“ಕನ್ನಡದ ಕೆಚ್ಚೆದೆಯ ಗಂಡುಗಲಿ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ – ಡಿ,ಶಬ್ರಿನಾ.ಮಹಮದ್ ಅಲಿ”…..

“ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?ಮಂತ್ರ ಕಣಾ! ಶಕ್ತಿ ಕಣಾ!ತಾಯಿ ಕಣಾ! ದೇವಿ ಕಣಾ!ಬೆಂಕಿ ಕಣಾ! ಸಿಡಿಲು ಕಣಾ!ಕಾವ ಕೊಲುವ ಒಲವ ಬಲವಪಡೆದ ಚಲದ ಚಂಡಿಕಣಾ!ಋಷಿಯ ಕಾಣ್ಬಕಣ್ಣಿಗೆ!” ಕುವೆಂಪು

ವೈಚಾರಿಕ ಪ್ರಜ್ಞೆ & ವಿಶ್ವಮಾನವ ಸಂದೇಶ ಸಾರಿದ ಕವಿ ಕುವೆಂಪು ಅವರ ಈ ಸಾಲುಗಳು” ಕರ್ನಾಟಕ ಎಂಬುದು ಹೆಸರಲ್ಲ ಅದು ನಮ್ಮೆಲ್ಲರ ಉಸಿರು” ಎಂಬ ನಿತ್ಯಸತ್ಯವನ್ನ ಸಾರಿವೆ. ಇಂತಹ ಪುಣ್ಯಭೂಮಿ ಕನ್ನಡ ನಾಡಿನಲ್ಲಿ ಜನಿಸಿದ ನಾವೆಲ್ಲರು,ನಮ್ಮ ನೆಲದ ಇತಿಹಾಸದ ಪುಟಗಳನ್ನು ತೆರೆದು ಕನ್ನಡ ನಾಡು ನುಡಿಗಾಗಿ ಹೋರಾಡಿ ಮಡಿದ ಮಹಾನೀಯರ ತ್ಯಾಗ ಬಲಿದಾನವನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ನಾನು ಭಾವಿಸುತ್ತೇನೆ.

ಈ ನಿಟ್ಟಿನಲ್ಲಿ ಬಳ್ಳಾರಿಯ ಸಾಹಿತಿಗಳಾದ ಸಿದ್ಧರಾಮ‌ ಕಲ್ಮಠ ಅವರು, ಕನ್ನಡನಾಡಿನ ಕೆಚ್ಚೆದೆಯ ಗಂಡುಗಲಿ ಪೈಲ್ವಾನ್ ರಂಜಾನ್ ಸಾಬ್ ಅವರು ಕನ್ನಡ ನಾಡು ನುಡಿಗಾಗಿ ಮಾಡಿದ ತ್ಯಾಗ ಬಲಿದಾನ ತಿಳಿಸುವ, ಕನ್ನಡಿಗರೆಲ್ಲರೂ ತಪ್ಪದೇ ಓದಲೇಬೇಕಾದ ಒಂದು ಅಮೂಲ್ಯ ಗ್ರಂಥವನ್ನು ರಚಿಸಿದ್ದಾರೆ. ಅದುವೇ ‘ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್’. ಕನ್ನಡ ರಾಜ್ಯೋತ್ಸವದ ಈ ಹೊತ್ತು ಈ ಕೃತಿಯ ಅವಲೋಕನ ಮಾಡುವ ಮೂಲಕ ರಂಜಾನ್ ಸಾಬ್ ಅವರ ತ್ಯಾಗ ಬಲಿದಾನ ಏನೆಂಬುದನ್ನ ಅರಿಯೋಣಾ.

