ರಸ್ತೆಯ ಮೇಲೆ ಕೊಳಚೆ ನೀರು, ಅಧಿಕಾರಿಗಳ ನಿರ್ಲಕ್ಷ್ಯ, ಬೈರವಾಡಗಿ ಗ್ರಾಮಸ್ಥರು ಹೈರಾಣು.
ಬೈರವಾಡಗಿ ಮಾರ್ಚ್.30

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರವಾಡಗಿ ಗ್ರಾಮದ ಚಿದಾನಂದ ಹಡಪದ ಹಾಗೂ ಲಕ್ಕಪ್ಪ ನಡಗೆರಿ, ಭಜಂತ್ರಿಯವರ, ಮತ್ತು ಪಾನ ಪರೋಷ್ ಮನೆಗೆ ಹೋಗುವ ರಸ್ತೆಯ ಮೇಲೆ ಹರಿಯುವ ಚರಂಡಿ ನೀರು ಹಲವು ರೋಗ, ರುಜಿಗಳಿಗೆ ರಹದಾರಿಯಾಗಿದೆ. ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಮಕ್ಕಳು, ವೃದ್ಧರನ್ನು ಎತ್ತಿಕೊಂಡು ರಸ್ತೆ ದಾಟಿಸದಿದ್ದರೇ ಈ ಗಲೀಜು ಹೊಲಸು ನೀರಿನಲ್ಲಿ ಬಿದ್ದು ಗಾಯ ಮಾಡಿ ಕೊಳ್ಳುತ್ತಿದ್ದಾರೆ. ಮನೆಯ ಮುಂದೆ ನಿಲ್ಲುವುದಕ್ಕು ಆಗದೆ. ಇಂತಹ ಪರಿಸ್ಥಿತಿ ನಮಗೆ ಎದುರಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿ ನೀರು ರಸ್ತೆ ಮೇಲೆ ಸದಾ ಹರಿಯುತ್ತಿದೆ. ಚರಂಡಿ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರು ಬಳಸಿದ ನೀರು, ಬಚ್ಚಲು ನೀರು, ಕೊಚ್ಚೆ ನೀರಿನ ರೂಪತಾಳಿ ಮುಖ್ಯ ರಸ್ತೆ ಮೇಲೆ ನಿಂತು ಗಬ್ಬೆದ್ದು ನಾರುತ್ತಿದೆ. ರಸ್ತೆಯಲ್ಲಿ ಕೊಳಚೆ ನೀರು ಸದಾ ಹರಿಯುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ. ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗಿದೆಯಲ್ಲದೇ ಈ ರಸ್ತೆ ದಾಟಲು ಜನರು ಪರದಾಡುವ ಸ್ಥಿತಿ ಉಂಟಾಗಿದೆ.ಕೊಳಚೆ ನೀರಿನಿಂದ ರಸ್ತೆ ಮುಚ್ಚಿ ಹೋಗಿದೆ.ಇಷ್ಟೇಲ್ ಸಮಸ್ಯೆ ಇದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರುಗಳ, ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ, ಇದಕ್ಕೂ ತಮಗೂ ಯಾವುದೆ ರೀತಿಯ ಸಂಬಂಧವೇ ಇಲ್ಲ ವೆಂಬಂತೆ ಕುಂಭಕರ್ಣನ ನಿದ್ರೆಗೆ ಜಾರಿದ್ದಾರೆ.ಕನಿಷ್ಟ ರಸ್ತೆ ಮೇಲೆ ಹರಿಯುವ ನೀರನ್ನು ಬೇರೆ ಕಡೆ ಹೋಗಲು ವ್ಯವಸ್ಥೆ ಮಾಡದಷ್ಟು ಗ್ರಾಮ ಪಂಚಾಯಿತಿ ಆಡಳಿತ ಜಿಡ್ಡು ಗಟ್ಟಿದೆ. ಗ್ರಾಮದಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ಮಾಡಿ ತಮ್ಮ ಜೇಬು ತುಂಬಿ ಕೊಳ್ಳುವ ಕಾಯಕದಲ್ಲಿ ತೊಡಗಿದ್ದಾರೆ. ಅವರು ಐಸಾರಾಮಿ ಜೀವನ ನಡೆಸುತ್ತಿದ್ದಾರೆ. ಎಂದು ಕೆಲವು ಮಹಿಳೆಯರು ತಮ್ಮ ಕಠೋರವಾದ ಮಾತಿನ ಮೂಲಕ ಆಕ್ರೋಶ ಹೊರ ಹಾಕಿದರು.ಕೇರಿಯ ತುಂಬೆಲ್ಲಾ ದುರ್ನಾತ ಬೀರುವ ಅಸಮರ್ಪಕ ಗಟಾರಗಳು, ರಾತ್ರಿಯಾದರೆ ಸೊಳ್ಳೆ, ವಿಷ ಜಂತುಗಳ ಹಾವಳಿ.ಒಟ್ಟಾರೆ ಹೇಳ ಬೇಕೆಂದರೆ ಬೈರವಾಡಗಿ ಗ್ರಾಮವು ರೋಗ- ರುಜಿನಗಳ ತಾಣವಾಗಿದೆ. ಸೊಳ್ಳೆಗಳ ತವರು ಗ್ರಾಮವಾಗಿ ಮಾರ್ಪಟ್ಟಿದೆ. ದೇಶದಾದ್ಯಂತ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದರೆ, ಇಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಗ್ರಾಮ ಪಂಚಾಯಿತಿ ತುರ್ತಾಗಿ ಗಮನ ಹರಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನಾದರೂ ಇತ್ತ ಗಮನ ಹರಿಸಬಹುದೇ ಎಂದು ಕಾದು ನೋಡಬೇಕಿದೆ.
ವರದಿ:ಮಹಾಂತೇಶ.ಹಾದಿಮನಿ ವಿಜಯಪುರ.