ಸಾಹಿತ್ಯಿಕ, ಸಾಮಾಜಿಕ ಸೇವೆ ಸಮಾಜಕ್ಕೆ ಪ್ರೇರಣೆ – ಎಂ.ಎಲ್.ಸಿ ಹಣಮಂತ ನಿರಾಣಿ.
ತಾಳಿಕೋಟಿ ಆ.28


ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿ ಕೊಂಡಿರುವ ವ್ಯಕ್ತಿಗಳು ಸಮಾಜದ ಆಸ್ತಿ. ಅವರ ಸೇವೆ ಹಾಗೂ ಸಾಧನೆಗಳು ಯುವ ಜನತೆಗೆ ಪ್ರೇರಣೆಯಾಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆರ್.ಎಲ್. ಕೊಪ್ಪದ ಅವರ ನೂತನ ಗೃಹಪ್ರವೇಶ ಸಮಾರಂಭಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಶುಭ ಹಾರೈಸಿ ಅವರು ಮಾತನಾಡಿದರು.
ಕೊಪ್ಪದ ಅವರ ಕನ್ನಡ ಭಾಷಾಭಿಮಾನ, ಸಾಹಿತ್ಯಿಕ ಚಟುವಟಿಕೆಗಳು ಹಾಗೂ ಸಮಾಜ ಮುಖಿ ಕಾರ್ಯಗಳನ್ನು ಪ್ರಶಂಸಿಸಿದ ನಿರಾಣಿ, ನೂತನ ಮನೆಯ ಪ್ರವೇಶದೊಂದಿಗೆ ಕುಟುಂಬದಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು. ಬಳಿಕ ನೂತನ ಗೃಹವನ್ನು ವೀಕ್ಷಿಸಿ ಕುಟುಂಬದವರ ಆತಿಥ್ಯ ಸ್ವೀಕರಿಸಿದರು.
ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸಾಹಿತಿಗಳು, ಶಿಕ್ಷಕರು, ಹಣಮಂತ ನಿರಾಣಿ ಅವರ ಅಭಿಮಾನಿ ಬಳಗದ ಪ್ರಮುಖರು, ಕೊಪ್ಪದ ಕುಟುಂಬಸ್ಥರು, ಊರಿನ ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