ಪೈಲ್ವಾನ್ ರಂಜಾನ್ ಸಾಬ್ ಅವರ ಪರಿಚಯದ ಮುನ್ನ ‘ಕನ್ನಡ-ನೆಲ-ಭಾಷೆ -ಸಂಸ್ಕೃತಿ’ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ಭಾಷೆಯ ಪ್ರಾಚೀನತೆಯನ್ನು ಉದಾಹರಣೆಸಮೇತ ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅವುಗಳಲ್ಲಿ ಕೆಲವನ್ನ ಪ್ರಸ್ತಾಪಿಸುವುದಾದರೆ,ಎರಡನೇ ಶತಮಾನದ ಆರಂಭದ ಕೃತಿಗಳಲ್ಲಿ ಟಾಲೆಮಿ ಎಂಬ ಗ್ರೀಕ್ ಖಗೋಳತಜ್ಞನು ಕರ್ನಾಟಕದ ಅನೇಕ ಊರುಗಳನ್ನು ಹೆಸರಿಸಿದ್ದಾನೆ. ಉದಾ. ಕಲ್ಲಿಗೇರಿ (ಕಲ್ಕೇರಿ) ಮೋಡದೌಲ (ಮುದುಗಲ್) ಪೆಟ್ರಿಗೆಲ್ಲ (ಪಟ್ಟದಕಲ್ಲು) ಅಷ್ಟೇಯಲ್ಲದೆ ಅಶೋಕ ಶಾಸನ ಒಂದರಲ್ಲಿ ‘ಇಸಿಲಾ’ ಎಂಬ ಪದ ಕನ್ನಡದ್ದಾಗಿದೆ. ಕನ್ನಡದ ಮೊದಲ ಶಿಲಾಶಾಸನವಾದ ಹಲ್ಮಿಡಿ ಶಾಸನದ ಕಾಲ ಕ್ರಿಸ್ತಶಕ 450 ಆಗಿದೆ. 6ನೇ ಶತ ಮಾನದ ಮಂಗಳೇಶನ ಬಾದಾಮಿಯ ಗುಹಾಶಾಸನ ಕನ್ನಡ ಲಿಪಿಯಲ್ಲಿದೆ. ಕನ್ನಡದ ಮೊದಲ ಕೃತಿ ‘ಕವಿರಾಜಮಾರ್ಗ’ಬರೆಯುವ ಹೊತ್ತಿಗೆ ಹಳಗನ್ನಡ ಬಳಕೆಯಲ್ಲಿತ್ತು ಎಂದು ತಿಳಿಸಿದ್ದಾರೆ.

ಶಾಸನಾಧಾರವನ್ನು ಗಮನಿಸಿದಾಗ ಕನ್ನಡದ ಅರಸರು ಆಂಧ್ರ ಮತ್ತು ಮಹಾರಾಷ್ಟ್ರ ಪ್ರದೇಶಗಳ ಮೇಲೆ ಬಹುಕಾಲ ಕನ್ನಡದ ಬಾವುಟವನ್ನು ಆರಿಸಿದ್ದಾರೆ. ಆದ್ದರಿಂದಲೇ ಆಂಧ್ರಪ್ರದೇಶದಲ್ಲಿ 1500 ಕನ್ನಡ ಶಾಸನಗಳು ದೊರೆತಿವೆ. ಮಹಾರಾಷ್ಟ್ರದಲ್ಲಿ 500 ಶಾಸನಗಳು ತಮಿಳುನಾಡಿನಲ್ಲಿ 300 ಶಾಸನಗಳು ದೊರೆತಿವೆ ಎಂಬ ಮಾಹಿತಿ ಸ್ಮರಿಸುವ ಮೂಲಕ ಕನ್ನಡದ ಪ್ರಾಚೀನತೆಯನ್ನು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

ಲೇಖಕರಾದಂತ ಸಿದ್ದರಾಮ ಕಲ್ಮಠ ಅವರು ಈ ಕೃತಿಯನ್ನು ಏಕೆ ರಚಿಸಿದೆ ಎಂಬುದನ್ನ ತಿಳಿಸುವಾಗ ಕುವೆಂಪು ಅವರ”ದೀಕ್ಷೆ ಕೊಡು ಹಿಂದೆ ಕಂಕಣ ಕಟ್ಟಿಂದೇ ಕನ್ನಡ ನಾಡೊಂದೇ ಇನ್ನೆಂದು ತಾನೊಂದೇ” ಸಾಲುಗಳನ್ನು ಸ್ಮರಿಸಿ “ಕನ್ನಡ ನಾಡು ನುಡಿಗಾಗಿ ಸಾಮಾನ್ಯ ವ್ಯಕ್ತಿಗಳ ಸಮರ್ಪಣಾ ಭಾವವನ್ನು ಮುನ್ನೆಲೆಗೆ ತರದೆ ಪಕಕ್ಕಿರಿಸುವ ಗೊಡ್ಡು ವ್ಯವಸ್ಥೆಯ ಬಗ್ಗೆ ವಿಷಾದವ್ಯಕ್ತಪಡಿಸುತ್ತಾ, ನೈಜ ತ್ಯಾಗ ಬಲಿದಾನವನ್ನು ಯಾರೂ ಎಂದಿಗೂ ಅಲ್ಲಗಳೆಯಬಾರದು. ಇತಿಹಾಸವನ್ನು ಅವಲೋಕಿಸುವ ಸಂದರ್ಭದಲ್ಲಿ ಅಷ್ಟಾಗಿ ಮುನ್ನೆಲೆಗೆ ಬಾರದ ಕನ್ನಡದ ಕಟ್ಟಾಳು ರಂಜಾನ್ ಸಾಬ್ ಅವರ ವ್ಯಕ್ತಿತ್ವವನ್ನು ಪರಿಚಯಿಸುವುದು ಗುರುತರವರ ಕಾರ್ಯವೆಂದು ಭಾವಿಸಿದ್ದೇನೆ. ಕನ್ನಡ ನಾಡು ನುಡಿಗಾಗಿ ತನ್ನನ್ನು ತಾನು ‘ನಾಡಯಜ್ಞ’ದಲ್ಲಿ ಸಮರ್ಪಿಸಿಕೊಂಡ ಧೀರ ಹೋರಾಟಗಾರ ಕನ್ನಡ ಸೇನಾನಿಯ ಸಂಕಥನದಲ್ಲಿ ಲಭ್ಯವಿರುವ ಮಾಹಿತಿಯನ್ನು ಬಳಸಿಕೊಂಡು ಈ ಕೃತಿಯನ್ನು ರಚಿಸಿದ್ದೇನೆ”ಎಂದು ಹೇಳುತ್ತಾ ಕೃತಿ ರಚನೆಯ ಸಾರ್ಥಕಭಾವವನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ಇವರ ಈ ಸಾರ್ಥಕತೆಯ ಈ ಕೃತಿಯಲ್ಲಿ ಪೈಲ್ವಾನ್ ರಂಜಾನ್ ಸಾಬ್ ಅವರನ್ನು ಈ ಕೆಳಗಿನಂತೆ ಕಟ್ಟಿಕೊಟ್ಟಿದ್ದಾರೆ.

