ಗ್ರಂಥಾಲಯದಲ್ಲಿ ಮೂಲ ಸೌಕರ್ಯ ಕೊರತೆ ಓದಲು ಬರುವ – ವಿದ್ಯಾರ್ಥಿಗಳಿಗೆ ಪರದಾಟ ಕ್ರಮಕ್ಕೆ ಆಗ್ರಹ.
ಪೊತ್ನಾಳ ಸೆ.29


ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಅಧ್ಯಯನಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಗ್ರಾಮದ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಯುವಜನರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಗ್ರಂಥಾಲಯವನ್ನು ಬಳಸಲಾಗುತ್ತಿದೆ. ಪ್ರತಿನಿತ್ಯ ಸುತ್ತಮುತ್ತಲಿನ ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಓದುತ್ತಿದ್ದಾರೆ. ಆದರೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ನಿರೀಕ್ಷಿತ ವಾತಾವರಣ ದೊರೆಯುತ್ತಿಲ್ಲ.
ಗ್ರಂಥಾಲಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ. ದೂರದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಗಂಟೆಗಟ್ಟಲೆ ಗ್ರಂಥಾಲಯದಲ್ಲಿ ಕುಳಿತು ಓದುತ್ತಿರುವ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ರಂಥಾಲಯದ ಕಿಟಕಿಗಳು ಸರಿಯಾದ ಸ್ಥಿತಿಯಲ್ಲಿಲ್ಲ. ವಿದ್ಯುತ್ ಸಂಪರ್ಕವಿದ್ದರೂ ಗ್ರಂಥಾಲಯ ದಲ್ಲಿರುವ ಫ್ಯಾನ್ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಬಿಸಿಲಿನ ವಾತಾವರಣದಲ್ಲಿಯೂ ವಿದ್ಯಾರ್ಥಿಗಳು ಕುಳಿತು ಓದುವಂತಾಗಿದೆ. ಶಾಖದ ನಡುವೆಯೇ ಓದಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ.
ಗ್ರಂಥಾಲಯದಲ್ಲಿರುವ ಕಂಪ್ಯೂಟರ್ಗಳ ಸ್ಥಿತಿಯೂ ಶೋಚನೀಯವಾಗಿದೆ. ಕಂಪ್ಯೂಟರ್ಗಳು ಕಾರ್ಯನಿರ್ವಹಿಸದೆ ಧೂಳು ಹಿಡಿದಿದ್ದು, ವಿದ್ಯಾರ್ಥಿಗಳ ಬಳಕೆಗೆ ಸಿಗುತ್ತಿಲ್ಲ. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆನ್ಲೈನ್ ಅಧ್ಯಯನ, ಅರ್ಜಿ ಸಲ್ಲಿಕೆ, ಮಾಹಿತಿ ಸಂಗ್ರಹ ಸೇರಿದಂತೆ ಹಲವು ಕೆಲಸಗಳಿಗೆ ಕಂಪ್ಯೂಟರ್ ಅಗತ್ಯವಿದೆ. ಆದರೆ ಗ್ರಂಥಾಲಯದಲ್ಲಿರುವ ಕಂಪ್ಯೂಟರ್ಗಳು ಬಳಕೆಗೆ ಬಾರದಿರುವುದರಿಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಗ್ರಂಥಾಲಯದಲ್ಲಿ ಸಿ.ಸಿ ಕ್ಯಾಮೆರಾ ವ್ಯವಸ್ಥೆಯೂ ಇಲ್ಲ. ಪ್ರತಿನಿತ್ಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡುವ ಸ್ಥಳವಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸುವ ಅಗತ್ಯವಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಗ್ರಂಥಾಲಯಗಳು ಪ್ರಮುಖ ಆಧಾರವಾಗಿವೆ. ಪುಸ್ತಕಗಳು, ಪತ್ರಿಕೆಗಳು, ಅಧ್ಯಯನಕ್ಕೆ ಸೂಕ್ತ ವಾತಾವರಣ ಹಾಗೂ ಡಿಜಿಟಲ್ ಸೌಲಭ್ಯಗಳು ದೊರೆತರೆ ಗ್ರಾಮೀಣ ವಿದ್ಯಾರ್ಥಿಗಳಿಗೂ ಉತ್ತಮ ಅವಕಾಶ ಸಿಗಲಿದೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಗ್ರಂಥಾಲಯದ ಉದ್ದೇಶವೇ ಕುಂಠಿತವಾಗುತ್ತಿದೆ.

