ಭುವನ ಸುಂದರಿ ಡಾ, ಶೃತಿ ಹೆಗಡೆಗೆ ಸನ್ಮಾನ.
ಹುಬ್ಬಳ್ಳಿ ಜು .16

ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸಲ್ ಪಿಟೈಟ್-೨೦೨೪ (ಭುವನ ಸುಂದರಿ) ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ೪೦ ದೇಶದ ಸುಂದರ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸ್ ಯೂನಿವರ್ಸಲ್ ಪ್ರಶಸ್ತಿಯನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದ ಡಾ.ಶೃತಿ ಹೆಗಡೆಯವರನ್ನು “ಶರಣರ ಶಕ್ತಿ” ಚಿತ್ರ ತಂಡದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಗೆದ್ದು ಪ್ರಥಮ ಬಾರಿಗೆ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಅವರನ್ನು ಉಣಕಲ್ ಮುಖ್ಯ ರಸ್ತೆಯಿಂದ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದ ವರೆಗೂ ವಿವಿಧ ಕಲಾ ತಂಡಗಳು, ವಾದ್ಯಮೇಳ, ಗೊಂಬೆಕುಣಿತದ ತಂಡಗಳೊಂದಿಗೆ ಕಾರಿನಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು. ಸಮುದಾಯ ಭವನದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಮುದಾಯ ಭವನದ ಆವರಣದಲ್ಲಿ ನೆರೆದ ನೂರಾರು ಗಣ್ಯ ಮಾನ್ಯರು ಅಭಿಮಾನಿಗಳವರ ಸಮ್ಮುಖದಲ್ಲಿ ಡಾ.ಶೃತಿ ಅವರು ಭಾರತದ ತ್ರಿವರ್ಣ ಧ್ವಜ ಹಿಡಿದು ರೆಡ್ ಕಾರ್ಪೆಟ್‌ನಲ್ಲಿ ರ್ಯಾಂಪ್. ವಾಕ್ ಮಾಡಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಭುವನ ಸುಂದರಿ ಕಿರೀಟ ಗೆದ್ದ ವಿಡಿಯೋವನ್ನು ಮತ್ತು ದಿಲೀಪ ಶರ್ಮ ನಿರ್ದೇಶನದ ಶ್ರೀಮತಿ ಆರಾಧನಾ ಕುಲಕರ್ಣಿ ನಿರ್ಮಿಸಿರುವ ಅಗಷ್ಟ ತಿಂಗಳು ಬಿಡುಗಡೆ ಯಾಗಲಿರುವ “ಶರಣರ ಶಕ್ತಿ” ಚಲನ ಚಿತ್ರದಲ್ಲಿ ಡಾ.ಶೃತಿ ಅವರು ಶರಣೆ ಸೂಳೆ ಸಂಕವ್ವೆಯ ಪಾತ್ರದಲ್ಲಿ ಅಭಿನಯಿಸಿರುವ ಹಾಡನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ನಾಟ್ಯಾಂಜಲಿ ಕೇಂದ್ರದ ವಿದುಷಿ ಸಹನಾ ಭಟ್, ಚೇತನಾ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮಹೇಶ ದ್ಯಾವಪ್ಪನವರ, ಮಂಜುನಾಥಗೌಡ ಪಾಟೀಲ, ಗಿರಿಜಾ ಸಂಗೊಳ್ಳಿ, ಡಾ.ರಮೇಶ, ಝಡ್.ಎಂ.ಮುಲ್ಲ, ಅಕ್ಕಮ್ಮ ಹೆಗಡೆ, ಎಂ.ಎ.ಕರಿಗೌಡರ, ಡಾ.ವಿ.ಎಂ.ಭಟ್, ವೈಶಾಲಿ ಅಥಣಿ ಮೊದಲಾದವರು ಆಗಮಿಸಿದ್ದರು.

ವೇದಿಕೆಯಲ್ಲಿ ತಂದೆ ಡಾ.ಕೃಷ್ಣ.ಎಂ.ಹೆಗಡೆ, ತಾಯಿ ಕಮಲಾ ಹೆಗಡೆ ಉಪಸ್ಥಿತರಿದ್ದರು. ಎಂ.ಬಿ.ಬಿ.ಎಸ್.ಮುಗಿಸಿ, ಎಂ.ಡಿ ಮಾಡುತ್ತಿರುವ ಡಾ.ಶೃತಿ ಅವರನ್ನು ಈ ಸಂದರ್ಭದಲ್ಲಿ “ಶರಣರ ಶಕ್ತಿ” ಚಲನ ಚಿತ್ರದಲ್ಲಿ ಬಸವಣ್ಣನವರ ಪಾತ್ರ ನಿರ್ವಹಿಸಿದ ಮಂಜುನಾಥ ಗೌಡ ಪಾಟೀಲ್, ನಗೆಮಾರಿ ತಂದೆ ಪಾತ್ರ ಮಾಡಿದ ವಿನೋದ ದಂಡಿನ್ , ಚಲನ ಚಿತ್ರದ ಪಿಆರ್‌ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಮತ್ತು ಪ್ರಶಾಂತ ಚಿತ್ರ ತಂಡದ ಸದಸ್ಯರು ಸನ್ಮಾನಿಸಿ ಶುಭ ಕೋರಿದರು. ವಿವಿಧ ಸಂಘ ಸಂಸ್ಥೆಗಳು ಕೂಡ ಸನ್ಮಾನಿಸಿ ಗೌರವಿಸಿದರು.
*****
ವರದಿ: ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