ನೆಲಕಚ್ಚುತ್ತಿರುವ ದೈತ್ಯ ಅದಾನಿ ಸಾಮ್ರಾಜ್ಯ…!

ಹೊಸದಿಲ್ಲಿ: 

ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್‌ ರಿಸರ್ಚ್‌ ದೈತ್ಯ ಅದಾನಿ ಸಾಮ್ರಾಜ್ಯವನ್ನು ನಡುಗಿಸಿ ಹಾಕಿದೆ. ಕಳೆದ ಕೆಲವು ವರ್ಷಗಳಿಂದ ಷೇರಿನ ಬೆಲೆ ಒಂದೇ ಸಮನೆ ಏರಿಕೆ ಕಾಣುತ್ತಾ ಭಾರೀ ಲಾಭವನ್ನು ಅನುಭವಿಸಿದ್ದ ಅದಾನಿ ಸಮೂಹದ ಕಂಪನಿಗಳು ಕೇವಲ 2 ದಿನಗಳಲ್ಲಿ 4 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೌಲ್ಯವನ್ನು ಕಳೆದುಕೊಂಡು ತತ್ತರಿಸಿವೆ.

ಹಿಂಡನ್‌ಬರ್ಗ್‌ ರಿಸರ್ಚ್‌ ವರದಿ ಬಿಡುಗಡೆ ಮಾಡಿದ 32,000 ಪದಗಳ ಒಂದೇ ಒಂದು ವರದಿಯ ನಂತರದ ಕೇವಲ ಎರಡು ವಹಿವಾಟು ಅವಧಿಗಳಲ್ಲಿ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಮಾರುಕಟ್ಟೆ ಬಂಡವಾಳವು ಸುಮಾರು 4 ಲಕ್ಷ ಕೋಟಿ ರೂ.ನಷ್ಟು ಅನುಭವಿಸಿದ್ದಾರೆ. 

ವರದಿ ಬಿಡುಗಡೆಗೂ ಮುನ್ನ ವಿಶ್ವದ ಸಿರಿವಂತರಲ್ಲೇ ಮೂರನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅವರ ತಂಡವು, ಈ ವರದಿಯನ್ನು ‘ದುರುದ್ದೇಶಪೂರಿತ ಕುಚೇಷ್ಟೆ’ ಮತ್ತು ‘ಸಂಶೋಧನೆಯನ್ನೇ ನಡೆಸದ ವರದಿ’ ಎಂದು ಹೇಳಿದ್ದಾರೆ. ಹೂಡಿಕೆದಾರರು ಒಂದೇ ಸಮನೆ ಅದಾನಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಷೇರು ಬೆಲೆ ಕುಸಿಯುತ್ತಲೇ ಸಾಗಿದೆ.

ಬುಧವಾರದ ಕುಸಿತದಿಂದ ಅದಾನಿ ಕಂಪನಿಗಳ ಷೇರು ಮೌಲ್ಯ 1 ಲಕ್ಷ ಕೋಟಿ ರೂ.ನಷ್ಟು ಕಡಿಮೆಯಾಗಿದ್ದರೆ ಇದೀಗ ಶುಕ್ರವಾರ ಕುಸಿತ ಮತ್ತಷ್ಟು ತೀವ್ರಗೊಂಡಿದೆ. ಯಾವುದೇ ಅಕ್ರಮ ನಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಅಹಮದಾಬಾದ್‌ ಮೂಲದ ಕಂಪನಿ ಹೇಳುತ್ತಿದ್ದರೂ ಷೇರುಪೇಟೆಯಲ್ಲಿ ಪಟ್ಟಿ ಮಾಡಲ್ಪಟ್ಟ ಅದಾನಿ ಸಮೂಹದ ಹತ್ತು ಕಂಪನಿಗಳ ಷೇರುಗಳು ಸತತವಾಗಿ ಕುಸಿತ ಕಾಣುತ್ತಿದೆ.

ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಟ್ರಾನ್ಸ್‌ಮಿಷನ್‌, ಅದಾನಿ ಟೋಟಲ್‌ ಗ್ಯಾಸ್‌ ಮತ್ತು ACC ಲಿ. ಷೇರುಗಳು ಶೇ. 20ರವರೆಗೆ ನಷ್ಟ ಅನುಭವಿಸಿವೆ. ಅದಾನಿ ಇತ್ತೀಚೆಗಷ್ಟೇ ಸ್ವಾಧೀನಪಡಿಸಿಕೊಂಡಿರುವ ಅಂಬುಜಾ ಸಿಮೆಂಟ್ಸ್‌ ಷೇರುಗಳು ಭಾರೀ ಕುಸಿತಕ್ಕೀಡಾಗಿದ್ದು, ಇದು ಕೇವಲ ಒಂದು ವಹಿವಾಟಿನ ಅವಧಿಯಲ್ಲಿ ತನ್ನ ಮೌಲ್ಯದ ನಾಲ್ಕನೇ ಒಂದು ಭಾಗವನ್ನು ಕಳೆದುಕೊಂಡಿದೆ.

