ಮಕ್ಕಳು ಭಾರತದ ಮಹಾ ಕಾವ್ಯಗಳನ್ನು ಅಧ್ಯಯನ ಮಾಡಬೇಕು – ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಜು.20

ಇಂದಿನ ಮಕ್ಕಳು ಭಾರತದ ಮಹಾಕಾವ್ಯಗಳಾದ ಶ್ರೀಮದ್ ರಾಮಾಯಣ ಮತ್ತು ಮಹಾ ಭಾರತಗಳನ್ನು ಅಧ್ಯಯನ ಮಾಡುವ ಅಭ್ಯಾಸವನ್ನು ಬೆಳೆಸಿ ಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ಮಕ್ಕಳಿಗೆ ಕರೆ ನೀಡಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮದ್ ರಾಮಾಯಣ” ದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಆದಿಕವಿ ವಾಲ್ಮೀಕಿ ವಿರಚಿತ ಶ್ರೀಮದ್ ರಾಮಾಯಣ ಮಹಾಕಾವ್ಯದಲ್ಲಿ ಒಟ್ಟು ಏಳು ಕಾಂಡಗಳಿದ್ದು 24 ಸಾವಿರ ಶ್ಲೋಕಗಳಿವೆ.ಕೋಸಲ ದೇಶದ ಚಕ್ರವರ್ತಿ ದಶರಥ ಮಹಾರಾಜನ ರಾಜಧಾನಿ ಅಯೋಧ್ಯೆ ಯಾಗಿತ್ತು.

ಮಕ್ಕಳಿಲ್ಲದ ಆತ ಋಷ್ಯಶೃಂಗ ಮುನಿಗಳ ಮಾರ್ಗದರ್ಶನದಲ್ಲಿ ಪುತ್ರಕಾಮೇಷ್ಠಿ ಯಾಗದ ಮೂಲಕ ರಾಕ್ಷಸರುಗಳ ರಾಜ ರಾವಣನನ್ನು ಸಂಹರಿಸಲು ಮಹಾವಿಷ್ಣು ಭೂಲೋಕದಲ್ಲಿ ಶ್ರೀರಾಮಚಂದ್ರನಾಗಿ ಜನಿಸಿದನು. ಆತನ ಜೊತೆಗೆ ಲಕ್ಷ್ಮಣ, ಭರತ, ಶತ್ರುಘ್ನರು ಜನಿಸಿದರು ಎಂದು ಬಾಲ ಕಾಂಡದ ಬಗ್ಗೆ ವಿವರಿಸಿದರು.

ವ್ಯಕ್ತಿತ್ವ ನಿರ್ಮಾಣಕಾರಿ ತರಗತಿಯಲ್ಲಿ ಕುಮಾರಿ ಪ್ರವಲ್ಲಿಕಾ, ಮಾನ್ಯ, ಡಾ, ಭೂಮಿಕಾ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗಾಯತ್ರಿ ಮಂತ್ರ ಪಠಣ, ಭಜನೆ, ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು, ಜೈಕಾರ, ಪ್ರಸಾದ ವಿನಿಯೋಗ ನಡೆಯಿತು.
ತರಗತಿಯಲ್ಲಿ ಸುಧಾಮಣಿ, ರಶ್ಮಿ, ವಿವೇಕ, ಶುಕ್ತಿಜಾ, ನಿರಂಜನ್, ಹರ್ಷಿತಾ, ವಿನತಿ, ಶ್ರೇಯಸ್, ಲಹರಿ, ವಿವಿಕ್ತ, ಚಿರಣ್ಯ, ಜಶ್ವಿತಾ, ಕುಸುಮ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
