ನಾಲ್ಕು ಇನ್ನಿಂಗ್ಸ್ , ಹಲವು ದಾಖಲೆ ಮತ್ತು ವಿಶ್ವ ದಾಖಲೆಗಳನ್ನು ಬರೆದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ…..!

ತಿರುವನಂತಪುರ, (ಜನವರಿ.15) :

ಶ್ರೀಲಂಕಾ ವಿರುದ್ಧ ರವಿವಾರ ನಡೆದ ಗ್ರೀನ್ ಫೀಲ್ಡ್ ಸ್ಟೇಡಿಯಂ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ ತನ್ನ 46ನೇ ಶತಕ ಸಿಡಿಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಅವರ ದೀರ್ಘಕಾಲದ ದಾಖಲೆಯನ್ನು ಅಷ್ಟೆ ಮುರಿದಿಲ್ಲ ಒಟ್ಟು ನಾಲ್ಕು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

110 ಎಸೆತಗಳಲ್ಲಿ ಔಟಾಗದೆ 166 ರನ್ ಕಲೆ ಹಾಕಿದ ಟೀಮ್ ಇಂಡಿಯಾದ ಮಾಜಿ ನಾಯಕ ಸ್ಟಾರ್ ಆಟಗಾರ ಕೊಹ್ಲಿ ತವರಿನಲ್ಲಿ ಅತ್ಯಂತ ಹೆಚ್ಚು ಏಕದಿನ ಶತಕ ಸಿಡಿಸಿದ ವಿಶ್ವ ದಾಖಲೆ ಬರೆದಿದ್ದಾರೆ.

  • ದಾಖಲೆ 01 : ತವರು ನೆಲದಲ್ಲಿ ಹೆಚ್ಚು ಶತಕ ಗಳಿಸಿದ ವಿಶ್ವದ ಏಕೈಕ ಬ್ಯಾಟರ್.

ಕೊಹ್ಲಿ ಭಾರತದಲ್ಲಿ 21ನೇ ಶತಕ ಸಿಡಿಸಿದರು. ಸಚಿನ್ ತೆಂಡುಲ್ಕರ್ ಅವರ ದೀರ್ಘಕಾಲದ ದಾಖಲೆಯನ್ನು (20 ಶತಕ) ಮುರಿದರು. ಇದೀಗ ಅವರು ತವರು ನೆಲದಲ್ಲಿ ಹೆಚ್ಚು ಶತಕ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

  • ದಾಖಲೆ 2 : ಒಂದೇ ಎದುರಾಳಿಯ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ.

ಇದೇ ವೇಳೆ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧ 10ನೇ ಶತಕ ಸಿಡಿಸಿದರು. ಈ ಮೂಲಕ ತೆಂಡುಲ್ಕರ್‌ರ ಮತ್ತೊಂದು ದಾಖಲೆಯನ್ನು ಮುರಿದರು. ಮಾತ್ರವಲ್ಲ ತನ್ನದೇ ದಾಖಲೆ(ವೆಸ್ಟ್ಇಂಡೀಸ್ ವಿರುದ್ಧ 9 ಶತಕ)ಯನ್ನು ಉತ್ತಮಪಡಿಸಿಕೊಂಡರು. ತೆಂಡುಲ್ಕರ್ ಅವರು ಆಸ್ಟ್ರೇಲಿಯ ವಿರುದ್ಧ 9 ಶತಕಗಳನ್ನು ಗಳಿಸಿದ್ದರು. ಕೊಹ್ಲಿ ಒಂದೇ ಎದುರಾಳಿಯ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ 10 ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು.

  • ದಾಖಲೆ 3 : ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದ 5ನೇ ಬ್ಯಾಟರ್.

ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆಯವರನ್ನು(12,650 ರನ್) ಹಿಂದಿಕ್ಕಿದ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

  • ದಾಖಲೆ 4 : ಏಕದಿನ ಇತಿಹಾಸದಲ್ಲಿ 5 ಬಾರಿ 150+ ರನ್ ಗಳಿಸಿದ ಏಕೈಕ ನಾನ್ ಓಪನರ್.

ಇದರೊಂದಿಗೆ ಕೊಹ್ಲಿ ಏಕದಿನ ಇತಿಹಾಸದಲ್ಲಿ 5 ಬಾರಿ 150+ ರನ್ ಗಳಿಸಿದ ಏಕೈಕ ನಾನ್ ಓಪನರ್ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಕೊಹ್ಲಿ ಇಂದಿನ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸುವ ಮುಖೇನ ತನ್ನ ಅಭಿಮಾನಿಗಳಿಗೆ ಸಂಕ್ರಾಂತಿಯ ಉಡುಗೊರೆ ನೀಡಿದ್ದಾರೆ.

ಇಂದು ದಾಖಲಾದ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಒಟ್ಟು ಶತಕಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ತನ್ನ ಹಿಂದಿನ 4 ಇನಿಂಗ್ಸ್‌ಗಳಲ್ಲಿ ಮೂರನೇ ಶತಕವನ್ನು ಗಳಿಸಿರುವ ಕೊಹ್ಲಿ ಅವರು ತೆಂಡುಲ್ಕರ್ ಅವರ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿಯುವತ್ತ ಹೆಜ್ಜೆ ಹಾಕಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಗಿಂತ ಹೆಚ್ಚು ಶತಕವನ್ನು ಯಾರೂ ಗಳಿಸಿಲ್ಲ, ಆದರೆ ಕೊಹ್ಲಿ ಅವರು ತೆಂಡುಲ್ಕರ್ ದಾಖಲೆ ಸರಿಗಟ್ಟುವುದರಿಂದ ಕೇವಲ 3 ಶತಕದಿಂದ ಹಿಂದಿದ್ದಾರೆ. ತೆಂಡುಲ್ಕರ್ ಒಟ್ಟು 452ನೇ ಇನಿಂಗ್ಸ್‌ನಲ್ಲಿ 49 ಶತಕ ಗಳಿಸಿದ್ದರೆ, ಕೊಹ್ಲಿ 46ನೇ ಶತಕ ಪೂರೈಸಲು 252 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button