ಬಿಜೆಪಿ ಕುಟುಂಬ ಪರಿವಾರದ ಪಕ್ಷವಲ್ಲ, ಈಶ್ವರಪ್ಪ ಮಾತಿಗೆ – ಎಂಎಲ್ಸಿ ರವಿಕುಮಾರ್ ತಿರುಗೇಟು.
ಕೂಡ್ಲಿಗಿ ಮಾರ್ಚ್.23

ಬಿಜೆಪಿ ಕುಟುಂಬದ ಪರಿವಾರದ ಪಕ್ಷವಲ್ಲ. ನಮ್ಮಲ್ಲಿ ಟಿಕೆಟ್ ಪೈಪೋಟಿ ಯಿಂದ ನಾಯಕರಲ್ಲಿ ಅಸಮಾಧಾನವಾಗಿದೆ. ಅದೆಲ್ಲವೂ ಸರಿ ಹೋಗುವುದರ ಜತೆಗೆ ಬಳ್ಳಾರಿ ಸೇರಿ ರಾಜ್ಯದಲ್ಲಿ 28 ಸ್ಥಾನವನ್ನು ಬಿಜೆಪಿ ಗೆಲ್ಲುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಬಿಜೆಪಿಯ ಎಂಎಲ್ ಸಿ ಹಾಗೂ ಬಳ್ಳಾರಿ ಲೋಕಸಭಾ ಬಿಜೆಪಿ ಉಸ್ತುವಾರಿ ರವಿಕುಮಾರ ತಿಳಿಸಿದರು.ಶುಕ್ರವಾರ ಪಟ್ಟಣದ ಹಿರೇಮಠ ಕಲ್ಯಾಣ ಮಂಟಪದ ಆವರಣದಲ್ಲಿ ಕೂಡ್ಲಿಗಿ ಮಂಡಲದ ಭಾರತೀಯ ಜನತಾ ಪಾರ್ಟಿಯಿಂದ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನ ಸಭೆಯ ನಂತರ ಪತ್ರಕರ್ತ ರೊಂದಿಗೆ ಮಾತನಾಡುತ್ತ ಒಂದೇ ಕುಟುಂಬದ ಅಪ್ಪ, ಮಕ್ಕಳ ಕಪಿಮುಷ್ಠಿಯಲ್ಲಿ ರಾಜ್ಯದ ಬಿಜೆಪಿ ಇದ್ದು, ಶುದ್ಧಿಕರಣವೇ ನಮ್ಮ ಅಜೆಂಡಾ ಎಂದು ಕೆ.ಎಸ್.ಈಶ್ವರಪ್ಪ ಹೇಳುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆ ರೀತಿ ಹೇಳುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿಕೆ ವಿರುದ್ಧ ಮಾತಿನ ತಿರುಗೇಟು ನೀಡಿ ಈ ಬಾರಿ ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗ ಬೇಕೆಂಬ ಬಯಕೆ ಎಲ್ಲೆಲ್ಲೂ ಎದ್ದಿರುವುದರಿಂದ ಬಿಜೆಪಿ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ಪೈಪೋಟಿ ಯಾಗಿರುವುದರಿಂದ ಗೊಂದಲವಾಗಿದೆಯೇ ವಿನಃ ಯಾವೊಬ್ಬ ನಾಯಕರೂ ಪಕ್ಷ ಬಿಟ್ಟು ಹೋಗಿಲ್ಲ ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಭೀಕರ ಬರಗಾಲ ತಾಂಡ ವಾಡುತ್ತಿದ್ದರೂ ಬೆಂಗಳೂರು ಸೇರಿ ರಾಜ್ಯದ ಶೇ.80ರಷ್ಟು ಹಳ್ಳಿಗಳಲ್ಲಿ ಕುಡಿವ ನೀರಿಲ್ಲದ ಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಹೇಳಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಲೇವಡಿ ಮಾಡಿದರು.ದೇಶದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೂಟವು 400ಕ್ಕೂ ಹೆಚ್ಚಿನ ಸ್ಥಾನಗಳನ್ನು ಈ ಬಾರಿ ಗೆಲ್ಲಲಿದ್ದು, ಕಾಂಗ್ರೆಸ್ 50 ಸೀಟುಗಳು ಸಹ ದಾಟಲ್ಲ ಎಂಬುದನ್ನು ಈಗಲೇ ಹೇಳುವಂಥ ವಾತಾವರಣವಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳ ಆಡಳಿತಾವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಲಂ 370 ರದ್ದು, ಸಿಎಎ ಜಾರಿ ಸೇರಿ ಮಹತ್ತರ ಬದಲಾವಣೆ ಮಾಡಿರುವುದು ದೇಶ ಕಾಯುವ ರಕ್ಷಕ ಎಂದು ಜನರು ಮತ್ತೊಮ್ಮೆ ಪ್ರಧಾನಿ ಮಾಡಲು ಕಾತುರರಾಗಿದ್ದಾರೆ. ರಾಜ್ಯದಲ್ಲಿ ಕೆಲ ಕ್ಷೇತ್ರಗಳ ಗೊಂದಲ ಸದ್ಯದಲ್ಲೇ ನಿವಾರಣೆಯಾಗಲಿದೆ ಎಂದು ಎಂಎಲ್ಸಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಮೆಚ್ಚಿದ ನಾಯಕ. ಅವರು 10 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಜನರಿಗೆ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬಂದಿದ್ದು, ನೀವು ಆಶೀರ್ವದಿಸಿದ್ದಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವುದರ ಜತೆಗೆ ಮುಂಬರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ಕೊಡಿಸಲಾಗುವುದು ಎಂದು ತಿಳಿಸಿದರು.