ಗಡಿಯಲ್ಲಿ ಕನ್ನಡ ಕಟ್ಟಿದ ಧೀರ ಪೈಲ್ವಾನ್ ರಂಜಾನ್ ಸಾಬ್!

“ನಾವು ಜನಿಸಿದ ನೆಲದ ಭಾಷೆಯನ್ನು ಪ್ರೀತಿಸಿ ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ” ಎಂಬ ಪ್ರವಾದಿ ಮೊಹಮ್ಮದ್ ಅವರ ಮಾತಿನಂತೆ ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಅವರು ಅಪ್ಪಟ ಕನ್ನಡ ಭಾಷೆ ಪ್ರೇಮಿ ಆಗಿದ್ದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅದರಲ್ಲೂ ಬಳ್ಳಾರಿಗೆ ಕನ್ನಡ ನಾಡಿನಲ್ಲಿ ಸೇರ್ಪಡೆಯಾಗಲು ಇವರ ಸೇವೆ ಮಹತ್ತರವಾದದ್ದು. ಬಳ್ಳಾರಿಯ ಬ್ರೂಸ್ ಪೇಟೆಯಲ್ಲಿರುವ ಪಿಂಜರ್ ಓಣಿಯ ಪ್ರದೇಶದಲ್ಲಿ ಹಳೆ ಮಸೀದಿಯ ಹತ್ತಿರ ವಾಸವಾಗಿದ್ದ ಅವರ ಹೋರಾಟವು ಅನನ್ಯವಾದದ್ದು. ಅವರ ಸಮುದಾಯವೂ ಆ ಸಂದರ್ಭದಲ್ಲಿ ಅವರಿಗೆ ಕನ್ನಡ ಪರ ಹೋರಾಟಕ್ಕೆ ಶಕ್ತಿ ತುಂಬಿತ್ತು ಎಂಬುದನ್ನು ಸ್ಮರಿಸಿದ್ದಾರೆ.

ರಂಜಾನ್ ಸಾಹೇಬರ ವಿಶೇಷತೆ ಏನೆಂದರೆ ಕನ್ನಡ ನೆಲವು ಪರರ ಪಾಲಾಗಬಾರದು & ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕೆಂಬುದು ಅವರ ನಾಡಿಮಿಡಿತವಾಗಿತ್ತು. ಅಂತೆಯೇ ನಾಡ ಸೇವೆಗೆ ಸದಾ ಸಿದ್ಧರಿದ್ದ ಅವರು ಅವರ ತಂಡದೊಂದಿಗೆ ಕನ್ನಡದ ಕಾವಲುಗಾರನಾಗಿ ಕೆಲಸ ಮಾಡಿದರು. ರಂಜಾನ್ ಸಾಬ್ ಕೇವಲ ವ್ಯಕ್ತಿಯಲ್ಲ; ಜನ ಹಿತಕ್ಕಾಗಿ ಸಮಷ್ಟಿ ಪ್ರಜ್ಞೆಯುಳ್ಳ ಒಂದು ಶಕ್ತಿ ಆಗಿದ್ದರು. ಆದ್ದರಿಂದ ಇಂದಿನ ಯುವಜನತೆ ಇಂತಹ ವ್ಯಕ್ತಿತ್ವಗಳಿಂದ ಪ್ರೇರಿತಗೊಂಡು ನಾಡ ಅಭಿಮಾನ ಹೊಂದಿ, ನಾಡಿನ ಏಳಿಗೆಯ ಬಗ್ಗೆ ಸದಾ ಎಚ್ಚರದಿಂದಿರಬೇಕಾದ ಅರಿವು ಪಡೆಯಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ರಂಜಾನ್ ಸಾಬ್ ಅವರ ಬಾಲ್ಯ

