ಕಾನಮಡುಗು ಶ್ರೀ ಶರಣಬಸವೇಶ್ವರ ಸ್ವಾಮಿಯ – ಜಾತ್ರಾ ಮಹೋತ್ಸವ.
ಕಾನಮಡುಗು ಡಿ.09

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಮಡುಗು ಗ್ರಾಮದ ದಾಸೋಹ ಮಠದ ಶ್ರೀ ಶರಣಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇಂದಿನ 09 ನಡೆಯಲಿದ್ದು, ಡಿ. 10 ರಂದು ಮಂಗಳವಾರ ಸಂಜೆ 4 ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ಶ್ರೀ ದಾ.ಮ.ಐಮಡಿ ಶರಣಾರ್ಯರು ತಿಳಿಸಿದ್ದಾರೆ.
ಶ್ರೀಇ ಶರಣಬಸವೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಇಂದು ಸಂಜೆ 6 ಗಂಟೆಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಅಪಾರ ಭಕ್ತರು ಕಾರ್ತಿಕ ದೀಪೋತ್ಸವದಲ್ಲಿ ಭಾಗವಹಿಸುವರು. ನಂತರ ರಾತ್ರಿ 8 ಗಂಟೆಯಿಂದ ಹಾಸ್ಯ, ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ.

ನಾಳೆ ಮಂಗಳವಾರ ಬೆಳಗ್ಗೆ 10.30 ಗಂಟೆಗೆ ರಕ್ತದಾನ ಶಿಬಿರ, ಸಂಗೀತ ಸೇರಿ ಸಭಾ ಕಾರ್ಯಕ್ರಮ ಹಾಗೂ ಬೆಳಿಗ್ಗೆ 11.30 ರಿಂದ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆಯಲಿವೆ. ಸಂಜೆ 4 ಗಂಟೆಗೆ ಶ್ರೀ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದ್ದು, ಸಂಜೆ 6.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಅದೇ ರೀತಿ ಡಿ.11 ರಂದು ಸಂಜೆ 6 ಗಂಟೆಗೆ ಕ್ಷೇತ್ರನಾಥ ಶ್ರೀ ಶರಣಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಲಿದೆ. ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ಧರ್ಮಾಧಿಕಾರಿ ಶ್ರೀ ದಾ.ಮ.ಐಮಡಿ ಶರಣಾರ್ಯರ ನೇತೃತ್ವದಲ್ಲಿ ನಡೆಯಲಿದ್ದು, ಪೂಜಾ ವಿಧಿ – ವಿಧಾನಗಳು ಕೊಟ್ಟೂರು ಹಿರೇಮಠದ ಶ್ರೀ ಯೋಗಿ ರಾಜೇಂದ್ರ ಸ್ವಾಮೀಜಿ, ಮುಷ್ಟೂರಿನ ಶ್ರೀ ರುದ್ರಮುನಿ ಸ್ವಾಮೀಜಿ ಹಾಗೂ ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನೆರವೇರಲಿವೆ. ಜಾತ್ರಾ ಮಹೋತ್ಸವಕ್ಕೆ ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಶ್ರೀ ದಾ.ಮ.ಐಮಡಿ ಶರಣಾರ್ಯರು ಪ್ರಕಟಣೆ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