ಮಳೆಗಾಗಿ ಜನತಾದಳ ಜಾತ್ಯತೀತ ಪಕ್ಷದ ಮಳೆಗಾಗಿ ಪಾದಯಾತ್ರೆ – ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಕೆ.
ಮಾನ್ವಿ ಜು.18

ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಬೇಕು, ತುಂಗಭದ್ರ ಜಲಾಶಯ ಭರ್ತಿಯಾಗಿ ನಾಡು ಸುಭಿಕ್ಷೆ ವಾಗಬೇಕು ಎಂಬ ಸಂಕಲ್ಪದೊಂದಿಗೆ ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ಶುಕ್ರವಾರ ಮಾನ್ವಿ ಪಟ್ಟಣದಿಂದ ನೀರಮಾನ್ವಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ವರೆಗೆ.
ಸುಮಾರು 15 ಕಿಲೋ ಮೀಟರ್ ದೂರವನ್ನು ಏಳು ಗಂಟೆಗಳ ಕಾಲ ಸಾವಿರಾರು ಕಾರ್ಯಕರ್ತರು ಹಾಗೂ ರೈತರೊಂದಿಗೆ ವಿಶೇಷ ಪಾದಯಾತ್ರೆ ನಡೆಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಪಟ್ಟಣದ ಗ್ರಾಮ ದೇವತೆಯಾದ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ.
ಈ ವರ್ಷ ಸಮರ್ಪಕವಾಗಿ ಮಳೆಯಾಗದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ತುಂಗಭದ್ರ ನದಿಯ ಒಡಲು ಬರಿದಾಗಿದ್ದು, ರೈತರ ಬೆಳೆಗಳು ಒಣಗುತ್ತಿವೆ. ರೈತರು ಸಮೃದ್ಧಿ ಯಾಗಿದ್ದರೆ ಮಾತ್ರ ರಾಜ್ಯವೂ ಸುಭಿಕ್ಷವಾಗಿರುತ್ತದೆ.
ಉತ್ತಮ ಮಳೆಯಾಗಿ ತುಂಗಭದ್ರ ಜಲಾಶಯ ಭರ್ತಿಯಾದರೆ ಈ ಭಾಗದ ಜನರು ಹಾಗೂ ಜಾನುವಾರುಗಳಿಗೆ ಅಗತ್ಯ ನೀರು ದೊರೆಯಲಿದೆ. ಇದೇ ಉದ್ದೇಶದಿಂದ ಈ ಹಿಂದೆ ಸಿಂಧನೂರಿನಿಂದ ಅಂಬಾಮಠದ ವರೆಗೆ ಮಳೆಗಾಗಿ ಪಾದಯಾತ್ರೆ ನಡೆಸಲಾಗಿತ್ತು.
ಅದೇ ಸಂಕಲ್ಪದೊಂದಿಗೆ ಇಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನೇತೃತ್ವದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕಳೆದ ಎರಡು ತಿಂಗಳಿಂದ ತಾಲೂಕಿನಲ್ಲಿ ಸಮರ್ಪಕ ಮುಂಗಾರು ಮಳೆಯಾಗದೆ ಬರದ ವಾತಾವರಣ ನಿರ್ಮಾಣವಾಗಿದೆ. ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತೀವ್ರ ಗೊಂಡಿದೆ. ಆದ್ದರಿಂದ ಲೋಕ ಕಲ್ಯಾಣ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತರ ಹಿತಕ್ಕಾಗಿ ತಾಲೂಕಿನ ಶಕ್ತಿ ದೇವತೆಯಾದ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಪಾದಯಾತ್ರೆಯು ಮಾರಿಕಾಂಬಾ ದೇವಿ ದೇವಸ್ಥಾನದಿಂದ ಆರಂಭಗೊಂಡು ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ, ಕಚೇರಿ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾ ನೀರಮಾನ್ವಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ತಲುಪಿತು.
ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಹಾಗೂ ನಾಡು ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಲಾಯಿತು.
ಪಾದಯಾತ್ರೆಯುದ್ದಕ್ಕೂ ರೈತರು, ಪಕ್ಷದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು.
ಅಲ್ಲದೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ರೈತರು, ಮುಖಂಡರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ದಾರಿಯುದ್ದಕ್ಕೂ ಕುಡಿಯುವ ನೀರು, ಮಜ್ಜಿಗೆ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.

ವಿಶೇಷವೆಂದರೆ, ಪಾದಯಾತ್ರೆಯು ಮಾನ್ವಿ ಪಟ್ಟಣವನ್ನು ದಾಟುತ್ತಿದ್ದಂತೆಯೇ ಮಳೆ ಆರಂಭವಾಯಿತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲಕಾಲ ಉತ್ತಮ ಮಳೆ ಯಾಗಿದ್ದು.
ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿತು. ಮಳೆಗಾಗಿ ಪಾದಯಾತ್ರೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ದೇವರ ಕೃಪೆಯಿಂದ ಮಳೆಯಾಗಿದೆ ಎಂದು ಸ್ಥಳೀಯರು ಪರಸ್ಪರ ಮಾತನಾಡಿ ಕೊಳ್ಳುತ್ತಿರುವುದು ಕಂಡು ಬಂತು.
ಪಾದಯಾತ್ರೆಯಲ್ಲಿ ಭಜನಾ ಮಂಡಳಿಯವರು ಭಜನೆಗಳನ್ನು ಹಾಡಿದರೆ, ಗ್ರಾಮೀಣ ಭಾಗದ ಮಹಿಳೆಯರು ಜನಪದ ಮಳೆ ಗೀತೆಗಳನ್ನು ಹಾಡಿ ಕಾರ್ಯಕ್ರಮದ ವಿಶೇಷ ಆಕರ್ಷಣೆ ಯಾದರು.
ಮಾನ್ವಿ ಹಾಗೂ ಸಿರವಾರ ತಾಲೂಕುಗಳ ಜನತಾದಳ ಜಾತ್ಯತೀತ ಪಕ್ಷದ ಕಾರ್ಯಕರ್ತರು, ರೈತ ಮೋರ್ಚಾ, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸಾವಿರಾರು ರೈತರು ಮತ್ತು ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಮಾನ್ವಿ ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಸಿರವಾರ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ನಗರ ಘಟಕದ ಅಧ್ಯಕ್ಷ ಹೆಚ್.ಮೌನೇಶ್ ಗೌಡ, ರೈತ ಘಟಕದ ಅಧ್ಯಕ್ಷ ಶರಣಪ್ಪಗೌಡ ಮದ್ಲಾಪುರ್, ಮುಖಂಡರಾದ ಬಾಷಸಾಬ್, ಶರಣಪ್ಪ ಮೇದಾ, ನಾಗರಾಜ್ ಬೋಗಾವತಿ, ರಾಜಾ ಆದರ್ಶ ನಾಯಕ, ವಿ.ಎಂ. ಪಾಟೀಲ್, ಎಂ.ಉದಯಕುಮಾರ್, ಪಿ.ರವಿಕುಮಾರ್, ಜಿ.ಲೋಕರೆಡ್ಡಿ ಸಿರವಾರ, ವಿಜಯಲಕ್ಷ್ಮೀ, ಸರ್ವಮಂಗಳ, ಎಂ.ಡಿ.ಉಸ್ಮಾನ್, ಮೌಲಸಾಬ್, ಸುಬಾನ್ ಬೇಗ್, ಶ್ರೀದರ್ ಸ್ವಾಮಿ, ದಾನಪ್ಪ, ಸೂಗುರೇಶ ಹಿರೇಮಠ, ಮೌನೇಶ್ ನಾಯಕ, ಬಸವರಾಜ ಶೆಟ್ಟಿ, ರಂಜಿತ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

