“ನವ ವರುಷದಂಚಿನಲ್ಲಿ”…..

ವರುಷಗಳುರುಳಿದರು, ದಶಕಗಳು
ಕಳೆದರೂ ಬಾರದು ಆ ಸವಿ ದಿನಗಳು
ಬಾರದು ಆ ಅವಿಸ್ಮರಣೀಯ ಕ್ಷಣಗಳು
ಬದಲಾಗದ ಬದುಕಿನ ಬವಣೆಗಳು
ಬದಲಾಗದ ಮನಸ್ಥಿತಿಗಳು
ಚಕ್ರವ್ಯೂಹದಂತೆ ಸುತ್ತುವರೆದಿವೆ
ಜಂಜಾಟಗಳು
ನವ ವರುಷದಂಚಿನಲ್ಲಿ ಹೊಸತನದ
ಸುಳಿವಿಲ್ಲ ||1||
ಬದಲಾಗದ ಸಂಕುಚಿತ ಮನಗಳು
ಬದಲಾಗದ ಸ್ವಾರ್ಥ ಪ್ರಪಂಚ
ಬದಲಾಗದ ನೀತಿ, ನಿಯಮಗಳು
ಅಪ್ಪ ನೆಟ್ಟಾಲಕ್ಕೆ ಜೋತು ಬೀಳುವ ಮಂದಿ
“ದೇವನೊಬ್ಬ ನಾಮ ಹಲವು”
“ಮನುಜಮತ, ವಿಶ್ವ ಪಥ ” ವೆಂಬ
ಧ್ಯೇಯ ಮಂತ್ರವ ಜಪಿಸಿದ ನಾಡಲ್ಲಿ
ಪ್ರತಿದಿನ ಉದ್ಭವಿಸುತ್ತಿವೆ ಹೊಸ, ಹೊಸ
ದೈವಗಳು, ನವ ದೇವಾಲಯಗಳು
ನವ ವರುಷದಂಚಿನಲ್ಲಿ ಹೊಸತನದ
ಸುಳಿವಿಲ್ಲ ||2||
ಸ್ವಾರ್ಥಪರ ಜಗದಿ ನಿಸ್ವಾರ್ಥ ಜೀವಿಗಳ
ಹುಡುಕಾಟ
ಮಹಾ ಮಹಿಮರು ಸಾಧ್ವಿಗಳು
ಉದಯಿಸಿದ ನಾಡಲ್ಲಿ ಮಾನವ
ರೂಪಿನ ದಾನವರ ಜನನ
ರಕ್ತ ಪಿಪಾಸುಗಳಾಗಿ ಪಾಶವಿಕೃತ್ಯ
ನಡೆಸಿರುವಿರಿಲ್ಲಿ
ಒಂದೆಡೆ ಆತ್ಯಾಚಾರ, ಅನಾಚಾರಗಳು
ಮತ್ತೊಂದೆಡೆ ರೌದ್ರ, ಬೀಭತ್ಸ್ಯ ಕೃತ್ಯಗಳು
ಸ್ಥಿರವಿರದ ಬದುಕಿನಲ್ಲಿ ಏನೆಲ್ಲಾ
ದುಷ್ಕಾರ್ಯ ಗಳು ನವವರುಷದಂಚಿನಲ್ಲಿ
ಹೊಸತನದ
ಸುಳಿವಿಲ್ಲ ||3||
ಬಣ್ಣದ ವೇಷವಿಲ್ಲದೆ ಸಿದ್ದಗೊಂಡಿರುವುವು
ರಂಗು ರಂಗಿನ ಪಾತ್ರಗಳು ರಾಜಕಾರಣದ
ಚದುರಂಗದಾಟಕ್ಕೆ
ಕ್ಷಣಿಕ ಆಮಿಷ ಗಳಿಗೆ ಬಲಿಯಾಗಿರುವರು
ಜನಸಾಮಾನ್ಯರು
ಸಾಮಾನ್ಯನ ಅಸಮಾನ್ಯ ಬವಣೆಗಳು ದ್ವಿಗುಣ
ಗೊಂಡಿವೆ
ಕವಿವಾಣಿ, ದೇವವಾಣಿಗಳೆಲ್ಲಾ
ಧೂಳಿಪಟವಾಗಿವೆ
ರಾಜಕಾರಣಿ ಗಳ ಸ್ಥಾನ ಭದ್ರತೆಗಾಗಿ
ಸಜ್ಜಗಿಹುದು ರಂಗಮಂಟಪವಿಲ್ಲಿ
ನವ ವರುಷದಂಚಿನಲ್ಲಿ ಹೊಸತನದ
ಸುಳಿವಿಲ್ಲ ||4||

ಎನ್.ಎಂ. ರವಿಕುಮಾರ್ ಸಾಹಿತಿಗಳು
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ
ಕಾರ್ಯದರ್ಶಿಗಳು ವಿಜಯನಗರ ( ಕೂಡ್ಲಿಗಿ)