🚨 ಬ್ರೇಕಿಂಗ್ ನ್ಯೂಸ್:ಕೋಟಿ ಕೋಟಿ ಸರ್ಕಾರಿ ಬೊಕ್ಕಸಕ್ಕೆ ನಷ್ಟ! 🚨ಉಡುಪಿ ಉಸ್ತುವಾರಿ ಸಚಿವರೇ ಗಮನಿಸಿ:ಬ್ರಹ್ಮಾವರ ‘ಗರಿಕೆ ಮಠ’ ದಲ್ಲಿ ಕಾನೂನಿಗೆ ಸವಾಲು; ಸರ್ಕಾರಿ ಜಾಗದಲ್ಲಿ ರಾಜಾರೋಷ ಅಕ್ರಮ ಗಣಿಗಾರಿಕೆ ದಂಧೆ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶದ ಕಟ್ಟೆ..!
ಉಡುಪಿ ಡಿ.12

ಕರಾವಳಿಯ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಎಡ್ತಡಿ ಗ್ರಾಮದ ಸರ್ವೇ ನಂಬರ್ 145 ರಲ್ಲಿ ಬರುವ 1.84 ಎಕರೆ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಯಾವುದೇ ಅನುಮತಿ ಮತ್ತು ರಾಜ್ಯಧನ (Royalty) ಪಾವತಿಸದೆ ಹಲವಾರು ವರ್ಷಗಳಿಂದ ನಿರಂತರವಾಗಿ ಕೋಟಿ ಗಟ್ಟಲೆ ಮೌಲ್ಯದ ಅಕ್ರಮ ಸೈಜ್ ಕಲ್ಲುಗಳ ಗಣಿಗಾರಿಕೆ ಮತ್ತು ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಅಕ್ರಮದಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಈ ಪ್ರಕರಣದಲ್ಲಿ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಮತ್ತು ಜವಾಬ್ದಾರಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

🔥 ಆರೋಪಿಗಳ ರಾಜಾರೋಷ ಒಪ್ಪಿಗೆ, ಕಾನೂನಿಗೆ ಸವಾಲು..!
ಗರಿಕೆ ಮಠದ ನಿವಾಸಿ ಮಂಜುಳಾ ಬಿನ್ನ ಗೋಪಾಲ ಮತ್ತು ಇತರರು ಈ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಮಂಜುಳಾ ಅವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಘಾತಕಾರಿ ವಿಷಯವೆಂದರೆ, ಈ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು, ಬ್ರಹ್ಮಾವರ ತಹಶೀಲ್ದಾರ್ ಕಚೇರಿಯ ಎದುರು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ತಾವು ಅಕ್ರಮ ಗಣಿಗಾರಿಕೆ ಮಾಡಿರುವುದನ್ನು ಬಹಿರಂಗವಾಗಿ ಒಪ್ಪಿ ಕೊಂಡಿದ್ದಾರೆ. “ನಾವು ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಗಣಿಗಾರಿಕೆಯನ್ನು ಮಾಡುತ್ತೇವೆ, ಮಾಡಿದ್ದೇವೆ.” ಎಂದು ಹೇಳಿಕೆ ನೀಡಿರುವುದು, ಅವರಿಗೆ ಕಾನೂನಿನ ಬಗ್ಗೆ ಇರುವ ಅಸಡ್ಡೆ ಮತ್ತು ಕೆಲವು ‘ಕಾಣದ ಕೈಗಳ’ ಬೆಂಬಲವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

🎭 ಸಂಘಟನೆಗಳ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮತ್ತು ಹುನ್ನಾರ:-
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲವರು ದಲಿತರು, ದಮನಿತರು ಮತ್ತು ಪರಿಶಿಷ್ಟ ಜಾತಿ/ಪಂಗಡದ ಸಂಘಟನೆಗಳ ಹೆಸರನ್ನು ದುರ್ಬಳಕೆ ಮಾಡಿ ಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದ ಜನರನ್ನು ಸೇರಿಸಿ, ಅವರ ದಿಕ್ಕು ದಾರಿ ತಪ್ಪಿಸಿ, ಕಾನೂನು ಉಲ್ಲಂಘನೆಗೆ ಪ್ರೇರೇಪಿಸಲಾಗಿದೆ ಎನ್ನಲಾಗಿದೆ. ‘ಅಂಬೇಡ್ಕರ್ ಸಂಘಟನೆ’ ಗಳ ಹೆಸರನ್ನು ಬಳಸಿ ಕೊಂಡು, ಈ ಅಕ್ರಮಗಳನ್ನು ಸಮರ್ಥಿಸಿ ಕೊಳ್ಳಲು ಸರ್ಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸುವ ಹುನ್ನಾರಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

