ಒಳ ಮೀಸಲಾತಿ ಜಾರಿ ಮಾಡದಿದ್ದಲ್ಲಿ – ಕಾಂಗ್ರೆಸ್ಗೆ ತಕ್ಕ ಪಾಠ.
ಹೊಸಪೇಟೆ ಅ.16

ಒಳ ಮೀಸಲಾತಿ ಜಾರಿಗಾಗಿ ವಿಜಯನಗರ ಜಿಲ್ಲಾ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಹೋರಾಟವನ್ನು ಹಮ್ಮಿಕೊಂಡಿದ್ದರು ಹಲವಾರು ದಲಿತ ಸಂಘಟನೆಗಳ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಸೇರಿ ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮಾಡಿ ಮತ್ತು ಕಾಲ್ನಡಿಗೆಯ ಮುಖಾಂತರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಒಳ ಮೀಸಲಾತಿ ಜಾರಿಯ ಹಕ್ಕೋತ್ತಾಯದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಪಿ.ಉಮಾಪತಿ ಮಾತನಾಡಿ ಒಳ ಮೀಸಲಾತಿ ಜಾರಿಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದ್ದರೂ ಇನ್ನೂ ವಿಳಂಬ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುವ ಸ್ಥಿತಿ ಬಂದಿದೆ. ನಾವು ಯಾರ ಹತ್ತಿರ ನ್ಯಾಯ ಕೇಳಬೇಕೆಂದು ಗೊತ್ತಾಗುತ್ತಿಲ್ಲ ಸರ್ಕಾರ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಒಳ ಮೀಸಲಾತಿ ಜಾರಿ ಮಾಡಬೇಕು.ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾಗಿದೆ, ಹಿಂದೆ ನಮಗೆ ಅಧಿಕಾರವಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮತ್ತೆ ಅದರ ವಿರುದ್ಧ ಪುನರ್ ಪರಿಶೀಲಕ್ಕಾಗಿ ಅರ್ಜಿಯನ್ನು ಹಾಕಿದ್ದರು ಅದು ಕೂಡ ತಿರಸ್ಕೃತ ಗೊಂಡಿದೆ, ಇನ್ನೂ ನಾವು ಹೋರಾಟದ ಅಂತಿಮ ರೂಪರೇಷಕ್ಕೆ ಬಂದಿದ್ದೇವೆ. ಮುಂದೆ ಏನಾದರೂ ಇದೇ ರೀತಿ ವಿಳಂಬ ಮಾಡಿದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ, ಹೊಸಪೇಟೆಯನ್ನು ಬಂದ್ ಕರೆಗೆ ಕೊಡ ಬೇಕಾಗುತ್ತದೆ. ಒಳ ಮೀಸಲಾತಿ ಜಾರಿ ಮಾಡದೆ ಹೋದರೆ ಮುಂದಿನ ಉಪ ಚುನಾವಣೆ ನಡೆಯುವ ಸಂಡೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ನಿಮಗೆ ಎಚ್ಚರಿಕೆ ಗಂಟೆ ನೀಡುತ್ತೇವೆ ಎಂದರು.ಕೊಟ್ಟಿಗೆನಾಳ ಮಲ್ಲಿಕಾರ್ಜುನ ಮಾತನಾಡಿ ರಾಜ್ಯ ಸರ್ಕಾರಗಳು ದೇಶದ ಕಾನೂನನ್ನು ಗೌರವಿಸುತ್ತಿದ್ದರೆ, ಸಂವಿಧಾನ ರಕ್ಷಕರು ಎಂದು ಹೇಳಿ ಕೊಳ್ಳುತ್ತಿದ್ದಾರ. ಒಳ ಮೀಸಲಾತಿಯನ್ನು ಜಾರಿ ಮಾಡುವುದರ ಮೂಲಕ ಅವರ ಈ ನಿಲುವನ್ನು ನಿರೂಪಿಸಲಿ.ಸರ್ಕಾರಕ್ಕೆ ಬದ್ಧತೆ ಇದ್ದರೆ ಒಳ ಮೀಸಲಾತಿ ಜಾರಿ ಮಾಡಲಿ, ಚುನಾವಣಾ ಪೂರ್ವದಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಸಮಾವೇಶದಲ್ಲಿ ಒಳ ಮೀಸಲಾತಿ ಮಾಡುತ್ತೇವೆ ಎಂದು ಘೋಷಿಸಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಿ ಕೊಂಡಿದ್ದೀರಿ. ಮೊದಲ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದೀರಿ. ಇದನ್ನು ವಿರೋಧಿಸುವವರು ಯಾರು, ಸ್ಪರ್ಶ ಸಮುದಾಯದವರ ಅಥವಾ ಅಸ್ಪರ್ಶ ಸಮುದಾಯದವರ ಸ್ಪಷ್ಟ ಪಡಿಸಬೇಕು. ಮಲ್ಲಿಕಾರ್ಜುನ ಖರ್ಗೆ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿಯವರಿಗೆ ಕರೆ ಮಾಡಿ ಒಳ ಮಿಸಲಾತಿ ಜಾರಿ ತೀರ್ಮಾನ ತೆಗೆದು ಕೊಳ್ಳಬೇಡಿ ಎಂದು ಹೇಳುತ್ತಾರೆ. ನಿಮ್ಮ ಮಗ ಗುಲ್ಬರ್ಗ ಜಿಲ್ಲೆಯನ್ನು ಹಾಳು ಮಾಡಿದ್ದಾರೆ ನೀವು ಇಂಡಿಯಾವನ್ನೇ ಹಾಳು ಮಾಡಲು ಹೊರಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಳ ಮೀಸಲಾತಿಯನ್ನು ತಡೆ ಹಿಡಿದವರು ಮಲ್ಲಿಕಾರ್ಜುನ ಖರ್ಗೆ, ಹೆಚ್.ಸಿ ಮಾದೇವಪ್ಪ , ಪರಮೇಶ್ವರ್, ನಾವು ಕಾಂಗ್ರೆಸ್ ಪಕ್ಷದವರಿದ್ದರೂ ನಮಗೆ ಜನಾಂಗ ಮುಖ್ಯವಾಗುತ್ತದೆ, ಜನಾಂಗ ನಿಮಗೆಲ್ಲಾ ಕೊಟ್ಟಿದೆ ಮೊದಲು ನೀವು ಅಧಿಕಾರ ದಿಂದ ಹೊರಗೆ ಬನ್ನಿ, ನಮ್ಮ ಜನಗಳಿಗೆ ಮೋಸ ಮಾಡಬೇಡಿ ಎಂದರು. ಮನವಿ ಪತ್ರದಲ್ಲಿ:-ಆಗಸ್ಟ್ 1-2024 ರಂದು ಘನ ಸರ್ವೋಚ್ಚ ನ್ಯಾಯಾಲಯದ ಏಳು ಪೀಠದ ಪೂರ್ಣ ಪೀಠವು ಎಸ್ ಸಿ. ಮೀಸಲಾತಿ ಉಪ ವರ್ಗೀಕರಿಸಲು ಆಯಾ ರಾಜ್ಯ ಸರಕಾರಕ್ಕೆ ಸಂಪೂರ್ಣ ಹಕ್ಕಿದೆ ಎಂಬುದನ್ನು ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಅವಕಾಶ ವಂಚಿತ ನಾಡಿನ ಶೋಷಿತ ಸಮುದಾಯದವರಾದ ನಾವು ಸ್ವಾಗತಿಸುತ್ತೇವೆ.

ಕರ್ನಾಟಕ ಸರಕಾರದ ಪ್ರಸ್ತುತ ಕಾಂಗ್ರೇಸ್ ಪಕ್ಷವು ತನ್ನ 2023 ರ ಚುನಾವಣಾ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿ ಘೋಷಿಸಿ ಕೊಂಡಂತೆ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಗೊಳಿಸಬೇಕಿದೆ. ಕರ್ನಾಟಕದಲ್ಲಿ ಎಸ್.ಸಿ ಮೀಸಲಾತಿಯಲ್ಲಿ ವರ್ಗೀಕರಿಸಿ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಹೋರಾಟಗಳು ನಡೆದಿವೆ. ಹಿಂದಿನ ಬಿಜೆಪಿ ಸರಕಾರವು ಎಸ್.ಸಿ ಮೀಸಲಾತಿಯ ಎಲ್ಲಾ ಸಮುದಾಯದವರಾದ ನಾವು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ಸುತ್ತಿನ ಮಾತುಕತೆ ನಡೆಸಿ ಜನಸಂಖ್ಯೆಗೆ ಅನುಗುಣವಾಗಿಯೇ ವೈಜ್ಞಾನಿಕವಾದ ಒಳ ಮೀಸಲಾತಿಯ ಸೂತ್ರವನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನೇ ಮಾನದಂಡವನ್ನಾಗಿಟ್ಟು ಕೊಂಡು ರಾಜ್ಯ ಸರಕಾರವು ಒಳ ಮೀಸಲಾತಿ ಜಾರಿ ಗೊಳಿಸಬೇಕಿದೆ.