ರೈತರ ಹಿತಕ್ಕಾಗಿ ಪ್ರಾಮಾಣಿಕ ಹೋರಾಟ ಅಗತ್ಯ – ಶಶಿಕಾಂತ್ ಗುರೂಜಿ.
ದೇವಣಗಾಂವ ನ.14




ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವ ಅಧ್ಯಕ್ಷರಾದ ಶಶಿಕಾಂತ್ ಗುರೂಜಿ ಅವರಿಗೆ ಸಿಂದಗಿ ತಾಲೂಕು ರೈತ ಸೇನೆಯ ಅಧ್ಯಕ್ಷರಾದ ಪ್ರಶಾಂತ್ ಭೂಸನೂರು ಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಹಾಗೂ ಭವ್ಯ ಸನ್ಮಾನ ಕಾರ್ಯಕ್ರಮ ನಡೆಯಿತು.
ಗ್ರಾಮಕ್ಕೆ ಆಗಮಿಸಿದ ಶಶಿಕಾಂತ್ ಗುರೂಜಿ ಅವರನ್ನು ಡೊಳ್ಳು-ತಮಟೆಗಳೊಂದಿಗೆ ಮೆರವಣಿಗೆ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತ ಸಂಘಟನೆಯ ಒಗ್ಗಟ್ಟನ್ನು ಪ್ರದರ್ಶಿಸಿದರು. ನಂತರ ಗುರೂಜಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಶಶಿಕಾಂತ್ ಗುರೂಜಿ, “ಹೋರಾಟಗಾರರಲ್ಲಿ ಪ್ರಾಮಾಣಿಕತೆ, ಬದ್ಧತೆ ಮತ್ತು ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮಾತ್ರ ಹೋರಾಟಗಳು ಯಶಸ್ವಿಯಾಗಲು ಸಾಧ್ಯ. ಅದಕ್ಕೆ ಗುರ್ಲಾಪುರ ಹೋರಾಟವೇ ಸಾಕ್ಷಿಯಾಗಿದೆ” ಎಂದು ಹೇಳಿದರು.
ಶುಕ್ರವಾರ ಕಲಬುರಗಿ ಜಿಲ್ಲೆಯ ಚೌಡಾಪುರ ಸಮೀಪ ನಡೆಯುತ್ತಿರುವ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗಮಧ್ಯೆ ದೇವಣಗಾಂವ ಗ್ರಾಮದಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಬ್ಬಿಗೆ ಒಂದೇ ರೀತಿಯ ನ್ಯಾಯಯುತ ದರ ನಿಗದಿಪಡಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಪಡಿಸಿರುವ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೂ ಸಮಾನ ನ್ಯಾಯ ದೊರೆಯಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು. ಇದೀಗ ಬೆಳಗಾವಿ ಮತ್ತು ಬಾಗಲಕೋಟೆ ಭಾಗದ ಕೆಲವು ಸಕ್ಕರೆ ಕಾರ್ಖಾನೆಗಳು ಸ್ವಯಂಪ್ರೇರಿತವಾಗಿ ಪ್ರತಿ ಟನ್‌ಗೆ ₹3,800 ದರ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಕಾರ್ಖಾನೆಗಳೂ ₹3,800 ದರ ಘೋಷಿಸಿ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ನ್ಯಾಯಯುತ ದರ ನಿಗದಿಪಡಿಸಲು ಹಿಂದೇಟು ಹಾಕಿದರೆ, ಗುರ್ಲಾಪುರ ಮಾದರಿಯಲ್ಲಿ ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಬೃಹತ್ ಹೋರಾಟ ನಡೆಸಲಾಗುವುದು. ಈ ಹೋರಾಟಕ್ಕೆ ಕರ್ನಾಟಕ ರಾಜ್ಯದಾದ್ಯಂತ ರೈತ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯಯುತ ಕಬ್ಬಿನ ದರ ಕೊಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಧ್ವನಿಯಾಗಿ ಪ್ರಶಾಂತ್ ಭೂಸನೂರು:-
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಿಂದಗಿ ತಾಲೂಕು ರೈತ ಸೇನೆಯ ಅಧ್ಯಕ್ಷರಾದ ಪ್ರಶಾಂತ್ ಭೂಸನೂರು ಅವರು ರೈತರ ಸಮಸ್ಯೆಗಳನ್ನು ಸಂಘಟಿತವಾಗಿ ಮುನ್ನೆಲೆಗೆ ತರುವಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ರಾಜ್ಯದ ರೈತರಿಗೆ ಒಂದೇ ರೀತಿಯ ಕಬ್ಬಿನ ದರ ದೊರೆಯಬೇಕು, ರೈತರ ಬೆವರಿನ ದುಡಿಮೆಗೆ ತಕ್ಕ ಬೆಲೆ ಸಿಗಬೇಕು ಹಾಗೂ ಸಕ್ಕರೆ ಕಾರ್ಖಾನೆಗಳು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂಬ ವಿಚಾರಗಳನ್ನು ಪ್ರಸ್ತಾಪಿಸಿದರು.