ರಂಜಾನ್ ಸಾಹೇಬರ ತಂದೆ ಹುಸೇನ್ ಸಾಬ್ ತಾಯಿ ಜಂಗಲಮ್ಮ. ಇವರು ತಮ್ಮ ಊರಾದ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮವನ್ನು ಬಿಟ್ಟು ಬಳ್ಳಾರಿಯ ಪಿಂಜಾರ್ ಓಣಿ ಅಥವಾ ಪಿಂಜಾರವಾಡಿಯಲ್ಲಿ ನೆಲೆಸಿದರು. ಇವರ ವೃತ್ತಿ ಅರಳೆ ವ್ಯಾಪಾರವಾಗಿತ್ತು. ಗಾದೆ ತಡಿಗಳನ್ನು ತಯಾರಿಸುವುದು ಇವರ ಕುಲಕಸುಬಾಗಿತ್ತು. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದರು. ಹಿರಿಯ ಮಗಳು ಹುಸೇನಬಿ,ಎರಡನೇ ಮಗ ರಂಜಾನ್ ಸಾಬ್ ಮೂರನೇ ಮಗಳು ಸುಲ್ತಾನ್ ಬೀ. ಹುಸೇನ್ ಸಾಬರು ತಮ್ಮ ಮಗ ರಂಜಾನ್ ಸಾಬರನ್ನು ಒಬ್ಬನೇ ಮಗನೆಂದು ಅತಿಯಾಗಿ ಪ್ರೀತಿಯಿಂದ ಆತನಿಗೆ ಯಾವುದೇ ಕಷ್ಟವಿಲ್ಲದೆ ಸುಖದಿಂದ ಜೀವ ಮಾಡಿ ಬೆಳೆಸಿದ್ದರು. ರಂಜಾನ್ ಸಾಬ್ ಕೂಡ ತಂದೆಗೆ ಯಾವ ಎದುರು ಮಾತನಾಡದೆ ಶಿಸ್ತಿನಿಂದ ಬಾಲ್ಯದ ಗೆಳೆಯರೊಂದಿಗೆ ಆಡುತ್ತ ಬೆಳೆದರು.

ರಂಜಾನ್ ಸಾಬ್ ಅವರ ವಿದ್ಯಾಭ್ಯಾಸವು ಪಿಂಜಾರ್ ಓಣಿಯಲ್ಲಿನ ಹಳೆ ಮಸೀದಿಯ ಶಾಲೆಗೆ ಸೇರಿಸಿ ಕನ್ನಡ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟರು. 1923ರ ಆಸುಪಾಸಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ರಂಜಾನ್ ಸಾಬ್ ಅವರಿಗೆ ಆರಂಭದಲ್ಲಿ ಕನ್ನಡ ಭಾಷೆಯ ಬಗ್ಗೆ ವಿಶೇಷ ಅಭಿಮಾನವಿತ್ತು. ಅವರು ಹೆಚ್ಚಿನ ಶಿಕ್ಷಣವನ್ನ ಪಡೆಯಬಹುದಾಗಿದ್ದರೂ ಚೂಟಿಯಾಗಿದ್ದ ಬಾಲಕ ಗರಡಿ ಮನೆಯ ಕಡೆಗೆ ಗಮನ ಕೊಟ್ಟು ಶಿಕ್ಷಣ ಮೊಟಕಾಯಿತು. ಪೈಲ್ವಾನನಾಗಿ ಅಲ್ಲಿನ ಗೆಳೆಯರ ಗುಂಪಿಗೆ ನಾಯಕರಾದರು. ಪೈಲ್ವಾನ್ ಗೌಸ್ ಮೋಹಿನಿದ್ದೀನ್, ಸೈಯದ್ ಕಪೂರ್ ರವರಲ್ಲದೆ ಅನೇಕರ ಜೊತೆಗೆ ಅವರಿಗೆ ಹೆಚ್ಚಿನ ಒಡನಾಟವಿದ್ದು ಆಜಾನುಬಾಹುವಾಗಿದ್ದ ರಂಜಾನ್ ಸಾಬ್ ಎಲ್ಲರ ಅಚ್ಚುಮೆಚ್ಚಿನ ಹುಡುಗನಾಗಿದ್ದರು. ಹೀಗೆ ಬೆಳೆದ ದೊಡ್ಡವನಾದ ಮಗನಿಗೆ ಹುಸೇನ್ ಸಾಬ್ ಅವರು ಸಕ್ರಮಾಬಿಯವರೊಂದಿಗೆ ವಿವಾಹ ಮಾಡಿದರು.ಈ ದಂಪತಿಳಿಗೆ ನಾಲ್ಕು ಮಕ್ಕಳಾದರು. ರಂಜಾನ್ ಬಿ ಶೇಖಣ್ಣ,ಸರ್ವಾರ್ ಸಾಬ್, ಸುಖೂರ್ ಸಾಬ್. ಹೀಗೆ ಕುಟುಂಬದ ಜವಾಬ್ದಾರಿ ಹೊತ್ತರೂ, ರಂಜಾನ್ ಸಾಬ್ ಅವರು ಕನ್ನಡ ನಾಡು ನುಡಿಗಾಗಿ ತಮ್ಮದೇ ಆದ ಸೇವೆ ಸಲ್ಲಿಸುವ ಮಾರ್ಗದಲ್ಲಿ ಸಾಗಿದರು. ಇವರ ಮತ್ತೊಂದು ಹವ್ಯಾಸ ಪಾರಿವಾಳಗಳೊಂದಿಗೆ ಅತ್ಯುತಮ ಸ್ನೇಹವನ್ನು ಬೆಳೆಸಿಕೊಂಡಿದ್ದರು ಎಂದು ತಿಳಿಸುತ್ತಾ ರಂಜಾನ್ ಸಾಬ್ ಅವರ ಬಾಲ್ಯದ ಬದುಕನ್ನ ಓದುಗರಿಗೆ ಪರಿಚಯಿಸಿದ್ದಾರೆ.