ಅದಾನಿ ಪವರ್, ಅದಾನಿ ವಿಲ್ಮರ್‌ ಮತ್ತು NDTV ಷೇರುಗಳು ಶೇ. 5ರ ಲೋವರ್‌ ಸರ್ಕ್ಯೂಟ್‌ನಲ್ಲಿ ಲಾಕ್‌ ಆಗಿವೆ. ದಲಾಲ್ ಸ್ಟ್ರೀಟ್‌ನಲ್ಲಿ ಅದಾನಿಯ ಸಾಮ್ರಾಜ್ಯದ ಎಲ್ಲಾ ಷೇರುಗಳು ಕೆಂಪು ಬಣ್ಣದಲ್ಲಿವೆ .

ತೂಗುಯ್ಯಾಲೆಯಲ್ಲಿ 20,000 ಕೋಟಿ ರೂ.ನ FPO :

ಗ್ರೂಪ್‌ನ ಪ್ರಮುಖ ಘಟಕವಾದ ಅದಾನಿ ಎಂಟರ್‌ಪ್ರೈಸಸ್‌ನ 20,000 ಕೋಟಿ ರೂ.ನ ಫಾಲೋ-ಆನ್ ಸಾರ್ವಜನಿಕ ಕೊಡುಗೆ (ಎಫ್‌ಪಿಒ) ಬುಧವಾರದ ಆಂಕರ್ ರೌಂಡ್‌ನಲ್ಲಿ ಸಾಕಷ್ಟು ಬೇಡಿಕೆಯನ್ನು ಪಡೆದಿದ್ದರೂ ಶುಕ್ರವಾರ ಆರಂಭವಾಗಿರುವ ಸಾರ್ವಜನಿಕ ಚಂದಾದಾರಿಕೆ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

ವಿಶೇಷವೆಂದರೆ ಜಾಗತಿಕ ಸಿರಿವಂತರಾಗಿ ಗೌತಮ್ ಅದಾನಿ ಹಾಗೂ ಷೇರು ಬೆಲೆಯಲ್ಲಿ ಭಾರೀ ಏರಿಕೆಯಿಂದ ಅದಾನಿ ಸಮೂಹದ ಷೇರುಗಳು ಭಾರೀ ಸುದ್ದಿಯಲ್ಲಿದ್ದರೂ ವಿಶ್ಲೇಷಕರು ಮಾತ್ರ ಇತ್ತ ಕಣ್ಣೆತ್ತಿ ನೋಡಿಲ್ಲ.

7ನೇ ಸ್ಥಾನಕ್ಕೆ ಕುಸಿದ ಅದಾನಿ :

ಹಿಂಡನ್‌ಬರ್ಗ್‌ ವರದಿ ಹೊರಬೀಳುವ ಮುನ್ನ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಗೌತಮ್‌ ಅದಾನಿ ಇದೀಗ ಏಕಾಏಕಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಫೋರ್ಬ್ಸ್‌ ರಿಯಲ್‌ಟೈಮ್‌ ಪಟ್ಟಿಯ ಪ್ರಕಾರ ಅವರ ಆಸ್ತಿ 1.85 ಲಕ್ಷ ಕೋಟಿ ರೂ. (22.7 ಬಿಲಿಯನ್‌ ಡಾಲರ್‌) ಕುಸಿದಿದೆ. ಈ ಮೂಲಕ ಅದಾನಿ ಆಸ್ತಿ 100 ಬಿಲಿಯನ್‌ ಡಾಲರ್‌ಗಿಂತ ಕೆಳಕ್ಕಿಳಿದಿದ್ದು 96.5 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ.

ಹಿಂಡನ್ ಬರ್ಗ್ ವರದಿಯು ಇಡೀ ಅದಾನಿ ಸಮೂಹವನ್ನೇ ನೆಲಕಚ್ಚುವಂತೆ ಮಾಡಿದ್ದು , ಇತ್ತ ಅದಾನಿ ತಂಡ ಇಲ್ಲಿ ಮೋಸ ನಡೆದಿದೆ , ನಾವು ಕೊರ್ಟ್ ಮೆಟ್ಟಿಲು ಏರುವುದಾಗಿ ಹೇಳಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button