ಕೂಡ್ಲಿಗಿ ತಾಲೂಕ ಜ್ಞಾನದ ತವರೂರು – ಡಾ, ರವೀಂದ್ರನಾಥ್.
ಕೆ.ಹೊಸಹಳ್ಳಿ ಫೆ.09

ಕೂಡ್ಲಿಗಿ ತಾಲೂಕ ಜ್ಞಾನದ ತವರೂರು ಎಂದು ಡಾ, ಕೆ. ರವೀಂದ್ರನಾಥ್ ಹೇಳಿದರು. ಕಾನ ಹೊಸಹಳ್ಳಿ ಸಮೀಪದ ಎಂ.ಬಿ ಅಯ್ಯನಹಳ್ಳಿ ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಾ ವೇದಿಕೆ ತಾಲೂಕ ಘಟಕ ದಿಂದ ಸಾ.ಮ ಸಂಗಮೇಶ್ವರಯ್ಯ ನಿವಾಸದ ಆವರಣದಲ್ಲಿ ಭಾನುವಾರ ದೊಂದು ಆಯೋಜಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೂಡ್ಲಿಗಿ ತಾಲೂಕಿನ ಪಾಂಡಿತ್ಯ ಪರಂಪರೆಯು ನಾಡಿಗೆ ಸಾಹಿತ್ಯ ಸಂಪತ್ತು ಕೊಟ್ಟಂಥದ್ದಾಗಿದೆ. ಹಿರಿಯ ಸಾಹಿತಿಗಳಾದ ಹಿ.ಮ ನಾಗಯ್ಯ, ಬಿ.ಎಂ ಗುರುಸಿದ್ದಯ್ಯ, ಸೊ.ಮ ಚಂದ್ರಶೇಖರಯ್ಯ, ಎಸ್.ಎಂ ವೃಷಭೇಂದ್ರ ಸ್ವಾಮಿ, ಹಿ.ಮ ಮರಳುಸಿದ್ಧಯ್ಯ, ರುದ್ರಮುನಿ ಅಯ್ಯ ಸೇರಿದಂತೆ ಅನೇಕರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕಾನಮಡುಗು ಶರಣಾರ್ಯರ ಪ್ರಭಾವದಿಂದ ವಿದ್ಯಾ ದಾಸೋಹ ಮಾಡಿದ್ದರ ಫಲವಾಗಿ ಪಾಂಡಿತ್ಯ ಪರಂಪರೆ ಬೆಳೆಯಲು ಸಾಧ್ಯವಾಗಿದ್ದು, ಶರಣಾರ್ಯರ ಸಾಮಾಜಿಕ ಕಾರ್ಯವೂ ಸ್ಮರಣೀಯವಾಗಿದೆ. ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಶರಣರ ತತ್ವಗಳನ್ನು ಜನ ಮಾಪನಕ್ಕೆ ಮುಟ್ಟಿಸುವ ಕಾರ್ಯವು ಆಗುತ್ತಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಾ, ಕೆ.ಎಂ ವೀರೇಶ್ ಮಾತನಾಡಿ, ಹಿಂದೆಲ್ಲ ಗುರು-ಹಿರಿಯರು, ತಂದೆ-ತಾಯಿಗಳಿಗೆ ಗೌರವಿಸುವಂಥ ಜೀವನ ಮೌಲ್ಯದೊಂದಿಗೆ ಜನತೆ ಬದುಕುತ್ತಿದ್ದರು. ಕೂಡು ಕುಟುಂಬಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದು ಹೇಳಿದರು.
ಸಾಹಿತಿ ಹೊಸಪೇಟೆಯ ಬಿ.ಎಂ ರಾಜಶೇಖರ್ ಅವರು ಕೊಂಕಲ್ ಸೋಮೇಶ್ವರ ಸ್ವಾಮೀಜಿಯವರ ಜೀವನ ಹಾಗೂ ಸಾಧನೆ ಮತ್ತು ವಿದ್ವಾನ್ ಬಿ.ಎಂ ಗುರುಸಿದ್ಧಯ್ಯನವರ ಧಾರ್ಮಿಕ, ನೈತಿಕ ಮೌಲ್ಯಗಳ ಪ್ರಸಾರ ಕುರಿತು ಉಪನ್ಯಾಸ ನೀಡಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ಪ್ರಾಸ್ತಾವಿಕ ನುಡಿದರು. ಕೊಟ್ಟೂರಿನ ಥಿಯೋಸಾಫಿಕಲ್ ವ್ಯವಸ್ಥಾಪಕ ಜೆ.ಎಂ ಧನಂಜಯ, ಅಧ್ಯಕ್ಷತೆ ವಹಿಸಿದ್ದ ಶ.ಸಾ.ಪ ತಾಲೂಕ ಅಧ್ಯಕ್ಷ ಎಸ್.ಎಂ ಸಂಗಮೇಶ್ವರಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಕದಳಿ ಮಹಿಳಾ ವೇದಿಕೆ ವಿಜಯನಗರ ಜಿಲ್ಲಾಧ್ಯಕ್ಷೆ ಇಂದುಮತಿ ತಿಪ್ಪೇಸ್ವಾಮಿ, ಬಳ್ಳಾರಿ ಜಿಲ್ಲಾಧ್ಯಕ್ಷೆ ನೀಲಾಂಬಿಕಾ, ಕೊಟ್ಟೂರು ಶ.ಸಾ.ಪ ಅಧ್ಯಕ್ಷ ದೇವರಮನಿ ಕರಿಯಪ್ಪ, ಬಿ.ಎಂ ಪ್ರಭುದೇವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ನಿವೃತ್ತ ಉಪನ್ಯಾಸಕ ವಸಂತ ಸಜ್ಜನ್, ರತ್ನಮ್ಮ, ನಾಗರತ್ನಮ್ಮ, ಗೌರಮ್ಮ, ಕಸಾಪ ಹೋಬಳಿ ಅಧ್ಯಕ್ಷ ಎನ್.ಎಸ್.ತಿಪ್ಪೇಸ್ವಾಮಿ, ಜಿ.ಈಶ್ವರಗೌಡ, ಶಿಕ್ಷಕ ಹಾರಕಬಾವಿ ಬಸವರಾಜ ಸೇರಿ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