ದೇವಣಗಾಂವ ಗ್ರಾಮದಲ್ಲಿ ರಾಜ್ಯಮಟ್ಟದ ರೈತ ಮುಖಂಡರಿಗೆ ಅದ್ದೂರಿ ಸ್ವಾಗತ ನೀಡಿ, ಸುತ್ತಮುತ್ತಲಿನ ಹಳ್ಳಿಗಳ ರೈತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಪ್ರಶಾಂತ್ ಭೂಸನೂರು ಅವರ ಸಂಘಟನಾ ಶಕ್ತಿ ಮತ್ತು ರೈತಪರ ಕಾಳಜಿ ಈ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.
ರೈತರ ಸಮಸ್ಯೆಗಳನ್ನು ಕೇವಲ ಮಾತನಾಡುವುದಕ್ಕೆ ಸೀಮಿತ ಗೊಳಿಸದೆ, ರೈತರನ್ನು ಒಗ್ಗೂಡಿಸಿ ಅವರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಮನೋಭಾವ ಪ್ರತಿಯೊಬ್ಬ ರೈತ ಮುಖಂಡನಲ್ಲಿರಬೇಕು ಎಂಬ ಸಂದೇಶವನ್ನು ಅವರು ತಮ್ಮ ಕಾರ್ಯದ ಮೂಲಕ ಸಾರಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನೀತಿನ ಮ್ಯಾಕೇರಿ ಹಾಗೂ ಸಿಂದಗಿ ತಾಲೂಕು ಅಧ್ಯಕ್ಷರಾದ ಪ್ರಶಾಂತ್ ಭೂಸನೂರು ಅವರು ಕಬ್ಬಿನ ದರ, ಸಕ್ಕರೆ ಕಾರ್ಖಾನೆಗಳ ಧೋರಣೆ ಮತ್ತು ರೈತರ ಹಕ್ಕುಗಳ ಕುರಿತು ಮಾತನಾಡಿದರು.
ಇವರ ಮಾತುಗಳು ರೈತರಲ್ಲಿ ಹೊಸ ಭರವಸೆ ಮತ್ತು ಹೋರಾಟದ ಉತ್ಸಾಹ ಮೂಡಿಸಿದವು. ರೈತರು ಕೂಡ ಮುಖಂಡರ ವಿಚಾರಗಳಿಗೆ ಸಂತಸ ವ್ಯಕ್ತಪಡಿಸಿ, ರೈತರ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಒಗ್ಗಟ್ಟಿನಿಂದ ಹೋರಾಟಕ್ಕೆ ಸಿದ್ಧರಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ದೇವಣಗಾಂವ ಗ್ರಾಮದಲ್ಲಿ ನಡೆದ ಈ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮವು ರೈತರ ಒಗ್ಗಟ್ಟು, ಸಂಘಟನಾ ಶಕ್ತಿ ಹಾಗೂ ನ್ಯಾಯಯುತ ಕಬ್ಬಿನ ದರಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ ಕಾರ್ಯಕ್ರಮವಾಗಿ ಗಮನ ಸೆಳೆಯಿತು. ರೈತರ ಹಿತಕ್ಕಾಗಿ ಪ್ರಶಾಂತ್ ಭೂಸನೂರು ಅವರಂತಹ ಯುವ ರೈತ ಮುಖಂಡರು ಇನ್ನಷ್ಟು ಸಕ್ರಿಯವಾಗಿ ಮುಂದಾಳತ್ವ ವಹಿಸಬೇಕು ಎಂಬ ಆಶಯವನ್ನು ಗ್ರಾಮಸ್ಥರು ಹಾಗೂ ರೈತರು ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
