‘ಮೌಲ್ಯದ ಮುತ್ತು’ ಹನಿಯಿಂದ ಸಾಗರಕ್ಕೆ ಎಂಬ “ನ್ಯಾನೋ ಕಥೆಗಳ ಪುಸ್ತಕ – ವಿಮರ್ಶೆ”…..

ಅತಿ ಕಡಿಮೆ ಪದಗಳಲ್ಲಿ ಒಂದು ಘಟನೆ, ಭಾವನೆ, ಸಂದೇಶ ಅಥವಾ ಜೀವನದ ಸತ್ಯವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಚಿಕ್ಕ ಕಥೆಗಳೇ ನ್ಯಾನೋ ಕಥೆಗಳು.

ಇಂತಹ ಒಂದು ‘ಮೌಲ್ಯದ ಮುತ್ತು – ಹನಿಯಿಂದ ಸಾಗರಕ್ಕೆ’ ಎಂಬ ನ್ಯಾನೋ ಕಥೆಗಳ ಪುಸ್ತಕದ ಲೇಖಕರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶಿಕ್ಷಕರು, ಸಾಹಿತಿಗಳಾದ “ಸಹೋದರ ಮುತ್ತು ವಡ್ಡರ” ಅವರು. ಇವರ ನ್ಯಾನೋ ಕಥೆಗಳ, 100 ಪುಟಗಳ ಈ ಪುಸ್ತಕವನ್ನು ಕರುನಾಡ ಕಲ್ಪವೃಕ್ಷ ಪ್ರಕಾಶನ, ಚಿತ್ರದುರ್ಗ ಇವರು ಪ್ರಕಟಿಸಿದ್ದಾರೆ. ವೇದಾಂತ್ ಕ್ರಿಯೇಷನ್, ಗದಗ ಇವರು ಸುಂದರವಾದ ಮುಖಪುಟದ ವಿನ್ಯಾಸವನ್ನು ಮಾಡಿದ್ದಾರೆ.

ಈ ಸ್ಪೂರ್ತಿದಾಯಕ ನ್ಯಾನೋ ಕಥೆಗಳ ಪುಸ್ತಕವನ್ನು ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠದ ಪರಮ ಪೂಜ್ಯಶ್ರೀ ಮ.ನಿ.ಪ್ರ. ಶ್ರೀ ಗುರು ಮಹಾಂತ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಸರಳವಾಗಿ ಬಿಡುಗಡೆ ಗೊಳಿಸಿದ್ದು ಅತ್ಯಂತ ಸಂತಸದ ಸಂಗತಿ. ಪೂಜ್ಯರ ಅಮೃತ ಹಸ್ತದಿಂದ ಈ ‘ಮೌಲ್ಯದ ಮುತ್ತು’ ಪುಸ್ತಕಕ್ಕೆ ಮತ್ತಷ್ಟು ಮೌಲ್ಯ ಬಂದಿದೆ.

ಹೆಸರೇ ಸೂಚಿಸುವಂತೆ ಇದರಲ್ಲಿನ ಒಂದೊಂದು ಕಥೆಗಳು ಓದುತ್ತಾ ಹೋದಂತೆ ಆಸಕ್ತಿದಾಯಕವಾಗಿದ್ದು, ಲೇಖಕರು ಓದುಗರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಯನ್ನು ಬಳಸಿ, ಓದುಗರ ಗಮನವನ್ನು ಸೆಳೆದಿದ್ದಾರೆ.

ಮೊದಲು ಇಲ್ಲಿ ‘ದೇವರು ಯಾರು?’ ಎಂಬ ಕಥೆಯಲ್ಲಿ ಶ್ರೀಮಂತನಾದರೂ ಹೃದಯ ಶ್ರೀಮಂತಿಕೆ ಇಲ್ಲ, ಬಡವನಿಗೆ ಬೆಟ್ಟದಷ್ಟು ಹೃದಯ ಶ್ರೀಮಂತಿಕೆ ಇದೆ ಎಂಬ ಸಂದೇಶವನ್ನು ಸಾರಿ ಶ್ರೀಮಂತ-ಬಡವನ ನಡುವೆ ಇರುವ ವ್ಯತ್ಯಾಸವನ್ನು ತಿಳಿಸಿ ಕೊಟ್ಟಿದ್ದಾರೆ.

