ರೈತರ ನ್ಯಾಯಯುತ ಕಬ್ಬಿನ ದರಕ್ಕಾಗಿ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಅಚಲ ಹೋರಾಟದ ಸಂಕಲ್ಪ.
ಚೌಡಾಪುರ ನ.12




ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಸಮರ್ಪಕ ಬೆಲೆ ದೊರಕಿಸಿಕೊಡಬೇಕೆಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ರೈತರ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಅವರು, ರೈತರ ಹಿತಾಸಕ್ತಿಗಾಗಿ ನಿರಂತರ ಹೋರಾಟ ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಾರ್ಗವಾಗಿ ಚೌಡಾಪುರಕ್ಕೆ ತೆರಳುವ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಮುಖಾಮುಖಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಗ್ರಾಮದಿಂದ ಗ್ರಾಮಕ್ಕೆ ರೈತರು ಅಪಾರ ಪ್ರೀತಿ, ಗೌರವ ಹಾಗೂ ಅಭಿಮಾನದಿಂದ ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು.
ರೈತರೇ ದೇವರು, ರೈತರಿಗಾಗಿ ನನ್ನ ಜೀವನದ ಹೋರಾಟ:-
ಈ ಸಂದರ್ಭದಲ್ಲಿ ಮಾತನಾಡಿದ ಚುನ್ನಪ್ಪ ಪೂಜಾರಿ ಅವರು, ರೈತರು ನನಗಾಗಿ ಇದ್ದಾರೆ, ನಾನು ರೈತರಿಗಾಗಿ ಇದ್ದೇನೆ. ರೈತರು ನನಗೆ ದೇವರ ಸಮಾನ. ರೈತರ ಕಷ್ಟಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ರೈತರಿಗೆ ನ್ಯಾಯ ಸಿಗುವವರೆಗೂ ಅವರ ಪರವಾಗಿ ನನ್ನ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ಕೊರಳ್ಳಿ ಹಾಗೂ ಹೂವಿನಹಳ್ಳಿ ಗ್ರಾಮಗಳಲ್ಲಿ ರೈತರಿಂದ ಸನ್ಮಾನ:-
ಆಲಮೇಲ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ರೈತರು ರಸ್ತೆಯ ಮೇಲೆ ಕಾದು ಕುಳಿತು ಚುನ್ನಪ್ಪ ಪೂಜಾರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಬ್ಬಿನ ದರ ಹಾಗೂ ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಹೂವಿನಹಳ್ಳಿ ಗ್ರಾಮದಲ್ಲಿಯೂ ರೈತರು ಒಗ್ಗಟ್ಟಿನಿಂದ ಸೇರಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು.
ಆಲಮೇಲ ಅಂಬೇಡ್ಕರ್ ವೃತ್ತದಲ್ಲಿ ರೈತರ ಒಗ್ಗಟ್ಟಿನ ಪ್ರದರ್ಶನ:-
ಆಲಮೇಲ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರೈತರು ಹಾಗೂ ರೈತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಚುನ್ನಪ್ಪ ಪೂಜಾರಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಶಶಿ ನಾಯ್ಕೋಡಿ, ಮುತ್ತು, ಪ್ರದೀಪ್, ಗೌರ, ಮಾಂತೇಶ್ ಕತ್ತಿ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಪೀರು ನಾಯ್ಕೋಡಿ ಹಾಗೂ ತಾಲೂಕು ಅಧ್ಯಕ್ಷ ಪ್ರಶಾಂತ ಭೂಸನೂರ್ ಅವರು ರೈತರ ಪರವಾಗಿ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಆರ್. ಯಂಟಮಾನ್ ಹಾಗೂ ಮಾಜಿ ಗ್ಯಾರಂಟಿ ಅಧ್ಯಕ್ಷರಾದ ಅಶೋಕ್ ಕೊಳ್ಳಾರಿ ಅವರು ಕೂಡ ಚುನ್ನಪ್ಪ ಪೂಜಾರಿ ಅವರೊಂದಿಗೆ ಕೈಜೋಡಿಸಿ, ರೈತರಿಗೆ ನ್ಯಾಯಯುತ ಕಬ್ಬಿನ ದರ ಕೊಡಿಸುವ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಕೃಷ್ಣಾ ಬೆಲ್ಟ್ಗೆ ಸಿಗುವ ದರ ಭೀಮಾ ಬೆಲ್ಟ್ ರೈತರಿಗೂ ಸಿಗಬೇಕು:-
ಕಬ್ಬಿನ ದರದ ವಿಚಾರವಾಗಿ ಮಾತನಾಡಿದ ಚುನ್ನಪ್ಪ ಪೂಜಾರಿ ಅವರು, ಕೃಷ್ಣಾ ಬೆಲ್ಟ್ನ ರೈತರಿಗೆ ನಿಗದಿಪಡಿಸುವ ದರದ ಮಾದರಿಯಲ್ಲಿಯೇ ಭೀಮಾ ಬೆಲ್ಟ್ನ ಕಬ್ಬು ಬೆಳೆಗಾರರಿಗೂ ನ್ಯಾಯಯುತ ದರ ದೊರೆಯಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಕಳೆದ ವರ್ಷದ ದರವನ್ನೇ ಈ ವರ್ಷವೂ ಮುಂದುವರಿಸುವುದು ಸರಿಯಲ್ಲ. ಪ್ರಸ್ತುತ ಕಬ್ಬಿನ ಬೆಲೆ ಹಾಗೂ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ರೈತರಿಗೆ ಉತ್ತಮ ದರ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಬೇಡಿಕೆಗಳಿಗೆ ಸ್ಪಂದಿಸಿ ನ್ಯಾಯಯುತ ದರ ನಿಗದಿಪಡಿಸುವವರೆಗೂ ಹೋರಾಟ ಮುಂದುವರಿಯಲಿದೆ. ರೈತರಿಗೆ ನ್ಯಾಯ ದೊರೆಯದಿದ್ದರೆ ಕಾರ್ಖಾನೆಗಳ ವಿರುದ್ಧ ಬಂದ್ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಬ್ಯಾಡಗಿ ಕ್ರಾಸ್ನಲ್ಲಿ ರೈತರಿಂದ ಅದ್ಧೂರಿ ಸ್ವಾಗತ:-
ಚೌಡಾಪುರದತ್ತ ತೆರಳುವ ಮಾರ್ಗಮಧ್ಯೆ ಬ್ಯಾಡಗಿ ಕ್ರಾಸ್ ಬಳಿ ರೈತರು ಹಾಗೂ ರೈತ ಮುಖಂಡರು ಚುನ್ನಪ್ಪ ಪೂಜಾರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾದೇವಪ್ಪಗೌಡ ಪಾಟೀಲ, ಅಣ್ಣಾರಾಯ ಆಸಿಂಗಿಹಾಳ, ಪರಶುರಾಮ ಕಾಂಬಳೆ, ದೇವೇಗೌಡ ಸೇರಿದಂತೆ ಗ್ರಾಮದ ಸಮಸ್ತ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದು ಸನ್ಮಾನಿಸಿ ಗೌರವಿಸಿದರು.
ಮಡ್ನಳ್ಳಿ ಕ್ರಾಸ್ ಹಾಗೂ ಡ್ಯಾಮ್ ಕ್ರಾಸ್ನಲ್ಲಿಯೂ ಗೌರವ:-
ಮುಂದಿನ ಪ್ರಯಾಣದಲ್ಲಿ ಮಡ್ನಳ್ಳಿ ಕ್ರಾಸ್ ಹಾಗೂ ಡ್ಯಾಮ್ ಕ್ರಾಸ್ನಲ್ಲಿಯೂ ರೈತರು ಗುಂಪು ಗುಂಪಾಗಿ ಸೇರಿ ಚುನ್ನಪ್ಪ ಪೂಜಾರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ದೇವಣಗಾಂವದಲ್ಲಿ ಪ್ರಶಾಂತ ಭೂಸನೂರ್ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ರೈತರ ಹೋರಾಟಕ್ಕೆ ಹೊಸ ಚೈತನ್ಯ:-
ನಂತರ ದೇವಣಗಾಂವ ಗ್ರಾಮಕ್ಕೆ ಆಗಮಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಅವರನ್ನು ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಅತ್ಯಂತ ಉತ್ಸಾಹದಿಂದ ಬರಮಾಡಿಕೊಂಡರು. ಈ ಸ್ವಾಗತ ಕಾರ್ಯಕ್ರಮವು ರೈತ ಮುಖಂಡರಾದ ಪ್ರಶಾಂತ ಭೂಸನೂರ್ ಅವರ ನೇತೃತ್ವದಲ್ಲಿ ನಡೆಯಿತು.
