ಚಿನ್ನದಂಥ ಮನುಷ್ಯ ನಗು ಮುಖದ – ಒಡೆಯ ಅಪ್ಪು…..

ಆ ನಿಷ್ಕಲ್ಮಶ ನಗು ಅಪ್ಪುವಿನ ನಗುವಿನಲ್ಲಿ ಎಂಥದೋ ಮೋಡಿಯಿದೆ, ಆಕರ್ಷಣೆಯಿದೆ, ನಿಷ್ಕಲ್ಮಶ ಭಾವವಿದೆ. ಆ ನಗುವಿನಲ್ಲಿ ಕಪಟವಿಲ್ಲ, ನಾಟಕವಿಲ್ಲ, ಯಾರನ್ನೋ ಓಲೈಸುವ ಸ್ವಾರ್ಥವಿಲ್ಲ. ಮಗುವಿನ ನಗೆಯನ್ನು ಹೋಲುವಂತಹ ಅಪ್ಪುವಿನ ನಗು ನಮ್ಮೆಲ್ಲರಲ್ಲೂ ಒಂದು ಆತ್ಮೀಯತೆ ಬೆಳೆಸಿದ್ದು ಸುಳ್ಳಲ್ಲ. ಹಿರಿಯರು ಕಿರಿಯರು ಎನ್ನದೆ ಎಲ್ಲರನ್ನು ಸಮಾನ ಪ್ರೀತಿಯಿಂದ ಚೆನ್ನಾಗಿ ಮಾತನಾಡಿಸುವ ತಬ್ಬಿಕೊಂಡು ಬೀಳ್ಕೊಡುವ, ಗೌರವಿಸುವ, ಯಾರ ಬಗ್ಗೆಯೂ ಕೆಟ್ಟ ಮಾತು ಆಡದೆ, ಯಾರ ಮನ ನೋಯಿಸದೆ ಯಾವ ಅಪವಾದಗಳಿಗೂ ಸಿಲುಕಿಕೊಳ್ಳದೆ ಬದುಕಿದ ಅಪ್ಪು, ಎಲ್ಲಾ ಅರ್ಥದಲ್ಲೂ ಚಿನ್ನದಂಥ ಮನುಷ್ಯ

ಕಾಣದ ಕೈ ಹಾಗೆಯೇ ದಾನ ಮಾಡಿ ಪ್ರಪಂಚದಾದ್ಯಂತ ತನ್ನ ಗುರುತನ್ನು ಉಳಿಸಿ ಹೋಗಿರುವ ನಗು ಮುಖದ ಒಡೆಯ ಅಪ್ಪು. ಅವರು ಜೀವಂತವಾಗಿದ್ದಾಗ ಏನೆಲ್ಲ ಸಮಾಜಕ್ಕೆ ದಾನ ಸೇವೆಯನ್ನು ಮಾಡಿದ್ದರು ಎಂದು ಯಾರಿಗೂ ಕೂಡ ತಿಳಿದಿರಲಿಲ್ಲ ಆದರೆ ಅವರ ಮರಣದ ನಂತರ ಈ ಎಲ್ಲ ವಿಷಯಗಳು ಬೆಳಕಿಗೆ ಬಂದವು ಪ್ರಸ್ತುತ ದಿನಗಳಲ್ಲಿ ಜನರು ನಾನು ಇಷ್ಟೆಲ್ಲ ಸೇವೆ ಮಾಡುತ್ತಿದ್ದೇನೆ ಎಂದು ತೋರಿಕೆಗೋಸ್ಕರ ಮಾಡಿ ಅದನ್ನೆಲ್ಲವನ್ನು ಪ್ರಚಾರ ಮಾಡುತ್ತಾರೆ ಈ ರೀತಿ ಇರುವಾಗ ಇವರು ಮಾಡಿದ ಕೆಲಸ ನಿಜಕ್ಕೂ ಮಹತ್ವದು. ಸತ್ತ ಮೇಲೆಯೂ ಜೀವಂತವಾಗಿ ಬದುಕುತ್ತಿರುವ ವ್ಯಕ್ತಿ ಎಂದರೆ ಅಪ್ಪು, ತಂದೆಗೆ ತಕ್ಕ ಮಗನಾಗಿ ಅವರ ತಂದೆ ಡಾಕ್ಟರ್ ರಾಜಕುಮಾರ್ ಅವರು ಹೇಗೆ ಅಭಿಮಾನಿಗಳನ್ನು ಗಳಿಸಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದರು ಅದೇ ರೀತಿ ಪುನೀತ್ ರಾಜಕುಮಾರ್ ಅವರು ಕರ್ನಾಟಕದಾದ್ಯತ ಎಲ್ಲಾ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದವರು. ಮಿಂಚಿ ಮರೆಯಾದ ಜನಮನದ ಅಪ್ಪು.

