🚨ಬ್ರೇಕಿಂಗ್ ನ್ಯೂಸ್, ಕಲ್ಸಂಕದಲ್ಲಿ ಕರುಣಾಜನಕ ದೃಶ್ಯ – ಮಗುವಿನ ರಕ್ಷಣೆಗೆ ಧಾವಿಸಿದ ಉಡುಪಿ ಖಾಕಿ..!
ಉಡುಪಿ ಜು.20

ಇದು ಬರೀ ಒಂದು ಘಟನೆಯಲ್ಲ, ಮನುಷ್ಯತ್ವದ ಒಂದು ತುಣುಕು. ಉಡುಪಿ ನಗರದ ಕಲ್ಸಂಕದ ರಸ್ತೆಯ ಬದಿಯಲ್ಲಿ, ಬಿಸಿಲ ಝಳವೋ, ಮಳೆಯ ಆರ್ಭಟವೋ ಗೊತ್ತಿಲ್ಲದ ಅತಂತ್ರ ಸ್ಥಿತಿಯಲ್ಲಿ ಪುಟ್ಟ ಮಗುವೊಂದನ್ನು ಹಿಡಿದು ಕೊಂಡು ಭಿಕ್ಷಾಟನೆ ಮಾಡುತ್ತಿದ್ದ ಆ ಕುಟುಂಬದ ದೃಶ್ಯ ನೋಡುಗರ ಕಣ್ಣು ತೇವ ಗೊಳಿಸಿತ್ತು.
ಆದರೆ, ಕಣ್ಣು ಮುಚ್ಚಿ ಕುಳಿತುಕೊಳ್ಳಲು ಇದು ಕಾಲವಲ್ಲ. ಸಾರ್ವಜನಿಕರೊಬ್ಬರು ನೀಡಿದ ಸಣ್ಣ ಸುಳಿವು, ಉಡುಪಿ ನಗರ ಪೊಲೀಸ್ ಠಾಣೆಯ ಚುರುಕು ಮುಟ್ಟಿಸಿತು. ಮಾಹಿತಿ ಬಂದ ತಕ್ಷಣ, ಯಾವುದೇ ಅಳುಕಿಲ್ಲದೆ ಸ್ಥಳಕ್ಕೆ ಧಾವಿಸಿದ್ದು ನಮ್ಮ ಉಡುಪಿ ಪೊಲೀಸರು.

ಅಲ್ಲಿ ಕಂಡಿದ್ದು ಹಸಿವಿನ ದರ್ಶನ, ಅನಿವಾರ್ಯತೆಯ ಕೂಗು. ಆ ಪುಟ್ಟ ಮಗುವಿನ ಭವಿಷ್ಯ ಬೀದಿಯಲ್ಲಿ ಕೊಳೆಯಬಾರದು ಎಂಬ ಸಂಕಲ್ಪದಿಂದ, ಪೊಲೀಸರು ಸಂಬಂಧಿತ ಇಲಾಖೆಗಳೊಂದಿಗೆ ಕೈಜೋಡಿಸಿದರು. ಕೇವಲ ಭರವಸೆಯ ಮಾತುಗಳನ್ನಾಡದೆ, ಆ ಕುಟುಂಬವನ್ನು ಮರುಕ್ಷಣವೇ ಮಂಗಳೂರಿನ ವಾಮಂಜೂರಿನಲ್ಲಿರುವ ಸರ್ಕಾರಿ ಆಶ್ರಯ ಗೃಹಕ್ಕೆ ಸುರಕ್ಷಿತವಾಗಿ ರವಾನಿಸಲಾಯಿತು.
ಈಗ ಆ ಮಗು ಬೆಚ್ಚಗಿನ ವಾತಾವರಣದಲ್ಲಿದೆ, ಆ ಕುಟುಂಬಕ್ಕೆ ಒಂದು ಆಸರೆ ಸಿಕ್ಕಿದೆ. ಇನ್ನು ಮುಂದೆ ಬೀದಿ ಬದಿ ಭಿಕ್ಷೆಯ ಬದುಕು ಅವರಿಗಿಲ್ಲ.ನೆನಪಿಡಿ, ನೀವು ನೀಡುವ ಒಂದು ಸಣ್ಣ ಮಾಹಿತಿ, ಇನ್ನೊಬ್ಬರ ಪಾಲಿನ ಜೀವದಾನವಾಗಬಹುದು. ಸಾರ್ವಜನಿಕರ ಜಾಗೃತಿಯೇ ಇಂತಹ ಮಾನವೀಯ ಕಾರ್ಯಗಳಿಗೆ ಬುನಾದಿ. ಪೊಲೀಸರ ಈ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆಯ ಮಹಾಪೂರ.
ಜಾಗೃತರಾಗಿರಿ, ಇಂತಹ ಸನ್ನಿವೇಶಗಳು ಕಂಡಾಗ ತಕ್ಷಣವೇ ಸ್ಪಂದಿಸಿ.
ವರದಿ:ಆರತಿ.ಗಿಳಿಯಾರು.ಉಡುಪಿ
