ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ – ಬಸವರಾಜ ತೆಲ್ಲೂರ ನೂತನ ಅಧ್ಯಕ್ಷ.
ಆಲಮೇಲ ಸೆ.11

ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷರಾಗಿ ಬಸವರಾಜ ತೆಲ್ಲೂರ ಅವರು ಶುಕ್ರವಾರ ಅಧಿಕೃತವಾಗಿ ಪದಗ್ರಹಣ ಸ್ವೀಕರಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮವು ಶಾಸಕ ಅಶೋಕ್ ಎಂ. ಮನಗೂಳಿ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷ ಬಸವರಾಜ ತೆಲ್ಲೂರ ಅವರನ್ನು ಅಭಿನಂದಿಸಿದರು.
ವಹಾಬ್ ಸುಂಬಡ್ ಅವರ ಸೇವೆಯನ್ನು ಸ್ಮರಿಸಿದ ಸಾಧಿಕ್ ಸುಂಬುಡ್:-
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಸುಂಬುಡ್ ಅವರು, ಕಾಂಗ್ರೆಸ್ ಪಕ್ಷದ ಆತ್ಮೀಯ ಕಾರ್ಯಕರ್ತರಾಗಿದ್ದ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ವಹಾಬ್ ಸುಂಬಡ್ ಅವರು ನಿಧನರಾಗಿರುವುದನ್ನು ಸ್ಮರಿಸಿದರು.
“ವಹಾಬ್ ಸುಂಬಡ್ ಅವರು ನಮ್ಮೊಂದಿಗೆ ಆತ್ಮೀಯರಾಗಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ನಮ್ಮನ್ನು ಅಗಲಿರುವುದು ಪಕ್ಷದ ಕಾರ್ಯಕರ್ತರಿಗೆ ನೋವು ತಂದಿದೆ. ಅವರ ಸೇವೆಯನ್ನು ಗೌರವಿಸಿ, ಅವರ ಪುತ್ರ ಅನಸ ಸುಂಬಡ್ ಅವರನ್ನು ಅವರ ತಂದೆಯ ಸ್ಥಾನದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ,” ಎಂದು ಸಾಧಿಕ್ ಸುಂಬುಡ್ ಹೇಳಿದರು.
ಶಾಸಕರಾದ ಅಶೋಕ್ ಎಂ. ಮನಗೂಳಿ ಹಾಗೂ ಸಚಿವ ಎಂ.ಬಿ. ಪಾಟೀಲ ಅವರ ಆದೇಶದ ಮೇರೆಗೆ ಅನಸ ಸುಂಬಡ್ ಅವರನ್ನು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದ್ದು, ಇದೇ ಸಂದರ್ಭದಲ್ಲಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ತಂದೆಯ ಸೇವೆಯ ಪರಂಪರೆಯನ್ನು ಮುಂದುವರಿಸಿಕೊಂಡು ಅನಸ ಸುಂಬಡ್ ಅವರು ಜನಪರವಾಗಿ ಕಾರ್ಯನಿರ್ವಹಿಸಲಿ ಎಂದು ಮುಖಂಡರು ಆಶಿಸಿದರು.
“ಅಧಿಕಾರ ಸಿಕ್ಕಿದೆ ಎಂದು ನಾನು ದೊಡ್ಡವನಾಗುವುದಿಲ್ಲ”:-

