“ಮುಸ್ಲಿಂರ ತಲ್ಲಣಗಳು ಕೃತಿ ಓದಿ ಮನಸ್ಸು ಭಾರವಾಯಿತು”…..

ಪ್ರಜ್ಞಾವಂತ ಹಿರಿಯ ಲೇಖಕಿಯಾದ ಶ್ರೀಮತಿ ಕೆ.ಷರೀಫಾ ಮೇಡಂ ಅವರ ಹೊಸ ಹೊತ್ತಿಗೆ ‘ಮುಸ್ಲಿಮರ ತಲ್ಲಣಗಳು’ ಅಕ್ಷರ ಸಂಗಾತ ಪ್ರಕಾಶನದಿಂದ ಪ್ರಕಟಗೊಂಡದ್ದನ್ನು ತಿಳಿದು ಓದುವ ಹಂಬಲ & ಕುತುಹಲದಿಂದ ತರಿಸಿದೆ. ಓದಿ ಮನಸ್ಸು ಭಾರವಾಯಿತು! ಕಾರಣ,ಈ ಕೃತಿಯಲ್ಲಿ ಲೇಖಕಿ ಷರೀಫಾ ಮೇಡಂ ಅವರು ಪ್ರತಿಯೊಬ್ಬ ಭಾರತೀಯ ಮುಸ್ಲಿಂರ ಅಂತರಾಳದ ನೋವಿನ ದನಿಯಾಗಿದ್ದಾರೆ! ಆ ದನಿಯಲ್ಲಿ ಬರಿ ನೋವಿಲ್ಲ;ನಾವೂ ನಿಮ್ಮಂತೆ ಭಾರತಾಂಬೆಯ ಮಕ್ಕಳು ಎಂಬ ದೇಶಾಭಿಮಾನವಿದೆ,ನಮಗೂ ನಿಮ್ಮಂತೆ ಬದುಕುವ ಹಕ್ಕಿದೆ ಎಂಬ ಸ್ವಾಭಿಮಾನವಿದೆ, ನಿಮಗೆ ಸಿಗುವ ನ್ಯಾಯ ನಮಗೂ ಸಿಗಬೇಕು ಎಂಬ ಆಕ್ರೋಶವಿದೆ! ಇಡೀ ಪುಸ್ತಕದ ಪ್ರತಿ ಪುಟ ಸ್ವಾತಂತ್ರ್ಯ ಪೂರ್ವದಿಂದಲೂ ಇಂದಿನವರೆಗೂ ನಾವೂ ನಿಮ್ಮಂತೆ ಭಾರತಕ್ಕಾಗಿ ಹೋರಾಡಿದ್ದೇವೆ, ಜೈಲುಶಿಕ್ಷೆ ಅನುಭವಸಿದ್ದೇವೆ,ಸ್ವಾತಂತ್ರ್ಯ ಚಳುವಳಿಯಲ್ಲಿ ಜೀವದ ಹಂಗು ತೊರೆದು ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿದ್ದೇವೆ. ದೇಶಕ್ಕಾಗಿ ದುಡಿದಿದ್ದೇವೆ ಅಷ್ಟೇಯಲ್ಲ ದೇಶಕ್ಕಾಗಿ ಆಸ್ತಪಾಸ್ತಿ ದಾನ ನೀಡಿದ್ದೇವೆ. ಇಷ್ಟೆಲ್ಲಾ ಜೀವಂತ ಸಾಕ್ಷಿಯಾಗಿ ಇತಿಹಾಸ ಇರುವಾಗಲೂ ನಮ್ಮನ್ನೇಕೆ ಪ್ರತಿ ಹೆಜ್ಜೆಯಲ್ಲೂ ಹೊರಗಿಟ್ಟು ನೋಡುವಿರಿ ಎಂಬ ಹೃದಯಮಿಡಿತದ ಸಾಲು ಸಾಲು ಪ್ರಶ್ನೆಗಳನ್ನ ಲೇಖಕಿ ಎತ್ತಿದ್ದಾರೆ.
