ತಿಮರೋಡಿ ಬಂಧನಕ್ಕೆ ರಾಜ್ಯದಾದ್ಯಂತ ಆಕ್ರೋಶ, ಬೆಳ್ತಂಗಡಿ, ಕುಂದಾಪುರದಿಂದ ಬೆಂಬಲಿಗರ ದಂಡು – ಬ್ರಹ್ಮಾವರದಲ್ಲಿ ಬಿಗುವಿನ ಪರಿಸ್ಥಿತಿ.
ಉಡುಪಿ ಆ.22

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರ ದಿಢೀರ್ ಬಂಧನವು ರಾಜ್ಯದಾದ್ಯಂತ ಅವರ ಬೆಂಬಲಿಗರನ್ನು ಕೆರಳಿಸಿದ್ದು, ಬ್ರಹ್ಮಾವರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ತಿಮರೋಡಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಬೆಳ್ತಂಗಡಿ, ಬೈಂದೂರು ಮತ್ತು ಕುಂದಾಪುರ ದಂತಹ ದೂರದ ಪ್ರದೇಶಗಳಿಂದಲೂ ಸಾವಿರಾರು ಬೆಂಬಲಿಗರು ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ರಹ್ಮಾವರದಲ್ಲಿ ಪ್ರತಿಭಟನೆಗಳ ಸುರಿಮಳೆ:-
ತಿಮರೋಡಿ ಅವರ ಬಂಧನದ ಸುದ್ದಿ ಹರಡುತ್ತಿದ್ದಂತೆ, ಅವರ ಅಭಿಮಾನಿ ಬಳಗ ಮತ್ತು ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ಬಳಿ ಸೇರಿದರು. ‘ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜೈಕಾರ’ ಎಂದು ಘೋಷಣೆಗಳನ್ನು ಕೂಗಿದ ಅವರು, ತಮ್ಮ ನೆಚ್ಚಿನ ಹೋರಾಟಗಾರನ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಠಾಣೆಯ ಸುತ್ತಮುತ್ತ ಬಿಗಿ ಭದ್ರತೆ ನಿಯೋಜಿಸಿದ್ದರು. ಈ ಸಂದರ್ಭದಲ್ಲಿ, ಠಾಣೆಯೊಳಗೆ ವಕೀಲರಿಗೆ ಪ್ರವೇಶಕ್ಕೆ ಅವಕಾಶ ನೀಡದ ಕಾರಣ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಆಕ್ರೋಶ ಭರಿತ ಪ್ರತಿಭಟನಾಕಾರರು ಹೆಚ್ಚುವರಿ ಎಸ್.ಪಿ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಮಹೇಶ್ ಶೆಟ್ಟಿ ಜೈಲಿಗೆ,
ಮತ್ತೊಬ್ಬ ಆರೋಪಿಗೆ ನಿರೀಕ್ಷಣಾ ಜಾಮೀನು:-
ಬ್ರಹ್ಮಾವರ ನ್ಯಾಯಾಲಯವು ತಿಮರೋಡಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಅವರನ್ನು ಆಗಸ್ಟ್ 23 ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶಿಸಿದೆ. ಆದರೆ, ಇದೇ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿಯಾಗಿರುವ ಸಮೀರ್ ಎಂ.ಡಿ ಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿರುವುದು ಭಿನ್ನ ಅಭಿಪ್ರಾಯಗಳಿಗೆ ಕಾರಣವಾಗಿದೆ.
ಬೆಂಬಲಿಗರಿಂದ ಸರ್ಕಾರಕ್ಕೆ ಎಚ್ಚರಿಕೆ:-
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಂಬಲಿಗರು, “ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಿಡುಗಡೆ ಯಾಗದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗುವುದು ಖಚಿತ,” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ಪ್ರಕರಣಕ್ಕೆ ರಾಜಕೀಯ ಆಯಾಮವನ್ನು ಸೇರಿಸಿದೆ. ಬಂಧನಕ್ಕೂ ಮುನ್ನ ಮಹೇಶ್ ಶೆಟ್ಟಿ, “ನನ್ನ ಜೀವಕ್ಕೆ ಏನಾದರೂ ಹಾನಿಯಾದಲ್ಲಿ ಅದಕ್ಕೆ ರಾಜ್ಯ ಸರ್ಕಾರ ಮತ್ತು ಬಿಜೆಪಿ ಪಕ್ಷವೇ ಹೊಣೆ” ಎಂದು ಹೇಳಿಕೆ ನೀಡಿದ್ದು, ಇದು ಈಗಾಗಲೇ ಗಂಭೀರವಾಗಿರುವ ಪರಿಸ್ಥಿತಿಗೆ ಮತ್ತಷ್ಟು ಉದ್ವಿಗ್ನತೆಯನ್ನು ತಂದಿದೆ.
ಪ್ರಸ್ತುತ, ಬ್ರಹ್ಮಾವರದಲ್ಲಿ ಬಿಗಿ ಭದ್ರತೆ ಮತ್ತು ನಿಷೇಧಾಜ್ಞೆ ಜಾರಿಯಲ್ಲಿದ್ದು, ಮುಂದಿನ ನ್ಯಾಯಾಲಯದ ಆದೇಶಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ವರದಿ: ಆರತಿ ಗಿಳಿಯಾರು ಉಡುಪಿ