ನೂತನ ಅಧ್ಯಕ್ಷ ಬಸವರಾಜ ತೆಲ್ಲೂರ ಮಾತನಾಡಿ, “ನಾನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷನಾಗಿದ್ದೇನೆ ಎಂದು ನೀವು ಎಲ್ಲರೂ ನನ್ನನ್ನು ದೊಡ್ಡ ಮಟ್ಟಕ್ಕೆ ಸೇರಿಸಬೇಡಿ. ನನಗೆ ದೊಡ್ಡ ಅಧಿಕಾರ ಸಿಕ್ಕಿದೆ ಎಂದು ನಾನು ದೊಡ್ಡವನಾಗುವುದಿಲ್ಲ. ನಾನು ಈ ಪಕ್ಷದಲ್ಲಿ ಒಬ್ಬ ಕಾರ್ಯಕರ್ತನಾಗಿ ದುಡಿದಿದ್ದೇನೆ, ಮುಂದೆಯೂ ಕಾರ್ಯಕರ್ತನಾಗಿಯೇ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ,” ಎಂದು ಹೇಳಿದರು.
ಅಧ್ಯಕ್ಷ ಸ್ಥಾನವು ಅಧಿಕಾರಕ್ಕಿಂತಲೂ ದೊಡ್ಡ ಜವಾಬ್ದಾರಿ ಯಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.
ಗಾಲಿಬಸಾಹೇಬ ಮುತ್ಯಾ ಅವರ ಆಶೀರ್ವಾದ ಸ್ಮರಣೆ:-
ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ಸ್ವೀಕರಿಸುವ ಸಂದರ್ಭದಲ್ಲಿ ಗಾಲಿಬಸಾಹೇಬ ಮುತ್ಯಾ ಅವರು ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಬಸವರಾಜ ತೆಲ್ಲೂರ ಸ್ಮರಿಸಿದರು. ಆರಂಭದಲ್ಲಿ ತಾವು ಅಧ್ಯಕ್ಷ ಸ್ಥಾನ ಪಡೆಯಲು ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಆದರೆ ಗಾಲಿಬಸಾಹೇಬ ಮುತ್ಯಾ ಅವರು “ಬಸವರಾಜ್, ನೀನೇ ಗ್ಯಾರಂಟಿ ಅಧ್ಯಕ್ಷನಾಗಬೇಕು” ಎಂದು ಪ್ರೋತ್ಸಾಹಿಸಿ ಜವಾಬ್ದಾರಿ ವಹಿಸಿ ಕೊಳ್ಳುವಂತೆ ಮಾಡಿದುದನ್ನು ಅವರು ನೆನಪಿಸಿ ಕೊಂಡರು. ಅವರ ಆಶೀರ್ವಾದವನ್ನು ಸದಾ ಸ್ಮರಿಸುವುದಾಗಿ ಹೇಳಿದರು.
ಶಾಸಕರಾದ ಅಶೋಕ್ ಮನಗೂಳಿ ಅವರ ಜನಪರ ಕಾರ್ಯಕ್ಕೆ ಮೆಚ್ಚುಗೆ:-

ಶಾಸಕರಾದ ಅಶೋಕ್ ಮನಗೂಳಿ ಅವರು ಕಾರ್ಯಕರ್ತರನ್ನು ನಿರಾಶೆ ಗೊಳಿಸದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ಮನಸ್ಸು ವಿಶಾಲವಾಗಿದ್ದು, ಪಕ್ಷ ಭೇದವಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಬಸವರಾಜ ತೆಲ್ಲೂರ ಮೆಚ್ಚುಗೆ ವ್ಯಕ್ತಪಡಿಸಿದರು.
ಆಲಮೇಲ ತಾಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ 2028 ರಲ್ಲಿ ಅಶೋಕ ಅಣ್ಣಾ ಮನಗೂಳಿ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಆರು ತಿಂಗಳ ತಾಳ್ಮೆಗೆ ಇಂದು ಫಲ:-
ವಿಜಯಪುರ ಕೆಡಿಪಿ ಸದಸ್ಯ ನೂರ ಹಮ್ಮದ್ ಅತ್ತಾರ ಮಾತನಾಡಿ, ಬಸವರಾಜ ತೆಲ್ಲೂರ ಅವರಿಗೆ ಗ್ಯಾರಂಟಿ ಸಮಿತಿ ಅಧ್ಯಕ್ಷರಾಗುವ ಆದೇಶ ಸುಮಾರು ಆರು ತಿಂಗಳ ಹಿಂದೆಯೇ ಬಂದಿತ್ತು. ಆದರೂ ಅವರು ಆತುರಪಡದೆ ತಾಳ್ಮೆಯಿಂದ ಇದ್ದು, ಸರ್ಕಾರದ ಆದೇಶಕ್ಕೆ ಗೌರವ ನೀಡಿ ಇಂದು ಜವಾಬ್ದಾರಿ ಸ್ವೀಕರಿಸಿದ್ದಾರೆ. ಅವರ ತಾಳ್ಮೆ ಹಾಗೂ ಸಹನೆ ಮೆಚ್ಚುವಂತಹದ್ದು ಎಂದು ಹೇಳಿದರು.
ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ:-
ಸಾಧಿಕ್ ಸುಂಬುಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಸುಂಬುಡ್ ಮಾತನಾಡಿ, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಜನರಿಗೆ ನೆರವು ನೀಡಲಾಗುತ್ತಿದೆ. ಅರ್ಹ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಸೌಲಭ್ಯ ತಲುಪಿಸುವುದು ಗ್ಯಾರಂಟಿ ಸಮಿತಿಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲಿ:-
ರಮೇಶ್ ಬಂಟನೂರ ಬಸವರಾಜ ತೆಲ್ಲೂರ ಅವರ ಆತ್ಮೀಯ ಸ್ನೇಹಿತ ಹಾಗೂ ಕಾರ್ಯಕ್ರಮದ ನಿರೂಪಕರಾದ ರಮೇಶ್ ಬಂಟನೂರ ಮಾತನಾಡಿ, ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಬಸವರಾಜ ಅವರು ಉತ್ತಮ ಮಾರ್ಗದಲ್ಲಿ ಸಾಗುತ್ತಾ ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಬಸವರಾಜ ತೆಲ್ಲೂರ ಮತ್ತು ಅನಸ ಸುಂಬಡ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