ತಮ್ಮ ಲೇಖಕರ ಮಾತಿನಲ್ಲಿ….ಷರೀಫಾ ಮೇಡಂ ಹೀಗೆ ಹೇಳುತ್ತಾರೆ.”ದೇಶಪ್ರೇಮಿ ಎಂದರೆ ಬೊಗಳೆ ಭಾಷಣವಲ್ಲ, ಸುಳ್ಳು ಆಶ್ವಾಸನೆಗಳಲ್ಲ,ಸುಳ್ಳು ಹೇಳುವುದಲ್ಲ ಬದಲಾಗಿ ನೊಂದವರ ನೋವಿನಲ್ಲಿ ಸಹಭಾಗಿಯಾಗುವುದು, ಸಂಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುತ್ತಾ ಹೆದರಬೇಡ ನಾನಿರುವೆ ಎಂದು ಆಶ್ವಾಸನೆ ಕೊಡಬೇಕಿದೆ,ತನ್ನ ದೇಶವಾಸಿಗಳಿಗೆ ನೋವಾದಾಗ ಒಂದಾಗಿ ಬೆಂಬಲಕ್ಕೆ ನಿಂತು ಆ ಮೂಲಕ ನಾವೆಲ್ಲ ಒಂದು ಎಂಬ ಸಂದೇಶ ರವಾನಿಸಬೇಕಿದೆ. ‘ಎಲ್ಲಾ ಧರ್ಮಗಳಿಗಿಂತ ಮನುಷ್ಯ ಧರ್ಮ ದೊಡ್ಡದು’ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಬೇಕಿದೆ. ಅವನು ಅಥವಾ ಅವಳು ಒಂದು ಧರ್ಮಕ್ಕೆ ಸೇರಿದವಳೆಂಬ ಕಾರಣಕ್ಕೆ ಮಾತ್ರ ದ್ವೇಷಿಸಬೇಕೆಂದು ಹೇಳುವುದು ಕರ್ಮಠ ಸಿದ್ದಾಂತವಾಗಿದೆ. ಅದು ಉದಾತ್ತ ಮನುಷ್ಯ ಧರ್ಮವಲ್ಲ. ತನ್ನ ರಾಷ್ಟ್ರದ ಜನತೆ ಸಂಕಷ್ಟದಲ್ಲಿದ್ದಾಗ ಬೆಟ್ಟದಂತೆ ಅವರೊಂದಿಗೆ ನಿಂತು, ಹೆದರಬೇಡಿ ಬಂಧುಗಳೇ ನಿಮ್ಮೊಂದಿಗೆ ನಾನಿದ್ದೇನೆ ಎಂಬ ಸಂದೇಶವನ್ನು ರವಾನಿಸಬೇಕಾದದು ದೇಶದ ಪ್ರಮಖರ ಕರ್ತವ್ಯ” ಎಂದು ಹೇಳುವ ಮೂಲಕ ದೇಶದಲ್ಲಿ ಅಲ್ಲಲ್ಲಿ ಕೋಮುಗಲಭೆಗಳಾದಾಗ ಮೌನಿಯಾಗಿದ್ದ ಕೆಲವರ ನಡೆಯನ್ನ ಪ್ರಶ್ನಿಸಿದ್ದಾರೆ.ಹೀಗೆ ಹೇಳುವಾಗ ನ್ಯಾಜಿಲೆಂಡ್ ನ ಎರಡು ಮಸೀದಿಗಳಲ್ಲಾದ ಮಾರಣಹೋಮ ನಡೆದಾಗ ಅಲ್ಲಿಯ ನಾಯಕಿ ಜೆಸಿಂಡಾ ಅರ್ಡರ್ನ ಅವರು ನಡೆದುಕೊಂಡ ಅತ್ಯಂತ ಗೌರವದ ನಡೆ ಇಡಿ ವಿಶ್ವಕ್ಕೆ ಮಾದರಿ ಎಂದು ಸ್ಮರಿಸಿದ್ದಾರೆ.