ಗರಡಿಮನೆಯ ಒಡನಾಟ ಕನ್ನಡಕ್ಕಾಗಿ ಹೋರಾಟ

ಬಳ್ಳಾರಿಯಲ್ಲೇ ಹಿಂದೆ ಗಲ್ಲಿಗೆ ಒಂದರಂತೆ ಗರಡಿ ಮನೆಗಳಿದ್ದವು. ದೇಹವನ್ನು ಕಟಮಸ್ತಾಗಿಸಲು ಪ್ರತಿನಿತ್ಯ ತಾಲಿಮೂ ಮಾಡಿ ನಾನೊಬ್ಬ ಪೈಲ್ವಾನ್ ಎಂದು ಕರೆಸಿಕೊಳ್ಳುವುದು ಆಗ ಹೆಮ್ಮೆ ತರುವ ವಿಷಯವಾಗಿತ್ತು. ಬಳ್ಳಾರಿಯ ಸುಪ್ರಸಿದ್ಧ ಪೈಲ್ವಾನರೆಲ್ಲರೂ ಮ್ಯಾಕ್ ಮೈದಾನದಲ್ಲಿ ಏರ್ಪಡಿಸಿದ ಕುಸ್ತಿ ಪಂದ್ಯಾಟಗಳಲ್ಲಿ ಭಾಗವಹಿಸುತ್ತಿದ್ದರು. ಈ ಕ್ರೀಡೆಗೆ ಪ್ರೋತ್ಸಾಹ ನೀಡುತಿದ್ದವರು ಗಡಗಿ ಚೆನ್ನಪ್ಪನವರು. ಇಂತಹ ವಾತಾವರಣದಲ್ಲಿ ಬೆಳೆದ ರಂಜಾನ್ ಸಾಬ್ ಅವರು ಚಿಕ್ಕ ವಯಸ್ಸಿನಲ್ಲಿ ಕನ್ನಡ ದೀಕ್ಷೆ ಪಡೆದಂತವರು. ಕ್ರಿಯಾ ಸಮಿತಿಯ ಸಕ್ರಿಯ ಕಾರ್ಯಕರ್ತನಾದ ಇವರನ್ನು ಕಂಡರೆ ಬಳ್ಳಾರಿ ಕನ್ನಡಿಗರಿಗೆ ಹೆಮ್ಮೆ ಇತ್ತು. ಕನ್ನಡಿಗರ ಅಚ್ಚುಮೆಚ್ಚಿನ ಯುವಕರ ಕಣ್ಮಣಿಯಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಅಜಾನುಬಾಹು ಆಕಾರ ಅವರದಾಗಿತ್ತು. ಅವರ ಮಾತು ಕೂಡ ಅಷ್ಟೇ ಖಂಡ ತುಂಡವಾಗಿತ್ತು.