ನ್ಯಾಯಮೂರ್ತಿ ಶ್ರೀ. ಎ. ಜೆ. ಸದಾಶಿವ ಆಯೋಗದ ಮೂಲ ಆಶಯವನ್ನು ಉಳಿಸಿ ಕೊಂಡು 2011 ರ ಜನಗಣತಿಯ ಸಂಖ್ಯಾಧಾರಗಳು ಮತ್ತು ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ್ ಆಯೋಗದ ವರದಿಯಂತ ವಿಸ್ತರಿಸಲಾದ 17% ರ ಮೀಸಲಾತಿಯನ್ನು ಬಳಸಿ ಕೊಂಡು ಉಪ ವರ್ಗೀಕರಣದ ಸೂಕ್ಷ್ಮ ರೂಪಿಸಲಾಗಿದೆ. 2011 ರ ಜನ ಗಣತಿಯ ವರದಿಯಂತೆ ಕರ್ನಾಟಕದಲ್ಲಿ ಎಸ್.ಸಿ ಜನಸಂಖ್ಯೆ 1,04,74,992. ಇದೆ. ಈಗಿರುವ ಶೇ.178 ರ ಮೀಸಲಾತಿಯನ್ನು ವರ್ಗೀಕರಿಸಿದರೆ ತಲಾ 6 ಲಕ್ಷ ಜನಸಂಖ್ಯೆಗೆ ಶೇ:1% ರಷ್ಟು ಮೀಸಲಾತಿ ದೊರಕುತ್ತದೆ. ಈ ಹಿನ್ನಲೆಯಲ್ಲಿ ಕೆಳಕಂಡಂತೆ ಶೇ 17% ರ ಮೀಸಲಾತಿಯ ವರ್ಗೀಕರಣ ಗೊಳಿಸುವುದು ಗುಂಪು: ಶೇ 6% ಮಾದಿಗ ಮತ್ತು ಮಾದಿಗೆ ಸಂಬಂಧಿತ ಜಾತಿಗಳು 29 ಇದ್ದು ಒಟ್ಟು ಜನಸಂಖ್ಯೆ 32.60,234, ಗುಂಪು: 2 ಶೇ 5.5% ಹೊಲೆಯ ಮತ್ತು ಸಂಬಂಧಿತ ಉಪ ಜಾತಿಗಳು 26 ಒಟ್ಟು ಜನ ಸಂಖ್ಯೆ 32,59,482. ಗುಂಪು: 3 ಶೇ 4.5% ಭೋವಿ, ಬಂಜಾರ, ಕೊರಮ, ಕೊರಚ, ಜಾತಿ ಉಪ ಜಾತಿಯಗಳು 19 ಜಾತಿಗಳು ಒಟ್ಟು ಜನ ಸಂಖ್ಯೆ 26,51,067. ಗುಂಪು: 4 ಶೇ 18 ಅಸ್ಪೃಶ್ಯ ಜಾತಿಯ ಮಾದಿಗ ಮತ್ತು ಹೊಲೆಯ ಸಂಬಂಧಿತ ಸಣ್ಣ ಸಣ್ಣ ಜಾತಿಗಳು ಮತ್ತು ಅಲೆಮಾರಿ ಜಾತಿಗಳು 83 ಒಟ್ಟು ಜನ ಸಂಖ್ಯೆ 5,85,570. ಹೊಲೆಯ ಮತ್ತು ಮಾದಿಗ ಜನ ಸಂಖ್ಯೆಯು ಬಹುತೇಕ ಸಮಾನವಾಗಿದೆ. ಆದರೆ ನ್ಯಾಯಮೂರ್ತಿ ಶ್ರೀ ಎ.ಜೆ ಸದಾಶಿವ ಆಯೋಗ ಉಲ್ಲೇಖಿಸುವಂತೆ ಮಾದಿಗ ಉಪ ಜಾತಿಗಳು ಹೆಚ್ಚು ಸಂತ್ರಸ್ತ ಸಮುದಾಯವೆನಿಸಿವೆ. ದೇವದಾಸಿಯರು, ಜೀತಕ್ಕೆ ಸಿಲುಕಿದವರು. ಅರ್ಧಕ್ಕೆ ಶಾಲೆಯನ್ನು ಬಿಟ್ಟವರು, ಬಾಲಪರಾಧಿಗಳು ಇಂತಹ ಪಟ್ಟಿಯ ಅಂಕಿ ಅಂಶಗಳಲ್ಲಿ ಮಾದಿಗ ಉಪ ಜಾತಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ಗುಂಪಿಗೆ 0.5% ರಷ್ಟು ಹೆಚ್ಚು ಮೀಸಲಾತಿ ಕಲ್ಪಿಸಲಾಗಿದೆ. ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಮತ್ತು 2011 ರ ಜನ ಗಣತಿಯ ಸಂಖ್ಯಾಧಾರ ಗಳೊಂದಿಗೆ ಪುನರ್ ಪರಿಶೀಲಿಸಿ ವರದಿ ಕೊಡಲು ರಚಿಸಿದ ಅಂದಿನ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರಾದ ಶ್ರೀ ಜೆ.