ಪುಟ ತೆರೆದಂತೆ….
ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನು ತಿಳಿಸುವಾಗ “ಭಾರತವನ್ನು 800 ವರ್ಷಗಳ ಕಾಲ ಮುಸ್ಲಿಮರು ಆಳಿರುವುದು ತಿಳಿದು ಬರುತ್ತದೆ. ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಬಾರಿಗೆ ತಿರುಗಿಬಿದ್ದು, ಭಾರತದ ಸ್ವಾತಂತ್ರ್ಯ ಆಂದೋಲನ ಪ್ರಾರಂಭಿಸಿದವರು ಮುಸ್ಲಿಮರು! ಅಷ್ಟೇಯಲ್ಲ ಬ್ರಿಟಿಷರ ದೊಡ್ಡ ವಿರೋಧಿಗಳು ಮುಸ್ಲಿಮರಾಗಿದ್ದರು, ಬ್ರಿಟಿಷರ ದೊಡ್ಡ ಹೋರಾಟಗಳು ಸಹ ಮುಸ್ಲಿಂರ ವಿರುದ್ಧವೇ ಆಗಿತ್ತು! ಬಹದ್ದೂರ್ ಷಾ ಜಫರ್ ಅವರಂತ ಬಹು ದೊಡ್ಡ ರಾಜನನ್ನು ಅವರ ಕುಟುಂಬವನ್ನು ಮತ್ತು ಅವರ 21 ಜನ ಗಂಡು ಮಕ್ಕಳನ್ನು ಒಂದೇ ದಿನ ಗಿಡಕ್ಕೆ ನೇಣು ಹಾಕಿಕೊಂದರು ಎಂಬ ಘಟನೆ ವಿವರಿಸಿದ್ದಾರೆ.
ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿಗೆ ಭಾರತ ಬಿಟ್ಟು ತೊಲಗು ಎಂದು ಮೊದಲ ಬಾರಿಗೆ ಹೇಳಿದವರು ಔರಂಗಜೇಬ್! 1686ರಲ್ಲಿ ಸೂರತ್ ಅಲ್ಲಿ ಬ್ರಿಟಿಷರಿಗೆ ಈ ಕರೆಯಿಂದ ಅಬ್ಬರಿಸಿದ್ದರು. ಕ್ರಿ.ಶ.1757 ರಲ್ಲಿ ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ್ ಸಿರಾಜುದ್ದೌಲ ಬ್ರಿಟಿಷರ ವಿರುದ್ಧ ಸಿಡಿದೆದ್ದಿರುವುದು ಕೂಡ ಇತಿಹಾಸವಾಗಿದೆ. ಹಾಗೆ ನವಾಬ್ ಹೈದರಾಲಿ ಅವರು 1782 ರಲ್ಲಿ ಬ್ರಿಟಿಷರ ವಿರುದ್ಧ ಪರಾಕ್ರಮದಿಂದ ಹೋರಾಡಿರುವುದು ಭಾರತದ ಚರಿತ್ರೆ ಸೇರಿದೆ. ನಂತರದಲ್ಲಿ ಟಿಪ್ಪುಸುಲ್ತಾನ್ ಅವರು 1791 ರಿಂದ 1799 ರ ವರೆಗೂ ಬ್ರಿಟೀಷರ ವಿರುದ್ಧ ಹಲವಾರು ಬಾರಿ ಯುದ್ಧ ಮಾಡಿ ಟಿಪ್ಪು ಬದುಕಿರುವವರೆಗೂ ಬ್ರಿಟಿಷರಿಗೆ ಭಾರತವನ್ನು ಜಯಿಸುವುದು ದು:ಸ್ವಪ್ನವಾಗಿತ್ತು. ಎಂಬುದನ್ನು& ತನ್ನಿಬ್ಬರ ಮಕ್ಕಳನ್ನು. ಒತ್ತೆಯಾಳಾಗಿಟ್ಟ ಟಿಪ್ಪುವಿನ ದೇಶಪ್ರೇಮವನ್ನು ನಾವು ಮರೆಯಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಮುಸ್ಲಿಂರು ಈ ದೇಶದಲ್ಲಿದ್ದು ದೇಶಕ್ಕಾಗಿಯೆ ಹೋರಾಡಿದ್ದಾರೆ ಎಂಬ ಇತಿಹಾಸವನ್ನ ಸ್ಮರಿಸಿದ್ದಾರೆ.