ಇಂತಹ ಪೈಲ್ವಾನ್ ರಂಜಾನರು ಏಷ್ಯಾ ಖಂಡದಲ್ಲಿ ಅತ್ಯಂತ ಎತ್ತರವಾದ ಎರಡನೇ ಏಕಶಿಲಾ ಬೆಟ್ಟ ಬಳ್ಳಾರಿಯಲ್ಲಿದೆ. 500 ಮೆಟ್ಟಿಲುಗಳಿರುವ ಬೆಟ್ಟವನ್ನು ಒಂದೇ ಉಸಿರಿಗೆ ಓಡುತ್ತಾ ಹತ್ತಿ ಇಳಿಯುವ ಸಾಹಸಿಯಾಗಿದ್ದರು. ಕನ್ನಡ ನಾಡ ಸಲುವಾಗಿ ಹೊರಡಲೆಂದೇ ದೇಹವನ್ನು ಗಟ್ಟಿಗೊಳಿಸಿದರು. ಅವರಿಗೆ ತಮಗೆ ಕಲಿಸುತ್ತಿದ್ದ ಗುರುವಸ್ತಾದ ರಾಜಮೋಹಿದ್ದೀನ್ ಕಂಡರೆ ಅಪಾರ ಗೌರವ ಇತ್ತು.

ಬಳ್ಳಾರಿ ಕರ್ನಾಟಕದಿಂದ ಕೈತಪ್ಪಿ ಹೋಗುವ ಸಂದರ್ಭದಲ್ಲಿ ಕರ್ನಾಟಕ ಕ್ರಿಯಾ ಸಮಿತಿ ಸ್ಥಾಪನೆಯಾದಾಗ ರಂಜಾನ್ ಸಾಬ್ ಅವರು ಜನ ಬಲವನ್ನು, ಕಾರ್ಯಕರ್ತರನ್ನು ತಕ್ಷಣಕ್ಕೆ ಒದಗಿಸುವ ಕಾರ್ಯವಹಿಸಿಕೊಂಡರು. ಎರಡು ತಾಸುಗಳು ಸಮಯ ನೀಡಿದರೆ 500 ಜನಕ್ಕೂ ಹೆಚ್ಚು ಗರಡಿ ಮನೆ ಸದಸ್ಯರನ್ನು ,ಸಾವಿರಾರು ಕನ್ನಡ ಕರ ಕಾರ್ಯಕರ್ತರನ್ನು ಸೇರಿಸುವ ತಾಕತ್ತು ಧೈರ್ಯ ರಂಜಾನ್ ಸಾಬ್ ಅವರಿಗಿತ್ತು. ಎಲ್ ಎನ್. ಮಿಶ್ರವರು ವರದಿಗೆಂದು ಬಂದಾಗ ಪಿಂಜಾರ್ ಸಮುದಾಯದ ಜನರ ಸಹಿಯನ್ನು ಎರಡು ರಾತ್ರಿಗಳಲ್ಲಿ ಶ್ರಮವಹಿಸಿ ಮಾಡಿಸಿದ್ದರು. ಅವರ ಮಾತೆಂದರೆ ಪಿಂಜರ್ ಗಲ್ಲಿಗಳಲ್ಲಿ ವೇದವಾಕ್ಯವಾಗಿತ್ತು. ಸದಾ ಅವರ ಜೊತೆಗೆ ಜನರಿರುತ್ತಿದ್ದರು. ಏಕೀಕರಣದ ವಿಚಾರ ಬಂದಾಗ ಬಳ್ಳಾರಿ ಜಿಲ್ಲೆಯ ಜನ ತಮ್ಮ ಜಾತಿ ಮರೆತು ಈ ನಾಡು ಕಟ್ಟುವ ಕೆಲಸವನ್ನು ಕಾಯ ವಾಚ ಮನಸ ಮಾಡಿದ್ದಾರೆ. ರಂಜಾನ್ ಸಾಬ್ ರ ಈ ಕನ್ನಡ ಸೇವೆಯಿಂದಾಗಿ ಏಕೀಕರಣದ ಮಾರ್ಗ ಹಸನವಾಯಿತು ಎಂಬುದು ಉತ್ಪ್ರೇಕ್ಷೆಯಲ್ಲ ಎಂದು ಲೇಖಕ ಕಲ್ಮಠ ಅವರು ತುಂಬಾ ಹೆಮ್ಮೆಯಿಂದ ನುಡಿದಿದ್ದಾರೆ.