ಸಿ. ಮಾಧುಸ್ವಾಮಿ, ಶ್ರೀ ಗೋವಿಂದ ಕಾರಜೋಳ, ಶ್ರೀ ಪ್ರಭು ಚವಾನ್, ಎಸ್ ಅಂಗಾರ್, ಡಾ, ಸುಧಾಕರ್ ಸಮಿತಿಯು ಅತ್ಯಂತ ವೈಜ್ಞಾನಿಕವಾಗಿ ನ್ಯಾಯ ಬದ್ಧವಾಗಿ ಕಾನೂನು ರೀತಿಯಲ್ಲಿ ವರದಿ ಕೊಟ್ಟಿರುವುದನ್ನು ಪ್ರಸ್ತುತ ಸರಕಾರವು ಮಾನ್ಯ ಮಾಡಿ ಕೂಡಲೇ ಒಳ ಮೀಸಲಾತಿ ಜಾರಿ ಗೊಳಿಸ ಬೇಕೆಂದು ಈ ಮೂಲಕ ಹಕ್ಕೊತ್ತಾಯದ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ.
ಹಕ್ಕೋತ್ತಾಯಗಳು :-
1) 2023ರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ 6 ನೇ. ಗ್ಯಾರಂಟಿ ಘೋಷಿಸಿದಂತೆ ಪ್ರಸ್ತುತ ಕಾಂಗ್ರೆಸ್ ಸರಕಾರವು ಆಗಸ್ಟ್ 1. 2024 ರಂದು ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಗೊಳಿಸಬೇಕು.
2) ಒಳ ಮೀಸಲಾತಿ ಜಾರಿ ಯಾಗುವವರೆಗೆ ಯಾವುದೇ ಸರಕಾರಿ ಹುದ್ದೆಗಳು ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬ ಬಾರದು.
3) ಜನ ಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್ ಸಿ. ಮೀಸಲಾತಿ ಜಾರಿ ಗೊಳಿಸುವಲ್ಲಿ ನಿರ್ಲಕ್ಷ ಧೋರಣೆ ಸಲ್ಲದು. ಮಾನ್ಯ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯ ಒಳ ಹುನ್ನಾರವನ್ನು ಮುಂದುವರಿಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರಕಾರವು ಎದುರಿಸ ಬೇಕಾಗುತ್ತದೆ. ಈಗಾಗಲೇ ಸಂವಿಧಾನ ಪರಿಚ್ಚೇದ 15(4)ನೇಯ ಹಾಗೂ 16(4) ನೇ ವಿಧಿಗಳ ಅಡಿಯಲ್ಲಿ ಅಧಿಕಾರವನ್ನು ಬಳಸಿ ರಾಜ್ಯ ಸರಕಾರಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರು ವಿಕೆಯನ್ನು ಗುರುತಿಸಿ ಕೊಂಡು ಮೀಸಲಾತಿಯಂತಹ ವಿಶೇಷ ಅವಕಾಶಗಳನ್ನು ಕಲ್ಪಿಸಲು ರಾಜ್ಯ ಸರಕಾರವು ಮುಕ್ತವಾಗಿದೆ ಎಂದು ಮಾನ್ಯ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಹಾಗಾಗಿ ಮಾನ್ಯ ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಜಾರಿ ಮಾಡಬೇಕೆಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪೂರ್ಣಾನಂದ ಭಾರತಿ ಸ್ವಾಮೀಜಿ ವೀರಸ್ವಾಮಿ, ಜಗನ್ನಾಥ, ಕೆ ಲಕ್ಷ್ಮಣ, ಕೆ ಮಲ್ಲಿಕಾರ್ಜುನ, ರಾಘವೇಂದ್ರ ಹೆಚ್. ಸೋಮಶೇಖರ, ಕೊಲ್ಲಾಪುರಿ, ಭರತ್ ಕುಮಾರ್, ಸುಬ್ರಮಣ್ಯ, ವಿಜಯ್ ಕುಮಾರ್, ಶೇಶು, ಶೆಕ್ಷಾವಲಿ, ರಾಘು, ಸಣ್ಣಮಾರೆಪ್ಪ , ವಿನೋದ್ ಕುಮಾರ, ಉದಯ್, ಕೋಲಾಪುರಿ, ಇತರರು ಮುಖಂಡರು ಉಪಸ್ಥಿತರಿದ್ದರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