ಕರವೇ ಯಿಂದ ತಹಶೀಲ್ದಾರ್ ಕಚೇರಿ ಮುಂದೆ – ಧರಣಿ ಸತ್ಯಾಗ್ರಹದ ಎಚ್ಚರಿಕೆ.
ನಾಗಾವಿ ಜು.09

ಗದಗ ಜಿಲ್ಲೆಯ ಗದಗ ತಾಲೂಕಿನ ನಾಗಾವಿ ಹಾಗೂ ಕಳಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಭೂಗಳ್ಳರ ತಾಂಡವ ನೃತ್ಯ ಮಿತಿ ಮೀರಿದ್ದು ಬೆಲೆ ಬಾಳುವ ನೈಸರ್ಗಿಕ ಸಂಪತ್ತನ್ನು ರಾಜಾ ರೋಷವಾಗಿ ಕೊಳ್ಳೆ ಹೊಡೆಯಲಾಗುತ್ತಿದೆ.
ಹಗಲು-ರಾತ್ರಿ ಎನ್ನದೆ ಜೆಸಿಬಿ ಹಾಗೂ ಟಿಪ್ಪರ್‌ಗಳ ಮೂಲಕ ಅಕ್ರಮವಾಗಿ ಗರಸು (ಮೊರಂ) ಹಾಗೂ ಮ್ಯಾಂಗನೀಸ್ ಅದಿರನ್ನು ಲೂಟಿ ಮಾಡಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಹಾ ಲೂಟಿಯನ್ನು ಖಂಡಿಸಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬ್ರೇಕ್ ಹಾಕಲು ಇಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗದಗ ಜಿಲ್ಲಾ ಘಟಕದ ವತಿಯಿಂದ ಮಾನ್ಯ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿ, ಖಡಕ್ ಎಚ್ಚರಿಕೆಯ ಮನವಿ ಪತ್ರ ಸಲ್ಲಿಸಲಾಯಿತು.
ಭೂ ಮಾಫಿಯಾದ ಅಂಧಾಭಿಮಾನಕ್ಕೆ ಇಡೀ ಗುಡ್ಡಗಾಡು ಪ್ರದೇಶ ಮರಳುಗಾಡಾಗುತ್ತಿದೆ. ನಿಯಮ ಬಾಹಿರವಾಗಿ ಭಾರಿ ಗಾತ್ರದ ತೆಗ್ಗು-ಗುಂಡಿಗಳನ್ನು ತೋಡಿ ಅಕ್ರಮವಾಗಿ ಗರಸು ಹಾಗೂ ಮ್ಯಾಂಗನೀಸ್ ಅದಿರನ್ನು ಸಾಗಿಸುತ್ತಿರುವುದರಿಂದ ರೈತರ ಹಸು-ಕರುಗಳು ಹಾಗೂ ಸಾರ್ವಜನಿಕರು ಈ ಕಂದಕಗಳಿಗೆ ಬಿದ್ದು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ.
ಪ್ರತಿ ದಿನ ಇದೇ ರಸ್ತೆಯಲ್ಲಿ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆಯ ಅಧಿಕಾರಿಗಳ ವಾಹನಗಳು ಓಡಾಡುತ್ತಿದ್ದರೂ ಯಾವುದೋ ಅಲಿಖಿತ ಒಪ್ಪಂದಕ್ಕೆ ಒಳಗಾದವರಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತಿರುವುದು ತನಿಖಾ ದೃಷ್ಟಿಯಿಂದ ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.
ಪ್ರತಿಭಟನೆಯ ನೇತೃತ್ವ ವಹಿಸಿ ತಹಶೀಲ್ದಾರ್ ಕಚೇರಿಯ ರವಾನೆ ಗುಮಾಸ್ತರಾದ ಕುನಿಬಾಯಿ ಅವರಿಗೆ ಮನವಿ ಪತ್ರ ಹಸ್ತಾಂತರಿಸಿದ ಕರವೇ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಎಚ್. ಅಬ್ಬಿಗೇರಿ ಅವರು ಮಾತನಾಡಿ ನಾಗಾವಿ ಮತ್ತು ಕಳಸಾಪುರ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಅಕ್ರಮ ದಂಧೆಗೆ ಅಧಿಕಾರಿಗಳ ಶಾಮೀಲಾತಿ ಎದ್ದು ಕಾಣುತ್ತಿದೆ.