📢 ತಕ್ಷಣದ ಕ್ರಮಕ್ಕೆ ಬಿ.ಕೆ ಶಾಲಿನಿ ಆಗ್ರಹ:-
ಬಿ.ಕೆ ಶಾಲಿನಿ ಎಂಬುವವರು ಈ ಅಕ್ರಮಗಳ ಕುರಿತು ಧ್ವನಿ ಎತ್ತಿದ್ದು, ಸದರಿ ಸ್ಥಳಕ್ಕೆ ತಾನು ಈಗಾಗಲೇ ಕಾನೂನು ಬದ್ಧವಾಗಿ ರಾಜ್ಯಧನ ಪಾವತಿಸಿ ಗಣಿ ಗುತ್ತಿಗೆ ಪಡೆಯಲು ಡಿಸೆಂಬರ್ 2024 ರಂದು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಇದೇ ಸ್ಥಳಕ್ಕೆ ಅಕ್ರಮ ಗಣಿಗಾರಿಕೆಯ ಹಿನ್ನೆಲೆಯುಳ್ಳ ಮಂಜುಳಾ ಅವರು ಕೂಡ ಹೊಸದಾಗಿ ಅರ್ಜಿ ಸಲ್ಲಿಸಿರುತ್ತಾರೆ.ಶಾಲಿನಿ ಅವರು, ಈ ಅಕ್ರಮ ಗಣಿಗಾರಿಕೆಯ ಹಿನ್ನೆಲೆ ಯುಳ್ಳವರಿಗೆ ಗಣಿ ಗುತ್ತಿಗೆ ನೀಡಬಾರದು, ಬದಲಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾದ ಕೋಟ್ಯಾಂತರ ರೂಪಾಯಿ ನಷ್ಟವನ್ನು ಅವರಿಂದಲೇ ದಂಡ ವಸೂಲಿ ಮಾಡಬೇಕು ಎಂದೂ ಒತ್ತಾಯಿಸಿದ್ದಾರೆ.

⚖️ ಸಾರ್ವಜನಿಕರ ಏಕರೂಪ ಬೇಡಿಕೆ:-
ಕಾನೂನು ಎಲ್ಲರಿಗೂ ಒಂದೇ! ಉಸ್ತುವಾರಿ ಸಚಿವರೇ ನಿಗಾ ವಹಿಸಿ! “ಭಾರತದ ಸಂವಿಧಾನದ ಪ್ರಕಾರ, ಕಾನೂನು ದಲಿತರಿರಲಿ, ಪರಿಶಿಷ್ಟ ಜಾತಿ/ಪಂಗಡದವರಿರಲಿ, ಅಥವಾ ಇತರ ವರ್ಗದವರಿರಲಿ ಎಲ್ಲರಿಗೂ ಒಂದೇ. ಅಕ್ರಮ ಗಣಿಗಾರಿಕೆ ನಡೆಸಿ, ಸರ್ಕಾರಿ ಆಸ್ತಿಯನ್ನು ಲೂಟಿ ಮಾಡಿದ ಮತ್ತು ಅದನ್ನು ಬಹಿರಂಗವಾಗಿ ಒಪ್ಪಿ ಕೊಂಡಿರುವ ಈ ಎಲ್ಲಾ ವ್ಯಕ್ತಿಗಳ ವಿರುದ್ಧ ಒಂದು ಅಕ್ಷರವನ್ನು ಬಿಡದೆ ತಕ್ಷಣವೇ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಬಲವಾಗಿ ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಗಳು ಕೂಡಲೇ ಇದರ ಮೇಲೆ ನಿಗಾ ವಹಿಸಿ, ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ತುಂಬಿ ಕೊಡುವಲ್ಲಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡ ಬೇಕು. ಜಿಲ್ಲೆಯಲ್ಲಿ ಈ ರೀತಿಯಾಗಿ ಅಕ್ರಮ ಮಾಡಿಕೊಂಡು ಮತ್ತೆ ಮತ್ತೆ ಅಕ್ರಮಕ್ಕೆ ಅವಕಾಶ ಮಾಡಿ ಕೊಡಬೇಕು ಎನ್ನುವವರ ವಿರುದ್ಧ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೇ ಈ ಬಗ್ಗೆ ತಕ್ಷಣವೇ ನಿಗಾ ವಹಿಸಿ, ಈ ಅಕ್ರಮದ ಹಿಂದೆ ಇರುವ ರಾಜಕೀಯ ಮತ್ತು ಅಧಿಕಾರಿಗಳ ಬೆಂಬಲದ ಬಗ್ಗೆ ಸಮಗ್ರ ತನಿಖೆ ನಡೆಸಿ, ಇಂತಹ ಘಟನೆಗಳು ಪುನರಾವರ್ತನೆ ಯಾಗದಂತೆ ಜಿಲ್ಲಾಡಳಿತ ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿಜವಾಗಿಯೂ ಕಾನೂನಾತ್ಮಕವಾಗಿ ಇರುವವರಿಗೆ ನ್ಯಾಯ ಯಾವಾಗ..? ಜಿಲ್ಲಾಡಳಿತ ಈ ರೀತಿಯಾಗಿ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಯಾವಾಗ? ಅನ್ನೋದನ್ನ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಮಾಡುವವರಿಗೆ ಅವಕಾಶ ನೀಡದೆ ಸಂವಿಧಾನಾತ್ಮಕವಾದ ನಡೆ ಹೊಂದಿದವರಿಗೆ, ಸರಿಯಾದ ದಾಖಲೆಗಳನ್ನು ಪರಿಶೀಲನೆ ಮಾಡಿ ಅವರಿಗೆ ಅವಕಾಶ ಮಾಡಿ ಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೆ ಇಂತಹ ಪೀಕಲಾಟಕ್ಕೆ ಯಾವುದೇ ರೀತಿಯ ಸಾಥ್ ನೀಡದೆ, ಮೂಲಾಜು ಇಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

