ಬರದಿಂದ ಹಾನಿ ಗೊಳಗಾದ ರೈತರಿಗೆ ಪ್ರತಿ ಎಕರೆಗೆ – ₹50 ಸಾವಿರ ಪರಿಹಾರ ನೀಡಲು ಆಗ್ರಹ.

ಮಾನ್ವಿ ಸೆ.27

ಸರ್ಕಾರ ಈಗಾಗಲೇ ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಘೋಷಿತ ಬರ ಪೀಡಿತ ಗ್ರಾಮಗಳಲ್ಲಿ ತಕ್ಷಣ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಆಗ್ರಹಿಸಿದರು.

ಪಟ್ಟಣದ ಬಸವ ವೃತ್ತದಲ್ಲಿ ಮೊದಲು ಪ್ರತಿಭಟನೆ ನಡೆಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಬಳಿಕ ಬಸವ ವೃತ್ತದಿಂದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ, ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.

ಮಾನ್ವಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಮುಂಗಾರು ಮಳೆ ಕೊರತೆಯಿಂದ ರೈತರ ಬೆಳೆಗಳು ಹಾನಿಗೊಳಗಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಜನರಿಗೆ ಉದ್ಯೋಗದ ಸಮಸ್ಯೆ ಎದುರಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದರು.

ಮಳೆ ಕೊರತೆಯಿಂದ ಹಾನಿ ಗೊಳಗಾದ ಬೆಳೆಗಳ ಗ್ರಾಮವಾರು ವೈಜ್ಞಾನಿಕ ಸಮೀಕ್ಷೆ ನಡೆಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಬೆಳೆಹಾನಿ ಪರಿಹಾರ ನೀಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆ ವಿಮಾ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಬರ ಪೀಡಿತ ಗ್ರಾಮಗಳಲ್ಲಿ ಹಳ್ಳ–ಕೊಳ್ಳಗಳ ಹೂಳೆತ್ತುವುದು, ಕೆರೆ–ಚೆಕ್‌ಡ್ಯಾಂಗಳ ಪುನಶ್ಚೇತನ, ಕುಡಿಯುವ ನೀರಿಗೆ ಟ್ಯಾಂಕರ್ ವ್ಯವಸ್ಥೆ, ಕೊಳವೆ ಬಾವಿ ಹಾಗೂ ಆರ್‌ಒ ಘಟಕಗಳ ದುರಸ್ತಿ, ಜಾನುವಾರುಗಳಿಗೆ ಮೇವಿನ ಬ್ಯಾಂಕ್ ಮತ್ತು ಗೋ ಶಾಲೆಗಳನ್ನು ಆರಂಭಿಸ ಬೇಕು. ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ 10 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ಮುಂದಿನ ಹಿಂಗಾರು ಮಳೆಯನ್ನು ಆಧರಿಸಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಬಿತ್ತನೆ ಬೀಜ, ರಸ ಗೊಬ್ಬರ ಹಾಗೂ ಕೃಷಿ ನೆರವು ಒದಗಿಸ ಬೇಕು. ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಬರ ಪರಿಹಾರ ಅನುದಾನ ಪಡೆಯಲು ರಾಜ್ಯ ಸರ್ಕಾರ ಸಮಗ್ರ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮಾನ್ವಿ ತಾಲ್ಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಸಿರವಾರ ತಾಲ್ಲೂಕು ಅಧ್ಯಕ್ಷ ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಟಗಿ, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಜಂಬೂನಾಥ ಯಾದವ್, ಹಿರಿಯ ಮುಖಂಡ ಜಿ. ಲೋಕರೆಡ್ಡಿ, ತಾಲ್ಲೂಕು ವಕ್ತಾರ ನಾಗರಾಜ್ ಭೋಗಾವತಿ, ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ವಕೀಲರು, ಸಿರವಾರ ಪ್ರಧಾನ ಕಾರ್ಯದರ್ಶಿ ದಾನಪ್ಪ ಸಿರವಾರ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ರೈತ ಘಟಕದ ಅಧ್ಯಕ್ಷ ಶರಣಪ್ಪ ಗೌಡ ಮದಲಾಪುರ, ಮಹಿಳಾ ಘಟಕದ ಅಧ್ಯಕ್ಷೆಯರಾದ ವಿಜಯಲಕ್ಷ್ಮೀ, ಸರ್ವಮಂಗಲ, ಮಾನ್ವಿ ನಗರ ಘಟಕದ ಅಧ್ಯಕ್ಷ ಹೆಚ್. ಮೌನೇಶ್ ಗೌಡ ಸೇರಿದಂತೆ ಚನ್ನಬಸಯ್ಯ ಸ್ವಾಮಿ, ಮಲ್ಲಪ್ಪ ಹೂಗಾರ, ರಂಜಿತ್ ಕುಮಾರ್, ವಿಜಯ ನಾಯಕ, ಲಕ್ಷ್ಮಣ ಯಾದವ್, ಶಿವರಾಜ್ ನಾಯಕ ಜಾನೇಕಲ್, ಬಾಷಾ ಸಾಬ್, ಶರಣಪ್ಪ ಮೇದಾ, ಸೂಗುರಯ್ಯ ಸ್ವಾಮಿ, ಸುಭಾನ್ ಬೇಗ್, ಎಂ.ಡಿ. ಉಸ್ಮಾನ್ ಸಾಬ್, ಯಲ್ಲಪ್ಪ ನಾಯಕ ವಕೀಲರು, ರಾಜಶೇಖರ ತೊಪ್ಪಲದೊಡ್ಡಿ, ಬಸನಗೌಡ ಆತೂನೂರು, ರುಕ್ಮುದ್ದೀನ್, ಹೆಚ್. ಮೌನೇಶ್ ಹೀರಾ, ಎಂ.ಡಿ. ಶೌಕತ್ ಅಲಿ, ಆರ್. ಬಸವರಾಜ ಶೆಟ್ಟಿ, ನಾರಾಯಣ ರಾವ್ ದೇಸಾಯಿ, ಪರಮೇಶ್ ನಾಯಕ, ಸಂಪತ್ ರಾಜ್ ಜಾಗೀರಪನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button