⚖️ ವಕೀಲರ ಸಂಘ, ಬ್ರಹ್ಮಾವರ (ರಿ.), ಉಡುಪಿ ಜಿಲ್ಲೆ🔥ನ್ಯಾಯದ ದೀಪ ಹಚ್ಚುವವರ ಮೇಲೆಯೇ ಮರಣಮೃದಂಗ: ಬ್ರಹ್ಮಾವರದಲ್ಲಿ ವಕೀಲರಿಂದ ಆಕ್ರೋಶ – ಶಾಂತಿಯುತ ಬೃಹತ್ ಪ್ರತಿಭಟನೆ..!💥

ಬ್ರಹ್ಮಾವರ ನ.03

ಸಮಾಜಕ್ಕೆ ನ್ಯಾಯ ಒದಗಿಸುವ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಹಾಗೂ ಬಡವರ ಧ್ವನಿಯಾಗಿ ನಿಲ್ಲುವ ವಕೀಲ ವೃತ್ತಿಯು ಅತ್ಯಂತ ಪವಿತ್ರವಾದದ್ದು. ಅನ್ಯಾಯಕ್ಕೊಳಗಾದವರಿಗೆ ಕಾನೂನಿನ ಮೂಲಕ ಪರಿಹಾರ ಒದಗಿಸುತ್ತಾ, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಕೀಲರ ಸೇವೆ ಅಪಾರ ಹಾಗೂ ಅನನ್ಯ. ಆದರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಇಂತಹ ರಕ್ಷಕರ ಮೇಲೆಯೇ ಇಂದು ಮಾರಣಾಂತಿಕ ಹಲ್ಲೆಗಳು, ದೌರ್ಜನ್ಯಗಳು ಹಾಗೂ ಭೀಕರ ಕೊಲೆಗಳು ನಿರಂತರವಾಗಿ ನಡೆಯುತ್ತಿರುವುದು ಇಡೀ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ವಕೀಲರಿಗೆ ರಕ್ಷಣೆ ಇಲ್ಲದಂತಾದರೆ, ನಾಳೆ ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ಹೇಗೆ? ಇದು ನೇರವಾಗಿ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದ್ದು, ವಕೀಲರ ರಕ್ಷಣೆಯಿಲ್ಲದ ಸಮಾಜದಲ್ಲಿ ಅರಾಜಕತೆ ತಾಂಡವವಾಡಲಿದೆ ಎಂಬುದನ್ನು ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸ ಬೇಕಿದೆ. ಇದೇ ಆತಂಕ ಹಾಗೂ ಆಕ್ರೋಶದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಭೀಕರ ಹತ್ಯೆಗಳು ಮತ್ತು ಸರಣಿ ದೌರ್ಜನ್ಯಗಳನ್ನು ತೀವ್ರವಾಗಿ ಖಂಡಿಸಿ ವಕೀಲರ ಸಂಘ, ಬ್ರಹ್ಮಾವರ (ರಿ.) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಮಂಗಳವಾರ ಶಾಂತಿಯುತ ಬೃಹತ್ ಪ್ರತಿಭಟನಾ ಚಳವಳಿ ಅತ್ಯಂತ ಯಶಸ್ವಿಯಾಗಿ ಜರುಗಿತು.

📌 ವರದಿಯ ಮುಖ್ಯಾಂಶಗಳು:-

⚖️ ಕಪ್ಪು ಕೋಟ್ ಧರಿಸಿ ನ್ಯಾಯಾಲಯದ ಎದುರು ಬೃಹತ್ ಪ್ರತಿಭಟನೆ:-

ಬೆಂಗಳೂರು ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್ತಿನ (KState Bar Council) ಕರೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಬ್ರಹ್ಮಾವರದ ವಕೀಲರು, ತಮ್ಮ ವೃತ್ತಿಪರ ಸಮವಸ್ತ್ರವಾದ ಕಪ್ಪು ಕೋಟ್ ಧರಿಸಿ ನ್ಯಾಯಾಲಯದ ಸಂಕಿರಣದ ಎದುರು ಒಂದೆಡೆ ಜಮಾಯಿಸಿದರು. ಕೈಯಲ್ಲಿ ಪ್ರತಿಭಟನಾ ಬ್ಯಾನರ್‌ಗಳನ್ನು ಹಿಡಿದು, ನ್ಯಾಯಾಲಯದ ಕಲಾಪಗಳಿಂದ ಸಂಪೂರ್ಣವಾಗಿ ದೂರವಿದ್ದು ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಆಕ್ರೋಶದ ಘೋಷಣೆಗಳನ್ನು ಕೂಗಿ ಶಾಂತಿಯುತ ಹೋರಾಟ ನಡೆಸಿದರು.