ಮುಂದುವರೆದು ….ಹೇಳುತ್ತಾರೆ,”1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಮುಸ್ಲಿಮರು ಹುತಾತ್ಮರಾಗಿದ್ದಾರೆ. ಅದರಲ್ಲೇ 5,000 ಜನ ಉಲೇಮಾಗಳಿದ್ದರು(ಧಾರ್ಮಿಕ ವಿದ್ವಾಂಸರು). ದೆಹಲಿಯಿಂದ ಕಲ್ಕತ್ತದವರೆಗಿನ ಗ್ರಾಂಡ್ ಟ್ರಂಕ್ ರಸ್ತೆಯಲ್ಲಿಯ ಒಂದೇ ಒಂದು ಮರವು ಸಹ ಖಾಲಿ ಇರಲಿಲ್ಲ. ಎಲ್ಲಾ ಮರಗಳಲ್ಲೂ ಉಲೇಮಗಳ ದೇಹಗಳ ನೇತಾಡುತ್ತಿದ್ದವು. ಏಕೆಂದರೆ ಭಾರತೀಯ ಉಲೇಮಗಳು ಬ್ರಿಟಿಷರ ವಿರುದ್ಧ ಜೀಹಾದ್ ಗೆ ಕರೆ ನೀಡಿದ್ದರು. ಅವರು ಭಾರತವನ್ನು ದಾರುಲ್ ಹರ್ಬ್ ಅಂದರೆ ಶತ್ರುಗಳ ನಿಯಂತ್ರಣದಲ್ಲಿರುವ ಪ್ರದೇಶವೆಂದು ಘೋಷಿಸಿದ್ದರು. ಬ್ರಿಟಿಷರ ವಿರುದ್ಧ ನೀಡಿದ್ದ ಈ ಕರೆ ಇಡೀ ದೇಶದಲ್ಲಿ ಬ್ರಿಟಿಷ್ ವಿರೋಧಿ ಚಳುವಳಿಗೆ ನಾಂದಿಯಾಯಿತು.” ಅಷ್ಟೇಯಲ್ಲ,1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಮೌಲಾನಾ ಅಬ್ದುಲ್ ಕಲಾಂ ಆಜಾದರವರು ರೂಪಿಸಿದ್ದರು. ಅದಕ್ಕಾಗಿಯೆ ಅವರನ್ನು ಆಗಸ್ಟ್ 8 ರಂದು ಬಂಧಿಸಲಾಯಿತು. ಮುಂದೆ ಗಾಂಧೀಜಿಯವರು 9 ರಿಂದ ಆ ಚಳುವಳಿಯನ್ನು ಮುಂದುವರೆಸಿಕೊಂಡು ಹೋದರು ಎಂಬುದನ್ನ ನೆನಿದಿದ್ದಾರೆ.
ಮುಂದುವರೆದು,ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರ ಏನಿದೆ? ಅವರ ಕೊಡುಗೆ ಏನು?ಎಂದು ತಿಳಿಯಲು ಇತಿಹಾಸದ ಪುಟಗಳನ್ನು ತೆರೆದಂತೆ ಹೃದಯ ಆರ್ಧ್ರವಾಗುತ್ತದೆ ಎಂದು ಹೇಳುತ್ತಾ,ಸಾದತ್ ಬಾನು ಅವರ ಸಾಲುಗಳನ್ನ ಪ್ರಸ್ತಾಪಿಸಿದ್ದಾರೆ.”ಈ ಸುಂದರ ದೇಶಕ್ಕಾಗಿ ಬಲಿಯಾಗುವೆ ನಾನು ಧ್ವಂಸಗೊಂಡ ವನದಲ್ಲಿ ವಸಂತ ಹುಡುಕುವೆ ನಾನು.
