ಬೀದಿ ಬದಿ ಆಹಾರ ಮಳಿಗೆಗಳಲ್ಲಿ ಸ್ವಚ್ಛತೆ ಕಾಪಾಡುವ ಕಟ್ಟುನಿಟ್ಟಿನ ಕ್ರಮಕ್ಕೆ – ಕನ್ನಡ ಸೇನೆ ಕರ್ನಾಟಕ ಘಟಕದಿಂದ ತೀವ್ರ ಆಗ್ರಹ.
ಮಾನ್ವಿ ಅ.01


ತಾಲೂಕಿನ ಸಣ್ಣ ಹೋಟೆಲ್‌ಗಳು, ಬಂಡಿಗಳು, ಟೀ-ಸ್ಟಾಲ್‌ಗಳು, ಬೇಕರಿಗಳು, ಪಾನಿ ಪೂರಿ ಬಂಡಿಗಳು ಹಾಗೂ ಬೀದಿ ಬದಿ ಆಹಾರ ವ್ಯಾಪಾರ ಮಳಿಗೆಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು ಎಂದು ತಾಲೂಕ ಕನ್ನಡ ಸೇನೆ ಕರ್ನಾಟಕ ಘಟಕ ಆಗ್ರಹಿಸಿದೆ.
ಈ ಕುರಿತು ತಹಸೀಲ್ ಕಾರ್ಯಾಲಯದಲ್ಲಿ ಗ್ರೇಡ್–2 ತಹಸೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕ ಕನ್ನಡ ಸೇನೆ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ, ಮಾನ್ವಿ ತಾಲೂಕು ಹಾಗೂ ತಾಲೂಕಿನ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹೋಟೆಲ್‌ಗಳು, ಆಹಾರ ಬಂಡಿಗಳು, ಟೀ-ಸ್ಟಾಲ್‌ಗಳು, ಬೇಕರಿಗಳು, ಪಾನಿಪೂರಿ ಬಂಡಿಗಳು ಹಾಗೂ ಬೀದಿ ಬದಿ ಆಹಾರ ವ್ಯಾಪಾರಿಗಳ ಅಂಗಡಿಗಳಿಗೆ ಸಂಬಂಧಿಸಿದ ಆಹಾರ ಇಲಾಖೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಆಹಾರ ತಯಾರಿಕೆಯಲ್ಲಿ ಅಶುದ್ಧ ನೀರು ಬಳಸದಂತೆ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆಹಾರ ತಯಾರಿಕೆಗೆ ಬಳಸುವ ನೀರಿನ ಶೇಖರಣಾ ತೊಟ್ಟಿಗಳನ್ನು ಪ್ರತಿದಿನ ಸ್ವಚ್ಛವಾಗಿ ತೊಳೆದು ಶುದ್ಧ ನೀರನ್ನು ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅದೇ ರೀತಿ ತಿಂಡಿ-ತಿನಿಸು ತಯಾರಿಕೆಯಲ್ಲಿ ಬಳಸುವ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡದೆ, ಗುಣಮಟ್ಟದ ಶುದ್ಧ ಎಣ್ಣೆಯನ್ನು ಬಳಸುವಂತೆ ಸೂಚಿಸಬೇಕು.
ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಗುಣಮಟ್ಟದ ಹಿಟ್ಟು ಹಾಗೂ ಅಗತ್ಯ ಪದಾರ್ಥಗಳನ್ನು ಮಾತ್ರ ಬಳಸುವಂತೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.ಗ್ರಾಹಕರಿಗೆ ಆಹಾರ ನೀಡುವ ಸಂದರ್ಭದಲ್ಲಿ ಥರ್ಮಕೋಲ್ ಪ್ಲೇಟ್‌ಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ನಿಯಂತ್ರಿಸಬೇಕು.
