ಗ್ಯಾರೆಂಟಿ ಅನುಷ್ಠಾನ ಸಮಿತಿಯಲ್ಲಿ ಉಚಿತವಾಗಿ ಕೆ.ಆರ್.ಎಸ್ ಕಾರ್ಯಕರ್ತರು ಕೆಲಸ ಮಾಡಲು ಸಿದ್ದ – ನಿರುಪಾದಿ ಕೆ ಗೋಮರ್ಸಿ.
ಸಿಂಧನೂರು ಮಾ.27

ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಕಾರಣ ನೀಡಿ “ಗ್ಯಾರಂಟಿ ಅನುಷ್ಠಾನ ಸಮಿತಿ” ಗಳನ್ನು ರಚಿಸಿದೆ. ಇದು ಸರ್ಕಾರದ ನಿಯಂತ್ರಣದಲ್ಲಿ ಆಡಳಿತ ಇಲ್ಲದಿರುವುದು ಮತ್ತು ಅದನ್ನು ತನ್ನಿಂದ ನಿಯಂತ್ರಿಸಲು ಸಾಧ್ಯವಿಲ್ಲವೆಂದು ಸರ್ಕಾರವೇ ನೇರವಾಗಿ ಹೇಳುತ್ತಿದೆ. ಗ್ಯಾರಂಟಿಗಳನ್ನು ಜಾರಿ ಮಾಡಬೇಕಾದ ಆಡಳಿತ ವ್ಯವಸ್ಥೆಯು ಕುಸಿದಿದೆ, ಅದಕ್ಷತೆ ವಾಗಿದೆ ಮತ್ತು ದುರಾಡಳಿತ ವ್ಯಾಪಕವಾಗಿದೆ ಎಂದು ಕೆ.ಆರ್.ಎಸ್ ಪಕ್ಷದ ರಾಜ್ಯ ರೈತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿರುಪಾದಿ.ಕೆ ಗೋಮರ್ಸಿ ಪತ್ರಿಕಾ ಹೇಳಿಕೆ ಮುಖಾಂತರ ತಿಳಿಸಿದರು.ಈ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು. ಸಮಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಮಾಸಿಕ ವೇತನ ಮತ್ತು ಸದಸ್ಯರುಗಳಿಗೆ ಸಭಾ ಭತ್ಯೆ ನೀಡಲಾಗುತ್ತಿದ್ದು, ಇದರಿಂದ ಪ್ರತಿ ತಿಂಗಳು ಅಂದಾಜು 2 ಕೋಟಿ ಸರ್ಕಾರಕ್ಕೆ ಹೊರೆ ಯಾಗುತ್ತಿದೆ. ಸರ್ಕಾರದಲ್ಲಿ ಹಣವಿಲ್ಲದೆ, ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿಲ್ಲ, ಆದರೆ, ವಾರ್ಷಿಕವಾಗಿ 30 ಕೋಟಿ ಹಣವನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಶಕ್ತಿ ಯೋಜನೆಯ ಭಾಗವಾಗಿ ಸಾರಿಗೆ ನಿಗಮಗಳಿಗೆ 900 ಕೋಟಿಗೂ ಅಧಿಕ ಹಣ ಪಾವತಿಸ ಬೇಕಿದೆ, ಇನ್ನೂ ಎರಡು ತಿಂಗಳ ಗೃಹ ಲಕ್ಷ್ಮಿ ಹಣ ತಲುಪಿಲ್ಲ, ಆದರೂ ಕಾಂಗ್ರೆಸ್ ಕಾರ್ಯಕರ್ತರ ಓಲೈಕೆಗೆ ಹಣ ವೆಚ್ಚ ಮಾಡಲಾಗುತ್ತಿದೆ. ಇನ್ನೂ ರಾಜ್ಯದ ಹಲವಾರು ಕೆರೆ ಅಭಿವೃದ್ಧಿಗಾಗಿ ಒಂದೆರಡು ಕೋಟಿಯ ಯೋಜನೆಗಳಿಗೆ ಹಣ ಇಲ್ಲವೆಂದು ಸರ್ಕಾರ ಪ್ರಸ್ತಾವನೆಗಳನ್ನು ತಿರಸ್ಕರಿಸಿದೆ, ವಿದ್ಯಾರ್ಥಿ ವೇತನ ನೀಡಲು ಹಣವಿಲ್ಲ, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಹಣ ಇದೆ. ಇದು ಸಿದ್ದರಾಮಯ್ಯನವರ “ದುರಾಡಾಳಿತ ಗ್ಯಾರೆಂಟಿ” ಯೋಜನೆ ಯಾಗಿದೆ. ಸರ್ಕಾರದ ಆಡಳಿತ ಯಂತ್ರ ಸುಸ್ಥಿಯಲ್ಲಿದ್ದರೆ ಮತ್ತು ಶಾಸಕರು ತಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಿದರೆ ಈ ಸಮಿತಿಗಳ ಅಗತ್ಯವೇ ಇರುವುದಿಲ್ಲ. ಮುಖ್ಯಮಂತ್ರಿಯವರು ವಿಧಾನ ಸಭೆಯಲ್ಲಿ ನೀಡಿರುವ ಹೇಳಿಕೆಯು, ಸರ್ಕಾರಕ್ಕೆ ತನ್ನ ಆಡಳಿತವನ್ನು ಸುಸ್ಥಿಗೆ ತರುವ ಯಾವ ಆಸಕ್ತಿಯೂ ಇಲ್ಲ ಎಂದು ತೋರಿಸುತ್ತದೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಮುಂದುವರೆಸುವುದಾಗಿ ಮತ್ತು ಮುಂದೆಯೂ ಅದು ಇರತ್ತೆದೆಯೆಂದು ಅವರು ಹೇಳಿದ್ದಾರೆ. ಇಷ್ಟು ನಿರ್ಲಜ್ಜೆಯಿಂದ ದುರಾಡಳಿತವನ್ನು ಸಮರ್ಥಿಸಿ ಕೊಂಡಿರುವುದು ಸಮಂಜಸವಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಬಡವರಿಗೆ ನೀಡಬೇಕಾದ ಅನ್ನ ಭಾಗ್ಯದ ಅಕ್ಕಿಯನ್ನು ವಿತರಿಸದೆ, ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಈ ಅಕ್ರಮ, ಅನ್ಯಾಯಗಳನ್ನು ಬಯಲಿಗೆ ಎಳೆಯುತ್ತಿದ್ದರೂ ಕೂಡ ಸರ್ಕಾರ ಮೌನವಾಗಿದೆ. ಇನ್ನೂ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ಪ್ರಕರಣಗಳ ವಿಚಾರಣೆಗೆ ಲೋಕಾಯುಕ್ತ ಪೊಲೀಸರು ಅನುಮತಿ ಕೇಳಿದರು ಕೂಡ, ಅನುಮತಿ ನೀಡದೆ ಸಾವಿರಾರು ಪ್ರಕರಣಗಳ ಕಡತಗಳು ಧೂಳು ಹಿಡಿಯುತ್ತಿವೆ. ಇವೆಲ್ಲವನ್ನು ಸರಿಪಡಿಸ ಬೇಕಾದ ಸರ್ಕಾರವು ಅಕ್ರಮಗಳಲ್ಲಿ ಈಜಾಡುತ್ತಿದೆ. ಕೆ.ಆರ್.ಎಸ್ ಪಕ್ಷದ ಸದಸ್ಯರು ಯಾವುದೇ ಭತ್ಯೆ, ಗೌರವ ಧನ ಪಡೆಯದೆ ಅನುಷ್ಠಾನ ಸಮಿತಿಯಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಸಿದ್ದರಿದ್ದೇವೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತನ್ನ ಪಂಚ ಗ್ಯಾರೆಂಟಿ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನ ಮಾಡಬೇಕೆಂಬ ಉದ್ದೇಶ ಇದ್ದರೆ ನಮ್ಮನ್ನು ನೇಮಕ ಮಾಡಿಕೊಂಡು ಸಾರ್ವಜನಿಕ ಹಣವನ್ನು ಉಳಿಸಲಿ ಇಲ್ಲಾ ತಕ್ಷಣವೇ ಈ ಗ್ಯಾರೆಂಟಿ ಅನುಷ್ಠಾನ ಸಮಿತಿಗಳನ್ನು ರದ್ದು ಪಡಿಸಲಿ ಎಂದು ಕೆ.ಆರ್.ಎಸ್ ಪಕ್ಷ ಆಗ್ರಹಿಸುತ್ತದೆ ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