ಬೃಹತ್ ಪೆಂಡಾಲಿನ ಕಾವಲಿಗೆ ರಂಜಾನ್ ಸಾಬ್

ಬಳ್ಳಾರಿಯ ಕನ್ನಡಿಗರ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿತು. ಅಂದಿನ ಸರ್ಕಾರ ಸೆಪ್ಟೆಂಬರ್ ೩೦,೧೯೫೩ ರಂದು ಬಳ್ಳಾರಿಯನ್ನು ವಿಲೀನಗೊಳಿಸಿತು. ಆ ಸಂತಸಕೆ ಎಲ್ಲೆಡೆ ಸಂಭ್ರಮ ಸಡಗರ ಮನೆ ಮಾಡಿತು. ಅಕ್ಟೋಬರ್ ೨ ರಂದು ನಡೆಯುವ ವಿಜಯೋತ್ಸವಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ಬಳ್ಳಾರಿಯ ಬಿ.ಡಿ.ಎ ಮೈದಾನದಲ್ಲಿ ಸಾರ್ವಜನಿಕವಾಗಿ ರಾಜ್ಯದಲ್ಲಿ ಬಳ್ಳಾರಿಯನ್ನು ಅಧಿಕೃತ ವಿಲೀನಗೊಳಿಸಿ ಭಾಷಣ ಮಾಡುವವರಿದ್ದರು.ಆದ ಕಾರಣ ಬೃಹತ್ ಪೆಂಡಾಲಿನ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡಲಾಗಿತ್ತು. ಈ ಸಂತಸಕೆ ಕಲ್ಲು ಎಸೆಯುವ ಕೃತ್ಯ ಕನ್ನಡ ವಿರೋಧಿಗಳು ಮಾಡಬಹುದು ಎಂಬ ವದಂತಿ ಇದ್ದ ಕಾರಣ ಎಲ್ಲಾ ಕನ್ನಡ ಹೋರಾಟಗಾರರಲಿ ಆತಂಕ ಮನೆ ಮಾಡಿತು. ಆದರೂ ಎದೆಗುಂದದೆ ಇದರ ಕಾವಲಿಗೆ ಪೈಲ್ವಾನ್ ರಂಜಾನ್ ಸಾಬ್ ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸಿ ಅವರ ನೇತೃತ್ವದಲ್ಲಿ ೧೨ ಜನ ಕನ್ನಡಪರ ಕಟ್ಟಾಳುಗಳು ಬೃಹತ್ ಪೆಂಡಾಲನ್ನು ಶಿಸ್ತಿನ ಸಿಪಾಯಿಗಳಂತೆ ಕಾಯಲು ತೊಡಗಿದರು. ರಂಜಾನ್ ಸಾಬ್ ರು ದುಷ್ಟ ಶಕ್ತಿಗಳಿಂದ ಯಾವುದೇ ಕೆಡುಕಾಗಬಾರದೆಂದು ಅತ್ತಿಂದಿತ್ತ ಇತ್ತಿಂದಿತ್ತ ಓಡಾಡಿ ಕನ್ನಡ ತಾಯಿಯ ಕಾರ್ಯಕೆ ಹೆಗಲು ಕೊಟ್ಟರು.ಅವರ ಧೈರ್ಯ,ಶಕ್ತಿ,ಸಾಮರ್ಥ್ಯ ಬೇರೆಯವರಿಗೂ ಉತ್ಸಾಹ ತುಂಬಿದವು.

ಹೀಗೆ ಕನ್ನಡಕ್ಕಾಗಿಯೇ ಬದುಕಿತಿದ್ದ ರಂಜಾನ್ ಸಾಬ್ ರ ಮೇಲೆ ಪ್ರತೀಕಾರ ತಿಒರಿಸಿಕೊಳ್ಳಲು ಗುಂಪೊಂದು ಸಂಚು ಮಾಡಿತು. ಇನ್ನೇನು ಬೆಳಕು ಹರಿಯಿತೆನ್ನುವಷ್ಟರಲ್ಲಿ ಕನ್ನಡದ ಅಸ್ಮಿತೆಯ ಹೆಗ್ಗುರತಾಗಿದ್ದ ರಂಜಾನ್ ಸಾಬ್ ರ ಮೈ ಮುಖದ ಮೇಲೆ ಅ್ಯಆಸಿಡ್ ತುಂಬಿದ ಬಲ್ಬನ್ನು ಎರಚಿ ದಿಕ್ಕು ಪಾಲಾಗಿ ಓಡಿದರು. ಆ್ಯಸಿಡ್ ತಗುಲಿ ಮೈ ಮುಖ ಸುಟ್ಟರೂ ಲೆಕ್ಕಿಸದೇ ಅವರನ್ನು ಹಿಡಿಯಲು ರಂಜಾನ್ ಸಾಬ್ ಬೆನ್ನಟ್ಟಿದರು. ಕರ್ನಾಟಕ ಮಾತಾ ಕೀ ಜೈ,ಕನ್ನಡ ಉಳಿಯಲಿ ಬೆಳೆಯಲಿ ಎಂಬ ಘೋಷಣೆ ಕೂಗುತ್ತಾ ಮುಂದಾದ ಅವರಿಂದ ಆ ದ್ರೋಹಿಗಳು ತಪ್ಪಿಸಿಕೊಂಡು ಓಡಿಹೋದರು. ಅಷ್ಟೊತ್ತಿಗಾಗಲೇ ಅವರ ದೇಹವನೆಲ್ಲಾ ಅಸಿಡ್ ಆವರಿಸಿಬಿಟ್ಟಿತು. ರಂಜಾನರು ನಿತ್ರಾಣವಾದರು. ತಕ್ಷಣವೇ ಅವರನ್ನು ಬಳ್ಳಾರಿಯ ಘೋಷಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದರು.

