ಬಿಸಿಲಿನ ತಾಪ ದೇಹ ತಂಪಾಗಿಸಲು ಜನ – ಎಳನೀರಿಗೆ ಮೊರೆ.
ಕಾನಾ ಹೊಸಹಳ್ಳಿ ಮಾರ್ಚ್.27

ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈ ಬೆವರನ್ನು ಇಳಿಸುತ್ತಿದ್ದಾನೆ. ಇದರಿಂದ ಜನರು ಸುಸ್ತಾಗಿ ದಾಹ ನೀಗಿಸಿ ಕೊಳ್ಳಲು ತಂಪು ಪಾನೀಯ, ಕಬ್ಬಿನ ಹಾಲು, ಎಳೆನೀರು, ಮಜ್ಜಿಗೆ, ನಿಂಬೆಹಣ್ಣಿನ ರಸದ ಮೊರೆ ಹೋಗಿದ್ದಾರೆ. ಇಲ್ಲಿನ ಕಾನಾ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಸುತ್ತಮುತ್ತಲಿನ ಸಾವಿರಾರು ಜನರು ಪಟ್ಟಣಕ್ಕೆ ಕೆಲಸ ಕಾರ್ಯಗಳಿಗೆ ದಿನನಿತ್ಯ ಆಗಮಿಸುತ್ತಾರೆ. ಬಿಸಿಲಿನ ತಾಪಕ್ಕೆ ದಣಿವಾರಿಸಿ ಕೊಳ್ಳಲು ಎಳೆನೀರು ಕುಡಿದು ದೇಹವನ್ನು ತಂಪಾಗಿಸಿ ಕೊಳ್ಳಲು ಸಾಮಾನ್ಯವಾಗಿ ಕಂಡು ಬರುತ್ತದೆ. ಕೂಡ್ಲಿಗಿ ತಾಲೂಕಿನ ರಣರೌದ್ರ ಬಿಸಿಲುಗೆ ಜನ ಜಾನುವಾರುಗಳನ್ನು ತತ್ತರಿಸುವಂತೆ ಮಾಡಿದೆ. ಮಕ್ಕಳು ವೃದ್ಧರನ್ನು ಇಂಡಿ ಇಪ್ಪೆಯಾಗಿಸುತ್ತಿದೆ. ಫೆಬ್ರವರಿ ಮಾರ್ಚ್ ಆರಂಭದಿಂದಲೇ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳದಿಂದ ತಂಪು ಪಾನೀಯದ ಮೊರೆ ಹೋಗುತ್ತಿರುವುದು ಹೆಚ್ಚಾಗಿದ್ದು, ರಸ್ತೆಯ ಅಕ್ಕ ಪಕ್ಕದಲ್ಲಿರುವ ಎಳನೀರಿಗಾಗಿ ಜನರು ಮುಗಿ ಬೀಳುತ್ತಿದ್ದಾರೆ. ವರ್ಷಕ್ಕಿಂತ ಈ ವರ್ಷದ ಬಿಸಿಲಿನ ತಾಪಮಾನ ಬಹು ಏರಿಕೆಯಾಗಿದ್ದು, ಇದೇ ವಾತಾವರಣ ಮುಂದುವರಿದಲ್ಲಿ ತಾಲೂಕಿನ ಹಲವು ಭಾಗಗಳಲ್ಲಿ ನೀರಿನ ಮುಂಜಾಗ್ರತೆ ಕಾಣಿಸಿ ಕೊಳ್ಳಲಿದೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಕೆಲಸಗಳನ್ನು ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿಯು ಉದ್ಭವವಾಗಿದೆ. ಇನ್ನೂ ಕೆಲವು ದಿನಗಳು ಇದೇ ರೀತಿಯ ಬಿಸಿಲು ಮುಂದುವರಿದಲ್ಲಿ ನೀರಿಗಾಗಿ ಸಂಕಷ್ಟ ಎದುರಿಸ ಬೇಕಾದೀತು ಎನ್ನುವುದು ಪ್ರಜ್ಞರ ಅಭಿಪ್ರಾಯವಾಗಿದೆ. ಹೊಸಹಳ್ಳಿ, ಹೂಡೇಂ, ಜುಮ್ಮೊಬನಹಳ್ಳಿ, ಹುಲಿಕೆರೆ, ಹಿರೇ ಕುಂಬಳಗುಂಟೆ, ಎಂಬಿ ಅಯ್ಯನಹಳ್ಳಿ, ಬಣವಿಕಲ್ಲು, ಚೌಡಾಪುರ ಇನ್ನಿತರ ಹಳ್ಳಿಗಳಿಂದ ಬೆಳೆದ ಎಳೆನೀರನು ಈ ಭಾಗದ ಪಟ್ಟಣ, ಹೋಬಳಿ ಸೇರಿದಂತೆ ಹಲವಡೆ ಯಿಂದ ಹಳ್ಳಿಗಳಲ್ಲಿ ಟಾಟಾ ಎಸಿ ಹೋಲ್ಸೇಲ್ ದರದಲ್ಲಿ ಎಳೆ ನೀರನ್ನು ತಂದು ಹಾಕಲಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚುತ್ತಿದ್ದರಿಂದ ಒಂದೊಂದು ಹಳ್ಳಿಗಳಲ್ಲಿ ನಿತ್ಯ 500ಕ್ಕೂ ಹೆಚ್ಚು ಎಳೆ ನೀರು ಕಾಯಿಗಳು ಮಾರಾಟವಾಗುತ್ತಿವೆ. ರೈತರಿಂದ ಒಂದು ಎಳೆ ನೀರಿಗೆ 17 ರೂಪಾಯಿ, ಕೀಳುವರಿಗೆ ಎರಡು ರೂಪಾಯಿ ಬಾಡಿಗೆ ಸೇರಿ ಐದು ರೂಪಾಯಿ ಲಾಭ ಆಗುತ್ತೆ, ಗ್ರಾಹಕರಿಗೆ ಒಂದು ಎಳೆ ನೀರಿನ ಬೆಲೆ ಕನಿಷ್ಠ 25 ರಿಂದ 30 ರೂ ವರೆಗೂ ಇದೆ ಎಂಬುವುದು ಎಳೆನೀರ ವ್ಯಾಪಾರಸ್ಥರ ಅನಿಸಿಕೆ.*ಹೊರಗೆ ಬರಲು ಹಿಂದೇಟು:* ಬಯಲು ಸೀಮೆಯ ಸದ್ಯಕ್ಕೆ ಧಗ ಧಗನೆ ಬಿಸಿಲೇರಿ ಜನರ ನೆತ್ತಿ ಸುಡುತ್ತಿದ್ದು, ಮಕ್ಕಳು, ಮಹಿಳೆಯರು, ವಯೋ ವೃದ್ಧರು ಬಿಸಿಲಿನ ಪರಿಣಾಮ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ, ಬಿಸಿಲಿನ ಆರ್ಭಟ ಮಾತ್ರ ಜನರನ್ನು ಕಂಗೆಡಿಸಿದೆ.*ತಂಪು ಪಾನೀಯಗಳ ದರ:* ಮಾರುಕಟ್ಟೆಯಲ್ಲಿ ಒಂದು ಎಳನೀರಿನ ಬೆಲೆ 30 ರೂ.ವರೆಗೆ ಮಾರಾಟ ಆಗುತ್ತಿದೆ. ಮಜ್ಜಿಗೆ ಮತ್ತು ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ 15 ರೂ. ಹಾಗೂ ಕಬ್ಬಿನ ಹಾಲಿಗೆ 20 ರೂ., ಮೂಸಂಬಿ ಮತ್ತು ಪೈನಾಫಲ್ ಜ್ಯೂಸ್‌ಗೆ 40ರೂ., ಆಫಲ್ 50 ರೂ., ಸಫೋಟಾ 45 ರೂ., ಡ್ರೈಪ್ರೂಟ್ಸ್ ಜ್ಯೂಸ್ 65 ರೂಪಾಯಿಗೆ ಮಾರಾಟ ಆಗುತ್ತದೆ.
ಕೋಟ್:ಬೇಸಿಗೆ ಸಂದರ್ಭದಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಸ್ಪತ್ರೆಯಿಂದ ಬರುವ ರೋಗಿಗೆ, ಗರ್ಭಿಣಿಗಳಿಗೆ, ವಯೋವೃದ್ಧರಿಗೆ ಉಚಿತ ನೀಡುತ್ತೇವೆ, ಸುತ್ತಮುತ್ತಲಿನ ಹಳ್ಳಿಗಳ ತೋಟಗಳಿಂದ ಖರೀದಿಸಿ ತರಲಾಗುತ್ತಿದ್ದು, ಕಳೆದ ಬಾರಿ ಮಳೆ ಇಲ್ಲದೆ ಕಾಯಿಗಳು ಸಿಗುವುದು ಕಷ್ಟವಾಗಿದೆ, ಜನರ ಬಾಯಾರಿಕೆ ನೀಗಿಸಲು ಎಳನೀರಿನಿಂದ ಮಾತ್ರ ಸಾಧ್ಯ. •ರಾಮಣ್ಣ, ಎಳನೀರು ವ್ಯಾಪಾರಿ ಹೊಸಹಳ್ಳಿ
ಕೋಟ್:ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಮಧ್ಯಾಹ್ನದ ವೇಳೆಯಂತೂ ಮರದ ನೆರಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ತಲೆಯಲ್ಲಿ ಹೊರಗಡೆ ಹೋದರೆ, ಬಿಸಿಲಿನ ತಾಪಕ್ಕೆ ತಲೆನೋವಿನ ಬಾಧೆ ಹೆಚ್ಚಾಗುತ್ತದೆ. ಎಳನೀರು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.• ನಾಗೇಶ್ ಸಿ ಬಿ ಹೊಸಹಳ್ಳಿ ಯುವ ಮುಖಂಡ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