ಮತ್ತೋರ್ವ ಖ್ಯಾತಕವಿ ಕ್ರಿ.ಶ.1937 ರಲ್ಲಿ ದಿ.ಮಜಾಜ್ ಅವರು ಭಾರತದ ಮಹಿಳೆಯರಿಗೆ ಹೀಗೆಂದು ಕರೆ ನೀಡುತ್ತಾರೆ: ” ನಿನ್ನ ತಲೆಯ ಮೇಲಿನ ಸೆರಗು ಬಹಳ ಸುಂದರ. ಅದನ್ನೇ ನೀನು ಬಾವುಟವನ್ನಾಗಿಸಿದರೆ ಇನ್ನೂ ಸುಂದರ” ಎಂದು ಹೇಳಿದ್ದನ್ನ ಸ್ಮರಿಸಿ, ಮುಸ್ಲಿಮರ ತ್ಯಾಗ ಬಲಿದಾನಗಳನ್ನು ಪ್ರಶ್ನೆಗಳ ರೂಪದಲ್ಲಿ (ಉತ್ತರಸಹಿತ) ಕೇಳಿದ್ದಾರೆ. ಅವುಗಳಲ್ಲಿ ಕೆಲವನ್ನ ಪ್ರಸ್ತಾಪಿಸುವುದಾದರೆ,
‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ನೀಡಿದ ಹಸ್ರತ್ ಮೋಹಾನಿ ಒಬ್ಬ ಮುಸಲ್ಮಾನನಲ್ಲವೇ?,ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವವನ್ನೆ ಬಲಿದಾನ ಮಾಡಿದ ಭಗತಸಿಂಗ್ ರಿಗೆ ಯಾರೂ ಬೆಂಬಲಿಸದಿದ್ದಾಗ ಅವರ ಕೇಸ್ ನಡೆಸಿದವ ಒಬ್ಬ ಮುಸ್ಲಿಮನಾಗಿದ್ದನಲ್ಲವೆ? ಭಾರತದ ರಾಷ್ಟ್ರೀಯ ಧ್ವಜವನ್ನು ಸಿದ್ದಪಡಿಸಿದವರು ಸುರೈಯ್ಯ ತೈಯ್ಯಬ್ಜಿ ಒಬ್ಬ ಮುಸ್ಲಿಂ ಮಹಿಳೆಯಲ್ಲವೆ? ಕೆಂಪುಕೋಟೆಯಲ್ಲಿ ಮೊಟ್ಟಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ವ್ಯಕ್ತಿ ಶಾ ನವಾಜ್ ಖಾನ್ ಮುಸ್ಲಿಂನಲ್ಲವೇ?ಕಲ್ಕತ್ತದ ರಾಜ ಹಾಜಿ ಉಸ್ಮಾನ್ ಸಯೀದರವರು ತಮ್ಮ ಎಲ್ಲಾ ಸಂಪತ್ತನ್ನು ದೇಶಕ್ಕೆ ನೀಡಿ ಬಾಡಿಗೆ ಮನೆಯಲ್ಲಿದ್ದರು. ಅವರ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತದೆಯೆ? ಮಧ್ಯಪ್ರದೇಶದ ಶಿವಪುರಿಯಲ್ಲಿ ನೇಣಿಗೇರಿಸಲಾದ ತಾತ್ಯಾಟೋಪಿ,ಶಂಸುದ್ದೀನರು ಯಾರು? ನೃತ್ಯಗಾರ್ತಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಕಾರಣಕ್ಕಾಗಿ ಸಾರ್ವಜನಿಕವಾಗಿ ನೇಣಿಗೇರಿದ ಅಜೀಜುನ್ನಿಸಾ ಯಾರು? 1857 ರ ದಂಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸಜೀವ ದಹನವಾದ ಅಸ್ಗರಿ ಬೇಗಂ ಯಾರು?