ಮನು ಕುಲಕ್ಕೆ ಸನ್ಮಾರ್ಗ ತೋರಿದ ಸಂತ ಶಿಶುನಾಳ ಶರೀಫರು – ಸಂತೋಷ ಬಂಡೆ.
ವಿಜಯಪುರ ಜು.04





ಜಾತಿ, ಮತ, ಧರ್ಮ ಲೆಕ್ಕಿಸದೇ ಮಾನವತಾ ಧರ್ಮವನ್ನು ಬೋಧಿಸಿದ ಶಿಶುನಾಳ ಶರೀಫರು ಸಮಾಜದ ಕಂದಾಚಾರಗಳನ್ನು ಧೈರ್ಯದಿಂದ ಟೀಕಿಸಿ, ಇಡೀ ಮನು ಕುಲಕ್ಕೆ ಸನ್ಮಾರ್ಗವನ್ನು ತೋರಿಸಿದ್ದಾರೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು. ಗುರುವಾರ ದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ಸಂತ ಶಿಶುನಾಳ ಶರೀಫರ ಜಯಂತಿ ಹಾಗೂ ಸ್ಮರಣೆ ದಿನ’ ವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಅನುಭಾವಿಗಳಾದ ಶರೀಫರು ಮುಂದಿನ ಯುವ ಪೀಳಿಗೆಯ ಹಿತ ದೃಷ್ಟಿಯನ್ನಿಟ್ಟು ಕೊಂಡು ಸಾಂಸಾರಿಕ ನೆಲೆ ಗಟ್ಟಿನ ಮೇಲೆಯೇ ಆದರ್ಶ ಸಮಾಜದ ಕಲ್ಪನೆಯೊಂದಿಗೆ ಧರ್ಮ ಪರಿಪಾಲನೆಯ ತತ್ವವನ್ನು ಸಾರಿದ್ದಾರೆ. ಅವರ ತತ್ವ ಪದಗಳನ್ನು ಅರ್ಥೈಸಿ ಕೊಂಡು ಬದುಕು ಹಸನಾಗಿಸಿ ಕೊಳ್ಳಬೇಕು ಎಂದು ಹೇಳಿದರು. ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ‘ದೇವನೊಬ್ಬ ನಾಮ ಹಲವು’ ಎಂಬ ವಿಶ್ವ ತತ್ವವನ್ನು ಅರಿತು, ಸಂಚಾರಿ ಶರಣರಾಗಿ ಬೋಧಿಸುತ್ತಾ, ಬಾಳಿದ ಶರೀಫರ ಸಾಹಿತ್ಯ ಜನ ಸಾಮಾನ್ಯರಿಗೆ ನಿಲುಕು ವಂತಾದಾಗಿದೆ. ಅವರ ತತ್ವಗಳು ಇಂದಿಗೂ ಆದರ್ಶವಾಗಿವೆ ಎಂದು ಹೇಳಿದರು.ಅತಿಥಿ ವಿಶ್ವನಾಥ ಕಲಗೊಂಡ ಮಾತನಾಡಿ, ಐಕ್ಯತೆ ಹಾಗೂ ಸೌಹಾರ್ದವನ್ನು ಬೆಳೆಸಿ ಕೊಳ್ಳಲು ಅವರ ವೈಚಾರಿಕ ತತ್ವ ಪದಗಳು ಸಹಕಾರಿ ಯಾಗಿವೆ. ಅವರು ಸಾರಿದ ತತ್ವಗಳಿಂದ ಈ ನಾಡಿಗೆ ಇಂದಿಗೂ ಪ್ರಸ್ತುತವೆನಿಸಿದ್ದಾರೆ ಎಂದು ಹೇಳಿದರು. ವಿಶ್ವನಾಥ ಹಂಡಿ, ಬಸವರಾಜ ಸಾರವಾಡ, ರಾಜು ಕತ್ನಳ್ಳಿ, ಸಂತೋಷ ವಾಲೀಕಾರ, ವಿಶಾಲ ಬಡಿಗೇರ, ಆನಂದ ಅರಕೇರಿ, ಆನಂದ ಗಂಗನಳ್ಳಿ ಸೇರಿದಂತೆ ಅನೇಕ ಮಕ್ಕಳು ಭಾಗವಹಿಸಿದ್ದರು.