ಸರ್ಕಾರಕ್ಕೆ ಮೊಳಗಿದ ಗಂಭೀರ ಎಚ್ಚರಿಕೆ ಹಿಂದುಳಿದ ಜಿಲ್ಲೆಗೆ – ಅಭಿವೃದ್ಧಿಗೆ ವಿಶೇಷ ಸ್ಥಾನಮಾನಕ್ಕೆ ಆಗ್ರಹ.

ತಾಳಿಕೋಟಿ ಸೆ.02

ವಿಜಯಪುರ ಜಿಲ್ಲೆಯನ್ನು ಸಂವಿಧಾನದ ಕಲಂ 371 (J) ವ್ಯಾಪ್ತಿಗೆ ತಕ್ಷಣ ಸೇರ್ಪಡೆ ಗೊಳಿಸಿ ಜಿಲ್ಲೆಯ ಜನರಿಗೆ ಶಿಕ್ಷಣ ಉದ್ಯೋಗ ಹಾಗೂ ಅಭಿವೃದ್ಧಿಯಲ್ಲಿ ವಿಶೇಷ ಅವಕಾಶ ಕಲ್ಪಿಸಬೇಕು.

ಇಲ್ಲವಾದರೆ ದಶಕಗಳಿಂದ ನಿರ್ಲಕ್ಷ್ಯ ಕ್ಕೊಳಗಾಗಿರುವ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಳಿಕೋಟಿ ತಹಸೀಲ್ದಾರ ಮಲ್ಲಿಕಾರ್ಜುನ ಅರಕೆರಿ ಯವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಿಜಯಪುರ ಜಿಲ್ಲೆ ವಿಶಾಲ ಭೌಗೋಳಿಕ ವ್ಯಾಪ್ತಿ ಹೊಂದಿದ್ದು, ಕೃಷಿಯನ್ನೇ ಪ್ರಮುಖ ಜೀವನಾಧಾರ ವಾಗಿಸಿಕೊಂಡಿದೆ. ಆದರೆ ನಿರಂತರ ಬರಗಾಲ, ನೀರಾವರಿ ಕೊರತೆ, ಕೈಗಾರಿಕಾ ಹಿನ್ನಡೆ, ನಿರುದ್ಯೋಗ, ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ ಹಾಗೂ ಮೂಲ ಸೌಕರ್ಯದ ಸಮಸ್ಯೆಗಳಿಂದ ಜಿಲ್ಲೆಯ ಜನರು ಹಲವು ವರ್ಷಗಳಿಂದ ಹಿಂದುಳಿದ ಸ್ಥಿತಿಯಲ್ಲಿದೆ. ಜಿಲ್ಲೆಯ ಈ ಹಿಂದುಳಿದಿರುವಿಕೆಯನ್ನು ಡಾ, ಡಿ.ಎಂ ನಂಜುಂಡಪ್ಪ ಸಮಿತಿಯ ವರದಿಯಲ್ಲಿಯೂ ಗುರುತಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿ ಸಲಾಗಿದೆ.

ವಿಜಯಪುರ ಜಿಲ್ಲೆಗೆ 371 (J) ಸೌಲಭ್ಯ ನೀಡುವಂತೆ ಇತ್ತೀಚಿನ ದಿನಗಳಲ್ಲಿಯೂ ವಿವಿಧ ಸಂಘಟನೆಗಳು ಹಾಗೂ ಹೋರಾಟಗಾರರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಜಿಲ್ಲೆಯನ್ನು ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ತೀವ್ರ ಗೊಳ್ಳುತ್ತಿದೆ.

ಕಲಬುರಗಿ ಹೈಕೋರ್ಟ್ ಪೀಠ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ವ್ಯವಸ್ಥೆಯೊಂದಿಗೆ ವಿಜಯಪುರ ಜಿಲ್ಲೆ ನಿಕಟ ಆಡಳಿತಾತ್ಮಕ ಸಂಪರ್ಕ ಹೊಂದಿದ್ದರೂ, 371 (J) ಸೌಲಭ್ಯದಿಂದ ಜಿಲ್ಲೆಯನ್ನು ಹೊರಗಿಟ್ಟಿರುವುದು ಏಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಈಗಾಗಲೇ ವಿಜಯನಗರ ಜಿಲ್ಲೆಗೆ 371 (J) ಸೌಲಭ್ಯ ವಿಸ್ತರಿಸಿರುವ ಉದಾಹರಣೆಯೂ ಇದೆ.

“ವಿಜಯಪುರ ಜಿಲ್ಲೆಗೆ 371 (J) ನೀಡಿ, ನಮ್ಮ ಯುವ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯ ಒದಗಿಸಿ. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ, ಶಾಶ್ವತ ನೀರಾವರಿ ಯೋಜನೆ, ಕೈಗಾರಿಕೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಿ. ಇಲ್ಲವಾದರೆ ಉತ್ತರ ಕರ್ನಾಟಕದ ನಿರ್ಲಕ್ಷ್ಯಕ್ಕೆ ಶಾಶ್ವತ ಪರಿಹಾರವಾಗಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಗೆ ಮುಂದಾಗಿ” ಎಂಬುದು ಮನವಿದಾರರ ಸ್ಪಷ್ಟ ಆಗ್ರಹವಾಗಿದೆ.

ರಾಜ್ಯ ಸರ್ಕಾರವು ವಿಧಾನ ಮಂಡಲದಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸುವ ಮೂಲಕ ವಿಜಯಪುರ ಜಿಲ್ಲೆಯ ಬಹು ದಿನಗಳ ಬೇಡಿಕೆಗೆ ನ್ಯಾಯ ಒದಗಿಸಬೇಕು. ಇನ್ನು ಭರವಸೆ ಬೇಡ, ನಿರ್ಣಯ ಬೇಕು, ಘೋಷಣೆ ಬೇಕು, ಅನುಷ್ಠಾನ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ಡಾ, ವಿಜಯಕುಮಾರ ಕಾರ್ಚಿ, ನ್ಯಾಯವಾದಿ ಗಂಗಾಧರ ಕಸ್ತೂರಿ, ರವೀಂದ್ರ ಕಟ್ಟಿಮನಿ, ಡಾ, ಆನಂದ ಭಟ್, ಡಾ, ರವಿ ಅಗರವಾಲ, ಡಾ, ನಾಲಬಂದ, ತಮ್ಮಣ್ಣ ದೇಶಪಾಂಡೆ, ಸಂಭಾಜಿ ವಾಡಕರ, ಮಂಜು ಶೆಟ್ಟಿ, ರಾಗು ಚವ್ಹಾಣ, ಜಗದೀಶ ಬಿಳೆಭಾವಿ, ರಾಗು ಮಾನೆ, ಪ್ರಮೋದ ಅಗರವಾಲ, ಕುಮಾರ ಸುರಪುರ, ರಘು ಹಜೇರಿ, ವಸಂತ ಜೋಶಿ, ಶಂಕರಗೌಡ ಬಿರಾದಾರ, ಈಶ್ವರ ಹೂಗಾರ ಹಾಗೂ ವಿವಿಧ ರೈತ ಪರ ಸಂಘಟನೆಗಳು, ಗಣ್ಯ ವ್ಯಾಪಾರಸ್ಥರು, ವಿವಿಧ ಸಮಾಜದ ಮುಖಂಡರು ತಾಳಿಕೋಟಿ ಪಟ್ಟಣದ ಗಣ್ಯರು ಹಾಜರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಜ್ಜನ ತಾಳಿಕೋಟಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button