ಪುರುಷೋತ್ತಮ ಯೋಗವು ಸಕಲ ಶಾಸ್ತ್ರಗಳ ಸಾರವಾಗಿದೆ – ಪ್ರಮೋದಾಚಾರ್ಯ.
ಇಲಕಲ್ಲ ಆ.24

ಭಗವದ್ಗೀತೆಯ ಹದಿನೈದನೆಯ ಅಧ್ಯಾಯವಾದ ಪುರುಷೋತ್ತಮ ಯೋಗವು ಭಗವಂತನನ್ನು ಸಾಕ್ಷಾತ್ಕರಿಸಿ ಕೊಳ್ಳುವ ಮಾರ್ಗಗಳನ್ನು ಹೇಳುತ್ತದೆ, ಇದು ಸಕಲ ಶಾಸ್ತ್ರಗಳ ಸಾರವಾಗಿದ್ದು. ಭಕ್ತಿ ಮಾರ್ಗಕ್ಕೆ ಪ್ರೇರಕವಾಗಿದೆ. ಎಂದು ಪಂ. ಪ್ರಮೋದಾಚಾರ್ಯ ಪೂಜಾರ ಹೇಳಿದರು. ಇಳಕಲ್ಲ ಶ್ರೀ ವೆಂಕಟೇಶ ದೇವಸ್ಥಾನದಲ್ಲಿ ನಡೆದಿರುವ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದ ಎಂಟನೆಯ ಸಂಚಿಕೆಗೆ ಅವರು ಪ್ರವಚನಕಾರರಾಗಿ ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಇಳಕಲ್ಲ ಬ್ರಾಹ್ಮಣ ಸಮಾಜ, ಉತ್ತರಾದಿ ಮಠದ ಧರ್ಮ ಜ್ಞಾನವಾಹಿನಿ ಹಾಗೂ ಬಾಗಲಕೋಟೆಯ ವಿಶ್ವಮಾಧ್ವ ಪರಿಷದ್ ಸಂಸ್ಥೆಗಳು ಸಂಯುಕ್ತವಾಗಿ ಏರ್ಪಡಿಸಿದ್ದವು. ಕಾರ್ಯಕ್ರಮದ ನೇತೃತ್ವವನ್ನು ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪಾಂಡುರಂಗ ಕುಲಕರ್ಣಿ ಅವರು ವಹಿಸಿದ್ದರು. ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಅಧ್ಯಕ್ಷರಾಗಿರುವ ಪಂ. ಪ್ರಮೋದಾಚಾರ್ಯರ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದಾರೆ.

ನೂರಾರು ಕೇಂದ್ರಗಳಲ್ಲಿ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ಈ ಸಂಸ್ಥೆಯು ಪ್ರೋತ್ಸಾಹ ನೀಡುತ್ತಲಿದೆ. ಇಳಕಲ್ಲನಲ್ಲಿ ಕೂಡಾ ಈ ವಿದ್ಯಾಲಯದ ಕೇಂದ್ರವು ಆರಂಭವಾಗಿದೆ. ಲಕ್ಷ್ಮೀ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಕುಲಕರ್ಣಿ ಅವರು ಸೌರಭ ವಿದ್ಯಾಲಯಕ್ಕೆ ಹೊಸ ವಿದ್ಯಾರ್ಥಿಗಳ ವಿವರವನ್ನು ಗುರುಗಳಿಗೆ ಹಸ್ತಾಂತರಿಸಿದರು.ಶ್ರೀಹರಿ ಪೂಜಾರ, ಸುರೇಶ ಪೂಜಾರ, ವಿರುಪಾಕ್ಷ ಭಟ್ಟ ವೇದ ಪಾಠವನ್ನು ಹೇಳಿದರು. ಬಂಡು ಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಪದಾಧಿಕಾರಿಗಳಾದ ವಿಜಯ ಕಾರ್ಕಳ, ಕಾಶೀನಾಥ ದೇಶಪಾಂಡೆ, ಗಿರಿಧರ ದೇಸಾಯಿ ಕಾರ್ಯಕ್ರಮದ ವ್ಯವಸ್ಥೆಗಳ ಜವಾಬ್ದಾರಿ ವಹಿಸಿ ಕೊಂಡಿದ್ದರು. ನಾರಾಯಣಾಚಾರ್ಯ ಪೂಜಾರ, ವೆಂಕಟೇಶ ಪೂಜಾರ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ಅಭಿಯಾನದ ಎಂಟನೆಯ ಸಂಚಿಕೆಯ ಪ್ರಾಯೋಜಕತ್ವವನ್ನು ಡಾ. ಗುರುರಾಜ ಕಾಖಂಡಕಿ ಪರಿವಾರವು ವಹಿಸಿತ್ತು. ಗುರುಗಳು ಅವರನ್ನು ಸನ್ಮಾನಿಸಿದರು. ಕೊನೆಯ ದಿನದ ಪ್ರಸಾದ ಸೇವೆಯನ್ನು ಸತ್ಯನಾರಾಯಣ ಕರವಾ ಅವರು ಕೈಗೊಂಡರು. ಲಕ್ಷ್ಮೀ ಮಹಿಳಾ ಮಂಡಳಿ ಹಾಗೂ ಬ್ರಾಹ್ಮಣ ಯುವಕ ಸಂಘಗಳ ಸದಸ್ಯರು ಪ್ರವಚನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸೇವೆಯನ್ನು ಕಳೆದ 48 ವರ್ಷಗಳಿಂದ ಸಲ್ಲಿಸುತ್ತಿರುವ ಮಂಗಳೂರ ಪರಿವಾರದ ಅರವಿಂದ ಮಂಗಳೂರು ದಂಪತಿಗಳನ್ನು ಗುರುಗಳು ಸನ್ಮಾನಿಸಿದರು. ಸಭಿಕರು ಮೌನವಾಗಿ ಏಕಾಗ್ರತೆಯಿಂದ ಭಗವದ್ಗೀತೆಯ ಪಾಠವನ್ನು ಆಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.