ಅಜ್ಞಾನದ ಕತ್ತಲಲ್ಲಿ ಮುಳುಗಿದ್ದ ಸಮಾಜಕ್ಕೆ ಜ್ಞಾನದ ಬೆಳಕು – ನೀಡಿದ ವಿಶ್ವಗುರು ಬಸವಣ್ಣ.

ತಾಳಿಕೋಟೆ ಸೆ.01

ಅಜ್ಞಾನದ ಕತ್ತಲಲ್ಲಿ ಮುಳುಗಿದ್ದ ಸಮಾಜಕ್ಕೆ ಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಿದ ಅವತಾರ ಪುರುಷರೆಂದರೆ ಜಗಜ್ಯೋತಿ ಬಸವಣ್ಣನವರು.

ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ; ವಿಶ್ವವನ್ನೇ ಬೆಳಗುವ ಜ್ಯೋತಿಯಾಗಿ ಪ್ರಜ್ವಲಿಸಿದ ಮಹಾನ್ ಚಿಂತಕರು. ಆದ್ದರಿಂದಲೇ ಅವರನ್ನು ವಿಶ್ವಗುರು ಬಸವಣ್ಣ ಎಂದು ಕರೆಯಲಾಗುತ್ತದೆ ಎಂದು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಉಪನ್ಯಾಸಕಿ ಶರಣೆ ಶ್ರೀಮತಿ ಹೇಮಾ ಬಿರಾದಾರ ಹೇಳಿದರು.

ತಾಳಿಕೋಟೆಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಲಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ತಾಳಿಕೋಟೆ ಎಂಬ ಹಣತೆಗೆ ಕದಲಿ ವೇದಿಕೆ ಎಂಬ ಬತ್ತಿಯನ್ನು ಹಾಕಿ, ಶರಣ ಸಾಹಿತ್ಯ ಎಂಬ ತೈಲವನ್ನು ಸುರಿದು, ಜ್ಞಾನವೆಂಬ ಜ್ಯೋತಿಯ ಬೆಳಕು ತಾಳಿಕೋಟೆಯಾದ್ಯಂತ ಬೆಳಗಲಿ” ಎಂದು ಆಶಿಸಿದರು.

ಬಸವಣ್ಣನವರು ಕಾಯಕ ತತ್ವ, ದಾಸೋಹ ಹಾಗೂ ಲಿಂಗ ಪೂಜೆ ಸೇರಿದಂತೆ ಅನೇಕ ಮಹತ್ವದ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದರು. ಅವರ ವಚನಗಳು ಸಮಾಜಕ್ಕೆ ಜ್ಞಾನ, ಜಾಗೃತಿ ಹಾಗೂ ಸಮಾನತೆಯ ಮಾರ್ಗವನ್ನು ತೋರಿಸಿವೆ ಎಂದು ಹೇಳಿದರು.

ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಅಪಾರ:-

“ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಅಂದಿನ ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಎಂಬ ಸಾಮಾಜಿಕ ವ್ಯವಸ್ಥೆ ಇದ್ದರೂ, ಬಸವಣ್ಣನವರು ಮಹಿಳೆಯರಿಗೂ ಸಮಾನ ಗೌರವ ಮತ್ತು ಅವಕಾಶ ನೀಡಿದರು. ಸಾಮಾನ್ಯ ಮಹಿಳೆಯನ್ನು ಅಡುಗೆ ಮನೆಯಿಂದ ಅನುಭವ ಮಂಟಪದವರೆಗೆ ಕರೆತಂದು, ಪುರುಷರಿಗೆ ಸರಿಸಮಾನವಾಗಿ ವಚನ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಚಿಂತನೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ” ಎಂದು ಹೇಮಾ ಬಿರಾದಾರ ಹೇಳಿದರು.

ಮಹಿಳೆಯರಿಗೆ ಗೌರವ ನೀಡುವುದು ಸಮಾಜದ ಕರ್ತವ್ಯವಾಗಿದೆ. ಮಹಿಳೆಯರ ಗೌರವ ಮತ್ತು ಸಮಾನತೆ ಉತ್ತಮ ಸಮಾಜದ ನಿರ್ಮಾಣಕ್ಕೆ ಆಧಾರವಾಗಿವೆ ಎಂದು ಅವರು ತಿಳಿಸಿದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಜ್ಜನ ತಾಳಿಕೋಟಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button