ಪ್ರಶಾಂತ ಭೂಸನೂರ್ ಅವರು ರೈತರ ಸಮಸ್ಯೆಗಳು ಹಾಗೂ ಹಕ್ಕುಗಳಿಗಾಗಿ ನಡೆಯುತ್ತಿರುವ ವಿವಿಧ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ರೈತರನ್ನು ಸಂಘಟಿಸುವ ಮತ್ತು ಹೋರಾಟಕ್ಕೆ ಮುನ್ನಡೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರಿಗೆ ನ್ಯಾಯಯುತ ಕಬ್ಬಿನ ದರ ದೊರೆಯಬೇಕು ಎಂಬ ಉದ್ದೇಶದಿಂದ ನಡೆಯುತ್ತಿರುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ರೈತರ ಧ್ವನಿಗೆ ಬಲ ತುಂಬುತ್ತಿದ್ದಾರೆ.
ಚುನ್ನಪ್ಪ ಪೂಜಾರಿ ಅವರ ಆಗಮನದ ಸಂದರ್ಭದಲ್ಲಿ ಪ್ರಶಾಂತ ಭೂಸನೂರ್ ಅವರ ನೇತೃತ್ವದಲ್ಲಿ ರೈತರು ಹಾಗೂ ಗ್ರಾಮಸ್ಥರು ಹೂವಿನ ಸುರಿ ಮಳೆಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿ ಗೌರವಿಸಿದರು. ಗ್ರಾಮದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವಿವೇಕಾನಂದರ ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸಿದ ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಣಗಾಂವ ಗ್ರಾಮದ ರೈತರಾದ ರಮೇಶ್ ಎಸ್. ಗಂಗನಹಳ್ಳಿ, ವಿಠ್ಠಲ್ ಎರಗಲ್ ಹಾಗೂ ಸಿದ್ದಾರ್ಥ ಮೇಲಿನಮನಿ ಅವರು ರೈತರ ಪರವಾಗಿ ಮಾತನಾಡಿ, ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಹೆಚ್ಚುತ್ತಿರುವ ಕೃಷಿ ವೆಚ್ಚ, ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಿರುವುದು ಹಾಗೂ ರೈತರ ಆರ್ಥಿಕ ಸಂಕಷ್ಟಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆ ಬೆಳೆದರೂ ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದಿರುವುದು ವಿಷಾದನೀಯ. ರೈತರ ಬದುಕು ಸುಧಾರಿಸಬೇಕಾದರೆ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಬೇಕು. ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ದೇವಣಗಾಂವ ಬಸ್ ನಿಲ್ದಾಣದಲ್ಲಿ ರೈತರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷರ ಭರವಸೆ:-
ದೇವಣಗಾಂವ ಬಸ್ ನಿಲ್ದಾಣದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಚುನ್ನಪ್ಪ ಪೂಜಾರಿ ಅವರು, ರೈತರ ಹಿತವೇ ನನ್ನ ಹೋರಾಟದ ಮುಖ್ಯ ಗುರಿ. ರೈತರು ಸಂಕಷ್ಟದಲ್ಲಿರುವಾಗ ಅವರೊಂದಿಗೆ ನಿಲ್ಲುವುದು ನನ್ನ ಜವಾಬ್ದಾರಿ. ಕೃಷ್ಣಾ ಬೆಲ್ಟ್ಗೆ ದೊರೆಯುವ ನ್ಯಾಯಯುತ ದರ ಭೀಮಾ ಬೆಲ್ಟ್ನ ರೈತರಿಗೂ ದೊರೆಯಬೇಕು.
