ನಲಿ ಕಲಿ ಶಿಕ್ಷಣ ಮಕ್ಕಳಿಗೆ ಭದ್ರ ಬುನಾದಿ – ಶ್ರೀ ಧರ ನಡುಗಡ್ಡಿ.
ಹಿರೇರೂಗಿ ಜು.12

ನಲಿ ಕಲಿ ಶಿಕ್ಷಣವನ್ನು ಪುನಶ್ಚೇತನ ಗೊಳಿಸಿ ಮಕ್ಕಳಲ್ಲಿ ಪ್ರತಿನಿತ್ಯ ಉತ್ಸಾಹ ತುಂಬುವ ಕಾರ್ಯ ಶಿಕ್ಷಕರಿಂದ ನಡೆಯಬೇಕು ಎಂದು ಕ್ಷೇತ್ರ ಸಮನ್ವಯಧಿಕಾರಿ ಶ್ರೀಧರ ನಡುಗಡ್ಡಿ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಧಿಕಾರಿಗಳ ಕಾರ್ಯಾಲಯ ಇಂಡಿ ವತಿಯಿಂದ ಆಯೋಜಿಸಿದ್ದ ಹಿರೇರೂಗಿ-ತಡವಲಗಾ ಕ್ಲಸ್ಟರ್ ಮಟ್ಟದ ನಲಿ-ಕಲಿ ಶಿಕ್ಷಕರ ಸಮಾಲೋಚನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಲಿ-ಕಲಿ ಶಿಕ್ಷಣ ಮಕ್ಕಳ ಭವಿಷ್ಯದ ಭದ್ರ ಬುನಾದಿ.2008 ರಿಂದ ರಾಜ್ಯಾದ್ಯಂತ ಜಾರಿಗೊಂಡ ಈ ಪದ್ದತಿಯಲ್ಲಿ ಮಕ್ಕಳು ನಲಿಯುತ್ತ ಕಲಿಯಲಿ ಎಂಬ ತತ್ವ ಅಡಗಿದ್ದು, ಚಟುವಟಿಕೆಗಳ ಮೂಲಕ ಮಕ್ಕಳು ಆಡುತ್ತಾ ಹಾಡುತ್ತಾ ಕಲಿಯಲು ಶಿಕ್ಷಕರ ಸಹಕಾರ ಅಗತ್ಯ ಎಂದು ಹೇಳಿದರು. ತಾಲೂಕ ನಲಿಕ ಲಿ ನೋಡಲ್ ಅಧಿಕಾರಿ ಬಸವರಾಜ ಗೋರನಾಳ ಮಾತನಾಡಿ, ವಿದ್ಯಾರ್ಥಿಯು ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕೆಯನ್ನು ಆರಂಭಿಸಿ, ಗೆಳೆಯರ ಸಹಕಾರದಲ್ಲಿ ಪುನರ್ಬಲನ ಗೊಂಡು, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಗಳಿಸುವುದು ಈ ಪದ್ಧತಿಯ ವೈಶಿಷ್ಟ್ಯವಾಗಿದೆ ಎಂದು ಹೇಳಿದರು. ಹಿರೇರೂಗಿ ಕ್ಲಸ್ಟರ್ ಸಿಆರ್ ಪಿ ಸಂತೋಷ ಚವ್ಹಾಣ ಮಾತನಾಡಿ, ನಲಿ-ಕಲಿ ಪದ್ಧತಿಯಲ್ಲಿರುವ ಬಹು ಹಂತದ ಕಲಿಕೆ, ಸ್ವಕಲಿಕೆ, ಸ್ವವೇಗದ ಕಲಿಕೆ, ಸಂತಸದ ಕಲಿಕೆ ಯಂತಹ ವಿಶೇಷತೆಗಳನ್ನು ವರ್ಗ ಕೊಣೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯ ಎಂದು ಹೇಳಿದರು. ಯುಬಿಎಸ್ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಈ ಪದ್ಧತಿ ಶಿಶು ಕೇಂದ್ರಿತ-ಚಟುವಟಿಕೆ ಆಧಾರಿತವಾಗಿ ಮಗುವಿಗೆ ಶಾಲಾ ಶಿಕ್ಷಣದೊಂದಿಗೆ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದ್ದು, ಮಗುವಿಗೆ ಸ್ವಕಲಿಕಾ ಪ್ರಕ್ರಿಯೆಯಲ್ಲಿ ತೊಡಗಲು ಸಹಕಾರಿಯಾಗಿದೆ ಎಂದು ಹೇಳಿದರು. ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು.ತಡವಲಗಾ ಸಿಆರ್ ಪಿ ಪ್ರಕಾಶ ರಾಠೋಡ, ಸಂಪನ್ಮೂಲ ಶಿಕ್ಷಕರಾಗಿ ಅಶೋಕ ಚವ್ಹಾಣ, ಆರ್ ಆರ್ ಬೇನೂರ ಹಾಗೂ ಹಿರೇರೂಗಿ-ತಡವಲಗಾ ಕ್ಲಸ್ಟರ್ ವ್ಯಾಪ್ತಿಯ ನಲಿ-ಕಲಿ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕ ಎಸ್ ಆರ್ ಚಾಳೇಕರ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಪ್ಪ.ಬಿ.ಹರಿಜನ.ಇಂಡಿ ವಿಜಯಪುರ.