ನಾವು ಮಾಡುವ ಸಹಾಯವು ಇನ್ನೊಬ್ಬರಿಗೆ ಅದರಿಂದ ಉಪಯೋಗವಾಗ ಬೇಕು. ಅಂದಾಗ ಅದು ಸೇವೆ ಎನಿಸಿ ಕೊಳ್ಳುತ್ತದೆ ಎಂಬ ನೀತಿಯನ್ನು ‘ಸಮಾಜ ಸೇವೆ’ ಎಂಬ ಕಥೆ ತಿಳಿಸಿ ಕೊಡುತ್ತದೆ.

ಊರಿಗೆ ಒಳ್ಳೆಯದಾಗಲೆಂದು ತನ್ನ ಪ್ರಾಣವನ್ನೇ ಬಲಿ ಕೊಟ್ಟ ಅಜ್ಜನ ಕಥೆ ‘ಅಲ್ಪದಲ್ಲಿ ಅನಂತ’ ಎಂಬಂತೆ ಓದುಗರನ್ನು ಚಿಂತೆಗೀಡು ಮಾಡುತ್ತದೆ.

‘ಅವ್ವನ ಹರಿದ ಸೀರೆ’ ಕಥೆಯಲ್ಲಿ ತಾಯಿ ಎಂಬ ಕರುಳ ಬಳ್ಳಿ ಮಗುವಿಗೆ ಎಷ್ಟು ಅವಶ್ಯ ಎಂಬುದನ್ನು ಓದಿದಾಗ ಅರಿವಿಲ್ಲದಂತೆ ಕಣ್ಣೀರು ಬಂತು.

‘ನಾವು ಬೆಳೆಯೋಣ, ಇನ್ನೊಬ್ಬರನ್ನು ಬೆಳೆಸೋಣ’ ಎಂಬ ಮಾತು ಒಬ್ಬ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯ ಮಾತಿನಲ್ಲಿ ಕಂಡು ಬರುತ್ತದೆ. ತಾಯಿಯ ಬಗ್ಗೆ ಅಪಾರ ಮಮತೆ, ಭಕ್ತಿ ಇಟ್ಟುಕೊಂಡ ಮುತ್ತು ಸರ್, ‘ತಾಯಿಯೇ ನಮ್ಮ ದೇವರು’ ಕಥೆಯಲ್ಲಿ ತಾಯಿ ಮತ್ತು ಗುರುವಿನ ಇಬ್ಬರ ಸ್ಥಾನವನ್ನೂ ಎತ್ತರಕ್ಕೇರಿಸಿದ್ದಾರೆ.

ಇಂದಿನ ಕಾಲದ ಮಕ್ಕಳು ಮನೆಯಲ್ಲಿ ಹಿರಿಯರನ್ನೇ ಮೀರಿಸುವ ಬುದ್ಧಿಮತ್ತೆ ಉಳ್ಳವರಾಗಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿ ‘ತಿರಸ್ಕಾರ ಒಳ್ಳೆಯದಲ್ಲ’ ಎಂಬ ಕಥೆ ತಿಳಿಸುತ್ತದೆ. ಲೇಖಕರು ನಮ್ಮೆಲ್ಲರ ಅನ್ನದಾತನ ಕುರಿತಾಗಿ ‘ಅವರವರ ಕಷ್ಟ ಅವರಿಗೇ’ ಎನ್ನುವಂತೆ ರೈತರ ಸಂಕಷ್ಟವನ್ನು ‘ರೈತನ ಗೋಳು’ ಕಥೆಯಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುತ್ತು ಸರ್ ಅವರಿಗೆ ಶಾಲೆಯಲ್ಲಿ ಅವರಿಗೆ ಆದ ಅನುಭವ ಸಾಕಷ್ಟಿರಬಹುದು. ಯಾವ ರೀತಿಯ ಕನಸುಗಳನ್ನು ವಿದ್ಯಾರ್ಥಿಗಳು ಕಂಡರೆ ಚೆನ್ನ ಎಂಬುದಕ್ಕೆ ‘ಹೀಗೊಂದು ಕನಸು’ ಎಂಬ ಕಥೆಯಲ್ಲಿ ಸುಂದರವಾದ ಕನಸಿದೆ. ಇಂದಿನ ವಿದ್ಯಾರ್ಥಿಗಳು ಕೂಡ ಅಂತಹ ಕನಸನ್ನು ಕಾಣಬೇಕೆಂಬ ಸಂದೇಶವಿದೆ.