ಈ ಕೂಡಲೇ ಲೂಟಿಕೋರರ ಅಟ್ಟಹಾಸವನ್ನು ಮಟ್ಟ ಹಾಕಬೇಕು ಮತ್ತು ಈ ತೆಗ್ಗುಗಳಿಗೆ ಬೇಲಿ ಅಳವಡಿಸ ಬೇಕು. ಒಂದು ವೇಳೆ ತಾವುಗಳು ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗದಗ ತಾಲೂಕಾ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿ ಕೊಳ್ಳಲಾಗುವುದು ಎಂದು ಖಡಕ್ ಆಗಿ ಎಚ್ಚರಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ತಹಶೀಲ್ದಾರ್ ಕಚೇರಿಯ ರವಾನೆ ಗುಮಾಸ್ತರು, ಈ ಗಂಭೀರ ವಿಷಯವನ್ನು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಈ ಮಹತ್ವದ ಹೋರಾಟ ಹಾಗೂ ಮನವಿ ಪತ್ರ ಸಲ್ಲಿಕೆಯಲ್ಲಿ ಕರವೇ ಪ್ರಮುಖ ಮುಖಂಡರು ಹಾಗೂ ಪದಾಧಿಕಾರಿಗಳಾದ ಮೂರುತಿ ಬಿ.ಎಲ್ ಕಲ್ಮನಿ ಬಸವರಾಜ ಮೇಟಿ, ಲಕ್ಷ್ಮಣ ಹೂಲಗೇರಿ ಹುಸೇನಸಾಬ ಇ. ಕುಂದಗೋಳ ಶಾಮಲಸಾಬ ತಹಶೀಲ್ದಾರ್ ರಾಜು ಉಳ್ಳಾಗಡ್ಡಿ ಯೂಸುಫ್ ಶಾಖಾನವರ ಉರ್ಸೇನಿ ಅಲ್ಲಾ ರೂಪಾ ಎಂ. ಅಬ್ಬಿಗೇರಿ.ಕಾಸಿಂಸಾಬ ಡಿ. ಯಾದಗಿರಿ ಇಸಾಕ್ ಅಹ್ಮದ್ ನವಾಫಿ, ಸಿರಾಜ್ ದೊಡಮನಿ, ಕುಮಾರ್ ಎನ್. ರೇಣಣ್ಣನವರ, ಎಸ್.ಬಿ. ಹಿರೇಮಠ್, ಮುರ್ತುಜಾ ಗದಗ, ಭಾರತ ನಾಲಬಂದಿ, ಶಂಭು ಹಿರೇಮಠ್ ಹಾಗೂ ಆಸಿಫ್ ಬಾಲಗಾನೂರ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಭಾಗವಹಿಸಿ ಭೂಮಾಫಿಯಾ ವಿರುದ್ಧ ರಣ ಕಹಳೆ ಮೊಳಗಿಸಿದರು.
ಬಾಕ್ಸ್ ನ್ಯೂಸ್:-

ಗದಗ ತಾಲೂಕಿನ ನಾಗಾವಿ ಮತ್ತು ಕಳಸಾಪುರ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕೈಗೆತ್ತಿ ಕೊಂಡಿರುವ ಈ ಹೋರಾಟಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ವರ್ಷಗಳಿಂದ ಲೂಟಿ ಮಾಡುತ್ತಿದ್ದ ಭೂ ಮಾಫಿಯಾ ವಿರುದ್ಧ ಯಾರೂ ಧ್ವನಿ ಎತ್ತದಿದ್ದಾಗ ಜನರ ಪರವಾಗಿ ಕರವೇ ಅಧಿಕಾರಿಗಳ ಕದ ತಟ್ಟಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅಕ್ರಮದ ಕರಾಳ ಹಸ್ತ ಕೇವಲ ಗದಗ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ.
ಜಿಲ್ಲೆಯ ರೋಣ ಗಜೇಂದ್ರಗಡ ಸೇರಿದಂತೆ ಇನ್ನೂ ಅನೇಕ ಭಾಗಗಳಲ್ಲಿ ಇಂತಹ ಅಕ್ರಮ ಮರಳು ಗರಸು ಮತ್ತು ಅದಿರು ದಂಧೆಗಳು ರಾಜಾ ರೋಷವಾಗಿ ಜಾಲ ಹರಡಿ ಕೊಂಡಿವೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಅಲ್ಲೂ ಸಹ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಪ್ರಕೃತಿಯನ್ನು ನಾಶ ಪಡಿಸಲಾಗುತ್ತಿದೆ.
ನಾಗಾವಿ ಜನರ ಧ್ವನಿಯಾಗಿ ಕರವೇ ಈಗ ಹೇಗೆ ಅಖಾಡಕ್ಕಿಳಿದಿದೆಯೋ ಅದೇ ಮಾದರಿಯಲ್ಲಿ ರೋಣ ಮತ್ತು ಗಜೇಂದ್ರಗಡ ಭಾಗದಲ್ಲಿ ನಡೆಯುತ್ತಿರುವ ಮಹಾ ಲೂಟಿಯ ವಿರುದ್ಧವೂ ಸಂಘಟನೆ ಮತ್ತು ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತ ಬೇಕಿದೆ. ಜಿಲ್ಲಾಡಳಿತ ಕೇವಲ ಒಂದು ತಾಲೂಕಿಗೆ ಸೀಮಿತವಾಗದೆ ಇಡೀ ಗದಗ ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಿ ಇಂತಹ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕ ಬೇಕಿದೆ ಎಂದು ಮಾಧ್ಯಮದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗುತ್ತಿದೆ.
ವರದಿ:ಅಂದಪ್ಪ.ಮಾದರ ಜಿಲ್ಲಾ ವರದಿಗಾರರು.ಗದಗ

