ಜ್ಞಾನ ವಿಕಾಸಕ್ಕಾಗಿ ಸಾಹಿತ್ಯದ ಒಲವು ಅತ್ಯಗತ್ಯ – ಡಾ, ವೃಷಭೇಂದ್ರ ಚಾರ್ ಕರೆ ನೀಡಿದರು.
ಕಾನಾಮಡುಗು ಆ.27


ಕನ್ನಡ ಸಾಹಿತ್ಯದ ಕಂಪು ಮನೆ ಮನೆ ತಲುಪಬೇಕು, ಮನೆ ಮನಗಳನ್ನು ಬೆಳಗಬೇಕು, ಕನ್ನಡ ಅಭಿಮಾನ ಸದಾ ಜಾಗೃತವಾಗಿರಬೇಕು ಎಂದು ಹಿರಿಯ ಸಾಹಿತಿ ಡಾ. ಎ. ವೃಷಭೇಂದ್ರ ಚಾರ್ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೊಸಹಳ್ಳಿ ಹೋಬಳಿ ಘಟಕದ ವತಿಯಿಂದ ಸೋಮವಾರ ಕಾನಹೊಸಹಳ್ಳಿ ಸಮೀಪದ ಕಾನಮಡುಗಿನ ಶ್ರೀ ಶರಣಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿ ಕೊಳ್ಳಲು ಜ್ಞಾನ ವಿಕಾಸಕ್ಕಾಗಿ ಸಾಹಿತ್ಯದ ಒಲವು ಅತ್ಯಗತ್ಯ ಎಂದರು.
ಪ್ರಾಸ್ತಾವಿಕ ನುಡಿಯನ್ನು ನುಡಿದ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹೊಸಹಳ್ಳಿಯ ಅಧ್ಯಕ್ಷರಾದ ಶ್ರೀ ಎಸ್. ತಿಪ್ಪೇಸ್ವಾಮಿಯವರು ಕನ್ನಡ ನೆಲ ಸಾಹಿತ್ಯ ಸಂಸ್ಕೃತಿಯ ಏಳಿಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ವಿವರಿಸಿದರು.
ದಿವಂಗತ ಶ್ರೀಮತಿ ಹೂಲೆಮ್ಮ ಮತ್ತು ನೀಲಕಂಠಾಚಾರ್ಯ ದತ್ತಿ ಅಂಗವಾಗಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ವಿಷಯವಾಗಿ ಹಿರಿಯ ಸಾಹಿತಿ ಎಂ.ಬಿ. ಅಯ್ಯನಹಳ್ಳಿ ಎನ್.ಎಂ. ರವಿಕುಮಾರ್ ಅವರು ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ ಮತ್ತು ಅಪಾರ. ವಿಶ್ವಕರ್ಮ ಇಲ್ಲದ ಸಮಾಜವನ್ನು ಊಹಿಸಲು ಅಸಾಧ್ಯ, ಲಲಿತಕಲೆಗಳಲ್ಲೆಲ್ಲ ಅವರು ಸಿದ್ಧಹಸ್ತರು ಎಂದು ಹೇಳಿದರು.

ದಿವಂಗತ ಶ್ರೀಮತಿ ವೆಂಕಮ್ಮ ಮತ್ತು ಹೆಚ್.ಕೆ. ರಾಮರಾವ್ ದತ್ತಿ ಅಂಗವಾಗಿ ಶ್ರೀ ಕುಮಾರವ್ಯಾಸ ವಿಷಯವಾಗಿ ಡಾ. ಎ. ಕರಿಬಸಪ್ಪ ಮಾತನಾಡಿ, ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಿಗೆ ಕಟ್ಟುವುದು ಎಂಬ ಕುವೆಂಪು ಅವರ ನುಡಿಯಂತೆ ಕುಮಾರವ್ಯಾಸ ಕನ್ನಡದ ಅಪ್ರತಿಮ ಮೇರುಕವಿ. ಭಾಮಿನಿ ಷಟ್ಪದಿಯಲ್ಲಿ ಕರ್ನಾಟ ಭಾರತ ಕಥಾಮಂಜರಿ ರಚಿಸಿ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.
ಮುಖ್ಯ ಅತಿಥಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಪರಿಷತ್ತಿನ ಆಜೀವ ಸದಸ್ಯರಾಗಿ ಪರಿಷತ್ತನ್ನು ಬಲ ಗೊಳಿಸಬೇಕು ಎಂದರು.
ತಾಲೂಕು ಘಟಕದ ಗೌರವ ಕಾರ್ಯದರ್ಶಿ ಶಾಮಸುಂದರ ಸಫಾರೆ ಮಾತನಾಡಿ, ಮೊಬೈಲ್ ಗೀಳು ತೊರೆದು ಮಕ್ಕಳು ಕನ್ನಡ ಸಾಹಿತ್ಯ ಕೃತಿಗಳನ್ನು ಓದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸುಭಾಷ್ ಚಂದ್ರ ಮಾತನಾಡಿ, ಕನ್ನಡ ಭಾಷೆ ಸಂಪತ್ ಭರಿತವಾಗಿದ್ದು ಸತತ ಅಧ್ಯಯನಶೀಲತೆಯಿಂದ ಭವಿಷ್ಯದ ಕವಿ ಸಾಹಿತಿಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಶಂಕರಪ್ಪ, ಉಪನ್ಯಾಸಕ ಆನಂದ್, ಜಾನಪದ ಕಲಾವಿದ ಹೆಚ್.ಜಿ. ಶರಣನಗೌಡ್ರು ಉಪಸ್ಥಿತರಿದ್ದರು. ಪ್ರಶಿಕ್ಷಕ ಕಾಶಿನಾಥ್ ಸ್ವಾಗತಿಸಿದರು, ಭದ್ರಪ್ಪ ನಿರೂಪಿಸಿದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
