿತು. ಅದೇಗೆ ಮಾತನಾಡುತ್ತದೆಂದು ನೀವದರ ಜೊತೆಗೆ ಮಾತನಾಡಿದಾಗಲೇ ಅರ್ಥವಾಗುತ್ತದೆ. ನನಗೆ ಕೇಳಿತದು ”ಏನದು? ಏನು ನಿನ್ನ ಸಮಸ್ಯೆ? ಏಕೆ ಹುಚ್ಚಿಯಂತೆ ತಲೆಯನ್ನು ಪರಪರ ಅಂತ ಕೆರೆದುಕೊಳ್ಳುತ್ತಾ ಅಷ್ಟು ಚಿಂತಿಸುತ್ತಿರುವೆ?ಏನದು“ ಎಂದು ಒಮ್ಮೆಲೇ ಕೇಳಿಬಿಟ್ಟಿತು. ನಾನು ಇದ್ಯಾರಪ್ಪ ನನ್ನ ಪ್ರಶ್ನೆ ಮಾಡೊದಕ್ಕೆ, ನನ್ನಿಷ್ಟ ಕಷ್ಟ ಕೇಳೊದಕ್ಕೆ ಅಂತ ಸುಮ್ಮನಾದೆ. ಆದರೆ ಚಿಂತೆಗೀಡಾಗಿದ್ದ ಮನಸ್ಸಿಗೆ ಮಾತಾಡಲು ಯಾರಾದರೂ ಸಿಕ್ಕರೆ ಸಾಕು ಎಂಬಂತೆ ನನ್ನ ಮಾತು ತಾನಾಗಿಯೇ ನಿಧಾನವಾಗಿ ಹೊರಬರತೊಡಗಿದವು. ”ಚಿಂತೆ ಯಾಕೆಂದರೆ ಏನು ಅಂತ ಹೇಳಲಿ ನಿನಗೆ ಹಾಗೇ ಆಗುತ್ತದೆ. ನನ್ನೊಂದಿಗೂ ಕಷ್ಟ ಸುಖದಲ್ಲಿ ಯಾರಾದರೂ ಇರಬೇಕು. ನಾನು ಅವರೊಂದಿಗೆ ಮನಸ್ಸು ಬಿಚ್ಚಿ ಮಾತಾಡಬೇಕು. ಅವರ ಪ್ರೀತಿ ಗಳಿಸಬೇಕು, ನನ್ನವರು ಅಂತ ಹೇಳಿಕೊಳ್ಳಲು ಅವರು ಬೇಕು ಅನಿಸುತ್ತದೆ. ಆದರೆ ಅದು ಸಾಧ್ಯವಾಗದ ಮಾತು, ನನ್ನವರು ನನ್ನ ನಂಬೋದೆ ಇಲ್ಲ, ನನ್ನೊಂದಿಗೆ ಮಾತಾಡುವುದಿಲ್ಲ, ನನ್ನೊಂದಿಗೆ ಇರುವುದಿಲ್ಲ, ಬೇಗ ನನ್ನಿಂದ ದೂರವಾಗಿಬಿಡುತ್ತಾರೆ .. ಯಾಕೆ ಅಂತ ತಿಳಿಯದೆ ಅಳು ಬಂದು ಇಷ್ಟು ಚಿಂತಿಸುತ್ತಿರುವೆ. ನಾನೇನು ಮಾಡಲಿ, ಎಲ್ಲರನ್ನೂ ಬಿಟ್ಟು ದೂರ ಒಬ್ಬಂಟಿಯಾಗಿ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮಾನವ ಸಮಾಜ ಜೀವಿಯೆಂಬಂತೆ ಅವರಿವರ ಸಂಗ ಬಯಸಲು ಮುಂದಾಗುತ್ತದೆ ನಾನೇನು ಮಾಡಲಿ “ ಎಂದು ಕಣ್ಣಂಚಲ್ಲಿ ನೀರು ತುಂಬಿಕೊಂಡು ಅದಕ್ಕೆ ಹೇಳಿದೆ.. ಒಂದು ಕ್ಷಣ ಅದು ಕೂಡ ಮೌನವಾಗಿತ್ತು. ನಂತರ ಸಮಾಧಾನದಿಂದ ತನ್ನ ಮಾತನ್ನು ಶುರು ಮಾಡಿತು, ನಾನು ಸುಮ್ಮನೆ ಅದರ ಮಾತನ್ನಾಲಿಸತೊಡಗಿದೆ ”ನೋಡು ನಿನ್ನಲ್ಲಿ ಯಾವುದೇ ದೋಷಗಳಿಲ್ಲ ,ಆದರೆ ನಿನಗೆ ಈ ಸಮಾಜದ ಬಗ್ಗೆ ಅರಿವಿಲ್ಲ ಅಷ್ಟೇ, ಇಲ್ಲಿ ಯಾರು ಶಾಶ್ವತವಲ್ಲ, ಎಲ್ಲಾ ಕ್ಷಣಿಕವಷ್ಟೇ. ಯಾವಾಗ,ಯಾರು, ಹೇಗೆ,ಎಲ್ಲಿ,ಯಾರನ್ನ ಬಿಟ್ಟೊಗುತ್ತಾರೊ ಗೊತ್ತಿಲ್ಲ, ನೀನಿದನ್ನು ಮೊದಲು ಅರಿತುಕೊಂಡು ಸಮಾಧಾನಪಟ್ಟಿಕೊ. ನಿನ್ನವರು ಸದಾ ಜೊತೆಗಿರಲು ಸಾಧ್ಯವಿರುವುದಿಲ್ಲ, ಅವರಿಗೆ ಅವರದೆ ಆದ ಜವಾಬ್ದಾರಿ,ಕನಸು ಹಾಗೂ ಕೆಲಸಗಳಿರುತ್ತವೆ, ಕೇವಲ ನಿನ್ನ ಜೊತೆಯಿದ್ದರೆ ಅವರು ಅದನ್ನು ನಿಭಾಯಿಸುವುದು ಹೇಗೆ?. ನಿನಗೆ ಕಷ್ಟ ಅಂತ ಬಂದಾಗ ಯಾರು ನಿನ್ನ ಸಮೀಪಕ್ಕೆ ಸುಳಿಯುತ್ತಾರೋ ಅವರು ಯಾವಾಗಲೂ ನಿನ್ನವರಾಗಿಯೇ ಇರುತ್ತಾರೆ, ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಮನಸ್ಸಲ್ಲುಳಿಯುತ್ತಾರಷ್ಟೇ ಅದನ್ನ ನೀನು ಅರ್ಥ ಮಾಡಿಕೊ. ನಿನ್ನ ಯಾರು ನಂಬೋದಿಲ್ಲ ಅಂತ ನಿನ್ಯಾಕೆ ಅಂದುಕೊಳ್ಳುತ್ತಿಯಾ, ನಿನ್ನ ಮೇಲೆ ನಂಬಿಕೆಯಿಟ್ಟು ಬದುಕುತ್ತಿರುವವರು ಬಹಳಷ್ಟು ಜನವಿರುತ್ತಾರೆ, ನಿನ್ನ ಹಿಂದೆಯೆ ಇರುತ್ತಾರವರು, ನೀ ಕೇವಲ ನಿನ್ನ ಮುಂದಿರುವವರನ್ನಷ್ಟೇ ನೋಡಿದರೆ ಹಿಂದಿರುವವರು ಹೇಗೆ ಕಾಣಬಲ್ಲರು. ನೀನು ಕಷ್ಟ ಸುಖದಲ್ಲಿ ಯಾರಾದರೂ ಇರಬೇಕು ಅಂತಿಯಲ್ಲ ಅದು ಸರಿ ಆದರೆ ನಿನ್ನ ಕಷ್ಟವನ್ನ ಯಾರ ಹತ್ತಿರವು ಹೇಳಿಕೊಳ್ಳಬೇಡ, ಸಾಧ್ಯವಾದರೆ ನಿನ್ನ ಖುಷಿಯಲ್ಲಿ ಎಲ್ಲರಿಗೂ ಪಾಲು ನೀಡು. ನಿನ್ನ ಯಾರು ಪ್ರೀತಿಸದಿದ್ದರೂ ಪರವಾಗಿಲ್ಲ ನೀನು ಎಲ್ಲರನ್ನ ಪ್ರೀತಿಸು, ಅದರಲ್ಲೇ ನಿನ್ನ ಖುಷಿಯನ್ನ ಕಂಡ್ಕೊ ಅಷ್ಟೇ. ನೀನ್ ಹಿಂಗೆ ಚಿಂತಿಸುತ್ತಾ ಕೂತರೆ ನಿನ್ನ ಅಮೂಲ್ಯವಾದ ಸಮಯ ಹಾಳಾಗುತ್ತದಷ್ಟೇ. ಚಿಂತೆ,ದುಃಖ ಇವುಗಳೆಲ್ಲ ಬರದ ಹಾಗೆ ತಡೆದು ಖುಷಿ ಪಡಲು ಕಾರಣಗಳನ್ನ ಹುಡುಕಬೇಕು ಅದನ್ನೆಲ್ಲಾ ಬಿಟ್ಟು ಈ ತರಹ ಅಳುತ್ತಾ ಕೂತರೆ, ಜೀವನದ ಅಂತ್ಯದವರೆಗೂ ಹೀಗೆ ಅಳುತ್ತಲೇ ಕೂರಬೇಕಾಗುತ್ತದೆ. ಅರ್ಥವಾಯಿತಾ ನಾನು ಹೇಳಿದ್ದು. ನಿನಗೆ ಏನಾದರೂ ಮಾತನಾಡಬೇಕೆನಿಸಿದರೆ ನನ್ನೊಂದಿಗೆ ಮಾತನಾಡು ಅದನ್ನೆಲ್ಲಾ ಬಿಟ್ಟು ಚಿಂತೆ ಮಾಡುತ್ತಾ ಕೂರಬೇಡ, ಆಯ್ತಾ?? ಸರಿ ಎದ್ದೇಳು ಈಗ ಹೋಗಿ ಮುಖ ತೊಳೆದು ಸ್ವಲ್ಪ ನಗುವನ್ನ ಮುಖದಮೇಲಿರಿಸಿ ನಿನ್ನ ಕೆಲಸ ಮಾಡು ಹೋಗು.. ಬೈ ಬೈ“ ಎಂದು ಹೇಳಿ ಮಾಯವಾಯಿತು. ಒಂದು ಕ್ಷಣ ನನ್ನಂತರಾತ್ಮ ಹೇಳಿದ್ದೆಲ್ಲಾ ಸತ್ಯ ಎಂದೆನಿಸಿತು. ಅದರ ಧೈರ್ಯದ ಮಾತು ಕೇಳಿ ಇಷ್ಟೊತ್ತು ಸುಮ್ನೆ ಅತ್ತ್ನಲ್ಲಾ ನಾನು ದಡ್ಡಿ ಎಂದು ಮನಸ್ಸಿನಲ್ಲೆ ನನ್ನ ನಾನೇ ಬೈದುಕೊಂಡೆ. ಅದು ಹೇಳಿದೆ ತರಹ ನಾನಿದ್ದರೆ ಬದುಕು ಸುಂದರವಾಗಿರುತ್ತದಲ್ಲವೇ ಎಂದೆನಿಸಿತು. ಆದರೆ ಆ ಕ್ಷಣಕ್ಕೆ ಮಾತ್ರ ನನ್ನಂತರಾತ್ಮವೇ ನನ್ನ ಪರಮ ಮಿತ್ರವಾಯಿತು.
✍️ಕು.ತ್ರಿವೇಣಿ ಆರ್. ಹಾಲ್ಕರ್(ಶ್ರೀಷಡ್ಯಜ)
ಗೊಬ್ಬರವಾಡಿ ಕಲ್ಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ ಕಲಬುರ್ಗಿಯ ವಿದ್ಯಾರ್ಥಿನಿ