ಕರಿನೀರಿನ ಶಿಕ್ಷೆಯನ್ನು ಅನುಭವಸಿದವರಲ್ಲಿ ಅದೆಷ್ಟೊ ಮಂದಿ ಮುಸ್ಲಿಮರಿದ್ದರು ಎಂಬುದನ್ನ ಮರೆಯಲಾದೀತೆ? ತ್ರಿವರ್ಣ ಧ್ವಜ ಹಾರಿಸುವ ಕೆಂಪುಕೋಟೆ ಕಟ್ಟಿಸಿದವರು ಮುಸಲ್ಮಾನರಲ್ಲವೇ? ಈ ಮಣ್ಣಲ್ಲಿ ಕೇವಲ ಹಿಂದುಗಳದಲ್ಲ, ಬರೀ ಮುಸ್ಲಿಮರದಲ್ಲ, ಬದಲಾಗಿ ಇಡೀ ಭಾರತೀಯರೆಲ್ಲರ ರಕ್ತದ ಕೆಂಪು ಸೇರಿದೆ. ಇತಿಹಾಸದಲ್ಲಿ ಕಳೆದು ಹೋದವರ ತ್ಯಾಗ ಬಲಿದಾನಗಳನ್ನು ಗುರುತಿಸಿ ದಾಖಲಿಸುವ ಕೆಲಸ ಇಂದಿಗೂ ಬಾಕಿಯಿದೆ ಎಂದು ಹೇಳುತ್ತಾ.. ಹೀಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಮುಸ್ಲಿಮರು ಭಾರತದೇಶ ಸ್ವಾತಂತ್ರ್ಯವಾದಾಗ ಮನೆ ಮನೆಗೂ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದು ಭಾರತದ ಮೇಲಿನ ದೇಶಾಭಿಮಾನದಿಂದಲ್ಲವೆ? ಎಂಬ ಸಾಲು ಸಾಲು ಪ್ರಶ್ನೆಗಳನ್ನಿಟ್ಟಿದ್ದಾರೆ.
ಈ ಕೃತಿಯ ಮತ್ತೊಂದು ಪ್ರಮುಖ ಘಟ್ಟವೆಂದರೆ…
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮದೇ ಕ್ಷೇತ್ರವಾದ ಮಹಾರಾಷ್ಟ್ರದ ಚುನಾವಣೆಯಲ್ಲಿ ಹಲವರ ಕುತಂತ್ರದಿಂದ ಸೋತಾಗ, ಅವರಿಗೆ 1946ರಲ್ಲಿ ಕೇಂದ್ರದ ಚುನಾವಣೆಯಲ್ಲಿ ಬಂಗಾಳದ ಮುಸ್ಲಿಂ ಲೀಗ್ ತನ್ನದೇ ಆದ ಒಂದು ಸ್ಥಾನವನ್ನು ತೆರವು ಮಾಡುವುದರ ಮೂಲಕ ಉಪಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿತು. ಮುಸ್ಲಿಂ ಲೀಗ್ ನ ಈ ಕಾರ್ಯದಿಂದಾಗಿಯೇ ಅಂದು ಅಂಬೇಡ್ಕರ್ ಸಂವಿಧಾನ ಸಭೆ ಪ್ರವೇಶಿಸುವಂತೆ ಮಾಡಿರುವುದನ್ನು ಚರಿತ್ರೆ ಮರೆಯಲು ಸಾಧ್ಯವೇ ಈ ಮಹಾನ್ ದೇಶ ಪ್ರೇಮಿ ಮುಸ್ಲಿಮರ ಕಾರಣದಿಂದ ಅವರು ವಿಶ್ವದ ಶ್ರೇಷ್ಠವಾದ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಲು ಸಾಧ್ಯವಾಯಿತು ಎಂಬುದನ್ನ ತುಂಬಾ ಹೆಮ್ಮೆಯಿಂದ ಸ್ಮರಿಸಿದ್ದಾರೆ.
