ನಶೆ ಮುಕ್ತ ಕರ್ನಾಟಕ’ ಕ್ಕೆ ಕೈಜೋಡಿಸಿ – ಸ್ವರೂಪ್ ಕೊಟ್ಟೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೂಡ್ಲಿಗಿ ಸೆ.07


2028 ರ ವೇಳೆಗೆ ಕರ್ನಾಟಕವನ್ನು `ನಶೆ ಮುಕ್ತ ಕರ್ನಾಟಕ’ ವನ್ನಾಗಿ ಮಾಡಲು ನಮ್ಮ ಸರಕಾರ ಗುರಿ ಹೊಂದಿದೆ. ಅದಕ್ಕೆ ನೀವು ದುಶ್ಚಟಗಳಿಂದ ದೂರ ಇರುವುದರ ಜೊತೆಗೆ ಈ ಜಾಲವನ್ನು ತುಂಡರಿಸಲು ಸಹಕರಿಸುವುದು ಅತ್ಯವಶ್ಯಕ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್, ಲೇಖಕ ಸ್ವರೂಪ್ ಕೊಟ್ಟೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡ್ಲಿಗಿ ಘಟಕದ ವತಿಯಿಂದ ಪಟ್ಟಣದ ಎಸ್.ಎ.ವಿ.ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ `ದುಶ್ಚಟಗಳ ಪರಿಣಾಮಗಳು’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಆಗಿ ಭಾಗವಹಿಸಿ ಮಾತನಾಡಿದರು.
ಸುಭದ್ರ ಸಮಾಜ, ದೇಶವನ್ನು ಕಟ್ಟುವಲ್ಲಿ ಯುವ ಶಕ್ತಿಯ ಪಾತ್ರ ಪ್ರಮುಖ ಮತ್ತು ನಿರ್ಣಾಯಕ. ಆದರೆ ಈ ವಿದ್ಯಾರ್ಥಿ ಸಮೂಹ, ಯುವ ಶಕ್ತಿಯನ್ನು ಹಾಳು ಮಾಡುವ ಪಿತೂರಿ, ದುರುದ್ದೇಶ ದೇಶ ವಿರೋಧಿಗಳದ್ದು. ಅದಕ್ಕಾಗಿ ಅವರು ಮುಖ್ಯವಾಗಿ ಮಾದಕ ವಸ್ತುಗಳನ್ನು ಅಸ್ತ್ರವಾಗಿ ಬಳಸುತ್ತಾರೆ. ನೀವೇ ಅವರಿಗೆ ಸಾಧನ. ನಿಮ್ಮನ್ನು ದುಶ್ಚಟಗಳ ಕೂಪಕ್ಕೆ ತಳ್ಳಿದರೆ ಅವರಿಗೆ ಯಶಸ್ಸು ಸಿಕ್ಕಂತೆ. ಇದರಿಂದ ನಿಮ್ಮ ಆರೋಗ್ಯ, ಭವಿಷ್ಯ ಹಾಳಾಗುವುದರ ಜೊತೆಗೆ ದೇಶದ ಭವಿಷ್ಯಕ್ಕೂ ದೊಡ್ಡ ನಷ್ಟ. ಈ ಸೂಕ್ಷ್ಮತೆಯನ್ನು ನೀವು ಅರಿಯಬೇಕು. ಇವುಗಳ ಸೇವೆನೆಯನ್ನು ತಿರಸ್ಕರಿಸಬೇಕು. ಸ್ವಸ್ಥ ಮತ್ತು ಸುಸ್ಥಿರ ಬದುಕು ಕಟ್ಟಿ ಕೊಳ್ಳಬೇಕು ಎಂದು ಕರೆ ನೀಡಿದರು.
ಪ.ಪಂ ಮಾಜಿ ಅಧ್ಯಕ್ಷ ಕವಾಲಿ ಶಿವಪ್ಪ ನಾಯಕ ಮಾತನಾಡಿ ಇದು ಓದಲು ಮತ್ತು ಸಾಧನೆ ಮಾಡುವ ವಯಸ್ಸು. ಗಾಂಜಾ, ಸಿಗರೇಟು, ತಂಬಾಕು, ಮುಂತಾದ ಮಾದಕ ವಸ್ತುಗಳ ಆಕರ್ಷಣೆಗೆ ಬಲಿಯಾಗಿ ಭವಿಷ್ಯವನ್ನು ಹಾಳು ಮಾಡಿ ಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎ.ವಿ.ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಷಣ್ಮುಖ ಗೌಡ್ರು ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳ ಕುರಿತು ಕುತೂಹಲ ಮತ್ತು ಅವುಗಳ ಅಮಲಿನಲ್ಲಿ ಇರುವುದಲ್ಲ. ಉತ್ತಮ ಗುರಿ ಸಾಧನೆಯ ಗುಂಗಿನಲ್ಲಿ ಇರಬೇಕು. ಅದು ನಿಜವಾದ ವಿದ್ಯಾರ್ಥಿಯ ಲಕ್ಷಣವೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹಡಗಲಿ ವೀರಭದ್ರಪ್ಪ, ಜಿ.ಆರ್ ಸಿದ್ದೇಶ್, ಯೋಜನೆಯ ಪಟ್ಟಣದ ಮೇಲ್ವಿಚಾರಕಿ ಜ್ಯೋತಿ. ಸೇವಾ ಪ್ರತಿನಿಧಿ ಅನಿತಾ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
