ಶಾಸಕರಾದ ಅಶೋಕ್ ಮನಗೂಳಿ ನೇತೃತ್ವದಲ್ಲಿ ಪದಗ್ರಹಣ – ಗ್ಯಾರಂಟಿ ಯೋಜನೆಗಳ ಸೌಲಭ್ಯ ಮನೆ ಮನೆಗೆ ತಲುಪಿಸುವ ಭರವಸೆ ನೀಡಿದರು.
ಆಲಮೇಲ ಸೆ.12

ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷರಾಗಿ ಬಸವರಾಜ ತೆಲ್ಲೂರ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಅಧ್ಯಕ್ಷರಾಗಿದ್ದ ಅಶೋಕ್ ಕೋಳ್ಳಾರಿ ಅವರ ಸ್ಥಾನಕ್ಕೆ ಬಸವರಾಜ ತೆಲ್ಲೂರ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಆಲಮೇಲದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಾಲಯದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಶಾಸಕರಾದ ಅಶೋಕ್ ಎಂ. ಮನಗೂಳಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ತೆಲ್ಲೂರ ಅವರು ನೂತನ ಅಧ್ಯಕ್ಷರಾಗಿ ಪದಗ್ರಹಣ ಹಾಗೂ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಗ್ಯಾರಂಟಿ ಸಮಿತಿ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಜನರ ಮನೆ ಬಾಗಿಲಿಗೆ ಗ್ಯಾರಂಟಿ ಸೌಲಭ್ಯ ತಲುಪಿಸುವೆ/ ಬಸವರಾಜ ತೆಲ್ಲೂರ:-
ಪದಗ್ರಹಣದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಬಸವರಾಜ ತೆಲ್ಲೂರ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಶಾಸಕರಾದ ಅಶೋಕ್ ಮನಗೂಳಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
“ನಾನು ಅಧ್ಯಕ್ಷ ಸ್ಥಾನವನ್ನು ಕೇಳಿರಲಿಲ್ಲ. ಆದರೆ ಶಾಸಕರಾದ ಅಶೋಕ್ ಅಣ್ಣಾ ಮನಗೂಳಿ ಅವರು ‘ಬಸವರಾಜ್, ನೀನೇ ಗ್ಯಾರಂಟಿ ಅಧ್ಯಕ್ಷನಾಗಬೇಕು’ ಎಂದು ಪ್ರೋತ್ಸಾಹಿಸಿ ಈ ಜವಾಬ್ದಾರಿ ವಹಿಸಿಕೊಳ್ಳುವಂತೆ ಮಾಡಿದರು. ಅವರ ಆಶೀರ್ವಾದ ಹಾಗೂ ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ” ಎಂದು ಹೇಳಿದರು.
“ನಾನು ಒಬ್ಬ ರೈತನಾಗಿದ್ದು, ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವುದು ನನ್ನ ಉದ್ದೇಶ. ಮೋಸ, ವಂಚನೆ, ಜಾತಿ-ಭೇದ ಅಥವಾ ಯಾವುದೇ ರೀತಿಯ ಪಕ್ಷಪಾತಕ್ಕೆ ಅವಕಾಶ ನೀಡದೆ, ಗ್ಯಾರಂಟಿ ಯೋಜನೆಗಳಡಿ ಸರ್ಕಾರದಿಂದ ದೊರೆಯುವ ಎಲ್ಲ ಅರ್ಹ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಜನರ ಮನೆ ಬಾಗಿಲಿಗೆ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ” ಎಂದು ಭರವಸೆ ನೀಡಿದರು.
