ಖಾನಾಪೂರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ – ಕಾಡಂಚಿನ ಗ್ರಾಮಸ್ಥರ ಸ್ಥಳಾಂತರಕ್ಕೆ ಚಿಂತನೆ.
ಖಾನಾಪೂರ ಜು.26





ಅತಿವೃಷ್ಠಿ/ಪ್ರವಾಹ ಸಂಭವನೀಯ ಹಿನ್ನಲೆಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಶುಕ್ರವಾರ ಖಾನಾಪೂರ ತಾಲೂಕಿನ ಪ್ರವಾಹ ಪೀಡಿತ, ಮಳೆ ಹಾನಿ ಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಾಂಬೋಟಿ ರಸ್ತೆಯ ಕುಸುಮಳ್ಳಿ ಸೇತುವೆ, ವೀಕ್ಷಿಸಿ, ಬಳಿಕ ಖಾನಾಪೂರ ದಿಂದ ಜಾಂಬೋಟಿಗೆ ಸಂಪರ್ಕ ಕಲ್ಪಿಸುವ ಮದ್ಯದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಸ್ಥಿತಿ ಗತಿಯನ್ನು ಪರಿಶೀಲಿಸಿದರು.ನಂತರ ಖಾನಾಪೂರ ಪ್ರವಾಸಿ ಮಂದಿರದಲ್ಲಿ ವಿವಿಧ ಗ್ರಾಮಗಳ ಜನರ ಅಹವಾಲುಗಳನ್ನು ಆಲಿಸಿದರು.ಈ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದ ಮಲಪ್ರಭಾ ನದಿ ತೀರದ ಹಿರೇಹಟ್ಟಿ ಹೊಳಿ ಗ್ರಾಮದ ಜನರು, ಸಂಪೂರ್ಣ ಗ್ರಾಮವೇ ಜಲಾವೃತ ಗೊಳ್ಳುವುದರಿಂದ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು.ಪ್ರತಿವರ್ಷ ಮಳೆಗಾಲದಲ್ಲಿ ಹಿರೇಹಟ್ಟಿ ಹೊಳಿ ಮುಳುಗಡೆ ಯಾಗುವುದರಿಂದ ವೈದ್ಯಕೀಯ ಸೌಲಭ್ಯ, ಶಿಕ್ಷಣ ಮತ್ತಿತರ ಮೂಲ ಸೌಕರ್ಯಗಳು ಗ್ರಾಮಸ್ಥರಿಗೆ ಸಿಗುತ್ತಿಲ್ಲ; ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಒದಗಿಸ ಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.15 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸಿದ್ಧ-ಈ ವೇಳೆ ಖಾನಾಪೂರ ಪ್ರವಾಸಿ ಮಂದಿರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಖಾನಾಪುರ ತಾಲೂಕಿನ ಕಾಡಂಚಿನ 15 ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು.

ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲವೇ ಅಲ್ಲಿನ ಜನರನ್ನು ಸ್ಥಳಾಂತರಿಸುವ ಕುರಿತು ಯೋಚಿಸಲಾಗುವುದು ಎಂದರು.ಹೊಸ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುಮತಿಯಿಲ್ಲ. ನೂರಾರು ವರ್ಷಗಳಿಂದ ಜನರು ಅಂತಹ ಪ್ರದೇಶದಲ್ಲಿ ವಾಸವಿದ್ದಾರೆ. ಈ ಕುರಿತು ಈಗಾಗಲೇ ಅರಣ್ಯ ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಅರಣ್ಯ ಸಚಿವರಿಗೆ ಇಲ್ಲಿನ ಸ್ಥಳೀಯ ಸ್ಥಿತಿ ಗತಿಗಳನ್ನು ವಿವರಿಸಲಾಗುವುದು ಎಂದು ಹೇಳಿದರು.ಇತ್ತೀಚೆಗೆ ಕಾಡಂಚಿನ ಅಮಗಾಂವ ಗ್ರಾಮದ ಮಹಿಳೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಪ್ರಕರಣಕದ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ, ಆ್ಯಂಬುಲೆನ್ಸ್ ಹೋಗಲು ಸರಿಯಾದ ರಸ್ತೆ ಇಲ್ಲ, ನೆಟವರ್ಕ್ ಸಮಸ್ಯೆ ಇದೆ ಎಂಬುದು ತಿಳಿದು ಬಂದಿದೆ. ಅದೇ ರೀತಿಯಲ್ಲಿ ರೇಶನ್ ಪಡೆಯಲು ಕಾಡಂಚಿನ ಗ್ರಾಮಸ್ಥರು ಪರ ದಾಡುವಂತಾಗಿದೆ. ಶೇ.80 ರಷ್ಟು ಜನರು ಒಪ್ಪಿದರೆ ಅವರನ್ನು ಬೇರೆಡೆ ಸ್ಥಳಾಂತರ ಮಾಡಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.ಖಾನಾಪುರದ ಹಲವು ಹಳೆಯ ಸೇತುವೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೂ ಖಾನಾಪೂರ ದಿಂದ ಗೋವಾ ರಾಜ್ಯದ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ಥಿ ಮತ್ತು ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮಳೆಗಾಲ ಮುಗಿದ ಬಳಿಕ ಹೊಸ ಸೇತುವೆ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಹ ಅಷ್ಟೊಂದು ಅಪಾಯಕಾರಿ ಮಟ್ಟದಲ್ಲಿಲ್ಲ. ಸದ್ಯದ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಿನ್ನೆ ಚಿಕ್ಕೋಡಿ ಭಾಗದ ವಿವಿಧೆಡೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಈ ಸಂದರ್ಭದಲ್ಲಿ ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.