ಇಡ್ಲಿ ಸೇರಿದಂತೆ ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಪೇಪರ್ ಬಳಸದೆ ಸ್ವಚ್ಛವಾದ ಬಟ್ಟೆ ಅಥವಾ ಸುರಕ್ಷಿತ ಪರ್ಯಾಯಗಳನ್ನು ಬಳಸುವಂತೆ ವ್ಯಾಪಾರಿಗಳಿಗೆ ಸೂಚಿಸಬೇಕು. ಹಾಳಾದ ಅಥವಾ ಕೊಳೆತ ಹಣ್ಣು-ತರಕಾರಿಗಳನ್ನು ಆಹಾರ ತಯಾರಿಕೆಗೆ ಬಳಸುವುದನ್ನು ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಯುತ್ತಿದ್ದರೂ ಕೆಲವು ಕಡೆ ಪಾರ್ಸಲ್ ತಿಂಡಿ-ತಿನಿಸುಗಳನ್ನು ನೀಡುವಾಗ ಪ್ಲಾಸ್ಟಿಕ್ ಪೇಪರ್‌ಗಳನ್ನು ಬಳಸಲಾಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಟೀ-ಸ್ಟಾಲ್‌ಗಳಲ್ಲಿ ಗುಣಮಟ್ಟದ ಚಹಾಪುಡಿ ಬಳಸುವಂತೆ ಸೂಚಿಸಬೇಕು. ಪ್ಲಾಸ್ಟಿಕ್ ಕಪ್‌ಗಳ ಬಳಕೆಯನ್ನು ಕಡಿಮೆ ಮಾಡಿ ಪಿಂಗಾಣಿ, ಸ್ಟೀಲ್ ಅಥವಾ ಗಾಜಿನ ಗ್ಲಾಸ್‌ಗಳನ್ನು ಬಳಸುವಂತೆ ವ್ಯಾಪಾರಿಗಳಿಗೆ ತಿಳಿವಳಿಕೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಂಗಡಿಗಳು ಹಾಗೂ ಬಂಡಿಗಳ ಮುಂದೆ ಬಾಯಿ ತೊಳೆದ ನೀರು ಮತ್ತು ತ್ಯಾಜ್ಯ ನೀರು ನಿಂತು ಕೊಳಚೆ ಉಂಟಾಗ ದಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಆಹಾರ ಮಳಿಗೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವಂತೆ ವ್ಯಾಪಾರಿಗಳಿಗೆ ಸೂಚಿಸಿ, ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಇದರ ಜೊತೆಗೆ ತಾಲೂಕಿನ ಎಲ್ಲಾ ಹೋಟೆಲ್‌ಗಳು, ಅಂಗಡಿಗಳು ಹಾಗೂ ಬೀದಿ ಬದಿ ಆಹಾರ ವ್ಯಾಪಾರಿಗಳು ಪುರಸಭೆ ಅಥವಾ ಗ್ರಾಮ ಪಂಚಾಯಿತಿಯಿಂದ ಅಗತ್ಯ ಪರವಾನಗಿ ಪಡೆದಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸ ಬೇಕು.
ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿರುವವರನ್ನು ಗುರುತಿಸಿ ನಿಯಮಾನುಸಾರ ದಂಡ ವಿಧಿಸಬೇಕು. ಪ್ರತಿಯೊಬ್ಬ ವ್ಯಾಪಾರಿಯ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ಪಡೆದು ಕಡ್ಡಾಯವಾಗಿ ವ್ಯಾಪಾರ ನೋಂದಣಿ ಮಾಡಿ ಕೊಳ್ಳುವಂತೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಶುದ್ಧ ನೀರು, ಕಲುಷಿತ ಆಹಾರ ಪದಾರ್ಥಗಳು ಹಾಗೂ ಅಸುರಕ್ಷಿತ ಪ್ಲಾಸ್ಟಿಕ್ ಮತ್ತು ಥರ್ಮಕೋಲ್ ಬಳಕೆಯಿಂದ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಆಹಾರ ಇಲಾಖೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ನಿಯಮಿತ ತಪಾಸಣೆ ನಡೆಸಬೇಕು.
ಸಾರ್ವಜನಿಕರಿಗೆ ಶುದ್ಧ, ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಮತ್ತು ಕುಡಿಯುವ ನೀರು ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಕನ್ನಡ ಸೇನೆ ಕರ್ನಾಟಕ ಘಟಕ ಒತ್ತಾಯಿಸಿದೆ.
ಜನರ ಆರೋಗ್ಯದ ಹಿತದೃಷ್ಟಿ ಯಿಂದ ಮನವಿಯಲ್ಲಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರೇಡ್–2 ತಹಸೀಲ್ದಾರ್ ಅಬ್ದುಲ್ ವಾಹಿದ್ ಅವರನ್ನು ಮನವಿ ಮೂಲಕ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ ಬಸವರಾಜ ಮೈಲಾರಿ, ದೊಡ್ಡಪ್ಪ ಹೂಗಾರ, ನಗರ ಘಟಕದ ಅಧ್ಯಕ್ಷ ಶೇಖ್ ಮುಸ್ತಫಾ, ಸುದರ್ಶನ್ ಪೂಜಾರಿ, ಶಬ್ಬೀರ್, ರಾಜ್ ಮಹಮ್ಮದ್, ಮಹಮ್ಮದ್ ಅಜಿರುದ್ದೀನ್, ಭೀಮೇಶ ನಾಯಕ, ಪ್ರಭು, ವೀರೇಶ್ ನಾಯಕ, ಕೃಷ್ಣ ನಾಯಕ, ಹನುಮಂತ ನಾಯಕ, ಸಿದ್ದಪ್ಪ ನಾಯಕ, ಚನ್ನಬಸವ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

