ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ ಬೆಂಬಲಿಗರಿಂದ ಗದ್ದಲ.

ವಿಜಯಪುರ ಜೂನ್.27

ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ ಬೆಂಬಲಿಗರು ಗದ್ದಲ ಎಬ್ಬಿಸಿದ ಘಟನೆ ನಡೆದಿದೆ.ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿದ್ದ ಸಭೆ ಮೂರು ಗಂಟೆ ತಡವಾಗಿ ಸಂಜೆ 6 ಗಂಟೆಗೆ ಆರಂಭವಾಯಿತು. ನಗರದ ಸಂಗನಬಸವ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದರಾದ ರಮೇಶ ಜಿಗಜಿಣಗಿ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿರುವ ಅಭ್ಯರ್ಥಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಷಣ ಮುಗಿಸುತ್ತಿದ್ದಂತೆ ಯತ್ನಾಳ ಬೆಂಬಲಿಗರು ಗಲಾಟೆ ಆರಂಭಿಸಿದರು. ಜೊಲ್ಲೆ ಅವರು ತಮ್ಮ ಭಾಷಣದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಮತ್ತೆ ಆಯ್ಕೆ ಮಾಡಬೇಕು ಎಂದು ಅವರು ಹೇಳಿರುವುದಕ್ಕೆ ಯತ್ನಾಳ ಬೆಂಬಲಿಗರು ಮತ್ತು ಮಹಾನಗರ ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿ ಆರ್ ಪಿ, ಬಿ ಆರ್ ಪಿ ಎಂದು ಯತ್ನಾಳ ಪರ ಘೋಷಣೆ ಹಾಕಿದರು. ಆಗ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಪೊಲೀಸರು ಮಧ್ಯೆ ಪ್ರವೇಶಿಸಿದರೂ ಪ್ರಯೋಜನವಾಗಲಿಲ್ಲ. ಗಲಾಟೆ ನಡೆಯುತ್ತಿದ್ದರೂ ಮಾಜಿ ಸಿಎಂ ಮತ್ತು ಬಿಜೆಪಿ ಮುಖಂಡರು ಮೂಕ ಪ್ರೇಕ್ಷಕರಾಗಬೇಕಾಯಿತು. ಇದರಿಂದ ಮನನೊಂದ ಸಂದದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ಮುಖಂಡ ವಿಜುಗೌಡ ಪಾಟೀಲ ಸಭೆಯಿಂದ ಹೊರ ನಡೆದರು.ಸಭೆಯಿಂದ ಹೊರ ಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತು ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಶಾಸಕ ಯತ್ನಾಳ ಹೆಸರು ಹೇಳದೇ ತೀವ್ರ ವಾಗ್ದಾಳಿ ನಡೆಸಿದರು. ಧಿಮಾಕಿನ ಮಾತು ಇನ್ನು ಮುಂದೆ ನಡೆಯೊಲ್ಲ. ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. 2018ರಲ್ಲಿ ಕಾರಜೋಳರ ಪುತ್ರನನ್ನು ಸೋಲಿಸಿದ್ದು ಯಾರು? ವಿಜುಗೌಡ ಪಾಟೀಲ್ ಮೂರು ಸಾರಿ ಸೋತಿದ್ದಾರೆ, ಅವರನ್ನು ಸೋಲಿಸುವ ಪ್ರಯತ್ನ ಯಾರು ಮಾಡಿದ್ದಾರೆ? ಎಂದು ಮುರುಗೇಶ ನಿರಾಣಿ ಅವರು ಯತ್ನಾಳ ವಿರುದ್ಧ ಹರಿಹಾಯ್ದರು.ನಾನೇ ಹಿಂದೂ ಹುಲಿ. ನಾನೇ ಹಿಂದೂ ಹುಲಿ ಎಂದು ಜಂಭ ಕೊಚ್ಚಿಕೊಂಡವರು ಪಾರ್ಟಿ ಬಿಟ್ಟು ಹೋಗಿ ಟೋಪಿ ಹಾಕಿ ನಮಾಜ್ ಮಾಡಿದ್ದಾರೆ. ಇದನ್ನು ವಿಜುಯಪುರದ ಜನರು ಮರೆತಿಲ್ಲ. ಮಾತನಾಡುವುದು ಬಹಳ ಇದೆ. ಮಾಳಿಗೆ ಏರಿದ ಮೇಲೆ ಏಣಿ ಒದ್ದರು ಎನ್ನುವ ಹಾಗೆ ಆಗಬಾರದು. ಇಲ್ಲಿಗೆ ಚುನಾವಣೆ ಮುಗಿದಿಲ್ಲ. ನಾವಷ್ಟೇ ಸೋತಿಲ್ಲ. ಈ ಹಿಂದೆ ವಾಜಪೇಯಿ, ಯಡಿಯೂರಪ್ಪ ಕೂಡ ಸೋತಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ತಲೆತಗ್ಗಿಸುವ ಹಾಗೆ ಮಾಡುತ್ತಿದ್ದಾನೆ. ಯತ್ನಾಳಗೆ ತಲೆಯಲ್ಲಿ ಕೋಡು(ಕೊಂಬು) ಬಂದಿವೆ. ನಾನೊಬ್ಬನೆ ಗೆದ್ದಿದ್ದೇನೆ ಎನ್ನುವ ಧಿಮಾಕು, ಅಹಂ ಬಂದಿದೆ ಎಂದು ನಿಕಾಣಿ ವಾಗ್ಧಾಳಿ ನಡೆಸಿದರು.ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಸತ್ತಿಲ್ಲ. ನಾವು ಸೋತಿದ್ದೇವೆ. ನಾವು ಏಳು ಜನ ಸೋತಿದ್ದೇವೆ. ಆದರೆ ಬಿಜೆಪಿ ಸತ್ತಿಲ್ಲ. ನಾವೆಲ್ಲ ಏಳು ಜನ ವಾಪಸ್ ಬಿಜೆಪಿ ಕಟ್ಟಿ ತೋರಿಸುತ್ತೇವೆ. ಆ ತಾಕತ್ತು ಇದೆ ನಮಗೆ. ಎಂಟಕ್ಕೆ ಎಂಟು ಸ್ಥಾನಗಳನ್ನು ಗೆದ್ದು ತೋರಿಸುತ್ತೇವೆ. ಮುಂದಿನ ಎಂ ಪಿ ಚುನಾವಣೆಯಲ್ಲಿ ಗೆಲ್ಲಿಸಿ ತೋರಿಸುತ್ತೇವೆ. ಸಂಸದ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಿ ತೋರಿಸುತ್ತೇವೆ. ಇವತ್ತಿನಿಂದ ಮನಗೆ ಹೋಗಲ್ಲ. ಹೆಂಡತಿ ಮಕ್ಕಳ ಮುಖ ನೋಡಲ್ಲ. ಎಂ ಪಿ ಗೆದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೋದಲೆಲ್ಲ ಗಲಾಟೆ ಆಗುತ್ತಿಲ್ಲ. ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಉತ್ತಮ ಕಾರ್ಯಕ್ರಮಗಳಾಗಿವೆ. ಬಾಗಲಕೋಟೆಯ ಕಾರ್ಯಕ್ರಮದಲ್ಲಿ ಓರ್ವ ಕಾರ್ಯಕರ್ತನ ಗಲಾಟೆ ಮಾತ್ರ ಆಗಿದೆ. ಅದೇನು ದೊಡ್ಡ ವಿಚಾರವಲ್ಲ ಎಂದು ಸಮಜಾಯಿಸಿ ನೀಡಿದರು.ವಿಜಯಪುರದ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು, ನಗರದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕರ್ತರ ಕಾರ್ಯಕ್ರಮಕ್ಕೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗಮಿಸಿಲ್ಲ. ಅವರಿಗೆ ಬೇರೆ ಕೆಲಸ ಇರುವ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ. ಬೇರೆ ಕೆಲಸವಿದೆ ಎಂದು ಈ ಮೊದಲೇ ಯತ್ನಾಳ ನನಗೆ ಹೇಳಿದ್ದರು. ಅವರು ವಿಜಯಪುರದಲ್ಲಿ ಇಲ್ಲ. ಯತ್ನಾಳ ಕಾರ್ಯಕ್ರಮಕ್ಕೆ ಬರಬೇಕೆಂದು ಅವರ ಅಭಿಮಾನಿಗಳು ಒತ್ತಾಸೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಯಾವುದೇ ನಾಯಕರ ಬಗ್ಗೆ ವ್ಯತ್ಯಾಸ ಇಲ್ಲ. ಇದೆಲ್ಲವನ್ನು ಸರಿಪಡಿಸಿ ಮತ್ತೊಮ್ಮೆ ವಿಜಯಪುರದಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.ಯತ್ನಾಳ ವಿರುದ್ಧ ಮುರುಗೇಶ ನಿರಾಣಿ ಮತ್ತು ಎ. ಎಸ್. ಪಾಟೀಲ ನಡಹಳ್ಳಿ ತೀವ್ರ ವಾಗ್ದಾಳಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರೇನು ಹೇಳಿದರೂ ಕೂಡ ಎಲ್ಲರನ್ನು ಒಗ್ಗೂಡಿಸಿಕೊಂಡು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಗೆ ವಿಜಯಪುರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ ಅವರಿಗೆ ಟಿಕೆಟ್ ನೀಡುವುದನ್ನು ಪಕ್ಷದ ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ತೀರ್ಮಾನ ಮಾಡಲಾಗುತ್ತದೆ. ಚುನಾವಣೆಯ ಸೋಲಿನ ನಂತರ ಎಲ್ಲಾ ಪಕ್ಷಗಳಲ್ಲಿಯೂ ಇಂತಹ ಘಟನೆ ನಡೆಯುತ್ತವೆ. ಕಳೆದ ಬಾರಿ ಕಾಂಗ್ರೆಸ್ ಸೋತಾತಗಲೂ ಇದೇ ರೀತಿಯಾಗಿತ್ತು. ಒಂದು ರಾಜಕೀಯ ಪಕ್ಷ ಒಂದು ಚುನಾವಣೆಗೆ ಸೀಮಿತವಲ್ಲ. ಮತ್ತೆ ಎಲ್ಲವನ್ನು ಒಗ್ಗೂಡಿಸುತ್ತೇವೆ. ಒಂದು ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶಿರಗೂರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button