ತುಂಗಭದ್ರಾ ಡ್ಯಾಮ್ ನಲ್ಲಿ 80 ಟಿ.ಎಂ.ಸಿ ನೀರು – ಎರಡನೇ ಬೆಳೆಗೆ ನೀರು ಹರಿಸ ಬೇಕು – ಮಾಜಿ ಶಾಸಕ ರಾಜಾ.ವೆಂಕಟಪ್ಪ ನಾಯಕ.
ಮಾನ್ವಿ ಅ. 28


ಇಂದು ಪಟ್ಟಣದ ಪತ್ರಿಕಾ ಭವನದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಪತ್ರಿಕಾ ಗೋಷ್ಠಿ ನಡೆಯಿತು. ಪತ್ರಿಕಾ ಗೋಷ್ಠಿಯಲ್ಲಿ ಮೇಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ತುಂಗಭದ್ರಾ ಅಣೆಕಟ್ಟು, ಬೆಳೆ ಹಾನಿ ಹಾಗೂ ರೈತರ ಹಿತಾಸಕ್ತಿ ಕುರಿತು ಸರ್ಕಾರಕ್ಕೆ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.
ನಾಯಕರು ಮಾತನಾಡಿ “ಪ್ರಸ್ತುತ ತುಂಗಭದ್ರಾ ಅಣೆಕಟ್ಟಿನಲ್ಲಿ ಸುಮಾರು 80 ಟಿಎಂಸಿ ನೀರು ಲಭ್ಯವಿದೆ. ಈ ಬಾರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗ ಪ್ರತಿ ದಿನವೂ ಒಳ ಹರಿವು ಹೆಚ್ಚಾಗುತ್ತಿದೆ. ಎಡದಂಡೆ ನಾಲೆಯ ವ್ಯಾಪ್ತಿಯ ಎರಡನೇ ಬೆಳೆಗೆ 50 ಟಿ.ಎಂ.ಸಿ ನೀರಿನ ಅವಶ್ಯಕತೆ ಇದೆ. ಎರಡನೇ ಬೆಳೆಗೆ ನೀರನ್ನು ಹರಿಸುವುದರಿಂದ ಯಾವುದೇ ತೊಂದರೆ ಯಾಗುವುದಿಲ್ಲ. ರೈತರ ಹಿತ ಕಾಪಾಡುವುದು ಸರ್ಕಾರದ ನೈತಿಕ ಹಾಗೂ ನೈಜ ಜವಾಬ್ದಾರಿ,” ಎಂದು ಹೇಳಿದರು.

ಅವರು ವ್ಯಂಗ್ಯವಾಗಿ ಹೇಳಿದರು “ದೇವರು ವರ ಕೊಟ್ಟರು, ಪೂಜಾರಿ ವರ ಕೊಡಲಿಲ್ಲ ಎನ್ನುವ ಸ್ಥಿತಿ ಇಂದು ಎಡದಂಡೆ ನಾಲೆಯ ರೈತರದು. ರೈತರು ನಿರೀಕ್ಷೆಯಲ್ಲಿದ್ದಾರೆ ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ,” ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಮುಂದುವರಿದು ಅವರು ಹೇಳಿದರು “ಈ ಬಾರಿ ಅತಿವೃಷ್ಟಿಯಿಂದ ಹತ್ತಿ ಬೆಳೆ ಕೆಂಪಾಗಿದ್ದು, ಕಾಯಿ ಕುಳಿತು ಇಳುವರಿ ಕಡಿಮೆ ಯಾಗಿದೆ. ಬತ್ತದ ಬೆಳೆಗೆ ಕೆಂಪು ರೋಗ ಬಾಧೆ ಕಾಡುತ್ತಿದ್ದು, ಇಳುವರಿಯು ಶೇ. 50 ರಷ್ಟು ಕಡಿಮೆ ಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತೊಮ್ಮೆ ಸರ್ವೇ ಕಾರ್ಯ ನಡೆಸಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ”ಎಂದು ಒತ್ತಾಯಿಸಿದರು.
ಅದೇ ರೀತಿಯಲ್ಲಿ ಅವರು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿ ಹೇಳಿದರು “ತುಂಗಭದ್ರಾ ಡ್ಯಾಮಿನ ಕ್ರಸ್ಟ್ ಗೇಟ್‌ಗಳನ್ನು ತುರ್ತಾಗಿ ಅಳವಡಿಸಿ ಎರಡನೇ ಬೆಳೆಗೆ ನೀರನ್ನು ಹರಿಸ ಬೇಕು. ಸರ್ಕಾರ ಈ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಪ್ರಸ್ತುತ ರಿಪೇರಿ ಕಷ್ಟವಾದರೆ ಬೇಸಿಗೆ ಕಾಲದಲ್ಲಿ ಕ್ಲಸ್ಟರ್ ಗೇಟ್‌ಗಳ ಸಂಪೂರ್ಣ ರಿಪೇರಿ ಕಾರ್ಯ ಕೈಗೊಳ್ಳುವಂತೆ ಸರ್ಕಾರ ಮುಂದಾಗ ಬೇಕು,” ಎಂದು ಬೇಡಿಕೆ ಇಟ್ಟರು.
ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ಮಾನ್ವಿ ತಾಲೂಕ ಅಧ್ಯಕ್ಷ ಈರಣ್ಣ ಮರ್ಲಟ್ಟಿ. ಸಿರವಾರ ತಾಲೂಕ ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ವಕ್ತಾರ ನಾಗರಾಜ ಭೋಗಾವತಿ, ರೈತ ಘಟಕದ ಅಧ್ಯಕ್ಷ ಶರಣಪ್ಪ ಗೌಡ ಮದ್ಲಾಪೂರ, ಮುಖಂಡರಾದ ಜುಲ್ಫಿ ಹಳ್ಳಪ್ಪ ನಾಯಕ್, ಹಿಂದುಳಿದ ಘಟಕದ ಅಧ್ಯಕ್ಷ ಲಕ್ಷ್ಮಣ ಯಾದವ್ ರಬ್ಬಣಕಲ್, ತಾಲೂಕ ಘಟಕದ ಮಹಾ ಪ್ರ.ಕಾ ಪಿ.ರವಿಕುಮಾರ, ಪ್ರ.ಕಾ ಯಲ್ಲಪ್ಪ ನಾಯಕ, ನಗರದ ಘಟಕದ ಅಧ್ಯಕ್ಷ ಹೆಚ್.ಮೌನೇಶಗೌಡ, ಪರಿಶಿಷ್ಟ ಪಂಗಡದ ಅಧ್ಯಕ್ಷ ವಿಜಯ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