ಮಾನವೀಯತೆಗೆ ಇನ್ನೊಂದು ಹೆಸರು ಅಪ್ಪು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಒಲವು. ಶಕ್ತಿಧಾಮದ ಮೂಲಕ ಅನಾಥ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಆಶ್ರಯ ಒದಗಿಸಿದ ಸಾಮಾಜಿಕ ಕಾಳಜಿ ಹೊಂದಿದ್ದ ಅಪರೂಪದ ಅಪ್ಪು ಎಂದಿಗೂ ಅಜರಾಮರ. ಮನುಷ್ಯ ಹಣ, ಆಸ್ತಿ, ಅಂತಸ್ತು ಏನ್ ಬೇಕಾದರೂ ಗಳಿಸಬಹುದು ಆದರೆ ಇನ್ನೊಬ್ಬರ ಹೃದಯದಲ್ಲಿ ಒಂದು ಸ್ಥಾನ ಗಳಿಸುವುದು ಅಷ್ಟು ಸುಲಭವಲ್ಲ. ನಮ್ಮ ಸಂಬಂಧಿಕರಲ್ಲ ಕುಲ, ಜಾತಿ, ಧರ್ಮ, ಯಾವುದೂ ನಮ್ಮದಲ್ಲದಿದ್ದರೂ ಕೂಡ ಕೆಲವೊಬ್ಬರ ಮರಣ ನಮ್ಮನ್ನು ಮೂಖರನ್ನಾಗಿಸುತ್ತದೆ, ಮನಸ್ಸನ್ನು ಘಾಸಿಗೊಳಿಸುತ್ತದೆ. ಇದೆ ಅಲ್ವಾ ನಿಷ್ಕಲ್ಮಶವಾದ ಪ್ರೀತಿ. ಅಪ್ಪು ಅವರ ಮರಣ ಕೇವಲ ಅವರ ದೇಹಕ್ಕೆ ಮಾತ್ರ ಆದರೆ ಕರುನಾಡಿನ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಜೀವಂತವಾಗಿದ್ದಾರೆ ಅಜರಾಮರ ಅಪ್ಪು ಮುಗ್ದ ನಗುವೊಂದರ ಕಣ್ಮರೆ ಅಪ್ಪು.

ಅಪ್ಪುಅವರು ಇಡೀ ಭಾರತೀಯ ಚಿತ್ರದಂಗದಲ್ಲಿಯೇ ಜಾಹೀರಾತು ಹಾಗೂ ಗಾಯನದಿಂದ ಬರುವ ತನ್ನ ಸಂಪಾದನೆ ಹಣದಿಂದ 29 ಅನಾಥಾಶ್ರಮಗಳು 49 ಉಚಿತ ಶಾಲೆಗಳು 17 ವೃದ್ದಾಶ್ರಮಗಳು 19 ಗೋಶಾಲೆಗಳು 1900 ಅನಾಥ ಮಕ್ಕಳ ಶಿಕ್ಷಣದ ಖರ್ಚು ನೋಡಿಕೊಳ್ಳುತ್ತಿರುವ ಏಕೈಕ ಹೆಮ್ಮೆಯ ಕನ್ನಡಿಗ, ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್.

