ಮಹಾ ಶಿವರಾತ್ರಿ ದಿನ, ಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ – ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗಿ.
ಹುನಗುಂದ ಫೆ.26

ಶಿವ ಶಿವ ಎಂದರೇ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ. ಎನ್ನುವ ಶಿವನಾಮ ಸ್ಮರಣೆಯ ಹಾಡು ಪ್ರತಿಯೊಬ್ಬರ ಮನೆ ಮನದಲ್ಲಿ ಮತ್ತು ಸ್ಮೃತಿ ಪಟಲದಲ್ಲಿ ಹಾಗೂ ಶಿವನ ಭಕ್ತರ ನಾಲಿಗೆಯಲ್ಲಿ ಹರಿದಾಡಿದಂತೂ ಸತ್ಯ. ಮಹಾಶಿವರಾತ್ರಿಯ ಪ್ರಯುಕ್ತ ಉಪವಾಸ ವ್ರತಾಚರಣೆಯ ಸಾವಿರಾರು ಭಕ್ತರು ನಸುಕಿನಲ್ಲಿ ದೇವಸ್ಥಾನಕ್ಕೆ ತೆರಳಿ ವಿಶೇಷ ದರ್ಶನ ಪಡೆದು ಪೂಜೆ ಪುನಸ್ಕಾರ, ಅರ್ಚನೆ, ಅಭಿಷೇಕ, ನೈವೇದ್ಯ ಮಾಡಿಸಿ ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ವಿಶ್ರಮಿಸಿ ಶಿವನ ನಾಮ ಸ್ಮರಣೆಯಲ್ಲಿ ಸಹಸ್ರಾರು ಸಂಖ್ಯೆಯ ಶಿವನ ಭಕ್ತರು ಮರಳಿ ಮನೆಗೆ ತೆರಳುತ್ತಿರುವ ವಿಶೇಷ ದೃಶ್ಯವೂ ಶಿವಯೋಗದ ದಿನವಾದ ಬುಧವಾರ ಹುನಗುಂದ ಪಟ್ಟಣದ ಗುಡ್ಡದ ಮೇಲೆ ವಾಸವಾಗಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಡು ಬಂದಿತು.ನಸುಕಿನಿಂದಲೇ ಭಕ್ತರ ಓಂಕಾರ ನಾದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಸುತ್ತಮುತ್ತಲು ಮೊಳಗಿತು. ಭಕ್ತರು ನಸುಕಿನಿಂದಲೇ ಹಣ್ಣು ಕಾಯಿ ಹೂ ಹಾರಗಳನ್ನು ದೇವರಿಗೆ ಸಮರ್ಪಿಸಿ ಅರ್ಚನೆ ನೆರವೇರಿಸಿದರು. ಮಹಾ ಮಂಗಳಾರತಿ ಮಾಡಿ, ಧೂಪ ದೀಪ ಬೆಳಗಿ, ಸಂಕಲ್ಪ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.ಶಿವ ದೇವಾಲಯದಲ್ಲಿ ಶಿವನ ಅನುಗ್ರಹಕ್ಕಾಗಿ ಶಿವ ಪೂಜೆ ಮತ್ತು ಉಪವಾಸ ವ್ರತ ಮಾಡಿ, ಲಿಂಗಗಳಿಗೆ ಎಳೆನೀರು, ಜೇನು, ಹಾಲು ಮೊಸರು, ತುಪ್ಪ ಬಳಸಿ ಜಲಾಭಿಷೇಕ, ಕ್ಷೀರಾಭಿಷೇಕ ಮಾಡಲಾಯಿತು.