‘ರಂಜಾನ್’ ಎಂಬ ಕನ್ನಡ ದೀಪಾ ಆರಿತು…

ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರೂ ಚಿಕಿತ್ಸೆ ಫಲಕಾರೊಯಾಗಲಿಲ್ಲ.ಕನ್ನಡೋತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಅವರ ಇಚ್ಛೆ ಈಡೇರಲಿಲ್ಲ! ಕನ್ನಡದ ಆತ್ಮ ಗೌರವವನ್ನುಎತ್ತಿ ಹಿಡಿದ ಧೀಮಂತನನ್ನು ಕನ್ನಡ ವಿರೋಧಿಗಳು ಮೋಸದಿಂದ ಕೊಂದರು. ಅಕ್ಟೋಬರ್ ೨ ೧೯೫೩ ರಂದುರಂಜಾನ್ ಸಾಬ್ ಅವರುಕನ್ನಡ ನಾಡು ನುಡಿಗಾಗಿ ದೇಹ ತ್ಯಜಿಸಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಬಲಿಯಾದ ಏಕೈಕ ಹುತಾತ್ಮರಾದರು. ನಾಡಿಗೇ ನಾಡೇ ಕಂಬನಿ ಸುರಿಸಿತು.

“ಕನ್ನಡವನ್ನೇ ಮಂತ್ರವಾಗಿಸಿಕೊಂಡ ಕನ್ನಡಮ್ಮನ ಸೇವೆ ಮಾಡಿದ ತಾಯಿ ನೆಲಕ್ಕಾಗಿ ಜೀವ ಬಿಟ್ಟ ರಂಜಾನ್ ಸಾಬ್ ಅವರ ಆತ್ಮದ ಹಣತೆ ಆರಿದರೂ ಪ್ರತಿ ಕನ್ನಡಿಗರ ಹೃದಯದಲ್ಲಿ ಅವರ ಕನ್ನಡ ಪ್ರೇಮದ ಹಣತೆ ಸದಾ ಬೆಳಗುತಿದೆ” ಎಂದು ಹೇಳುವ ಲೇಖಕರ ಸಾಲುಗಳನ್ನು ಓದಿದಾಗ ನಮಗರಿವಿಲ್ಲದೇ ಕಣ್ಣುಗಳು ಒದ್ದೆಯಾಗುತ್ತವೆ. ಕನ್ನಡಕಾಗಿ ಹೋರಾಡಿದ ಕೆಚ್ಚೆದೆಯ ಕಲಿ ಪೈಲ್ವಾನ್ ರಂಜಾನ್ ಸಾಬ್ ರ ತ್ಯಾಗ ಬಲಿದಾನವನ್ನು ಸಿದ್ಧರಾಮ ಕಲ್ಮಠ ಅವರು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಎಂದರೆ ಅತಿಶಯೋಕ್ತಿ ಆಗಲಾರದು. ನಾನು ಈ ಕೃತಿಯನ್ನು ಓದುವಾಗ ಅಂದಿನ ಆ ಸನ್ನಿವೇಶವೇ ಕಣ್ಣೆದೆರು ಬಂದಂತೆ ಭಾಸವಾಯಿತು. ಈ ಕೃತಿ ರಚಿಸುವ ಮೂಲಕ ಇಂತಹ ಅನುಭವಕೆ ಅನುವು ಮಾಡಿಕೊಟ್ಟ ಲೇಖಕ ಸಿದ್ಧರಾಮ ಕಲ್ಮಠ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿ, ಈ ಕನ್ನಡ ನೆಲದ ಅಸ್ಮಿತೆಯಾದ ಪೈಲ್ವಾನ್ ರಂಜಾನ್ ಸಾಬ್ ಅವರ ತ್ಯಾಗ ಬಲಿದಾನಕೆ ಶರಣು ಹೇಳುತ್ತಾ ನನ್ನ ಲೇಖನಿಗೆ ವಿರಾಮವನ್ನಿಡುತಿದ್ಧೇನೆ. ಧನ್ಯವಾದಗಳೊಂದಿಗೆ….

✍️ಡಿ, ಶಬ್ರಿನಾ.ಮಹಮದ್ ಅಲಿ

ಲೇಖಕಿ:ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button