ಸಾತ್ವಿಕ ಗುಣ ಬೆಳೆಯಲು ಬೇಸಿಗೆ ಶಿಬಿರ ಸಹಕಾರಿ…..
ಹಳಗುಣಕಿ (ಮೇ.7) :
ಇಂಡಿ ಮಕ್ಕಳ ಅಂತರಾಳದಲ್ಲಿ ಕೌಶಲ, ಶಿಸ್ತು, ಸ್ವಚ್ಛತೆ, ಸಂಯಮ, ಪರಿಸರ ನೈರ್ಮಲ್ಯ ಸೇರಿದಂತೆ ಇನ್ನಿತರ ಸಾತ್ವಿಕ ಗುಣ ಬೆಳೆಯಲು ಬೇಸಿಗೆ ಶಿಬಿರ ಸಹಕಾರಿ ಎಂದು ಎಸ್ ಎಸ್ ಬೊಮ್ಮನಹಳ್ಳಿ ಹೇಳಿದರು. ತಾಲೂಕಿನ ಹಳಗುಣಕಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್ ತಾಲೂಕಾ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯ ಪ್ರಾಚಾರ್ಯ ಎಸ್ ಬಿ ಮಕಾನದಾರ ಮಾತನಾಡಿ ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಸುವ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಮೌಲ್ಯ ಬಿತ್ತುವ ಅಗತ್ಯವಿದೆ ಎಂದು ಹೇಳಿದರು. ಸ್ಥಳೀಯ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಾಗ್ಯಜ್ಯೋತಿ ಕೋಳಾರಿ ಮಾತನಾಡಿ, ನಮ್ಮ ಮಕ್ಕಳಿಂದು ಆಧುನಿಕ ಶಿಕ್ಷ ಣ ಪದ್ಧತಿಯಿಂದಾಗಿ ಬರೀ ಓದು-ಬರಹದಲ್ಲಿ ಕಳೆದು ಹೋಗುತ್ತಿದ್ದಾರೆ. ಪುಸ್ತಕದ ಆಚೆ-ಈಚೆ ಯೋಚಿಸಲೂ ಆಗದಂಥ ಸ್ಥಿತಿಯಲ್ಲಿ ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಸಾಮಾಜಿಕ ಆಗು-ಹೋಗುಗಳ ಬಗೆಗೆ ಮಕ್ಕಳಿಗೆ ತಿಳಿಹೇಳುವ ಪ್ರಯತ್ನ ನಡೆಯಬೇಕಾಗಿದೆ ಎಂದು ಹೇಳಿದರು.

ಈ ಬೇಸಿಗೆ ಶಿಬಿರದಲ್ಲಿ ಯೋಗ, ಪ್ರಾಣಾಯಮ, ಯೋಗಾಸನದ ಚಿಕಿತ್ಸೆಗಳು, ಲಾಭಗಳು,ಚಿತ್ರಕಲೆ,ಕರಕುಶಲ ತರಬೇತಿ, ಆತ್ಮ ರಕ್ಷಣೆಯ ಕೌಶಲ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಕಾರ್ಯದರ್ಶಿ ಶಹಾಜಿ ಪಾಟೀಲ, ಸ್ಕೌಟ್ಸ್ ಮಾಸ್ಟರ್ ದತ್ತಾತ್ರೇಯ ಕೋಳಾರಿ ಅವರು ತರಬೇತಿ ನೀಡಿದರು. ಶುದ್ದ ಬರವಣಿಗೆ, ರಾಷ್ಟ್ರದ ಏಕತೆಯ ಹಾಡುಗಳು, ಲಘು ಮನರಂಜನೆಯ ಆಟಗಳನ್ನು ಕಲಿಸಲಾಯಿತು. ಈ ಶಿಬಿರದ ಮಾರ್ಗದರ್ಶಿಯಾಗಿ ಸ್ಕೌಟ್ಸ್ ಮಾಸ್ಟರ್ ಸಂಗಮೇಶ ಬಂಡೆ, ಗೈಡ್ಸ್ ಕ್ಯಾಪ್ಟನ್ ಎಸ್ ಎಸ್ ಹಾದಿಮನಿ ಇದ್ದರು.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