ಬೋಳು ತಲೆ ಪುರುಷರ ಸಂಘದ ವತಿಯಿಂದ ಸರಕಾರಕ್ಕೆ ಪಿಂಚಣಿ ಮನವಿ , ಪಿಂಚಣಿಯನ್ನು ಕೂದಲಿನ ಶಸ್ತ್ರ ಚಿಕಿತ್ಸೆಗೆ ಬಳಕೆ ಎಂದು ಹೇಳಿಕೆ…!
ಹೈದರಾಬಾದ್ ( ತೆಲಂಗಾಣ):
ತಲೆಯಲ್ಲಿ ಕೂದಲು ಇಲ್ಲದೆ ಸಾಕಷ್ಟು ಮುಜುಗರ ಅನುಭವಿಸುತ್ತಿರುವುದಲ್ಲದೆ, ಕೆಲವರು ನಮ್ಮನ್ನು ನೋಡಿ ಅಣಕಿಸುವುದರಿಂದ ಸಾಕಷ್ಟು ಮಾನಸಿಕ ಸಂಕಟ ಅನುಭವಿಸುತ್ತಿದ್ದೇವೆ. ಹೀಗಾಗಿ ಸರ್ಕಾರ ನಮ್ಮ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಬೋಳು ತಲೆಯ ಪುರುಷರ ಸಂಘ ಸರ್ಕಾರದ ಮುಂದೆ ವಿಶೇಷವಾದ ಪ್ರಸ್ತಾವನೆ ಸಲ್ಲಿಸಿದೆ.
ತಿಂಗಳಿಗೆ 6000 ರೂ. ಪಿಂಚಣಿ ನೀಡುವಂತೆ ತೆಲಂಗಾಣ ರಾಜ್ಯದ ಸಿದ್ದಿಪೇಟೆ ಜಿಲ್ಲೆಯ ಶಂಗಲದಲ್ಲಿ ಗ್ರಾಮದ ಬೋಳು ತಲೆಯ ಪುರುಷರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ದಿನನಿತ್ಯದ ಅವಮಾನವನ್ನು ನಿಭಾಯಿಸಲು 6,000 ರೂ.ಗಳು ಸಹಾಯ ಮಾಡುತ್ತವೆ ಎಂದು ಸಂಘವು ಹೇಳಿದೆ ಮತ್ತು ರಾಜ್ಯ ಸರ್ಕಾರವು ಎಲ್ಲಾ ಬೋಳು ತಲೆಯ ಪುರುಷರಿಗೆ ಸಂಕ್ರಾಂತಿ ಉಡುಗೊರೆಯಾಗಿ ಪಿಂಚಣಿಯನ್ನು ಘೋಷಿಸಬೇಕು ಎಂದು ಸಂಘವು ಸರಕಾರಕ್ಕೆ ಮನವಿ ಮಾಡಿಕೊಂಡಿದೆ.
ಜನವರಿ 5 ರಂದು ಗ್ರಾಮದಲ್ಲಿ ಬೋಳು ತಲೆ ಪುರುಷರ ಸಂಘ ಅನೌಪಚಾರಿಕ ಸಭೆಯನ್ನು ಕರೆದು ಚರ್ಚಿಸಿದೆ. ಅಲ್ಲದೆ, ಸಂಕ್ರಾಂತಿ ನಂತರ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದರಲ್ಲಿ ಕೂದಲು ಕಳೆದುಕೊಂಡಿರುವ 30 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.
ಸಂಘದ ಸದಸ್ಯರಲ್ಲಿ ಒಬ್ಬರಾದ 41 ವರ್ಷದ ಪಿಆಂಟಿ ಮಾತನಾಡಿ, ಜನರು ನಮ್ಮ ಮೇಲೆ ಮಾಡುವ ಕಾಮೆಂಟ್‌ಗಳು ನಮಗೆ ನೋವುಂಟುಮಾಡುತ್ತದೆ. ಇದು ನಮಗೆ ಮಾನಸಿಕ ಸಂಕಟವನ್ನು ತರುತ್ತದೆ. ನಾವು ಈಗಾಗಲೇ ನಮ್ಮ ಬೋಳುತನದ ಬಗ್ಗೆ ಚಿಂತಿತರಾಗಿರುವಾಗ ನಮ್ಮನ್ನು ಆಗಾಗ ಗೇಲಿ ಮಾಡಿ ಮತ್ತೆ ಚಿಂತಿತರನ್ನಾಗಿ ಮಾಡಲಾಗುತ್ತಿದೆ. ಇದು ನಮಗೆ ಸಮಾಜದಲ್ಲಿ ಮುಜುಗರಕ್ಕೆ ತರುವತ್ತವೆ ಎಂದು ತಮ್ಮು ನೋವನ್ನು ತೋಡಿಕೊಂಡಿದ್ದಾರೆ.
ಕೇವಲ 22 ವರ್ಷ ವಯಸ್ಸಿನ ಸಂಘದ ಸದಸ್ಯರೊಬ್ಬರು ಬಹುತೇಕ ಎಲ್ಲ ಕೂದಲನ್ನು ಕಳೆದುಕೊಂಡಿದ್ದಾರೆ. 20 ರ ಹರೆಯದಲ್ಲಿ ನನಗೆ ಕೂದಲು ಉದುರುತ್ತಿತ್ತು ಎಂದು ಅಂಜಿ ಹೇಳಿದ್ದಾರೆ. ಸರ್ಕಾರಿ ಪಿಂಚಣಿ ನೀಡಿದರೆ, ಆ ಮೊತ್ತವನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ, ಸಾದ್ಯವಾದರೆ ನಾವು ಕೂದಲು ಹೊಂದಲು ಚಿಕಿತ್ಸೆ ಪಡೆಯಲು ಬಯಸುತ್ತೇವೆ. ಪಿಂಚಣಿಯನ್ನು ನಮಗೆ ಚಿಕಿತ್ಸಾ ವೆಚ್ಚವೆಂದು ಪರಿಗಣಿಸಬೇಕು ಎಂದು ಅಂಜಿ ಕೇಳಿದ್ದಾರೆ.
50ರ ಹರೆಯದ ವೆಲ್ಲಿ ಬಾಲಯ್ಯ ಎಂಬುವರು ಬೋಳು ತಲೆಯ ಔಪಚಾರಿಕ ಸಂಘವನ್ನು ಹೊಂದಿಲ್ಲದಿದ್ದರೂ ಅವರು ಹೊಸದಾಗಿ ರಚಿಸಲಾದ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಸಂಘಕ್ಕೆ ಇತರ ಪದಾಧಿಕಾರಿಗಳೂ ಇದ್ದಾರೆ. ವೃದ್ಧರು, ವಿಧವೆಯರು, ದೈಹಿಕ ವಿಕಲಚೇತವರು ಮತ್ತು ಇತರರಿಗೆ ಸರ್ಕಾರವು ಪಿಂಚಣಿ ನೀಡುತ್ತಿರುವುದರಿಂದ ಪಿಂಚಣಿಗಾಗಿ ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಎಂದು ಬೋಳು ತಲೆ ಪುರುಷರ ಸಂಘ ಸರಕಾರಕ್ಕೆ ಒತ್ತಾಯಿಸಿದೆ.