224 ಶಾಸಕರ ಪೈಕಿ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ/ತೆಲ್ಲೂರ:-

ಶಾಸಕರಾದ ಅಶೋಕ್ ಮನಗೂಳಿ ಅವರ ಕಾರ್ಯ ವೈಖರಿಯನ್ನು ಪ್ರಶಂಸಿಸಿದ ಬಸವರಾಜ ತೆಲ್ಲೂರ, “ರಾಜ್ಯದ 224 ಶಾಸಕರ ಪೈಕಿ ಪ್ರತಿಯೊಬ್ಬ ಕಾರ್ಯಕರ್ತನನ್ನೂ ನಿರಾಶೆ ಗೊಳಿಸದೆ, ಜನರ ಹಾಗೂ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಶಾಸಕರಾಗಿ ಅಶೋಕ್ ಮನಗೂಳಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮನಸ್ಸು ಬಹಳ ದೊಡ್ಡದು. ಯಾರ ಮನಸ್ಸನ್ನೂ ನೋಯಿಸದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಅಶೋಕ್ ಮನಗೂಳಿ ಅವರ ನೇತೃತ್ವದಲ್ಲಿ ಆಲಮೇಲ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು” ಎಂದು ಕರೆ ನೀಡಿದರು.
ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಗಳು ಸಹ ಶಾಸಕರಾದ ಅಶೋಕ್ ಮನಗೂಳಿ ಅವರ ಜನಪರ ಕಾರ್ಯಗಳನ್ನು ಪ್ರಶಂಸಿಸಿ, ನಮ್ಮ ಭಾಗಕ್ಕೆ ಇಂತಹ ಜನಪರ ವ್ಯಕ್ತಿತ್ವದ ನಾಯಕರು ಅಗತ್ಯವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ನುಡಿದಂತೆ ನಡೆಯುತ್ತಿರುವ ಸರ್ಕಾರ/ಸಾಧಿಕ್ ಸುಂಬುಡ:-
ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಸುಂಬುಡ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದು ಹೇಳಿದರು.
“ನಮ್ಮ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹2,000 ನೆರವು ನೀಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಅರ್ಹ ಕುಟುಂಬಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ” ಎಂದು ವಿವರಿಸಿದರು.
“ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿ ಕೊಂಡು ಹೋಗುವ ಬದ್ಧತೆ ಸರ್ಕಾರಕ್ಕಿದೆ. ನೂತನ ಅಧ್ಯಕ್ಷ ಬಸವರಾಜ ತೆಲ್ಲೂರ ಅವರು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ಕಾರ್ಯನಿರ್ವಹಿಸ ಬೇಕು. ಶಾಸಕರಾದ ಅಶೋಕ್ ಮನಗೂಳಿ ಅವರು ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿರುವುದು ಸಂತಸದ ಸಂಗತಿಯಾಗಿದೆ” ಎಂದು ಸಾಧಿಕ್ ಸುಂಬುಡ ಹೇಳಿದರು.
ಆರು ತಿಂಗಳ ಬಳಿಕ ದೊರೆತ ಅಧ್ಯಕ್ಷ ಸ್ಥಾನ/ನೂರ ಅಹಮದ್ ಅತ್ತಾರ್:-
ವಿಜಯಪುರ ಕೆಡಿಪಿ ಸದಸ್ಯರಾದ ನೂರ ಅಹಮದ್ ಅತ್ತಾರ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ತೆಲ್ಲೂರ ಅವರ ನೇಮಕವಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.
“ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಆದೇಶ ಪ್ರತಿಯನ್ನು ನೀಡಿದ್ದು ಸುಮಾರು ಆರು ತಿಂಗಳಾಗಿತ್ತು. ಆದರೂ ಇದುವರೆಗೆ ಅಧ್ಯಕ್ಷ ಸ್ಥಾನ ಸ್ವೀಕರಿಸುವ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಗುರುವಾರ ಗಾಲಿಬ್ ಸಾಹೇಬ್ ಮುತ್ಯಾನವಾರ ಅವರ ಸಾನ್ನಿಧ್ಯ ಹಾಗೂ ಆಶೀರ್ವಾದ ದೊರೆತ ಹಿನ್ನೆಲೆಯಲ್ಲಿ ಬಸವರಾಜ ತೆಲ್ಲೂರ ಅವರಿಗೆ ಈ ಅಧ್ಯಕ್ಷ ಸ್ಥಾನ ಲಭಿಸಿರುವುದು ತುಂಬಾ ಒಳ್ಳೆಯ ಸುದ್ದಿಯಾಗಿದೆ” ಎಂದು ಹೇಳಿದರು.
