ನಮ್ಮ ನಾಡಿನ ಎಲ್ಲಾ ಕಲಾ ಪ್ರಕಾರಗಳು ದೇಶ ವಿದೇಶಗಳಿಗೆ ಮಾದರಿಯಾಗಿವೆ – ದೇವರಮನೆ ಶ್ರೀ ನಿವಾಸ್.
ಹೊಸಪೇಟೆ ಡಿಸೆಂಬರ್.8

ಕರ್ನಾಟಕದ ಕಲಾ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು, ನಮ್ಮ ನಾಡಿನ ಎಲ್ಲಾ ಕಲಾ ಪ್ರಕಾರಗಳು ದೇಶ ವಿದೇಶಗಳಿಗೆ ಮಾದರಿಯಾಗಿವೆ ಈ ಕಲೆಗಳನ್ನು ಉಳಿಸಿ ಬೆಳೆಸಲು ಪ್ರಸ್ತುತ ಪ್ರೋತ್ಸಾಹದ ಅಗತ್ಯವಿದೆ ಎಂದು ಹಿರಿಯ ಕಲಾವಿದ ದೇವರಮನೆ ಶ್ರೀನಿವಾಸ್ ಹೇಳಿದರು.ಮರಗಾಲು ಕುಣಿತ ಕಲಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಾಗೇನಹಳ್ಳಿ ಗ್ರಾಮದ ಸ.ಹಿ.ಪ್ರಾ.ಶಾಲಾ ಆವರಣದಲ್ಲಿ ನಡೆದ ಸುವರ್ಣ ಕರ್ನಾಟಕ ಸಂಭ್ರಮ-50 ರ ಪ್ರಯುಕ್ತ ಹಮ್ಮಿ ಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಕರ್ನಾಟಕವು ಕಲೆಗಳ ಬೀಡು ಇಂತಹ ಕಲೆಯನ್ನು ಗ್ರಾಮೀಣ ಭಾಗದ ಜನ ಇಂದಿಗೂ ಜೀವಂತ ವಾಗಿಸಿದ್ದಾರೆ. ಇತ್ತೀಚಿಗೆ ಕರ್ನಾಟಕ ಸರ್ಕಾರವು ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಅಗತ್ಯವಿದೆ ಸಂಗೀತ ಪ್ರಕಾರವು ದೇಶ ವಿದೇಶದಲ್ಲಿ ಬೇರೆ ಬೇರೆ ಯಾಗಿರಬಹುದು. ಆದರೆ ಎಲ್ಲರನ್ನು ಸೂರೆಗೊಳ್ಳುವ ಶಕ್ತಿ ಸಂಗೀತಕ್ಕಿದೆ ಎಂದರು.ಕಲಾವಿದ ಸುಡುಗಾಡು ಸಿದ್ಧರ ಸಂಘದ ಅಧ್ಯಕ್ಷ ಶೇಖಪ್ಪ, ಸಮಾಜ ಸೇವಕ ಹೊನ್ನೂರು ವಲಿ, ಪುನೀತ್ ರಾಜಕುಮಾರ ಸಂಘದ ಅಧ್ಯಕ್ಷ ಕಿಚಿಡಿ ವಿಶ್ವ, ಉಪಾಧ್ಯಕ್ಷ ಜೋಗಿ ತಾಯಪ್ಪ, ಊರಿನ ಮುಖಂಡರಾದ ವಿಶ್ವನಾಥ, ಹೆಚ್.ಪಂಪಾಪತಿ ಇದ್ದರು. ಜಾನಪದ ನೃತ್ಯ ಕಲಾವಿದ ರಾಮಾಲಿ ತಂಡದಿಂದ ಜಾನಪದ ನೃತ್ಯ ಪ್ರದರ್ಶಿಸಿದರು. ಮರಗಾಲು ಕುಣಿತ ಕಲಾ ಸಾಂಸ್ಕೃತಿಕ ಟ್ರಸ್ಟ್ನ ತಂಡದಿಂದ ಗ್ರಾಮೀಣ ಸಾಹಸ ಪ್ರದರ್ಶನ, ನಾಗವೇಣಿ ಮತ್ತು ತಂಡದಿಂದ ಕರ್ನಾಟಕ ನಾಡು-ನುಡಿ ಬಿಂಬಿಸುವ ಭಾವ ಗೀತೆಗಳಿಗೆ ನೃತ್ಯ ರೂಪಕ ನೆರವೇರಿತು. ಊರಿನ ಕಲಾವಿದ ನಾಗೇನಹಳ್ಳಿ ಹೆಚ್.ಪಂಪಾಪತಿ ಮತ್ತು ತಂಡದವರಿಂದ ಕೋಲಾಟ ಪ್ರದರ್ಶನ ನಡೆಯಿತು. ಮುಖ್ಯೋಪಾಧ್ಯಾಯ ಡಿ.ಹನುಮಂತಪ್ಪ ಕಾರ್ಯಕ್ರಮ ನಿರ್ವಹಿಸಿದರೆ, ಏಸೋಫ್ ರವರು ಸ್ವಾಗತಿಸಿ ವಂದಿಸಿದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