ಶರನ್ನವರಾತ್ರಿ ದಸರಾ ಧರ್ಮದ ಮೌಲ್ಯ ಎತ್ತಿ ಹಿಡಿಯುವ ಕಾರ್ಯಕ್ರಮ.

ನರೇಗಲ್ ಸ.30

ಬಾಳೆಹೊನ್ನೂರು ರಂಭಾಪುರಿ ಶ್ರೀಗಳ 33 ನೇ. ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಅದ್ದೂರಿಯಾಗಿ ಆರಂಭವಾಗಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ. ಎಸ್. ಪಾಟೀಲ ಹೇಳಿದರು.ಸಮೀಪದ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಮಾನವ ಧರ್ಮ ಮಂಟಪದಲ್ಲಿ ಅಕ್ಟೋಬರ್ 3 ರಿಂದ 12 ರ ವರೆಗೆ ಜರುಗಲಿರುವ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಅಬ್ಬಿಗೇರಿಯ ಹಿರೇಮಠದಲ್ಲಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ಕಾರ್ಯಕ್ರಮಕ್ಕೆ ತೊಂದರೆ ಆಗದಂತೆ ಜರ್ಮನ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಮಳೆ ಬಂದರು ಸಹ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿವೆ. ಇದೊಂದು ಅಪರೂಪದ ಧಾರ್ಮಿಕ ಕಾರ್ಯಕ್ರಮವಾಗಿದ್ದು ನಮ್ಮ ಭಾಗದ ಗ್ರಾಮದಲ್ಲಿ ನಡೆಯುತ್ತಿರುವುದು ಖುಷಿ ನೀಡಿದೆ ಎಂದರು. ನರೇಗಲ್‌ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಜನರು ಸನ್ಮಾರ್ಗದಲ್ಲಿ ನಡೆಯಲು, ಅವರಿಗೆ ಧರ್ಮದ ಕುರಿತು ಜಾಗೃತಿ ಮೂಡಿಸಲು, ಶಿವ ಭಕ್ತಿ, ಶಿವ ಜ್ಞಾನದ ಅರಿವು ನೀಡಲು ಹಾಗೂ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯಲು ಅಬ್ಬಿಗೇರಿಯ ಧಾರ್ಮಿಕ ಸಮ್ಮೇಳನ ಸಹಕಾರಿ ಯಾಗಲಿದೆ ಎಂದರು. ಪ್ರಾಚೀನ ಕಾಲದಿಂದಲೂ ಇಷ್ಟಲಿಂಗ ಪೂಜೆಗೆ ಮಹತ್ವವಿದೆ. ಲಿಂಗ ಪೂಜೆ ಮಾಡುವುದರಲ್ಲಿ ಆನಂದ ಪಡುವರು ಶಿವ ಸಂಸ್ಕಾರಿ ಗಳಾಗಿರುತ್ತಾರೆ. ಅದಕ್ಕಾಗಿ ಕಾರ್ಯಕ್ರಮದ ಪ್ರತಿದಿನ ಬೆಳಿಗ್ಗೆ ಇಷ್ಟಲಿಂಗ ಮಹಾಪೂಜೆ, ಶಿವ ಪೂಜೆ ನಡೆಯುತ್ತಿದೆ ಎಂದರು. ಅಬ್ಬಿಗೇರಿ-ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಮಾತನಾಡಿ, ಕೇವಲ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದೆ. ಮೈಸೂರಿನಲ್ಲಿ ಅರಮನೆ ದಸರಾ ನಡೆದರೆ ಅಬ್ಬಿಗೇರಿಯಲ್ಲಿ ಗುರುಮನೆ ದಸರಾ ನಡೆಯಲಿದೆ. ಹಾಗಾಗಿ 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದರು. ದೂರದ ಊರುಗಳಿಂದ ಬರುವ ಭಕ್ತರಿಗೆ ಶಾಲೆಗಳಲ್ಲಿ ವಸತಿ ವ್ಯವಸ್ಥೆ, ನಿತ್ಯ ಸಂಚಾರಕ್ಕೆ ಬೆಳಿಗ್ಗೆಯಿಂದ ರಾತ್ರಿ ವರೆಗೆ ನಿರಂತರವಾಗಿ ಕೆ.ಎಸ್‌.ಆರ್‌.ಟಿ.ಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ನಿರಂತರ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಿದರು. ‌ಗುರುಗಳು ರಾಜರ ಪೋಷಾಕಿನಲ್ಲಿ ಇರುತ್ತಾರೆ ಭಕ್ತರಿಗೆ ನಜರ್ ಸಮರ್ಪಣೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ ಆದರೆ ನಜರ್ ಸಮರ್ಪಣೆ ಮಾಡುವವರು ಬೆನ್ನು ತೋರಿಸಬಾರದು ಎಂದರು. ಈ ವೇಳೆ ಕಾರ್ಯಕ್ರಮದ ಮಾಹಿತಿ ನೀಡುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಸಂಗೋಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ನಾಗಠಾಣಾ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ನರಸಾಪುರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಪ್ರವಚನಕಾರ ಅನ್ನದಾನ ಶಾಸ್ತ್ರಿಗಳು, ವಿ. ಬಿ. ಸೋಮನ ಕಟ್ಟಿಮಠ, ಡಾ, ಆರ್. ಕೆ. ಗಚ್ಚಿನಮಠ, ಬಸವರಾಜ ತಳವಾರ, ಬಸವರಾಜ ಪಲ್ಲೇದ, ಹನಮಂತಪ್ಪ ದ್ವಾಸಲ್‌ ಇದ್ದರು.–ನರೇಗಲ್‌ ಸಮೀಪದ ಅಬ್ಬಿಗೇರಿ ಗ್ರಾಮದ ಹಿರೇಮಠದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ 33 ನೇ. ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್. ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button