“ಸಮಯ ಒಂದು ಅಮೂಲ್ಯವಾದ ಸಂಪನ್ಮೂಲ”…..

ಸಮಯವು ನಿರಂತರವಾಗಿ ಬದಲಾಗುತ್ತಿರುತ್ತದೆ ಮತ್ತು ಬದಲಾವಣೆಯು ಪ್ರಕೃತಿಯ ನಿಯಮವಾಗಿದೆ. ಸಮಯ ಮತ್ತು ಬದಲಾವಣೆಯಿಂದ ಯಾವುದೂ ಸ್ವತಂತ್ರವಾಗಿಲ್ಲ. ಜೀವನವು ಚಿಕ್ಕದಾಗಿದೆ. ಮತ್ತು ಸಾಧಿಸಲು ಕಾರ್ಯಗಳು ವಿಶಾಲವಾಗಿವೆ ಮತ್ತು ಸವಾಲಿನವುಗಳಾಗಿವೆ. ಈ ಸತ್ಯವನ್ನು ನಾವು ಅರಿತುಕೊಳ್ಳಬೇಕು ಮತ್ತು ಯಾವುದೇ ನಿಮಿಷವನ್ನು ವ್ಯರ್ಥ ಮಾಡಬಾರದು. ಪ್ರತಿ ಸೆಕೆಂಡ್ ಮತ್ತು ಪ್ರತಿ ಅವಕಾಶವನ್ನು ಸಮರ್ಥವಾಗಿ ಮತ್ತು ಅರ್ಥಪೂರ್ಣವಾಗಿ ಬಳಸಬೇಕು ಇಂದಿನ ಬಿಡುವಿಲ್ಲದ ಜಗತ್ತಿನಲ್ಲಿ ಸಮಯ ನಿರ್ವಹಣೆ ಅತ್ಯಂತ ನಿರ್ಣಾಯಕ ಕಾರ್ಯವಾಗಿದೆ. ಸಮಯವು ಅಮೂಲ್ಯವಾದ ಸರಕು ಎಂದು ಜನರಿಗೆ ತಿಳಿದಿಲ್ಲ, ಅದು ಒಮ್ಮೆ ವ್ಯರ್ಥವಾದರೆ ಎಂದಿಗೂ ಮರುಪಡೆಯಲು ಸಾಧ್ಯವಿಲ್ಲ. ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ವಸ್ತುವಾಗಿದೆ. ಸಮಯ ಪಾಲನೆ ಎಂದರೆ ಈ ಸುಂದರ ಪ್ರಪಂಚದೊಂದಿಗೆ ಸಾಮರಸ್ಯದಿಂದ ಬದುಕುವುದು. ಸಮಯ ಪಾಲನೆಯನ್ನು ನಮ್ಮ ಸುತ್ತಲಿನ ಪ್ರಕೃತಿಯಿಂದ ಅಭ್ಯಾಸ ಮಾಡಲಾಗುತ್ತದೆ. ಸೂರ್ಯನು ಸಮಯಕ್ಕೆ ಸರಿಯಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತವಾಗುವುದನ್ನು ನಾವು ನೋಡುತ್ತೇವೆ. ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ತನ್ನ ಕೆಲಸವನ್ನು ಮಾಡುತ್ತದೆ ಹಕ್ಕಿಗಳು ಬೇಗ ಏಳುತ್ತವೆ ಮತ್ತು ಚಿಲಿಪಿಲಿ ಶಬ್ದ ಮಾಡಲು ಪ್ರಾರಂಭಿಸುತ್ತವೆ. ಹೀಗಾಗಿ ನಾವೆಲ್ಲರೂ ಸಮಯ ಪಾಲನೆಯನ್ನು ಅಭ್ಯಾಸ ಮಾಡುತ್ತೇವೆ ಏಕೆಂದರೆ ಅದು ಒಬ್ಬ ವ್ಯಕ್ತಿಗೆ ಮಾತ್ರವಲ್ಲದೆ ಇಡೀ ಸಮುದಾಯ ಮತ್ತು ರಾಷ್ಟ್ರದ ಯಶಸ್ಸಿನ ಕೀಲಿಯಾಗಿದೆ. ನನ್ನ ಪಾಲಿಗೆ ಸಮಯ “ಬಂಗಾರದ ನಾಣ್ಯ”ಖರ್ಚು ಮಾಡುವಾಗ ಹೇಗೆ ಮಾಡಬೇಕೆಂಬ ಆಯ್ಕೆ ನನ್ನದೇ. ಸಾರ್ಥಕವಾಗಿ ಬದುಕಬೇಕೆಂಬ ನಿರಂತರ ಪ್ರಯತ್ನದಲ್ಲಿ ಸಮಯದ ಬಂಗಾರದ ನಾಣ್ಯ ನಿರಂತರವಾಗಿ ಕರಗುತ್ತಿರುತ್ತದೆ. ತಡೆಯಲು ಸಾಧ್ಯವಿಲ್ಲ, ಆದರೆ ಕೈ ಜಾರಲು ಬಿಡೆನು. ಉಳಿದಿದ್ದೆಲ್ಲ ಆ ಭಗವಂತನ ಕೈಯೊಳಗಿದೆ. ಪ್ರತಿಯೊಂದು ಗೆಲುವಿನ ಸಾಧನೆಗೆ ಸಮಯವೇ ಮುಖ್ಯ, ಸಮಯದ ಪಾಲನೆ ನಮಗಿರಬೇಕು. ಈ ಜಗತ್ತಿನಲ್ಲಿ ಖರ್ಚು ಮಾಡಬಾರದೆಂದರೂ ಖರ್ಚಾಗುವ ವಸ್ತುವೆಂದರೆ ಸಮಯ. ಸಮಯ ಎಲ್ಲರನ್ನು ಓಡಿಸುತ್ತದೆ ಆದರೆ ಸಮಯ ತಾನೆಂದು ವೇಗವಾಗಿ ಓಡುವುದಿಲ್ಲ. ಸಮಯ ಎಲ್ಲರನ್ನು ನಿಲ್ಲಿಸುತ್ತದೆ ಆದರೆ ಸಮಯ ತಾನೆಂದು ನಿಲ್ಲುವುದಿಲ್ಲ. ಕಳೆದು ಹೋದ ಒಳ್ಳೆಯ ಸಮಯ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ ಕಳೆದು ಹೋದ ಕೆಟ್ಟ ಸಮಯ ಬದುಕಿನಲ್ಲಿ ಪಾಠವಾಗುತ್ತದೆ. ಸಮಯದ ಪ್ರಾಮುಖ್ಯತೆ ಹೇಳುವುದಾದರೆ, ಸಮಯವು ಯಾರಿಗೂ ಕಾಯುವುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಇದು ಬಹಳ ಹಿಂದಿನಿಂದಲೂ ಇರುವ ನಂಬಿಕೆ, ಇದು ಇನ್ನೂ ನಿಜವಾಗಿದೆ. ಯಾರೂ ಗಡಿಯಾರವನ್ನು ನಿಲ್ಲಿಸಲು ಅಥವಾ ನಿಧಾನಗೊಳಿಸಲು ಸಾಧ್ಯವಿಲ್ಲ. ಅತ್ಯಂತ ಗಮನಾರ್ಹವಾದದ್ದು, ಒಬ್ಬರು ಇಷ್ಟಪಟ್ಟರೂ ಇಲ್ಲದಿದ್ದರೂ ಸಮಯ ಮುಂದುವರಿಯುತ್ತದೆ. ಏಕೆಂದರೆ ಸಮಯವು ಎಲ್ಲರಿಗೂ ಕಾಯುವುದಿಲ್ಲ, ಅದು ಅಮೂಲ್ಯ ವಸ್ತುವಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಜನರು ಖಂಡಿತವಾಗಿಯೂ ಸಮಯ ವ್ಯರ್ಥ ಮಾಡುವುದನ್ನು ಮತ್ತು ಕಾಲಹರಣ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ಸಮಯವು ಅಪರಿಮಿತವಾಗಿಲ್ಲ. ಸಮಯವು ಹಣಕ್ಕಿಂತ ಹೆಚ್ಚು ಏಕೆಂದರೆ ಖರ್ಚು ಮಾಡಿದ ಹಣವನ್ನು ಮತ್ತೆ ಗಳಿಸಬಹುದು ಆದರೆ ಒಮ್ಮೆ ಕಳೆದ ಸಮಯವನ್ನು ಎಂದಿಗೂ ಗಳಿಸಲಾಗುವುದಿಲ್ಲ. “ಸಮಯ ಮತ್ತು ಉಬ್ಬರವಿಳಿತವು ಯಾವುದಕ್ಕೂ ಕಾಯುವುದಿಲ್ಲ ” ಎಂಬ ಸಾಮಾನ್ಯ ಮಾತು ಇದೆ. ಇದು ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವದಷ್ಟೇ ಸತ್ಯ. ಸಮಯವು ನಿಲ್ಲದೆ ನಿರಂತರವಾಗಿ ಸಾಗುತ್ತದೆ. ಅದು ಯಾರಿಗೂ ಕಾಯುವುದಿಲ್ಲ. ನಮಗೆಲ್ಲರಿಗೂ ಸಮಯ ಬಹಳ ಅಮೂಲ್ಯವಾದುದು. ನಾವು ಪ್ರತಿ ಕ್ಷಣವೂ ಸಮಯದ ಮಹತ್ವವನ್ನು ಗೌರವಿಸಬೇಕು. ನಮ್ಮ ಜೀವನದ ಕೊನೆಯ ಕ್ಷಣದವರೆಗೂ ನಾವು ಸಮಯವನ್ನು ವ್ಯರ್ಥ ಮಾಡಬಾರದು. ಈ ಪ್ರಪಂಚದಲ್ಲಿರುವ ಎಲ್ಲಕ್ಕಿಂತ ಸಮಯವು ತುಂಬಾ ಪ್ರಬಲವಾಗಿದೆ ಮತ್ತು ಶಕ್ತಿಯುತವಾಗಿದೆ. ಸಮಯಕ್ಕೆ ಬಹಳಷ್ಟು ಮಹತ್ವ ಕೊಟ್ಟರೆ ಜೀವನದಲ್ಲಿ ಏನಾದರೂ ಸಾಧಿಸಬಹುದು. ಸಮಯಕ್ಕೆ ಮೌಲ್ಯವಿದೆ. ಏಕೆಂದರೆ ಅದು ಯಾರಿಗೂ ಕಾಯುವುದಿಲ್ಲ ಕಾಲಕ್ಕೆ ಸರಿಯಾಗಿ ಕೆಲಸ ಮಾಡದೇ ಹೋದರೆ ಸೋಲುವುದು ನಾವೇ, ಕಾಲವಲ್ಲ! ಪ್ರಪಂಚದ ಅತಿ ದೊಡ್ಡ ಗುರು ಎಂದರೆ ಅದು ಸಮಯ ಅದು ಎಲ್ಲವನ್ನು ಕಲಿಸುತ್ತದೆ. ಸಮಯದ ಮಹತ್ವ ಅರಿತವನು ಜೀವನದಲ್ಲಿ ಮಹಾನ್ ಸಾಧನೆ ಮಾಡುವನು. ಕಳೆದು ಹೋದ ಸಮಯ ಮತ್ತೆ ಬಾರದು. ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆ ಮಾಡಿ ಶ್ರೇಷ್ಠ ವ್ಯಕ್ತಿಯಾಗುತ್ತಾರೆ. ಕೇವಲ ಸಮಯವನ್ನು ಯಾರು ಬೇಜವಾಬ್ದಾರಿಯಿಂದ ಕಾಲಹರಣ ಮಾಡಿ ಅಶಿಸ್ತಿನಿಂದ ಇರುತ್ತಾರೋ ಅವರು ಜೀವದುದ್ದಕ್ಕೂ ಗೋಗೆರೆಯುತ್ತಾ ಇರುತ್ತಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾನೆ ಎಂದರೆ ಅದರ ಅರ್ಥ ಆ ವ್ಯಕ್ತಿ ಶಿಸ್ತುಬದ್ಧ ಜೀವನದ ಜತೆಯಲ್ಲಿ ಸಮಯದ ಮಹತ್ವ, ಸಮಯದ ಸದ್ಭಳಕೆ ಹಾಗೂ ಸಮಯ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾನೆ. ಎಲ್ಲರಿಗೂ ಸಮಯ ಒಂದೇ ರೀತಿಯದ್ದಾಗಿರುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಚಿಂತಕನಿಗೂ ಸಿಗುವಂತಹ ಸಮಯ 24 ಘಂಟೆಗಳು ಹಾಗೂ ಅತ್ಯಂತ ಕಟ್ಟ ಕಡೆಯ ಪ್ರಜೆಗೂ ಸಿಗುವಂತಹ ಸಮಯ 24 ಘಂಟೆಗಳು, ಆದಾಗ್ಯೂ ಯಾವ್ಯಾವ ವ್ಯಕ್ತಿ ಹೇಗೆಲ್ಲ ಸಮಯ ಬಳಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಯಶಸ್ಸು, ಸಾಧನೆ, ಗುರಿ ನಿರ್ಧಾರವಾಗುತ್ತದೆ. ಮಾನವನ ಪ್ರಗತಿಗೆ ಸಮಯವು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಸಮಯ ನಮಗೆ ಗೋಚರಿಸುವುದಿಲ್ಲ. ಆದರೆ ನಮಗೆ ತುಂಬಾ ವಿಷಯಗಳನ್ನು ಕಲಿಸಿ ಹೋಗುತ್ತದೆ. ಸಮಯವನ್ನು ಕಡೆಗಣಿಸಿ ಸಮಯ ಹಾಳು ಮಾಡಿದವನನ್ನು, ಒಂದು ದಿನ ಸಮಯವೂ ಕಡೆಗಣಿಸುತ್ತದೆ. ಸಮಯ ಯಾರ ಮನೆ ಆಳಲ್ಲ ಸಮಯದ ಮುಂದೆ ಯಾರು ಕೀಳಲ್ಲ ಹಿಂಬಾಲಿಸಿದರೆ ಸಾಧಕನಾಗುವೆ ಕಡೆಗಣಿಸಿದರೆ ಸೊಂಬೇರಿಯಾಗುವೆ. ಸಮಯ ನಿರ್ವಹಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ನಾವು ಕಳೆಯುವ ಪ್ರತಿಯೊಂದು ಕ್ಷಣ ಕೂಡ ಬಹಳ ಮಹತ್ವವನ್ನು ಹೊಂದಿರುತ್ತದೆ. ಏಕೆಂದರೆ ಒಮ್ಮೆ ಕಳೆದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಎಷ್ಟರ ಮಟ್ಟಿಗೆ ತನ್ನ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ ಎಂಬುದನ್ನು ಅವನ ಸಮಯ ನಿರ್ವಹಣೆ ಕೌಶಲ್ಯದ ಆಧಾರದ ಮೇಲೆ ಅಳೆಯಬಹುದು. ಸಣ್ಣದೊಂದು ಅಂಗಡಿಯನ್ನು ನಡೆಸುವವರಿಂದ ಹಿಡಿದು ದೊಡ್ಡ ಬಹುಕೋಟಿ ಕಂಪನಿಯನ್ನು ನಡೆಸುವ ವ್ಯಕ್ತಿಗಳ ಹತ್ತಿರ ಕೂಡ ಇರುವುದು, ದಿನದಲ್ಲಿ ಅದೇ 24 ಘಂಟೆಗಳು ಆದರೂ ಏಕೆ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಯಶಸ್ಸನ್ನು ಕಾಣುತ್ತಾರೆ ಎಂದು ನಮ್ಮನ್ನು ನಾವು ಪ್ರಶ್ನಿಸಿದರೆ, ಅದಕ್ಕೆ ಉತ್ತರ ಬಹುಪಾಲು ಸಂದರ್ಭಗಳಲ್ಲಿ ಸಮಯದ ನಿರ್ವಹಣೆಯೇ ಆಗಿರುತ್ತದೆ. ಯಶಸ್ವಿ ವ್ಯಕ್ತಿಗಳ ಚರಿತ್ರೆಯನ್ನು ಒಮ್ಮೆ ಗಮನಿಸಿದರೆ ನಮಗೆ ಕಾಣುವ ಮುಖ್ಯವಾದ ಸಂಗತಿ ಅವರ ಸಾಧನೆಯಲ್ಲಿ ಸಮಯದ ಸಮರ್ಥವಾದ ಬಳಕೆಯ ಪಾತ್ರ. ಸಮಯದ ಸದ್ಭಳಕೆ ಜೀವನದ ಯಶಸ್ಸಿಗೆ ದಾರಿದೀಪವಾಗುತ್ತದೆ. ಸಮಯವು ದೇವರ ಶ್ರೇಷ್ಠ ಕೊಡುಗೆ ಎಂದು ನಾವು ಹೇಳಬಹುದು. ಸಮಯ ಎಂಬುದು ನಿಂತ ನೀರಲ್ಲ. ಸಮಯಕೋಸ್ಕರ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ನಾಣ್ಣುಡಿಯಂತೆ ಒಂದು ಬಾರಿ ಹೋದ ಸಮಯ ಮತ್ತೆಂದಿಗೂ ನಮ್ಮ ಜೀವನದಲ್ಲಿ ಬಾರದು. ಸಮಯ ಹೋದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾವು ಜೀವನದಲ್ಲಿ ಯಾರಿಂದಲೂ ಕಲಿಯಲಾರದ್ದನ್ನು ಸಮಯ ಸಂದರ್ಭ ಕಲಿಸುತ್ತದೆ. ಸಮಯ ನಿಲ್ಲದ ಹೊತ್ತುವಿನಂತೆ. ಅದನ್ನು ನಾವೇ ಅನುಸರಿಸಿಕೊಂಡು ಹೋದಾಗ ಮಾತ್ರ ಸಮಯ ನಮ್ಮ ಸ್ವತ್ತಾಗುತ್ತದೆ. ಆಗ ಯಶಸ್ಸು ನಮ್ಮದಾಗುತ್ತದೆ. ಸಮಯವು ಒಂದು ಅಮೂಲ್ಯವಾದ ಸಂಪನ್ಮೂಲ. ಭೂಮಿಯ ಮೇಲಿನ ಅತ್ಯಂತ ಅಮೂಲ್ಯ ವಸ್ತು ಸಮಯ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