ಹಳೆ ಬೇರು ಹೊಸ ಚಿಗುರು ಕೂಡಿರಲು ಜೀವನ ಸೊಗಸು – ಸುಮ ರಾಜಶೇಖರ್.
ಹಿರಿಯೂರು ಮೇ.29





ಹಳೆ ಬೇರು ಹೊಸ ಚಿಗುರು ಕೂಡಿರಲು ಜೀವನ ಸೊಗಸಾಗಿರುತ್ತದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸುಮ ರಾಜಶೇಖರ್ ತಿಳಿಸಿದರು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ಅದರ ಸಂಸ್ಥಾಪಕರಾದ ಶ್ರಿಮತಿ ದಯಾವತಿ ಪುತ್ತುರ್ಕರ್ ಅವರ ನೇತೃತ್ವವದಲ್ಲಿ “ಹಳೆ ಬೇರು ಹೊಸ ಚಿಗುರು” ಎಂಬ ಸಾಹಿತ್ಯ ಗೋಷ್ಠಿಯನ್ನು ಹಿರಿಯೂರು ತಾಲೂಕಿನ ಬಬ್ಬೂರು ಸಮೀಪದ ಕೌಶಿಕ್ ಅವರ ಮಾಹೆ ಫಾರ್ಮ್ ಹೌಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಹಳೆ ಬೇರು ಎಂದರೆ ತಲೆಮಾರಿನಿಂದ ತಲೆಮಾರಿಗೆ ಹಿರಿಯರ ಅನುಭವ, ಸಂಸ್ಕೃತಿ, ಸಂಸ್ಕಾರ ಮುಂತಾದ ವಿಚಾರ ಧಾರೆಗಳು ಹೊಸ ತಲೆಮಾರಿಗೆ ವರ್ಗಾವಣೆ ಗೊಂಡಾಗಲೆ, ಯಾವುದೇ ಒಂದು ವ್ಯಕ್ತಿ, ವಿಷಯ, ವಸ್ತು ಬೆಳೆಯಲು ಸಾಧ್ಯ ಅಜ್ಜನಿಂದ ಮೊಮ್ಮಗನಿಗೆ, ಗುರುಗಳಿಂದ ಶಿಷ್ಯರಿಗೆ, ಹಳೇ ಬೇರಿಂದ ಹೊಸ ಚಿಗುರು ಸಾಧ್ಯ. ಹಾಗಾಗಿ ಹಳೇ ತತ್ವವು ಹೊಸ ಜೀವನಕ್ಕೆ ಪೂರಕ ಮತ್ತು ಪ್ರೇರಕ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಹಿರಿಯರಿಂದ ಕಿರಿಯರಿಗೆ ಪುಸ್ತಕ ಕೊಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಉಪನ್ಯಾಸಕ ಶಿವಾನಂದ.ಎನ್ ಬಂಡೇಹಳ್ಳಿ ಅವರುನಮ್ಮ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಹಿರಿಯರ ಸಲಹೆ ಸಹಕಾರ ಇರಲೇಬೇಕು. ಆಗ ಮಾತ್ರ ಅವರ ಅನುಭವದ ತಳಹದಿಯ ಮೇಲೆ ಹೊಸತೊಂದು ಸಮಾಜವನು ನಿರ್ಮಿಸಬಹುದು.

ಹೀಗೆ ಮನೆಯಿಂದ ಪ್ರಾರಂಭವಾಗಿ ಸಮಾಜಕ್ಕೆ ಅರ್ಪಿತವಾಗುತ್ತದೆ. ಭೂತದ ಮೇಲೆ ವರ್ತಮಾನ, ವರ್ತಮಾನದ ಮೇಲೆ ಭವಿಷ್ಯ ನಿಂತಿರುತ್ತದೆ. ಹಾಗಾಗಿ ಹಳೆಯದನ್ನು ಅರಿಯದೆ ಹೊಸದನ್ನು ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಮೂರು ಕಾಲಕ್ಕೂ ಹಿಂದಿನ ತತ್ವಗಳು ಪ್ರಸ್ತುತವಾಗಿರುತ್ತವೆ, ಹಳೆಯ ಅನುಭವ, ಆಚಾರ, ವಿಚಾರ, ಸಂಸ್ಕಾರವಿಲ್ಲದೆ ಯಾವುದೇ ರಂಗದಲ್ಲೂ ಹೊಸತನ ಕಾಣಲು ಸಾಧ್ಯವಿಲ್ಲ. ಅಜ್ಜ ಅಜ್ಜಿ ಹೇಳುತ್ತಿದ್ದ ನೀತಿ ಕಥೆಗಳು ಇಂದಿನ ಆಧುನಿಕ ಯುಗದಲ್ಲಿ ನಮಗೆ ಆದರ್ಶವಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಡಾ, ಗೌರಮ್ಮ ಮಾತನಾಡಿ ಸಂಸ್ಕಾರ ಎಂಬುದು ಬರೀ ತೋರ್ಪಡಿಕೆ ಯಾಗದೆ ಅದು ನಿಜ ಜೀವನದಲ್ಲಿ ಪ್ರತೀ ಮನೆಯಲ್ಲೂ ಪ್ರಾಯೋಗಿಕವಾಗಿ ಆಚರಣೆಗೆ ಬರಬೇಕು ಆಗ ಮಾತ್ರ ಹಳೇ ತತ್ವವು ಹೊಸ ಚಿಗುರಾಗಿ ಬೆಳೆದು ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದು ತಿಳಿಸಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಕು ಪ್ರಿಯ ಅವರು ಮಾತನಾಡಿ ಹಳೇ ತತ್ವವು ಸತ್ವವಾಗ ಬೇಕಾದರೆ ಹೊಸ ಚಿಗುರು ಹಸನಾಗಿ ಬೆಳೆಯಬೇಕು ಮತ್ತು ತತ್ವದ ಸಾರವನ್ನು ಬಳಸಿ ಕೊಳ್ಳಬೇಕು ಆಗ ಮಾತ್ರ ಆಧುನಿಕ ಕಾಲದಲ್ಲಿ ಶಾಂತಿ ಸೌಹಾರ್ದತೆ ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಾನಪದ ಗೀತೆ, ಕವಿತೆ, ಭಾವಗೀತೆ, ಏಕಪಾತ್ರಾಭಿನಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ್ ಬೆಳಗೆರೆ ನಡೆಸಿ ಕೊಟ್ಟರೆ, ಶಿಕ್ಷಕರಾದ ಮುದ್ದುರಾಜ್ ಹುಲಿತೊಟ್ಲು ಸ್ವಾಗತಿಸಿದರು, ಪಂಡ್ರಹಳ್ಳಿ ಶಿವರುದ್ರಪ್ಪ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ದಯಾವತಿ ಪುತ್ತೂರ್ಕರ್ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.