ರಾಜಕುಮಾರನಾಗಲು ಶ್ರೀಮಂತಿಕೆ ಬೇಡ, ಆಡಂಬರದ ಬದುಕಬೇಡ, ಕರುಣೆ ನಿಷ್ಕಲ್ಮಶವಾದ ನಗು ಹಂಚುವ ಗುಣವಿದ್ದರೆ ಸಾಕು ಅಪ್ಪು ಹಾಗೆ ಕಾಣದೆ ಹೋದದ್ದು ನಿಮ್ಮ ದೇಹವೇ ಹೊರತು ನೀವು ನೀಡಿರುವ ಕೊಡುಗೆಯಲ್ಲ, ನೀವು ಕೊಟ್ಟಿರುವ ಸಮಯವಲ್ಲ ನೀವು ಮಾಡಿರುವ ಸಾಧನೆಗಲ್ಲ. ದಾನ ಮಾಡು ಯಾರಿಗೂ ಕಾಣದ ಹಾಗೆ ಸಾಧನೆ ಮಾಡು ಅಪ್ಪು ಹಾಗೆ ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ. ಬದುಕು ಎಂದರೆ ನದಿಯ ಹಾಗೆ ಕೊನೆಯಿಲ್ಲದ ಪಯಣ ಯಾವುದೂ ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದಿಲ್ಲ ಉಳಿಯುವುದು ಒಂದೇ ಹೃದಯ ತಟ್ಟಿದ ನೆನಪುಗಳು ಮಾತ್ರ.

ಪುನೀತ್ ರಾಜಕುಮಾರ್ ಭೌತಿಕವಾಗಿ ಇಲ್ಲವಾಗಿರಬಹುದು ಆದರೆ ಅವರು ಕನ್ನಡಿಗರ ಎದೆ ಎದೆಯಲ್ಲಿ ಶಾಶ್ವತವಾಗಿದ್ದಾರೆ. ಅವರು ನಮ್ಮ ಜೊತೆಗಿಲ್ಲವಾದರೂ ದಿನ ಕಳೆದಂತೆ ಜನರಿಗೆ ಇನ್ನಷ್ಟು ಆಪ್ತರಾಗುತ್ತಿದ್ದಾರೆ. ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅನಭಿಷಿಕ್ತ ರಾಜನೇ ಆಗಿಬಿಟ್ಟಿದ್ದಾರೆ. ಇದನ್ನೆಲ್ಲ ನೋಡಿದಾಗ ಪುನೀತ್ ರಾಜಕುಮಾರ್ ಅವರ ಬಗ್ಗೆ ಒಂದು ಬೆರಗು ಮೂಡುವುದು ಸಹಜ.

ಪುನೀತ್ ಸ್ಟಾರ್ ಪುತ್ರರಾಗಿ ಜನಿಸಿದವರು ಆದರೆ ತಾವೂ ಸ್ಟಾರ್ ಆದವರು. ಆದರೆ ಅದನ್ನು ತಲೆಗೇರಿಸಿಕೊಂಡವರಲ್ಲ ಮೇರು ನಟನ ಪುತ್ರನಾದರೂ ತಾನು ನಟನೆಯ ಸಂಬಂಧವಾಗಿ ಸೂಕ್ತ ತಯಾರಿಯೊಂದಿಗೆ ನಾಯಕನಾಗಿ ಲಾಂಚ್ ಆದರು. ಎಲ್ಲರನ್ನು ಗೌರವಿಸುವ ಕಿರಿಯರಿಗೂ ಮನ್ನಣೆ ಕೊಡುವ ವಿನಯಶೀಲತೆ ಅವರು ಕೊಟ್ಟ ದೊಡ್ಡ ಮೌಲ್ಯ.

ಪುನೀತ್ ರಾಜಕುಮಾರ್ ಒಬ್ಬ ಸ್ಟಾರ್ ನಟನಾಗಿರದೇ ಸಾಮಾಜಿಕ ಕಳಕಳಿ ಪರಿಸರದ ಬಗ್ಗೆ ಕಾಳಜಿ ಹೊಂದಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎಂಬ ಕನಸುಗಳನ್ನು ಕಂಡಿದ್ದರು. ಅದರಲ್ಲಿ ಈ ಗಂಧದ ಗುಡಿ ಚಿತ್ರವೂ ಒಂದು.