ಈ ವೇಳೆ ಪೂಜೆಯಲ್ಲಿ ಪಾಲ್ಗೊಂಡ ಭಕ್ತರು ಭಕ್ತಿಯಿಂದ ಓಂ ನಮಃ ಶಿವಾಯ ಹಾಗೂ ಶಿವ ಸಹಸ್ರನಾಮ ಪಠಿಸಿದರು. ಕೊನೆಯಲ್ಲಿ ತೀರ್ಥ ಪ್ರಸಾದ ಸ್ವೀಕರಿಸಿದರು.ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಿಶೇಷ ಅಲಂಕಾರ ಮಹಾ ಶಿವರಾತ್ರಿಯ ಎರಡು ದಿನ ಮುಂಚೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವನ್ನು ಭಕ್ತರು ತಳಿರು ತೋರಣಗಳಿಂದ ಮತ್ತು ದೀಪಾಲಂಕಾರ ದಿಂದ ಅಲಂಕರಿಸಲಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ-ಯ ಶಿವಯೋಗದ ದಿನ ಶಿವನ ಆರಾಧಕರು ಬೆಳಗಿನಿಂದ ಸಾಯಂಕಾಲದ ವರೆಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ವ್ರತ ಆಚರಣೆಯಲ್ಲಿ ತೊಡಗಿದ್ದು ಕಂಡು ಬರುವುದರ ಜೊತೆಗೆ ಸಾವಿರಾರು ಸಂಖ್ಯೆಯ ಜನಸ್ತೋಮ ಅಲ್ಲಿ ಕಂಡು ಬಂದಿದ್ದು ವಿಶೇಷವಾಗಿತ್ತು.ಬಾಕ್ಸ್ ಸುದ್ದಿ:- ಶಿವರಾತ್ರಿಯ ಕುಂಭ ಮೇಳಕ್ಕೆ ಚಾಲನೆ ನೀಡಿದ ಕಾಶಪ್ಪನವರ, ಮಹಾ ಶಿವರಾತ್ರಿಯ ಪ್ರಯುಕ್ತ 501 ಕುಂಭಮೇಳ ಮತ್ತು ಶಿವನ ಭಾವ ಚಿತ್ರದ ಮೆರವಣಿಗೆಗೆ ಹುನಗುಂದ ಮತ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಪಟ್ಟಣದ ಪೊಲೀಸ್ ಠಾಣೆ ಹತ್ತಿರದ ಆಂಜನೇಯ ದೇವಸ್ಥಾನದ ಬಳಿ ಉದ್ಘಾಟಿಸಿ ಚಾಲನೆ ನೀಡಿದರು. ಅಲ್ಲಿಂದ ಸಂಗಮೇಶ್ವರ ದೇವಸ್ಥಾನ, ಮೇನ್ ಬಜಾರ್, ಲಿಂಗದಕಟ್ಟಿ, ಮೇಗಲಪೇಟೆ ಮಾರ್ಗವಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕುಂಭ ಮೇಳ ಮತ್ತು ಮೆರವಣಿಗೆ ತೆರಳಿತು.ಈ ವೇಳೆ ಬಿಲ್‌ಕೆರೂರ ಬಿಲ್ವಾಶ್ರಮ ಸಂಸ್ಥಾನ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು, ಗಚ್ಚಿನಮಠದ ಅಮರೇಶ್ವರ ದೇವರು,ಪುರಸಭೆ ಅಧ್ಯಕ್ಷೆ ಭಾಗ್ಯ ಶ್ರೀ ರೇವಡಿ,ಉಪಾಧ್ಯೆಕ್ಷೆ ರಾಜಮ್ಮ ಬದಾಮಿ, ದೇವಸ್ಥಾನ ಸಮೀತಿ ಕಾರ್ಯಾಧ್ಯಕ್ಷ ಶಶಿಕಾಂತ ಪಾಟೀಲ, ಅಧ್ಯಕ್ಷ ಬಸವರಾಜ ಹೊಸೂರ, ಪುರಸಭೆ ಸದಸ್ಯ ಪ್ರವೀಣ ಹಳಪೇಟಿ, ಮುಖಂಡರಾದ ಶಿವಾನಂದ ಕಂಠಿ, ಸಂಗಣ್ಣ ಗಂಜಿಹಾಳ, ಅಮರೇಶ ನಾಗೂರ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