ಗ್ರಂಥಾಲಯಕ್ಕೆ ಕುಡಿಯುವ ನೀರು, ಫ್ಯಾನ್ಗಳ ದುರಸ್ತಿ, ಕಿಟಕಿಗಳ ದುರಸ್ತಿ, ಕಂಪ್ಯೂಟರ್ಗಳ ದುರಸ್ತಿ ಅಥವಾ ಹೊಸ ಕಂಪ್ಯೂಟರ್ಗಳ ವ್ಯವಸ್ಥೆ, ಸಿಸಿ ಕ್ಯಾಮೆರಾ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ತಕ್ಷಣ ಕಲ್ಪಿಸಬೇಕು. ವಿದ್ಯಾರ್ಥಿಗಳು ಶಾಂತಿಯುತವಾಗಿ ಹಾಗೂ ಸುರಕ್ಷಿತ ವಾತಾವರಣದಲ್ಲಿ ಅಧ್ಯಯನ ನಡೆಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಆಗ್ರಹವಾಗಿದೆ.
ಈ ಬಗ್ಗೆ ಸ್ಥಳೀಯ ನಿವಾಸಿ ಎ.ಶರಣಕುಮಾರ ಮುದ್ದಮಗುಡ್ಡಿ ಮಾತನಾಡಿ, ಕರ್ನಾಟಕ ಸರ್ಕಾರ ಈಗಾಗಲೇ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲೂ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಪೊತ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಪರ್ಧಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅಗತ್ಯವಿರುವ ದಿನಪತ್ರಿಕೆ, ಮಾಸ ಪತ್ರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಲಭ್ಯವಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಯುವಕರು ಅಗತ್ಯ ಅಧ್ಯಯನ ಸಾಮಗ್ರಿಗಳಿಗಾಗಿ ಬೇರೆಡೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಂಥಾಲಯದಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅಧ್ಯಯನ ಸಾಮಗ್ರಿಗಳ ಸಮಸ್ಯೆ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಈ ವರೆಗೆ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸದೆ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯದಲ್ಲಿ ಅಗತ್ಯ ಪುಸ್ತಕಗಳು, ದಿನ ಪತ್ರಿಕೆ, ಮಾಸ ಪತ್ರಿಕೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕೂಡಲೇ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗ ಬೇಕಾದ ಗ್ರಂಥಾಲಯವೇ ಸೌಲಭ್ಯಗಳ ಕೊರತೆ ಯಿಂದ ಬಳಲುತ್ತಿರುವುದು ವ್ಯವಸ್ಥೆಯತ್ತ ಪ್ರಶ್ನೆ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗ್ರಂಥಾಲಯವನ್ನು ವಿದ್ಯಾರ್ಥಿಗಳ ಬಳಕೆಗೆ ಸಂಪೂರ್ಣವಾಗಿ ಸಜ್ಜು ಗೊಳಿಸಬೇಕು.
ಮಾನ್ವಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಖಾಲಿದ್ ಅಹ್ಮದ ಅವರಿಗೆ ಕರೆ ಮೂಲಕ ಶರಣು ಮುದ್ದಮಗುಡ್ಡಿ ಅವರು ಸಂಪರ್ಕಿಸಿ ಮಾತನಾಡಿ, ಗ್ರಂಥಾಲಯದಲ್ಲಿರುವ ಕುಡಿಯುವ ನೀರು, ಫ್ಯಾನ್ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