ಕರ್ನಾಟಕ ರಾಜರತ್ನ ಎಂದೇ ಖ್ಯಾತರಾಗಿದ್ದ ನಟ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಮೂರು ವರ್ಷ ಕಳೆದಿದೆ. ದಿನಗಳು ಉರುಳುತ್ತಿದ್ದರೂ ಆ ಪರಮಾತ್ಮನ ನೆನಪು ಅಭಿಮಾನಿಗಳ ಮನದಲ್ಲಿ ಜೀವಂತವಾಗಿದೆ. ನಗುಮೊಗದ ಒಡೆಯ ಎಂದೇ ಖ್ಯಾತರಾಗಿದ್ದ ಅಪ್ಪು ನಮ್ಮೊಂದಿಗಿಲ್ಲ ಅನ್ನೋದು ಬಹಳ ಬೇಸರದ ಸಂಗತಿ. ಆದರೆ ಅವರ ನೆನಪುಗಳು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಅಪ್ಪು ನಿಧನದ ನಂತರ ಅವರು ಮಾಡಿದ ಅನೇಕ ಸಮಾಜ ಸೇವೆಗಳು ಬೆಳಕಿಗೆ ಬಂದವು. ಇದು ಅದೆಷ್ಟೋ ಮಂದಿಗೆ ಸ್ಪೂರ್ತಿ ಆಯಿತು. ಹಾಗಾಗಿ ಇಂದು ಅವರ ಹೆಸರಿನಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತಿವೆ.

ಕೆಲವೊಂದು ವ್ಯಕ್ತಿತ್ವಗಳು ಎಷ್ಟು ಬರೆದರೂ ಪದಗಳಾಚೆಯೇ ಉಳಿಯುತ್ತಿವೆ. ಎಷ್ಟು ನೆನೆದರೂ ಹೃದಯ ಖಾಲಿಯಾಗುವುದೇ ಇಲ್ಲ. ಕೋಟ್ಯಾಂತರ ಜನಸಂಖ್ಯೆ ಇರುವ ಈ ಜಗತ್ತಿನಲ್ಲಿ ಇಡೀ ಒಂದು ರಾಜ್ಯವೇ ಮರುಗುವಂತೆ ಮಾಡುವಷ್ಟು ಪ್ರೀತಿ ಉಳಿಸಿ ಹೋದ ವ್ಯಕ್ತಿಗಳು ಬಹಳ ಕಡಿಮೆ. “ದೊಡ್ಮನೆ ಹುಡುಗ” ನಾಗಿ ಹುಟ್ಟಿದವನು, ಅಪ್ಪನಂತೆ “ನಟಸಾರ್ವಭೌಮ” ನಾದವನು,ಎಂದೆಂದಿಗೂ ನೀನೇ ಈ ಕರುನಾಡಿನ ಇನ್ನೊಬ್ಬ “ರಾಜಕುಮಾರ್”ನು, ಕನ್ನಡಿಗರ ಪಾಲಿನ “ಯುವರತ್ನ”ನು. ಮತ್ತೆ ಕರುನಾಡ ಎಂಬ”ಗಂಧದ ಗುಡಿ”ಯಲ್ಲಿ ಹುಟ್ಟಿ”ಪುನೀತ್”ಗೊಳಿಸಲಿ ಈ ನೆಲವನ್ನು…

ಎಲ್ಲೋ ಕೇಳಿದ ಮಾತು, ಕಲಾವಿದ ಸತ್ತರೂ ಕಲೆಗೆ ಸಾವಿಲ್ಲವಂತೆ. ಅಬ್ಬರ, ಆಡಂಬರ, ದ್ವೇಷಗಳಿಲ್ಲದ ಹಾದಿಯೊಂದರಲ್ಲಿ ನಿರ್ಮಲರಾಗಿ ನಡೆದು ಹೋಗಿದ್ದಾರೆ ಪುನೀತ್ 46 ವರ್ಷಗಳ ಚಿಕ್ಕ ಬದುಕಿನಲ್ಲೇ ದೊಡ್ಡ ಹೆಸರನ್ನು, ಪ್ರೀತಿಯನ್ನು ಉಳಿಸಿ ಹೋಗಿದ್ದಾರೆ. ದುಡ್ಡು, ಶ್ರೀಮಂತಿಕೆ, ದೊಡ್ಡಸ್ತಿಕೆಗಳೆಲ್ಲದರಾಚೆಗೂ ಉಳಿಯುವುದು ಪ್ರೀತಿ, ಮನುಷ್ಯತ್ವ ಹಾಗೂ ಹೃದಯವಂತಿಕೆ ಎಂದು ಸಾರಿ ಹೋಗಿದ್ದಾರೆ.

ಕು. ಜ್ಯೋತಿ ಆನಂದ ಚಂದುಕರ

ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button