ಈ ಬೇಡಿಕೆ ಈಡೇರುವ ವರೆಗೂ ರೈತರ ಪರವಾಗಿ ಧ್ವನಿ ಎತ್ತುತ್ತೇನೆ. ರೈತರಿಗೆ ನ್ಯಾಯ ಸಿಗುವ ವರೆಗೂ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚರಿಸಿದರು.ಈ ಸಂದರ್ಭದಲ್ಲಿ ಪ್ರಶಾಂತ ಭೂಸನೂರ್ ಹಾಗೂ ಗ್ರಾಮದ ರೈತರು ರಾಜ್ಯಾಧ್ಯಕ್ಷರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ರೈತರ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡುವ ಸಂಕಲ್ಪ ವ್ಯಕ್ತಪಡಿಸಿದರು.
ರೈತರ ಒಗ್ಗಟ್ಟೇ ಹೋರಾಟದ ಶಕ್ತಿ:-
ಒಟ್ಟಿನಲ್ಲಿ ಆಲಮೇಲ ತಾಲೂಕಿನ ಕೊರಳ್ಳಿ, ಹೂವಿನಹಳ್ಳಿ, ಆಲಮೇಲ ಪಟ್ಟಣ, ಬ್ಯಾಡಗಿ ಕ್ರಾಸ್, ಮಡ್ನಳ್ಳಿ ಕ್ರಾಸ್, ಡ್ಯಾಮ್ ಕ್ರಾಸ್ ಹಾಗೂ ದೇವಣಗಾಂವ ಗ್ರಾಮಗಳಲ್ಲಿ ರೈತರು ತೋರಿದ ಆತ್ಮೀಯತೆ, ಗೌರವ ಮತ್ತು ಬೆಂಬಲ ರೈತರ ಒಗ್ಗಟ್ಟಿನ ಶಕ್ತಿಯನ್ನು ಪ್ರತಿ ಬಿಂಬಿಸಿತು.
ರೈತ ದೇಶದ ಬೆನ್ನೆಲುಬು. ಅನ್ನದಾತನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಾಗ ಮಾತ್ರ ಕೃಷಿ ಕ್ಷೇತ್ರ ಉಳಿಯಲು ಸಾಧ್ಯ. ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಅವರ ಪ್ರವಾಸವು ಕಬ್ಬು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ದೇವಣಗಾಂವದಲ್ಲಿ ಪ್ರಶಾಂತ ಭೂಸನೂರ್ ಅವರ ನೇತೃತ್ವದಲ್ಲಿ ನಡೆದ ಸ್ವಾಗತ ಹಾಗೂ ರೈತ ಪರ ಸಂಘಟನೆಯು ಸ್ಥಳೀಯ ರೈತರ ಒಗ್ಗಟ್ಟು ಮತ್ತು ಹೋರಾಟದ ಮನೋಭಾವಕ್ಕೆ ಸಾಕ್ಷಿ ಯಾಯಿತು.
ರೈತರ ಧ್ವನಿಗೆ ರೈತರೇ ಶಕ್ತಿ, ರೈತರ ಒಗ್ಗಟ್ಟಿಗೆ ನ್ಯಾಯವೇ ಗುರಿ. ಅನ್ನದಾತನ ಬದುಕು ಹಸನಾಗುವ ವರೆಗೂ ನ್ಯಾಯಯುತ ಕಬ್ಬಿನ ದರಕ್ಕಾಗಿ ಹೋರಾಟ ನಿರಂತರವಾಗಿರಲಿ ಎಂಬ ಸಂದೇಶ ಈ ಪ್ರವಾಸದ ಮೂಲಕ ಮೂಡಿ ಬಂದಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