ವಿಜಯನಗರ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ ಪಾಟೀಲ್ ಮಾತನಾಡಿ, ದೇಶವನ್ನು ವಿಶ್ವಗುರು ಮಾಡಲು ಹೊರಟಿರುವ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಬಯಕೆ ದೇಶದಲ್ಲಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಕಾಂಗ್ರೆಸ್ ಸರಕಾರ ಯಾವುದೇ ನೆರವು ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂದರು.ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ಕೊಡದಿದ್ದೆ ಸೋಲಿಗೆ ಕಾರಣ, ಕಳೆದ ಕೂಡ್ಲಿಗಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಸ್ಥಳೀಯರು ನಾಲ್ಕೈದು ಜನ ಆಕಾಂಕ್ಷಿಗಳಿದ್ದರೂ, ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೊರಗಿನವರು ಹಾಗೂ ಕಾಂಗ್ರೆಸ್ ನಿಂದ ಬಂದಿದ್ದ ಲೋಕೇಶ್ ಅವರಿಗೆ ಟಿಕೆಟ್ ಕೊಟ್ಟಿದ್ದೇ ಕೂಡ್ಲಿಗಿಯಲ್ಲಿ ಸೋಲಾಗಲು ಕಾರಣವಾಯಿತು ಎಂದು ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು. ವಿಧಾನ ಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ನೋವಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲೋಕೇಶ್ ಗೆ ಸಾಕಷ್ಟು ನಾಯಕರು, ಕಾರ್ಯಕರ್ತರು ಬೆಂಬಲಿಸಲಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿ.ಶ್ರೀರಾಮುಲು ಅವರಿಗೆ ಕೂಡ್ಲಿಗಿ ಕ್ಷೇತ್ರದಲ್ಲಿ ಅತ್ಯಧಿಕ ಮತ ಲಭಿಸಲು ಶ್ರಮಿಸುತ್ತೇವೆ. ರಾಮಾಯಣದ ಶ್ರೀರಾಮರಂತೆ ಬಳ್ಳಾರಿ ಕ್ಷೇತ್ರಕ್ಕೂ ಶ್ರೀರಾಮುಲು ಅವರೇ ನಮಗೆ ಶ್ರೀರಾಮ ಇದ್ದಂತೆ ಎಂದು ತಿಳಿಸಿದರು.ಬಿಜೆಪಿ ಯುವ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಹೊಸಪೇಟೆ ಸಿದ್ಧಾರ್ಥ ಸಿಂಗ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಎಚ್.ರೇವಣ್ಣ, ಬಿ.ಭೀಮೇಶ್, ಎಸ್.ದುರುಗೇಶ್ ಮಾತನಾಡಿದರು. ಬಿಜೆಪಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಬಣವಿಕಲ್ಲು ಕಾಮಶೆಟ್ಟಿ ರಾಜು ಪ್ರಾಸ್ತಾವಿಕ ನುಡಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ರಾಮದುರ್ಗ ಸೂರ್ಯಪಾಪಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಗುಂಡುಮುಣುಗು ಎಸ್.ಪಿ.ಪ್ರಕಾಶ್, ರೇಖಾ ಮಲ್ಲಿಕಾರ್ಜುನ, ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಮೊರಬ ಶಿವಣ್ಣ, ಶಂಕರ್ ನವಲಿ, ಓದೋ ಗಂಗಪ್ಪ, ನಿಂಬಳಗೆರೆ ರಾಜೇಂದ್ರ ಗೌಡ, ಎಂ.ಬಿ.ಅಯ್ಯನಹಳ್ಳಿ ನಾಗಭೂಷಣ, ಬೆಳ್ಳಕಟ್ಟೆ ಕಲ್ಲೇಶ್ ಗೌಡ, ಸಣ್ಣ ಬಾಲಪ್ಪ, ಕೆ.ಚನ್ನಪ್ಪ, ಸಾಣೆಹಳ್ಳಿ ಹನುಮಂತಪ್ಪ, ಕೆ.ಎಚ್.ಎಂ.ಸಚಿನ್ ಕುಮಾರ್, ಸೂಲದಹಳ್ಳಿ ಮಾರೇಶ್, ಹುಲಿಕೆರೆ ಗೀತಾ, ಪಿ.ಮಂಜುನಾಥ ನಾಯಕ ಕೂಡ್ಲಿಗಿ ಪವಿತ್ರ,ಗಂಗಮ್ಮ, ಮಹಾಲಕ್ಷ್ಮಿ ಸೇರಿ ಇತರರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