🚨ಬ್ರೇಕಿಂಗ್ ನ್ಯೂಸ್🚨 💥ಬಜಾಜ್ ಪವನ್ ಮೋಟರ್ಸ್ ಸರ್ವಿಸ್ ಸೆಂಟರ್ ಅವಾಂತರ, ಸಾರ್ವಜನಿಕರಿಗೆ ಹಾಗೂ ಶಾಲೆಗೆ – ತೆರಳುವ ಮಕ್ಕಳಿಗೆ ಪರದಾಟ!💥

ಉಡುಪಿ ಸೆ.25

ನಗರ ಸಭೆ ವ್ಯಾಪ್ತಿಯ 8ನೇ ನಿಟ್ಟೂರು ವಾರ್ಡ್‌ನಲ್ಲಿರುವ ‘ಬಜಾಜ್ (BAJAJ) ಪವನ್ ಮೋಟರ್ಸ್ (PAVAN MOTORS) ಸರ್ವಿಸ್ & ಸ್ಪೇರ್’ ಕೇಂದ್ರದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಅವೈಜ್ಞಾನಿಕ ನಿರ್ವಹಣೆಯಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಹಾಗೂ ನಗರಸಭೆ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.

ವರದಿಯ ಪ್ರಮುಖಾಂಶಗಳು:-

ಕಲುಷಿತ ನೀರು ಹಾಗೂ ರಸ್ತೆ ಸಂಚಾರ ಕಿರಿಕಿರಿ:-

ಸರ್ವಿಸ್ ಮಾಡಿದ ವಾಹನಗಳ ಕಲುಷಿತ ನೀರು ನೇರವಾಗಿ ರಸ್ತೆಗಳ ಮೇಲೆ ಚಿಮ್ಮುತ್ತಿದ್ದು, ಸಂಚರಿಸುವ ಸಾರ್ವಜನಿಕರ ಮೈಮೇಲೆ ಬೀಳುವುದರಿಂದ ತೀವ್ರ ಕಿರಿಕಿರಿಯನ್ನುಂಟುಮಾಡಿದೆ.

ರೋಗಗಳ ಭೀತಿ:-

ಈ ಸರ್ವಿಸ್ ತ್ಯಾಜ್ಯ ನೀರು ಚರಂಡಿಗೆ ಸೇರುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಗ್ಯೂ ಹಾಗೂ ಮಲೇರಿಯಾದಂತಹ ಮಾರಣಾಂತಿಕ ರೋಗಗಳು ಹರಡುವ ಗಂಭೀರ ಆತಂಕ ಎದುರಾಗಿದೆ.

ನಿಯಮ ಬಾಹಿರ ರಸ್ತೆ ಒತ್ತುವರಿ ಹಾಗೂ ರಿಪೇರಿ:-

ಸರ್ವಿಸ್‌ಗೆ ಬರುವ ವಾಹನಗಳನ್ನು ಎಲ್ಲೆಂದರಲ್ಲಿ ರಿಪೇರಿ ಮಾಡಿ ರಸ್ತೆಯಲ್ಲೇ ನಿಲ್ಲಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಂಪೌಂಡ್ ಗೋಡೆಗಳೂ ಕೂಡ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಇದಕ್ಕೆ ಅಧಿಕೃತ ಪರವಾನಿಗೆ ಇದೆಯೇ ಎಂಬ ಅನುಮಾನ ಕಾಡುತ್ತಿದೆ.

ಆದಿವಾಸಿ ಸಮುದಾಯ ಭವನದ ದುಸ್ಥಿತಿ:-

ಈ ಹತ್ತಿರದಲ್ಲೇ ಇರುವ ಆದಿವಾಸಿ ಸಮುದಾಯ ಭವನವು ಪಾಳುಬಿದ್ದು, ಅಲ್ಲಿಂದ ಕೊಳೆತ ನೀರು ಗಬ್ಬೆದ್ದು ನಾರುತ್ತಿದೆ. ನಗರ ಸಭೆ ಮತ್ತು ಜಿಲ್ಲಾಡಳಿತದ ಸಂಪೂರ್ಣ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ ಮಕ್ಕಳಿಗೆ ತೊಂದರೆ:-

ಇದೇ ಭಾಗದಲ್ಲಿ ಮುಂದೆ ಪ್ರಾಥಮಿಕ ಶಾಲೆಗಳೂ ಇದ್ದು, ಶಾಲೆಗೆ ತೆರಳುವ ಕಂದಮ್ಮಗಳು ಓಡಾಡುವ ದಾರಿಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಮತ್ತು ನೀರು ಸಿಡಿಯುವುದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಈ ರೀತಿಯ ಅನಧಿಕೃತ ಹಾಗೂ ನಿಯಮ ಬಾಹಿರ ಸರ್ವಿಸ್ ಸೆಂಟರ್‌ಗಳಿಗೆ ನಗರಸಭೆ ಪರವಾನಿಗೆ ನೀಡಿದ್ದಲ್ಲಿ, ಕೂಡಲೇ ಅದನ್ನು ರದ್ದುಪಡಿಸ ಬೇಕು. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ನಗರ ಸಭೆ ಅಧಿಕಾರಿಗಳು ಈ ಕೂಡಲೇ ಇತ್ತ ಗಮನಹರಿಸಿ, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ:ಆರತಿ.ಗಿಳಿಯಾರ.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button