‘ತಾಳ್ಮೆಯೇ ತಪಸ್ಸು, ತಾಳ್ಮೆಯಿಂದ ಇದ್ದರೆ ಎಲ್ಲ ಕೆಲಸವೂ ಸರಾಗವಾಗಿ ಸಾಗುತ್ತದೆ. ಆದರೆ ಒಳ್ಳೆಯತನಕ್ಕೆ ಪೆಟ್ಟು ಜಾಸ್ತಿ, ಒಳ್ಳೆಯವರೇ ತುಂಬಾ ನೋವನ್ನು ಅನುಭವಿಸುವರು’ ಎಂಬ ವಿಷಯ ‘ತಾಳಿದವನು ಬಾಳಿಯಾನು’ ಕಥೆಯಲ್ಲಿ ಮೂಡಿ ಬಂದಿದೆ.

ದಾರಿಯಲ್ಲಿ ಮನಕಲಕುವ ದೃಶ್ಯ ಕಂಡು ಮನ ಪರಿವರ್ತನೆಯಾಗಿ ತಾಯಿಯನ್ನು ವೃದ್ಧಾಶ್ರಮದಿಂದ ಮನೆಗೆ ಕರೆದು ಕೊಂಡು ಬಂದ ಕಥೆ ಓದಿ ಕರುಳು ಚುರ್ ಎನ್ನುತ್ತದೆ. ಒಂದೇ ಎರಡೇ ಹಲವಾರು ವಿಷಯಗಳ ಕುರಿತು ಬರೆದ ಕಥೆ, ಓದಲು ಪ್ರಾರಂಭಿಸಿದರೆ ಮುಗಿಯುವ ವರೆಗೂ ಓದುಗನನ್ನು ಕೈಹಿಡಿದು ಕರೆದುಕೊಂಡು ಹೋಗುತ್ತದೆ.

ಚಂದಿರನಿಗಿಂತಲೂ ಮಿಗಿಲಾದ ಚೆಲುವು ಹೊಂದಿರುವ ಅಮ್ಮನ ಬಗ್ಗೆ ಮಗು ಹೇಳುವ ರೀತಿ ಇನ್ನೂ ಮುದ್ದಾಗಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೂ ಒಂದು ಸಕಾರಾತ್ಮಕ ಸಾಧನೆ ಮಾಡಬೇಕು, ಇಲ್ಲದಿದ್ದರೆ ಜೀವನವೇ ವ್ಯರ್ಥ ಎಂಬ ಮಾತು ‘ನಿಜವಾದ ಸಾಧನೆ’ ಕಥೆಯಲ್ಲಿ ಮನುಷ್ಯನನ್ನು ಎಚ್ಚರಿಸುತ್ತದೆ.

ಯಾವುದೇ ಒಂದು ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವ ಮನೋಭಾವ ಇರಬೇಕು. ಅದನ್ನು ಇಂದಿನ ಎಲ್ಲಾ ಮಕ್ಕಳು ಮೈಗೂಡಿಸಿ ಕೊಳ್ಳಬೇಕು ಎಂಬ ನೀತಿ ‘ನಿಜವಾದ ಧನ್ಯವಾದ’ ದಲ್ಲಿ ತಿಳಿದು ಬರುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಅಪ್ಪನ ಪರಿಶ್ರಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಮಕ್ಕಳಾದವರು ಅಪ್ಪನ ಗುಣ ಅರಿತಾಗ ಮಾತ್ರ ಅಪ್ಪನ ಬೆವರಿನ ಬೆಲೆ ಅರ್ಥವಾಗುತ್ತದೆ ಎಂಬ ನೀತಿ ಪಾಠ ‘ಬೆವರಿನ ಬೆಲೆ’ ಮೂಲಕ ಅರ್ಥ ಮಾಡಿಸುತ್ತದೆ.

ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಅವರ ಪ್ರತಿಭೆ ಬೆಳಗುವಂತೆ ಮಾಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂಬುದನ್ನು ‘ಗುರುವಿನ ಮಾತು’ ಕಥೆ ಸಾರಿ ಹೇಳುತ್ತದೆ. ‘ಕೊನೆಯ ರೊಟ್ಟಿ’ ಕಥೆಯಲ್ಲಿ ತಾಯಿ-ಮಗುವಿನ ಅವಿನಾಭಾವ ಸಂಬಂಧ ಚೆನ್ನಾಗಿ ಮೂಡಿ ಬಂದಿದೆ.

