ಮೀಸಲು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾನೇ – ರಾಜಾ.ವೆಂಕಟಪ್ಪ. ನಾಯಕ.
ಮಾನ್ವಿ ಜು.10

ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಮಾನ್ವಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜೆ.ಡಿ.ಎಸ್–ಬಿ.ಜೆ.ಪಿ ಮೈತ್ರಿಯ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸುವುದಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಘೋಷಿಸಿದರು.
ಪಟ್ಟಣದ ಜೆ.ಡಿ.ಎಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ಹೈಕಮಾಂಡ್ ಮಟ್ಟದಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆ ಕುರಿತು ಆಂತರಿಕ ಸೂಚನೆ ದೊರೆತಿದ್ದು, ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಜನಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷವಾಗಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಜನಪರ ಹೋರಾಟಗಳ ಮೂಲಕ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
2018 ರ ವಿಧಾನ ಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಮ್ಮ ಮೇಲೆ ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದ್ದರು. ಶಾಸಕನಾಗಿದ್ದ ಅವಧಿಯಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದೇನೆ. ರೈತರಿಗೆ ಎರಡು ಬೆಳೆಗಳಿಗೆ ನೀರು ಪೂರೈಸುವ ಉದ್ದೇಶದಿಂದ ವಿವಿಧ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಭಿವೃದ್ಧಿ ಕಾರ್ಯಗಳೇ ನನ್ನ ಬಲವಾಗಿದೆ ಎಂದು ಹೇಳಿದರು.
ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿರುವ ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲೂ ಬೆಂಬಲ ನೀಡಿ ಜೆ.ಡಿ.ಎಸ್–ಬಿ.ಜೆ.ಪಿ ಮೈತ್ರಿ ಅಭ್ಯರ್ಥಿಯಾಗಿ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆ.ಡಿ.ಎಸ್ ತಾಲೂಕು ಘಟಕದ ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಸಿರವಾರ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಗೌಡ ಬಲ್ಲಟಿಗಿ, ಬಾಷಾ ಸಾಬ್, ಪಿ. ರವಿಕುಮಾರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