ಇಷ್ಟು ಸ್ವಾತಂತ್ರ್ಯ ಪೂರ್ವವಾದರೆ, ಸ್ವಾತಂತ್ರ್ಯ ನಂತರದ ಭಾರತ ಕುರಿತು ವಿವರಿಸುವಾಗ ಭಾರತದಲ್ಲಿ 5,000 ಜಾತಿಗಳಿವೆ. ಜಾತಿಯ ಹೆಸರಿಲ್ಲದೆ ಯಾರನ್ನು ಗುರುತಿಸಲು ಸಾಧ್ಯವಿಲ್ಲದಷ್ಟರಮಟ್ಟಿಗೆ ಜಾತಿ ಮನುಷ್ಯನಿಗೆ ಅಂಟಿಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿ ಸಾಚಾರ್ ವರದಿಯನ್ನು ಪ್ತಸ್ತಾಪಿಸಿ ಮುಸ್ಲಿಮರ ತಲ್ಲಣಗಳೇನು, ಸ್ಥಿತಿಗತಿಯೇನು,ಅವರ ಆತಂಕಗಳೇನು,ಅವರಿಗೆ ಸಾಮಾಜಿಕ ನ್ಯಾಯ ದೊರಕುತ್ತಿದಿಯೆ? ಎಂಬುದರ ಕುರಿತು ಚಿಂತಿಸುವ,ಅದರ ಕುರಿತು ಚರ್ಚಿಸಲು ವೇದಿಕೆಗಳು ಬೇಕಾಗಿವೆ ಎಂದು ತಮ್ಮ ಮನದಾಳದ ಆಕ್ರೋಶವನ್ನ ಲೇಖಕಿ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಕುರಿತು ವಿವರಿಸುವಾಗ ಖ್ಯಾತ ಉದ್ದಮಿಯೊಬ್ಬರಾದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮುಜುಂದರ್ ಅವರು, ಕರ್ನಾಟಕದ ಭಯಂಕರ ಮೌನವನ್ನು ಮುರಿದು,”ಧರ್ಮಾಧಾರಿತ ವಿಭಜನೆಯ ಮೂಲಕ ಕರ್ನಾಟಕ ಅಪಾಯದ ಕಡೆಗೆ ಸಾಗುತ್ತಿದೆ. ಎಲ್ಲ ಸಮುದಾಯದವರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕ ರೂಪಿಸಿದ ಕಾರಣ,ಇಲ್ಲಿ ಧರ್ಮ ಆಧಾರಿತ ವಿಭಜನೆಗೆ,ಕೋಮುವಾದಕ್ಕೆ ಅನುಮತಿ ನೀಡಬಾರದೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು. ಒಂದು ವೇಳೆ ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶ ಮಾಡಲಿದೆ,ಆದ್ದರಿಂದ ತಕ್ಷಣ ಆರ್ಥಿಕ ಕ್ಷೇತ್ರದ ಧರ್ಮ ವಿಭಜನೆಯನ್ನು ತಡೆಯಿರಿ” ಎಂದು ಒತ್ತಾಯಿಸಿದ್ದನ್ನ ಪ್ರಸ್ತಾಪಿಸಿದ್ದಾರೆ.