“ಶುಕ್ರವಾರದಂದು ಒಳ್ಳೆಯ ದಿನದಂದು ಅವರು ಪದಗ್ರಹಣ ಮಾಡುವ ಅವಕಾಶವೂ ದೊರೆತಿದೆ. ಬಸವರಾಜ ತೆಲ್ಲೂರ ಅವರ ಒಳ್ಳೆಯ ಅಭಿಪ್ರಾಯ, ಜನಸೇವೆಯ ಮನೋಭಾವ ಹಾಗೂ ಪಕ್ಷದ ಮೇಲಿನ ನಿಷ್ಠೆಗೆ ಒಳ್ಳೆಯ ಫಲ ದೊರೆತಿದೆ. ಅವರು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಲಿ” ಎಂದು ನೂರ ಅಹಮದ್ ಅತ್ತಾರ್ ಹಾರೈಸಿದರು.
ವಹಾಬ್ ಸುಂಬಡ ಸೇವೆಯನ್ನು ಸ್ಮರಿಸಿದ ರಮೇಶ್ ಬಂಟನೂರ:-

ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಬಂಟನೂರ ಅವರು, ಕಾಂಗ್ರೆಸ್ ಪಕ್ಷದ ಆತ್ಮೀಯ ಕಾರ್ಯಕರ್ತರಾಗಿದ್ದ ವಹಾಬ್ ಸುಂಬಡ ಅವರ ಸೇವೆಯನ್ನು ಸ್ಮರಿಸಿದರು.
“ನಮ್ಮ ಆತ್ಮೀಯ ಸ್ನೇಹಿತರಾದ ವಹಾಬ್ ಸುಂಬಡ ಅವರು ನಮ್ಮಿಂದ ಅಗಲಿರುವುದು ನೋವಿನ ಸಂಗತಿ. ಅವರು ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿಯೂ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದರು. ಅವರ ಪಕ್ಷದ ಮೇಲಿನ ನಿಷ್ಠೆ ಹಾಗೂ ಸೇವೆಯನ್ನು ಸದಾ ಸ್ಮರಿಸಬೇಕಾಗಿದೆ” ಎಂದು ಹೇಳಿದರು.
ವಹಾಬ್ ಸುಂಬಡ ಅವರು ಅಗಲಿದ ಹಿನ್ನೆಲೆಯಲ್ಲಿ ಅವರ ಪುತ್ರ ಅನಸ್ ಸುಂಬಡ ಅವರನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಿರುವುದಕ್ಕೆ ರಮೇಶ್ ಬಂಟನೂರ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅನಸ್ ಸುಂಬಡ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮಕ್ಕೆ ಮೆರುಗು ನೀಡಿದ ರಮೇಶ್ ಬಂಟನೂರ:-
ರಮೇಶ್ ಬಂಟನೂರ ಅವರು ನೂತನ ಅಧ್ಯಕ್ಷ ಬಸವರಾಜ ತೆಲ್ಲೂರ ಅವರ ಜನಪರ ಸೇವಾ ಮನೋಭಾವ ಹಾಗೂ ಶಾಸಕ ಅಶೋಕ್ ಮನಗೂಳಿ ಅವರ ಅಭಿವೃದ್ಧಿಪರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಮಿತಿಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರಮೇಶ್ ಬಂಟನೂರ ಅವರು ತಮ್ಮ ನಿರೂಪಣೆಯ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಮುಖಂಡರು, ಸದಸ್ಯರು ಹಾಗೂ ಕಾರ್ಯಕರ್ತರ ಉಪಸ್ಥಿತಿ:-
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಭು ವಾಲಿಕಾರ್, ಮಾಣಿಕ ಕಲಬಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಬಸವರಾಜ ತೆಲ್ಲೂರ ಅವರಿಗೆ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿ, ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ತಾಲೂಕಿನ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