🚨 ವಕೀಲರ ಸರಣಿ ಹತ್ಯೆಗಳಿಗೆ ಆಕ್ರೋಶದ ಕಿಚ್ಚು:-

ಇತ್ತೀಚಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನ ವಕೀಲರಾದ ಮಂಜುನಾಥ್, ಗೌರಿಬಿದನೂರಿನ ವೆಂಕಟರಮಣ ಹಾಗೂ ಅನ್ನಪೂರ್ಣೇಶ್ವರಿ ನಗರದ ವಕೀಲರಾದ ಶ್ರೀರಾಮ್ ಅವರ ಮೇಲೆ ನಡೆದ ದುಷ್ಕರ್ಮಿಗಳ ಭೀಕರ ಹತ್ಯೆ ಹಾಗೂ ಮಾರಣಾಂತಿಕ ದಾಳಿಗಳನ್ನು ವಕೀಲರ ಸಮುದಾಯ ಉಗ್ರವಾಗಿ ಖಂಡಿಸಿತು. ವಕೀಲರೆಂಬ ಭಯವಿಲ್ಲದೆ ಸಮಾಜ ದ್ರೋಹಿಗಳು ಸರಣಿ ಹತ್ಯೆಗಳಿಗಿಳಿಯುತ್ತಿರುವುದು ವೃತ್ತಿಭದ್ರತೆಗೆ ದೊಡ್ಡ ಸವಾಲಾಗಿದೆ. ವಕೀಲರು ಭಯಮುಕ್ತ ವಾತಾವರಣದಲ್ಲಿ ವೃತ್ತಿ ನಿರ್ವಹಿಸಲು ಸಾಧ್ಯವಾಗದಿದ್ದರೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬೀಳುತ್ತದೆ ಎಂದು ಕಳವಳ ವ್ಯಕ್ತಪಡಿಸಲಾಯಿತು.

📜 ತಾಲೂಕು ದಂಡಾಧಿಕಾರಿಗಳ ಮೂಲಕ ರಕ್ಷಣೆ ಕೋರಿ ಮನವಿ ಸಲ್ಲಿಕೆ:-

ನ್ಯಾಯಾಲಯ ಸಂಕಿರಣದ ಎದುರು ಬೃಹತ್ ಧರಣಿ ನಡೆಸಿದ ಬಳಿಕ, ವಕೀಲರ ನಿಯೋಗವು ತಾಲೂಕು ದಂಡಾಧಿಕಾರಿಗಳನ್ನು (ತಹಶೀಲ್ದಾರ್) ಭೇಟಿಯಾಗಿ ಸರ್ಕಾರಕ್ಕೆ ಸಲ್ಲಿಸುವ ಮನವಿ ಪತ್ರವನ್ನು ಹಸ್ತಾಂತರಿಸಿತು. ವಕೀಲರ ಜೀವ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ತಕ್ಷಣವೇ ‘ವಕೀಲರ ಸಂರಕ್ಷಣಾ ಕಾಯ್ದೆ’ (Lawyers Protection Act) ಯನ್ನು ಅತ್ಯಂತ ಕಠಿಣವಾಗಿ ಜಾರಿಗೆ ತರಬೇಕು ಮತ್ತು ಪ್ರತಿಯೊಬ್ಬ ವಕೀಲರಿಗೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಬಲವಾಗಿ ಆಗ್ರಹಿಸಲಾಯಿತು.

⚠️ ಸರ್ಕಾರಕ್ಕೆ ನೇರ ಎಚ್ಚರಿಕೆ – ರಕ್ಷಣೆ ನೀಡದಿದ್ದರೆ ಉಗ್ರ ಚಳವಳಿ:-

ಈ ವೇಳೆ ಸಂಘದ ಮುಖಂಡರು ಮಾತನಾಡಿ, “ವಕೀಲರ ಸುರಕ್ಷತೆಯನ್ನು ಸರ್ಕಾರ ಪ್ರಥಮ ಆದ್ಯತೆಯಾಗಿ ಪರಿಗಣಿಸ ಬೇಕು. ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು ಹತ್ತಿ ಕೊಂಡಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತು ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ರಾಜ್ಯದಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು,” ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

👥 ಉಪಸ್ಥಿತಿ ಹಾಗೂ ನಾಯಕರ ನೇತೃತ್ವ:-

ಈ ಬೃಹತ್ ಪ್ರತಿಭಟನೆಯಲ್ಲಿ ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷರಾದ ಕಾಡೂರು ಪ್ರವೀಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಕರ್ಜೆ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಕೆ. ಜಿ. ಶ್ರೀಪಾದ್ ರಾವ್, ಖಜಾಂಚಿ ಸ್ಟಿವನ್ ವಿಕ್ಟರ್ ಲೂವೀಸ್ ಹಾಗೂ ಹಿರಿಯ ವಕೀಲರಾದ ಮುಡೂರು ಮನೋಹರ ಶೆಟ್ಟಿ ಮತ್ತು ಅಲ್ತಾರು ಗೌತಮ್ ಹೆಗ್ಡೆ ಅವರು ಮುಂಚೂಣಿಯಲ್ಲಿ ನಿಂತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಸದಸ್ಯ ವಕೀಲರು ಸಕ್ರಿಯವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿ ಗೊಳಿಸಿದರು.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button