ಲೇಖಕರಾದ ಮುತ್ತು ಸರ್ ಅವರು ಅಪ್ಪು ಸರ್ ರವರ ಅಪ್ಪಟ ಅಭಿಮಾನಿ ಎನ್ನುವುದು ‘ಅಪ್ಪು ಅಜರಾಮರ’ ಕಥೆಯಿಂದ ತಿಳಿಯಬಹುದು. ಒಳ್ಳೆಯ ಗುಣದವರಿಗೆ ದೇವರು ಯಾವುದೇ ರೂಪದಲ್ಲಿ ಬಂದು ಕಾಪಾಡುತ್ತಾನೆ, ಅದೇ ಕೆಟ್ಟ ಗುಣ ಹೊಂದಿದವರನ್ನು ದೇವರು ಕಾಪಾಡುವುದಿಲ್ಲ ಎಂಬ ನೀತಿ ‘ಯಾವ ನ್ಯಾಯ?’ ಕಥೆ ತಿಳಿಸುತ್ತದೆ.

ತಪ್ಪು ಮಾಡುವುದು ಸಹಜ, ತಪ್ಪನ್ನು ತಿದ್ದಿಕೊಂಡು ನಡೆಯುವುದು ಜಾಣತನ ಎಂಬ ಮಾತು ‘ಪೆನ್ಸಿಲ್ ನ ಪಾಠ’ ಹೇಳುತ್ತದೆ. ಹೆಣ್ಣು ಮಕ್ಕಳಿಗೆ ತಂದೆಯೆಂದರೆ ಪಂಚಪ್ರಾಣ. ಜೀವನದಲ್ಲಿ ನಿಜವಾದ ಹೀರೋ ಎಂದರೆ ಅಪ್ಪ ಎಂದು ಅಭಿಮಾನ, ಅಕ್ಕರೆ, ಹೆಮ್ಮೆಯಿಂದ ಹೇಳಿ ಕೊಳ್ಳುವ ಹೆಣ್ಣುಮಕ್ಕಳು ಎಂಬುದಕ್ಕೆ ‘ನನ್ನೊಂದಿಗೆ ಅಪ್ಪನ ಹೆಸರು’ ಎಂಬ ಕಥೆಯಲ್ಲಿ ಸ್ಪಷ್ಟವಾಗಿ ಮೂಡಿಸಿದ್ದಾರೆ ಮುತ್ತು ಸರ್.

ಒಟ್ಟಾರೆಯಾಗಿ ಎಲ್ಲಾ ನ್ಯಾನೋ ಕಥೆಗಳು, ಅವುಗಳ ಅರ್ಥ ಮತ್ತು ಸಂದೇಶ ಆಳವಾಗಿವೆ. ಓದುಗರಲ್ಲಿ ಚಿಂತನೆ ಮೂಡಿಸುವುದು ಇವುಗಳ ವಿಶೇಷತೆ. ಈ ಎಲ್ಲಾ ನ್ಯಾನೋ ಕಥೆಗಳನ್ನು ಓದಲು ಹಚ್ಚಿ ಹಲವಾರು ವಿಚಾರಗಳನ್ನು ತಿಳಿಸಿ ಕೊಟ್ಟ ಲೇಖಕರಾದ ಮುತ್ತು ಸರ್ ಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು.

ಮುತ್ತು ಸರ್ ಅವರ ಈ ಪುಸ್ತಕವನ್ನು ಎಲ್ಲರೂ ಕೊಂಡು ಓದಿರಿ, ಓದುವ ಅಭ್ಯಾಸವನ್ನು ಹೆಚ್ಚಿಸಿ ಕೊಳ್ಳಿರಿ. ಮುತ್ತು ಸರ್ ಅವರ ಸಾಹಿತ್ಯಿಕ ಪಯಣ ಬಾನೆತ್ತರಕ್ಕೆ ಏರಲಿ, ಅವರಿಂದ ಇನ್ನೂ ಹಲವಾರು ಕೃತಿಗಳು ಪ್ರಕಟ ಗೊಳ್ಳಲಿ. ಅವರ ಬರವಣಿಗೆಯ ಕಾರ್ಯಕ್ಕೆ ದೇವರು ಇನ್ನಷ್ಟು ಶಕ್ತಿ ನೀಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅತ್ಯುತ್ತಮ ಕೃತಿಗಳು ಅವರಿಂದ ಹೊರ ಹೊಮ್ಮಲಿ ಎಂದು ಆಶಿಸುವೆ.

ಧನ್ಯವಾದಗಳು.

ಸುನಂದಾ ಪುರಾಣಿಕ,

ಹಳಿಯಾಳ, ಉತ್ತರ ಕನ್ನಡ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button