ಮುಂದುವರೆದು ….’ಸೀತಾರಾಂ ಯಚೂರಿಯವರು ಕೋಮುಗಲಭೆಗಳ ಕುರಿತು “ಅವರು ಇದಕ್ಕಾಗಿ ಇತಿಹಾಸವನ್ನೂ,ವಿಜ್ಞಾನವನ್ನೂ ತಿರುಚುತ್ತಾರೆ. ಇತಿಹಾಸದಲ್ಲಿ ಘಟಿಸಿದ ಪ್ರಮಾದಗಳಿಗೆಲ್ಲಾ ಬಡಪಾಯಿ ಮುಸಲ್ಮಾನರನ್ನು ಹೊಣೆಗಾರರನ್ನಾಗಿ ಮಾಡಿ ಹಣಿಯಲು ಆರಂಭಿಸುತ್ತಾರೆ. ಘಜನಿ,ಘೋರಿ,ಇಂಡಿಯಾ ಪಾಕಿಸ್ತಾನ ಹೀಗೆ ದ್ವೇಷದ ವಿಷ ಬೀಜ ಬಿತ್ತುತ್ತಾ ಹೋಗುತ್ತಾರೆ. ಹೀಗೆ ಮಾಡಿ ದೇಶದ ಬಹುಮುಖಿ ಸಂಸ್ಕೃತಿಯ ಏಕತೆಯನ್ನು ಮುರಿಯುತ್ತಾರೆ” ಎಂದು ಹೇಳಿದ್ದನ್ನ ಸ್ಮರಿಸಿದ್ದಾರೆ.
ಹೀಗೆ ಲೇಖಕಿ ಷರೀಫಾ ಮೇಡಂ ಅವರು ಹಲವು ಆಯಾಮಗಳಲ್ಲಿ ಮುಸ್ಲಿಮರು ಅನುಭವಸುತ್ತಿರುವ ತಲ್ಲಣಗಳನ್ನು, &ಕೊಲೆ,ಅತ್ಯಾಚಾರಗಳಲ್ಲಿ ನ್ಯಾಯ ಸಿಗದೆ ಅನುಭವಿಸುತ್ತಿರುವ ಅನ್ಯಾಯವನ್ನ,ಅಪಮಾನವನ್ನ ಯಥಾವತ್ತಾಗಿ ಎಳೆ ಎಳೆಯಾಗಿ ಓದುಗರ ಮುಂದಿಡುವ ಜವಾಬ್ದಾರಿಯುತ ಪ್ರಯತ್ನ ಮಾಡಿದ್ದಾರೆ. ಇತಿಹಾಸ & ವರ್ತಮಾನ ಅರಿತವರಿಗೆ ಈ ಕೃತಿಯ ಆಶಯವೇನು ಎಂಬುದು ಮನದಟ್ಟಾಗುತ್ತದೆ ಎಂಬುದು ನನ್ನ ಅನಿಸಿಕೆಯಾಗಿದೆ. ಯಾರಿಗೆ ಭವಿಷ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲವೊ ಅವರು ಇತಿಹಾಸದ ಹೆಣಗಳನ್ನು ಅಗೆಯುತ್ತಾ ಕೂಡುತ್ತಾರೆ’ ಎಂದು ಹೇಳುವ ಮೂಲಕ ಪ್ರಸ್ತುತ ದಿನಮಾನದ ಆಗುಹೋಗುಗಳನ್ನ ಈ ಕೃತಿಯ ಮೂಲಕ ಮಾರ್ಮಿಕವಾಗಿ ತಿಳಿಸಿ, ‘ಮುಸ್ಲಿಮರು ದೇಶಾಭಿಮಾನಿಗಳು’ ಎಂಬುದನ್ನ ಹೆಜ್ಜೆ ಹೆಜ್ಜೆಗೂ ಸಾಬೀತುಪಡಿಸುವಂತಹ ಅನಗತ್ಯದ ಸನ್ನಿವೇಶಗಳನ್ನ ತಂದೊಡ್ಡದಿರಿ’ ಎಂಬ ಸಂದೇಶವನ್ನ ಸಾರಿದ ಲೇಖಕಿ ಕೆ.ಷರೀಫಾ ಮೇಡಂ ಅವರಿಗೂ ಹಾಗೂ ಪ್ರಕಟಿಸಿದ ಟಿ.ಎಸ್.ಗೊರವರ ಸರ್ ಅವರಿಗೆ ತುಂಬು ಹೃದಯದ ಅಭಿನಂದನೆಗಳೊಂದಿಗೆ ಧನ್ಯವಾದಗಳು.
✍️ಡಿ.ಶಬ್ರಿನಾ ಮಹಮದ್ ಅಲಿ
ಲೇಖಕಿ, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ.